ಪೆಗಾಸಸ್ ಪ್ರಕರಣ: ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯ

Update: 2021-07-21 12:14 GMT

ಬೆಂಗಳೂರು, ಜು. 21: `ಪೆಗಾಸಸ್ ತಂತ್ರಾಂಶದ ಮೂಲಕ ದೇಶದ ರಾಜಕಾರಣಿಗಳು, ಮಾಧ್ಯಮ ಪ್ರತಿನಿಧಿಗಳು, ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲೆ ಗೂಢಚರ್ಯ ಮಾಡುವ ಮೂಲಕ ಪ್ರಧಾನಿ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಅತ್ಯಂತ ಹೀನಾಯ ಕೃತ್ಯ ನಡೆಸಿದೆ. ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ತನಿಖೆ ನಡೆಸಬೇಕು ಹಾಗೂ ಜಂಟಿ ಸದನ ಸಮಿತಿಯಿಂದ ಪ್ರಕರಣದ ತನಿಖೆ ಆಗಬೇಕು. ಜತೆಗೆ ಪ್ರಧಾನಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಕೂಡಲೇ ರಾಜೀನಾಮೆ ನೀಡಬೇಕು' ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ಬುಧವಾರ ನಗರದ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಾಜಿ ಸಂಸದ ವಿ.ಎಸ್.ಉಗ್ರಪ್ಪ, `ದೇಶದಲ್ಲಿ ರಾಜಕಾರಣಿಗಳು, ಮಾಧ್ಯಮಗಳು, ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸ್ವಾತಂತ್ರ್ಯ ಹರಣವಾಗುತ್ತಿದೆ. 75ನೇ ಸ್ವಾತಂತ್ರ್ಯ ದಿನ ಆಚರಿಸುವ ಪರಿಸ್ಥಿತಿಯಲ್ಲಿ ದೇಶ ಯಾವ ಸ್ಥಿತಿಗೆ ಬಂದಿದೆ ಎಂದರೆ, ಕೇಂದ್ರ ಸರಕಾರವು ಚುನಾವಣಾ ಆಯೋಗ, ಇಡಿ, ಆದಾಯ ತೆರಿಗೆ ಇಲಾಖೆ, ಸಿಬಿಐ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು  ವಿಪಕ್ಷ ಹಾಗೂ ಮಾಧ್ಯಮಗಳ ಶಕ್ತಿ ಕುಂದಿಸಲು ವ್ಯವಸ್ಥಿತ ಸಂಚು ನಡೆಯುತ್ತಿದೆ' ಎಂದು ದೂರಿದರು.

`ದೂರವಾಣಿ ಕದ್ದಾಲಿಕೆ ಕಾಂಗ್ರೆಸ್ ಸಂಸ್ಕೃತಿ ಎಂದು ಬಿಜೆಪಿ ನಾಯಕರು ಹೇಳಿದ್ದು, ಉಪಮುಖ್ಯಮಂತ್ರಿ ಸ್ಥಾನದಲ್ಲಿರುವ ಆ ನಾಯಕರುಗಳಿಗೆ ಸ್ವಲ್ಪವಾದರೂ ಬುದ್ಧಿ ಇದೆಯಾ? ಬಿಜೆಪಿಯು ಇಸ್ರೇಲ್ ಮೂಲದ ಎನ್‍ಎಸ್‍ಒ ಎಂಬ ಕಂಪೆನಿ ಮೂಲಕ ಪೆಗಾಸಸ್ ಸಾಫ್ಟವೇರ್ ಮೂಲಕ ವಿಶ್ವದ ಅನೇಕ ಪ್ರಮುಖರ ಸ್ಮಾರ್ಟ್ ಫೋನ್ ಕದ್ದಾಲಿಗೆ ಮಾಡಿ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೂಢಚರ್ಯ ಮಾಡುತ್ತಿದೆ. ಈ ಇಸ್ರೇಲ್ ಸಂಸ್ಥೆ ಈ ಸಾಫ್ಟ್‍ವೇರ್ ಮಾಹಿತಿಯನ್ನು ಖಾಸಗಿ ಕಂಪೆನಿ ಅಥವಾ ವ್ಯಕ್ತಿಗೆ ನೀಡುವುದಿಲ್ಲ. ಬದಲಿಗೆ ಈ ಗೂಢಚರ್ಯ ಮಾಹಿತಿಯನ್ನು ಕೇವಲ ಸರಕಾರಗಳಿಗೆ ಮಾತ್ರ ನೀಡುತ್ತದೆ ಎಂದು ಉಗ್ರಪ್ಪ ಆರೋಪಿಸಿದರು.

`ಈ ಕದ್ದಾಲಿಕೆ ನಿಖರವಾಗಿ ನಡೆದಿದೆ ಎಂದು ಬಿಜೆಪಿ ರಾಷ್ಟ್ರೀಯ ನಾಯಕರು ಹಾಗೂ ರಾಜ್ಯಸಭಾ ಸದಸ್ಯರೂ ಆಗಿರುವ ಸುಬ್ರಮಣಿಯನ್ ಸ್ವಾಮಿ ಅವರು ಹೇಳಿದ್ದಾರೆ. ಈ ಕದ್ದಾಲಿಕೆಗೆ ಕೇಂದ್ರ ಸರಕಾರ ಹಣ ಪಾವತಿ ಮಾಡಿಲ್ಲವಾದರೆ, ಈ ಕಂಪೆನಿಗೆ ಹಣ ಪಾವಿತಿ ಮಾಡಿರುವವರು ಯಾರು? ಎಂದು ಸ್ಪಷ್ಟಪಡಿಸಬೇಕಿರುವುದು ಕೇಂದ್ರ ಸರಕಾರದ ಜವಾಬ್ದಾರಿ ಎಂದು ಹೇಳಿದ್ದಾರೆ. ಹಾಗಾದ್ರೆ ಕೇಂದ್ರ ಸಚಿವರು ಈ ವಿಚಾರವಾಗಿ ಬಾಯಿ ಮುಚ್ಚಿಕೊಂಡಿರುವುದೇಕೆ? ಎಂದು ಉಗ್ರಪ್ಪ ಪ್ರಶ್ನಿಸಿದರು.

