ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಹೆಚ್ಚು ಗಮನ: ಸಿಎಂ ಬಿ.ಎಸ್.ಯಡಿಯೂರಪ್ಪ

Update: 2021-07-23 16:45 GMT

ಬೆಂಗಳೂರು, ಜು.23: ಬೆಂಗಳೂರನ್ನು ಸಿಲಿಕಾನ್ ಸಿಟಿ ಮಾಡಬೇಕು. ದೇಶ, ವಿದೇಶಗಳಿಂದ ಬರುವವರಿಗೆ ಬೆಂಗಳೂರು ನಗರ ಪ್ರವಾಸಿಗರ ತಾಣವಾಗಬೇಕೇಂದು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಶುಕ್ರವಾರ ನಗರದಲ್ಲಿ ವೈಟ್ ಟಾಪಿಂಗ್, ಟೆಂಡರ್ ಶ್ಯೂರ್ ಮತ್ತು ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಿರುವ ರಸ್ತೆ ಮತ್ತು ವಿವಿಧ ಯೋಜನೆಗಳ ಪರಿವೀಕ್ಷಣೆ ನಡೆಸಿದ ಬಳಿಕ ಗೃಹ ಕಚೇರಿ ಕೃಷ್ಣಾ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಈಗ ಮಾಡುತ್ತಿರುವ ರಸ್ತೆಗಳು, ಬಹುಷಃ 20 ವರ್ಷವಾದರೂ ಸಹ ಸಣ್ಣ ಗುಂಡಿ ಬೀಳದಂತೆ ಬಹಳ ಒಳ್ಳೆ ರೀತಿ ಕಾಮಗಾರಿ ಮಾಡಿದ್ದಾರೆ. ಅದಕ್ಕಾಗಿ ಹಗಲು ರಾತ್ರಿ ದುಡಿದ ಅಧಿಕಾರಿಗಳು, ಶಾಸಕರು, ಸಚಿವರಿಗೆ ರಾಜ್ಯದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸತ್ತೇನೆ.ಗುಣಮಟ್ಟದ ಕೆಲಸ ಮಾಡಿ ರಾಜಕಾಲುವೆಗಳನ್ನು ಅಭಿವೃದ್ಧಿಪಡಿಸಲು ವಿಶೇಷ ಗಮನ ಕೊಟ್ಟಿದ್ದಾರೆ. ಕೆರೆಗಳ ಅಭಿವೃದ್ಧಿಗೂ ವಿಶೇಷ ಗಮನ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಗಮನ ಕೊಟ್ಟು, ಬೆಂಗಳೂರಿನ ಎಲ್ಲ ರಸ್ತೆಗಳ ಅಭಿವೃದ್ಧಿ ಪಡಿಸಬೇಕು ಎಂಬುದು ನನ್ನ ಅಪೇಕ್ಷೆ. ಹಣಕಾಸಿನ ತೊಂದರೆ ಆಗದಂತೆ, ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಹೆಚ್ಚು ಗಮನ ಹರಿಸಲಾಗುವುದು ಎಂದು ಅವರು ಹೇಳಿದರು.

ಕೆರೆಗಳ ಕಟ್ಟೆಗಳ ಅಭಿವೃದ್ಧಿ, ಉದ್ಯಾನವನಗಳ ನಿರ್ಮಾಣ, ಹೀಗೆ ಹೆಚ್ಚು ಕೆಲಸ ಮಾಡಲು ನಾವು ಕಟ್ಟಿಬದ್ಧರಾಗಿದ್ದೇವೆ. ಕಮರ್ಷಿಯಲ್ ಸ್ಟ್ರೀಟ್, ಇನ್‍ಫೆಂಟ್ರಿ ರಸ್ತೆ, ಹಲಸೂರು ರಸ್ತೆ, ಡಿಕನ್ಸನ್ ರಸ್ತೆ, ಬ್ರಿಗೇಡ್ ರಸ್ತೆ, ರಾಜಾರಾಮ್ ಮೋಹನ್ ರಾಯ್ ರಸ್ತೆ, ಕಸ್ತೂರ್ ಬಾ ರಸ್ತೆ, ರಾಜಭವನ, ಪ್ಯಾಲೇಸ್ ರಸ್ತೆ ಸೇರಿದಂತೆ ಸ್ಮಾರ್ಟ್ ಸಿಟಿ ಯೋಜನೆಯಡಿ 36 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಪೈಕಿ ಬಹುತೇಕ ರಸ್ತೆಗಳ ಕಾಮಗಾರಿ ಪೂರ್ಣಗೊಂಡಿದೆ. ಇದೇ ವರ್ಷದಲ್ಲಿ ಉಳಿದ ರಸ್ತೆಗಳ ಕಾಮಗಾರಿಯೂ ಪೂರ್ಣಗೊಳ್ಳಲಿದೆ ಎಂದು ಯಡಿಯೂರಪ್ಪ ತಿಳಿಸಿದರು.
ಗಾಂಧಿನಗರ ಪ್ರದೇಶ, ಸುಬೇದಾರ್ ಛತ್ರಂ ರಸ್ತೆ, ಧನ್ವಂತರಿ ರಸ್ತೆ, ಕಾಟನ್‍ಪೇಟೆ ಮುಖ್ಯ ರಸ್ತೆ, ಡಬ್ಲ್ಯು.ಎಚ್.ಹನುಮಂತಪ್ಪ ರಸ್ತೆ, ವಾಣಿವಿಲಾಸ ರಸ್ತೆಯನ್ನು ಇತ್ತೀಚೆಗೆ ಟೆಂಡರ್ ಶ್ಯೂರ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. 69 ರಸ್ತೆಗಳು 147 ಕಿ.ಮೀ.ವಿಸ್ತೀರ್ಣ ವೈಟ್‍ಟಾಪಿಂಗ್ ಮಾಡಲಾಗಿದೆ. ನಮ್ಮ ಸರಕಾರದ ಆದ್ಯತೆ ಅಂತರ್‍ರಾಷ್ಟ್ರೀಯ ಮಟ್ಟದ ಸೌಕರ್ಯಗಳು ಬೆಂಗಳೂರಿನಲ್ಲಿ ಲಭ್ಯವಾಗಬೇಕು.

ಶಾಸಕಾರದ ರಿಝ್ವಾನ್ ಅರ್ಶದ್, ರಘು, ಎನ್.ಎ.ಹಾರೀಸ್ ಅಲ್ಲಲ್ಲಿ ಜೊತೆಗಿದ್ದು, ನಮ್ಮ ಕೆಲಸ ಕಾರ್ಯಗಳನ್ನು ಮೆಚ್ಚಿ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.

ನಗರ ಪರಿವೀಕ್ಷಣೆ ವೇಳೆ ಮುಖ್ಯಮಂತ್ರಿಯೊಂದಿಗೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಸಚಿವರಾದ ಆರ್.ಅಶೋಕ್, ಕೆ.ಗೋಪಾಲಯ್ಯ, ಅರವಿಂದ ಲಿಂಬಾವಳಿ, ಬಿ.ಎ.ಬಸವರಾಜ, ಹಿರಿಯ ಅಧಿಕಾರಿಗಳಾದ ವಂದಿತಾ ಶರ್ಮ, ರಾಕೇಶ್ ಸಿಂಗ್, ಗೌರವ್ ಗುಪ್ತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News