2020-21ನೇ ಸಾಲಿನ ಬೆಂಗಳೂರು ಕೇಂದ್ರ ವಿವಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

Update: 2021-07-20 15:13 GMT

ಬೆಂಗಳೂರು, ಜು.20: ಬೆಂಗಳೂರು ನಗರ ವಿಶ್ವವಿದ್ಯಾನಿಲಯದ 2020-2021ನೇ ಸಾಲಿನ ವಿವಿಧ ಪದವಿಗಳ ಶೈಕ್ಷಣಿಕ ಪರೀಕ್ಷಾ ವೇಳಾಪಟ್ಟಿಯನ್ನು ನಿಗಧಿಗೊಳಿಸಲಾಗಿದ್ದು, ಪದವಿ ಕೋರ್ಸುಗಳ 1, 3 ಮತ್ತು 5ನೇ ಸೆಮಿಸ್ಟರ್ ಗಳ ಬಾಕಿ ಇರುವ ಪರೀಕ್ಷೆಗಳನ್ನು ಆ.10 ರಿಂದ  31ರೊಳಗೆ ನಡೆಸಲಾಗುತ್ತದೆ.

ಅಂತಿಮ ಪದವಿ ಪರೀಕ್ಷೆಗಳನ್ನು ಆ.28ರಿಂದ ಆರಂಭಿಸಲಾಗುವುದು ಮತ್ತು ಸೆ.20 ರೊಳಗೆ ಫಲಿತಾಂಶ ಪ್ರಕಟಿಸಿ ಸ್ನಾತಕೋತ್ತರ ಕೋರ್ಸುಗಳಿಗೆ ಪ್ರವೇಶಾತಿ ಪಡೆದುಕೊಳ್ಳಲು ಅನುವು ಮಾಡಿಕೊಡಲಾಗುವುದು. ಪದವಿ ಕೋರ್ಸುಗಳ 2ನೇ ಮತ್ತು 4ನೇ ಸೆಮಿಸ್ಟರ್ ಕೋರ್ಸುಗಳ ಫಲಿತಾಂಶಗಳನ್ನು ವಿದ್ಯಾರ್ಥಿಗಳ ಆಂತರಿಕ ಅಂಕಗಳು ಮತ್ತು ಹಿಂದಿನ ಸೆಮಿಸ್ಟರ್‍ನ ಅಂಕಗಳ ಸರಾಸರಿಯೊಂದಿಗೆ ಪ್ರಕಟಿಸಲು ಕ್ರಮ ಕೈಗೊಳ್ಳಲಾಗುವುದು.

ಸ್ನಾತಕೋತ್ತರ ಪದವಿಗಳ ಬಾಕಿ ಇರುವ ಪ್ರಥಮ ಸೆಮಿಸ್ಟರ್ ಪರೀಕ್ಷೆಗಳನ್ನು ಆ.10ರಿಂದ ಆರಂಭಿಸಲಾಗುವುದು ಮತ್ತು ಅಂತಿಮ ಸೆಮಿಸ್ಟರ್ ಪರೀಕ್ಷೆಗಳನ್ನು ಆಗಸ್ಟ್ 2ನೇ ವಾರದಿಂದ ಆರಂಭಿಸಲಾಗುವುದು. ಸ್ನಾತಕೋತ್ತರ 2ನೇ ಸೆಮಿಸ್ಟರ್ ವಿದ್ಯಾರ್ಥಿಗಳ ಫಲಿತಾಂಶವನ್ನು ಅವರುಗಳ ಆಂತರಿಕ ಅಂಕಗಳು ಮತ್ತು ಹಿಂದಿನ ಸೆಮಿಸ್ಟರ್‍ನ ಅಂಕಗಳ ಸರಾಸರಿಯನ್ನು ಪರಿಗಣಿಸಿ ಪ್ರಕಟಿಸಲಾಗುತ್ತದೆ. ಹಾಗೂ 2021-22ರ ಶೈಕ್ಷಣಿಕ ವರ್ಷವನ್ನು ಅ.1 ರಿಂದ ಆರಂಭಿಸಲಾಗುತ್ತದೆ ಎಂದು ಬೆಂಗಳೂರು ನಗರ ವಿವಿ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News