`2019ರಲ್ಲಿ ಕರ್ನಾಟಕದಲ್ಲಿ ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ, ಮಾಜಿ ಪ್ರಧಾನಿ ದೇವೇಗೌಡರ ದೂರವಾಣಿ ಕದ್ದಾಲಿಕೆ ಮಾಡಲಾಗಿತ್ತು. ಇದೇ ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಸೇರಿದಂತೆ ರೀತಿ ಬೇರೆ ರಾಜ್ಯಗಳಲ್ಲೂ ಆಗಿರುವ ಅನುಮಾನವಿದೆ. ಇದೆಲ್ಲ ಮೋದಿ ಸರ್ಕಾರಕ್ಕೆ ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ವಿಶ್ವಾಸ ಇಲ್ಲ ಎಂಬುದು ಸಾಬೀತಾಗಿದೆ' ಎಂದು ಟೀಕಿಸಿದರು..

`ಇದೆಲ್ಲವನ್ನು ನೋಡಿದರೆ ಬಿಜೆಪಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ. ದೇಶದ ಸಂವಿಧಾನದ ಮೇಲೆ ವಿಶ್ವಾಸವಿಲ್ಲ. ಇವರು ತಮ್ಮ ನೀತಿಗಳ ಮೂಲಕ ಜನರ ವಿಶ್ವಾಸ ಗಳಿಸಿ ಅಧಿಕಾರಕ್ಕೆ ಬರುವುದನ್ನು ಬಿಟ್ಟು ಅಸಂವಿಧಾನಿಕವಾಗಿ ಜನರ ಸ್ವಾತಂತ್ರ್ಯ ಹರಣಕ್ಕೆ ಮುಂದಾಗಿದೆ. ರಾಷ್ಟ್ರದ ಇತಿಹಾಸದಲ್ಲಿ ಇಂತಹ ಹೀನ ಕೃತ್ಯ ನಡೆದಿರಲ್ಲ. ಈ ಹಿಂದೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ರೈಲ್ವೆ ಅಪಘಾತವಾದಾಗ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದರು. ಆದರೆ, ಮೋದಿ ಹಾಗೂ ಅಮಿತ್ ಶಾ ಯಾವ ಮುಖ ಇಟ್ಟುಕೊಂಡು ಅಧಿಕಾರದಲ್ಲಿ ಮುಂದುವರಿಯುತ್ತಿದ್ದಾರೆ' ಎಂದು ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.

`ಸಂವಿಧಾನದಲ್ಲಿ ಶಾಸಕಾಂಗ ಒಂದೆಡೆಯಾದರೆ ಮತ್ತೊಂಡೆದೆ ನ್ಯಾಯಾಂಗವಾಗಿದೆ. ಉಳಿದಂತೆ ಕಾಯಾರ್ಂಗ ಹಾಗೂ ಮಾಧ್ಯಮವಿದೆ. ಶಾಸಕಾಂಗ ಅದರ ಜವಾಬ್ದಾರಿ ನಿಭಾಯಿಸಬೇಕಿದೆ. ಅದು ಯಾವ ರೀತಿ ನಿಭಾಯಿಸುತ್ತದೆ ಎಂಬುದನ್ನು ನೋಡೋಣ, ತನಿಖೆಗೆ ಸರಕಾರ ಮುಂದಾಗದಿದ್ದರೆ ಮುಂದಿನ ಹೆಜ್ಜೆ ಬಗ್ಗೆ ತೀರ್ಮಾನ. ಈ ಬಗ್ಗೆ ರಾಷ್ಟ್ರಪತಿಗಳ ಗಮನ ಸೆಳೆಯಲು ದೇಶದ ಎಲ್ಲ ರಾಜ್ಯಗಳಲ್ಲಿ ನಮ್ಮ ಪಕ್ಷದಿಂದ ರಾಜ್ಯಪಾಲರ ಮೂಲಕವಾಗಿ ರಾಷ್ಟ್ರಪತಿಗಳಿಗೆ ಪತ್ರ ಬರೆಯಲಾಗುತ್ತದೆ. ನಾಳೆ ಬೆಳಗ್ಗೆ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಶಾಸಕರು, ಸಂಸದರು, ಹಿರಿಯ ನಾಯಕರು ಸೇರಿ ರಾಜ್ಯಪಾಲರ ಸಮಯಾವಕಾಶ ಕೋರಿದ್ದೇವೆ. ಕೆಪಿಸಿಸಿ ಅಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕರ ನೇತೃತ್ವದಲ್ಲಿ ರಾಜಭವನಕ್ಕೆ ತೆರಳಿ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು'

-ವಿ.ಎಸ್.ಉಗ್ರಪ್ಪ ಮಾಜಿ ಸಂಸದ, ಕಾಂಗ್ರೆಸ್ ವಕ್ತಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News