ಕಳೆದ ಎಂಟು ವರ್ಷಗಳಲ್ಲಿ ಬ್ಯಾಂಕುಗಳು ತೊಡೆದುಹಾಕಿರುವ ಕೆಟ್ಟಸಾಲಗಳ ಮೊತ್ತ 10.8 ಲಕ್ಷ ಕೋಟಿ ರೂ.!

Update: 2021-07-24 16:45 GMT
ಸಾಂದರ್ಭಿಕ ಚಿತ್ರ 

ಹೊಸದಿಲ್ಲಿ, ಜು.24: ಭಾರತೀಯ ಬ್ಯಾಂಕುಗಳಲ್ಲಿನ ಕೆಟ್ಟ ಸಾಲಗಳ (ಪಾವತಿಸದ ಸಾಲಗಳು) ಮೊತ್ತ 2018 ಮಾರ್ಚ್ ಗೆ 10.36 ಲ.ಕೋ.ರೂ.ಗಳ ಉತ್ತುಂಗವನ್ನು ತಲುಪಿತ್ತು. ಆಗಿನಿಂದ ಈ ಮೊತ್ತವು ಕಡಿಮೆಯಾಗಿದೆ. ಇತ್ತೀಚಿಗೆ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಉತ್ತರದಲ್ಲಿ ಸರಕಾರವು 2021 ಮಾರ್ಚ್ ಗೆ ಇದ್ದಂತೆ ಕೆಟ್ಟಸಾಲಗಳ ಮೊತ್ತ ಸುಮಾರು 8.35 ಲ.ಕೋ.ರೂ.ಗಿಳಿದಿದೆ ಎಂದು ತಿಳಿಸಿತ್ತು. ಅಂದರೆ 2018 ಮಾರ್ಚ್ ಮತ್ತು 2021 ಮಾರ್ಚ್ ನಡುವಿನ ಅವಧಿಯಲ್ಲಿ ಕೆಟ್ಟಸಾಲಗಳ ಪ್ರಮಾಣ ಸುಮಾರು ಎರಡು ಲ.ಕೋ.ರೂ.ಗಳಷ್ಟು ಕಡಿಮೆಯಾಗಿದೆ ಎಂದಾಗುತ್ತದೆ.

ಇದು ತೃಪ್ತಿಕರ ಇಳಿಕೆ ಎಂದು ಅನ್ನಿಸಬಹುದಾದರೂ ಈ ಎಲ್ಲ ವರ್ಷಗಳಲ್ಲಿ ಬ್ಯಾಂಕುಗಳು ಲಕ್ಷಾಂತರ ಕೋಟಿ ರೂ.ಗಳ ಸಾಲಗಳನ್ನು ಲೆಕ್ಕಪುಸ್ತಕಗಳಿಂದ ತೊಡೆದುಹಾಕಿವೆ ಎನ್ನುವ ಅಂಶವನ್ನು ಇದು ಪರಿಗಣಿಸಿಲ್ಲ.

2021 ಮಾರ್ಚ್ ನಲ್ಲಿ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ್ದ ಉತ್ತರದಲ್ಲಿ ಸರಕಾರವು 2020 ಎಪ್ರಿಲ್ ಮತ್ತು ಡಿಸೆಂಬರ್ ನಡುವೆ ಬ್ಯಾಂಕುಗಳು 1.15 ಲ.ಕೋ.ರೂ.ಗಳ ಕೆಟ್ಟಸಾಲಗಳನ್ನು ತೊಡೆದುಹಾಕಿವೆ ಎಂದು ತಿಳಿಸಿತ್ತು. 2021 ಜನವರಿಯಿಂದ ಮಾರ್ಚ್ ವರೆಗಿನ ಅವಧಿಯಲ್ಲಿ ಬ್ಯಾಂಕುಗಳು 70,000 ಕೋ.ರೂ.ಗೂ ಹೆಚ್ಚಿನ ಸಾಲಗಳನ್ನು ತೊಡೆದುಹಾಕಿವೆ ಎಂದು ಆಂಗ್ಲ ದೈನಿಕವೊಂದು ಇತ್ತೀಚಿಗೆ ವರದಿ ಮಾಡಿತ್ತು. ಅಂದರೆ 2020-21ರಲ್ಲಿ ಲೆಕ್ಕಪುಸ್ತಕಗಳಿಂದ ತೊಡೆದುಹಾಕಲಾದ ಕೆಟ್ಟಸಾಲಗಳ ಮೊತ್ತ ಸುಮಾರು 1.85 ಲ.ಕೋ.ರೂ.ಆಗುತ್ತದೆ.

