ಪೆಗಾಸಸ್ ಬೇಹುಗಾರಿಕೆ : ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸಲು ಮುಂದುವರಿದ ಕಾಂಗ್ರೆಸ್ ಒತ್ತಡ

Update: 2021-07-20 14:00 GMT

ಹೊಸದಿಲ್ಲಿ : ಇಸ್ರೇಲ್ ಮೂಲದ ಪೆಗಾಸಸ್ ಸ್ಪೈ ವೇರ್ ಬಳಸಿ ಅಪರಿಚಿತ ಏಜನ್ಸಿಯೊಂದು  ಹಲವಾರು ಪತ್ರಕರ್ತರು, ರಾಜಕಾರಣಿಗಳ ಮೊಬೈಲ್ ಫೋನ್‍ಗಳನ್ನು ಹ್ಯಾಕ್ ಮಾಡಿದೆ  ಎಂದು ದಿ ವೈರ್ ಹಾಗೂ 16 ಇತರ ಅಂತರಾಷ್ಟ್ರೀಯ ಮಾಧ್ಯಮಗಳು ಜತೆಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಬಹಿರಂಗಗೊಂಡ ನಂತರ ಈ ಕುರಿತು ತನಿಖೆ ನಡೆಯಬೇಕೆಂದು ಕಾಂಗ್ರೆಸ್ ಪಕ್ಷ ಸರಕಾರದ ಮೇಲೆ ಒತ್ತಡ ಹೇರುತ್ತಲೇ ಇದೆ.

ಮಂಗಳವಾರ ಸಂಸತ್ತಿನ ಮಳೆಗಾಲದ ಅಧಿವೇಶನದ ವೇಳೆಯೂ ಪಕ್ಷ ತನ್ನ ಬೇಡಿಕೆಯನ್ನು ಪುನರುಚ್ಛರಿಸಿದೆಯಲ್ಲದೆ ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸಬೇಕೆಂದು ಆಗ್ರಹಿಸಿದೆ.

ಸರಕಾರ ತಾನು ಪೆಗಾಸೆಸ್ ಸ್ಪೈವೇರ್ ಅನ್ನು ಖರೀದಿಸಿದೆಯೇ ಅಥವಾ ಇಲ್ಲವೇ ಎಂದು ಬಹಿರಂಗಪಡಿಸಬೇಕು ಎಂದು ಕಾಂಗ್ರೆಸ್ ವಕ್ತಾರ ಶಕ್ತಿಸಿಂಗ್ ಗೋಹಿಲ್ ಆಗ್ರಹಿಸಿದ್ದಾರೆ.

ಇನ್ನೊಂದೆಡೆ ಪಕ್ಷದ ದಿಲ್ಲಿ ಘಟಕ ಇಂದು ಪ್ರತಿಭಟನೆಯನ್ನೂ ನಡೆಸಿದೆ ಹಾಗೂ ನ್ಯಾಯಾಂಗ ತನಿಖೆ ನಡೆಯಬೇಕೆಂಬ ಬೇಡಿಕೆ ಮುಂದಿಟ್ಟಿದೆ. ದಿಲ್ಲಿ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಕುಮಾರ್ ಚೌಧುರಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆಯೂ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News