18 ಕೋಟಿ ರೂಪಾಯಿಯ ಔಷಧ ತಲುಪುವ ಮುನ್ನವೇ ಕೇರಳದ ಮಗು ಮೃತ್ಯು

Update: 2021-07-21 13:20 GMT
photo: keralakaumudy

ಕೊಝಿಕ್ಕೋಡ್:  ಅತ್ಯಂತ ವಿರಳ ಆರೋಗ್ಯ ಸಮಸ್ಯೆಯಾದ ಸ್ಪೈನಲ್ ಮಸ್ಕ್ಯುಲರ್ ಎಟ್ರೊಫಿಯಿಂದ ಬಳಲುತ್ತಿದ್ದ ಕೇರಳದ ಆರು ತಿಂಗಳ ಗಂಡು ಮಗು ಇಮ್ರಾನ್ ಮುಹಮ್ಮದ್ ಮಂಗಳವಾರ ತಾನು ಚಿಕಿತ್ಸೆ ಪಡೆಯುತ್ತಿದ್ದ ಕೊಝಿಕ್ಕೋಡ್ ಮೆಡಿಕಲ್ ಕಾಲೇಜಿನಲ್ಲಿ ಕೊನೆಯುಸಿರೆಳೆದಿದ್ದಾನೆ.

ಸುಮಾರು ಮೂರು ತಿಂಗಳಿನಿಂದ ಮಗುವಿಗೆ ಅಲ್ಲಿ ವೆಂಟಿಲೇಟರ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಮ್ರಾನ್ ಹೆತ್ತವರಾದ ಆರಿಫ್ ಮತ್ತು ರಮೀಸಾ ತಸ್ನಿ ತಮ್ಮ ಪುಟ್ಟ ಮಗುವಿನ ಚಿಕಿತ್ಸೆಗಾಗಿ ಹಣ ಹೊಂದಿಸಲು ಬಹಳಷ್ಟು ಕಷ್ಟ ಪಟ್ಟಿದ್ದರು.

ಈ ಕಾಯಿಲೆಗೆ ನೀಡಲಾಗುವ ಝೊಲ್ಗೆನ್ಸ್‍ಮ ಎಂಬ ಔಷಧಿಯ ವೆಚ್ಚ ಸುಮಾರು ರೂ 16 ಕೋಟಿಯಷ್ಟಾಗಿದ್ದು ಆಮದು ತೆರಿಗೆ ಸೇರಿದಂತೆ ಒಟ್ಟು ರೂ 18 ಕೋಟಿಯಷ್ಟಾಗುತ್ತದೆ. ಮಗುವಿನ ಚಿಕಿತ್ಸೆಗೆ ಹಣವಿಲ್ಲದೆ ಆರಿಫ್ ಇತ್ತೀಚೆಗೆ ಕೇರಳ ಹೈಕೋರ್ಟ್‍ಗೆ ಮೊರೆ ಹೋಗಿ ಮಗುವಿಗೆ ಉಚಿತ ಚಿಕಿತ್ಸೆ ಕೊಡಿಸಲು ಮನವಿ ಮಾಡಿದ್ದರು. ಔಷಧಿಯನ್ನು ಅಮೆರಿಕಾದಿಂದ ಆಮದು ಮಾಡಲು ಅನುಮತಿ ಪಡೆದುಕೊಂಡಿದ್ದರೂ ಔಷಧಿಗೆ ಸರಕಾರದ ಸಹಾಯವಿಲ್ಲದೆ ಹಣ ತೆರುವುದು ತನಗೆ ಸಾಧ್ಯವಿಲ್ಲ ಎಂದು ತಮ್ಮ ಅಪೀಲಿನಲ್ಲಿ ಅವರು ಹೇಳಿದ್ದರು.

ಕೇರಳ ಆರೋಗ್ಯ ಇಲಾಖೆ ಅಥವಾ ಕೇರಳ ಸಾಮಾಜಿಕ ಸುರಕ್ಷತಾ ಮಿಷನ್ ಇಷ್ಟೊಂದು ದೊಡ್ಡ ಮೊತ್ತ ಭರಿಸಲು ಸಾಧ್ಯವಿಲ್ಲ ಎಂದು ತನ್ನ ಉತ್ತರದಲ್ಲಿ ತಿಳಿಸಿದ್ದ ಸರಕಾರ ಕ್ರೌಡ್ ಫಂಡಿಂಗ್‍ಗೆ ಸಲಹೆಯನ್ನೂ ನೀಡಿತ್ತು.

ಸ್ಥಳೀಯ ಶಾಸಕರ ಮುತುವರ್ಜಿಯಿಂದ ಆರಂಭಿಸಲಾದ ಕ್ರೌಡ್ ಫಂಡಿಂಗ್‍ನಿಂದ ರೂ 16 ಕೋಟಿ ಸಂಗ್ರಹಿಸಲಾಗಿತ್ತು. ಆದರೆ  ಉಳಿದ ಹಣ ಸಂಗ್ರಹಣೆ ಸದ್ಯವೇ ನಡೆಯಬಹುದು ಎನ್ನುವಷ್ಟರಲ್ಲಿ ಇಮ್ರಾನ್ ಕೊನೆಯುಸಿರೆಳೆದಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News