ಇಸ್ರೇಲ್ ಗೆ ಅಧಿಕೃತ ವೀಕ್ಷಕ ಸ್ಥಾನಮಾನ ನೀಡಿದ ಆಫ್ರಿಕನ್ ಯೂನಿಯನ್

Update: 2021-07-23 17:15 GMT
photo :twitter/@yairlapid

ಜೆರುಸಲೇಂ, ಜು.23: ಇಸ್ರೇಲ್ ಗೆ ಅಧಿಕೃತ ವೀಕ್ಷಕ ಸ್ಥಾನಮಾನ ನೀಡುವುದಾಗಿ ಆಫ್ರಿಕನ್ ಯೂನಿಯನ್ ಘೋಷಿಸಿದ್ದು, ಇದು ಇಸ್ರೇಲ್- ಆಫ್ರಿಕ ಸಂಬಂಧದಲ್ಲಿ ಸಂಭ್ರಮದ ದಿನವಾಗಿದೆ ಎಂದು ಇಸ್ರೇಲ್ ನ ವಿದೇಶ ವ್ಯವಹಾರ ಸಚಿವ ಯಾಯಿರ್ ಲ್ಯಾಪಿಡ್ ಹೇಳಿದ್ದಾರೆ.

ಇಥಿಯೋಪಿಯಾ, ಬುರುಂಡಿ ಮತ್ತು ಚಾಡ್ ಗೆ ಇಸ್ರೇಲ್ ನ ರಾಯಭಾರಿಯಾಗಿರುವ ಅಲೇಲಿ ಅಡ್ಮಸು ತನ್ನ ಪರಿಚಯ ಪತ್ರವನ್ನು ಇಥಿಯೋಪಿಯಾದ ರಾಜಧಾನಿ ಅದ್ದೀಸ್ ಅಬಾಬದಲ್ಲಿ ಆಫ್ರಿಕನ್ ಯೂನಿಯನ್ ಆಯೋಗದ ಅಧ್ಯಕ್ಷ ಮೂಸ್ಸಾ ಫಕಿ ಮಹಮತ್ ಗೆ ಹಸ್ತಾಂತರಿಸುವ ಮೂಲಕ ಈ ಕ್ರಮವನ್ನು ಅಧಿಕೃತಗೊಳಿಸಿದರು ಎಂದು ವರದಿ ತಿಳಿಸಿದೆ. ಇದೀಗ ಇಸ್ರೇಲ್ 46 ಆಫ್ರಿಕಾ ದೇಶಗಳೊಂದಿಗೆ ರಾಜತಾಂತ್ರಿಕ ಸಂಬಂಧ ಹೊಂದಿದೆ ಎಂದು ಇಸ್ರೇಲ್ ಮೂಲಗಳು ಹೇಳಿವೆ.

ಆಫ್ರಿಕನ್ ಯೂನಿಯನ್ ಗೆ ಈ ಹಿಂದೆ ಆರ್ಗನೈಸೇಷನ್ ಆಫ್ ಆಫ್ರಿಕನ್ ಯುನಿಟಿ(ಒಎಯು) ಎಂಬ ಹೆಸರಿದ್ದಾಗ ಇಸ್ರೇಲ್ಗೆ ಅಧಿಕೃತ ವೀಕ್ಷಕ ಸ್ಥಾನಮಾನವಿತ್ತು. ಆದರೆ 2002ರಲ್ಲಿ ಒಎಯು ವಿಸರ್ಜನೆಯಾದಾಗ ಇದನ್ನು ಹಿಂಪಡೆಯಲಾಗಿತ್ತು. 2 ದಶಕಗಳಿಂದ ನೆಲೆಸಿದ್ದ ಅಸಮಂಜತೆ ಇದೀಗ ಸರಿಯಾಗಿದ್ದು ಇಸ್ರೇಲ್ ನ ವಿದೇಶಿ ಸಂಬಂಧದ ಚೌಕಟ್ಟನ್ನು ಸದೃಢಗೊಳಿಸಲು ಈ ಉಪಕ್ರಮ ಪ್ರಮುಖವಾಗಿದೆ ಎಂದು ಇಸ್ರೇಲ್ ವಿದೇಶ ವ್ಯವಹಾರ ಇಲಾಖೆ ಹೇಳಿದೆ.

ಇಸ್ರೇಲ್ ಗೆ ಅಧಿಕೃತ ವೀಕ್ಷಕರ ಸ್ಥಾನಮಾನದ ಮರುಸ್ಥಾಪನೆಯಿಂದ ಉಭಯ ದೇಶಗಳ ನಡುವೆ ವಿವಿಧ ವಿಷಯಗಳಲ್ಲಿ ಬಲಿಷ್ಟ ಸಹಕಾರ ಸಂಬಂಧ ರೂಪುಗೊಳ್ಳಲಿದೆ ಎಂದುಆಫ್ರಿಕನ್ ಯೂನಿಯನ್ ಹೇಳಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News