ಇದನ್ನು ಪರಿಗಣಿಸದರೆ 2013 ಎಪ್ರಿಲ್ನಿಂದ 2021 ಮಾರ್ಚ್ವರೆಗಿನ ಎಂಟು ವರ್ಷಗಳಲ್ಲಿ ತೊಡೆದುಹಾಕಿರುವ ಒಟ್ಟು ಕೆಟ್ಟ ಸಾಲಗಳ ಮೊತ್ತ 10.83 ಲ.ಕೋ.ರೂಗಳಾಗುತ್ತವೆ ಮತ್ತು ಇದು ನಿಜಕ್ಕೂ ತಲೆತಿರುಗಿಸುವಂತಹ ಸಂಖ್ಯೆಯಾಗಿದೆ. ಇದರ ನಿಜವಾದ ಅರ್ಥವೇನು?
 
ನಾಲ್ಕು ವರ್ಷಗಳವರೆಗೆ ಕೆಟ್ಟ ಸಾಲಗಳಾಗಿ ಉಳಿದಿರುವ ಸಾಲಗಳನ್ನು ಬ್ಯಾಂಕುಗಳು ತೊಡೆದುಹಾಕುವಿಕೆಯ ಮೂಲಕ ತಮ್ಮ ಬ್ಯಾಲೆನ್ಸ್ ಶೀಟ್ ಗಳಿಂದ ಕೈಬಿಡುತ್ತವೆ. ಅಂದರೆ ತೊಡೆದುಹಾಕುವಿಕೆ ಅಥವಾ ರೈಟ್ ಆಫ್ ಲೆಕ್ಕಪತ್ರ ಪದ್ಧತಿಯಾಗಿದೆ. ಆದರೆ ಇದಕ್ಕೆ ಮುನ್ನ ಬ್ಯಾಂಕುಗಳು ರೈಟ್ ಆಫ್ ಮಾಡಲಾಗುವ ಕೆಟ್ಟ ಸಾಲದಿಂದ ಆಗಬಹುದಾದ ನಷ್ಟವನ್ನು ಸರಿದೂಗಿಸಲು ಅದಕ್ಕೆ ಸಮನಾದ ಮೊತ್ತವನ್ನು ಮೀಸಲಿಡಬೇಕಾಗುತ್ತದೆ. ಅಲ್ಲದೆ ಸಾಲವನ್ನು ತೊಡೆದು ಹಾಕಲು ಬ್ಯಾಂಕು ನಾಲ್ಕು ವರ್ಷ ಕಾಯಬೇಕೆಂದೇನೂ ಇಲ್ಲ. ನಿರ್ದಿಷ್ಟ ಸಾಲವೊಂದು ವಸೂಲಾಗುವುದಿಲ್ಲ ಎಂದು ಅದು ಭಾವಿಸಿದರೆ ಅದನ್ನು ಮೊದಲೇ ರೈಟ್ ಆಫ್ ಮಾಡಬಹುದು.

2020 ಮಾರ್ಚ್ ಗೆ ಇದ್ದಂತೆ ಬ್ಯಾಂಕುಗಳಲ್ಲಿಯ ಕೆಟ್ಟ ಸಾಲಗಳ ಒಟ್ಟು ಮೊತ್ತ 8.96 ಲ.ಕೋ.ರೂ.ಆಗಿತ್ತು. ಆ ವರ್ಷ ಬ್ಯಾಂಕುಗಳು 1.85 ಲ.ಕೋ,ರೂ.ಗಳ ಸಾಲಗಳನ್ನು ತೊಡೆದುಹಾಕಿದ್ದವು. ಅಂದರೆ ಬ್ಯಾಂಕುಗಳ ಕೆಟ್ಟ ಸಾಲಗಳು 7.11ಲ.ಕೋ.ರೂ.ಗೆ ಇಳಿಯಬೇಕಿತ್ತು. ಅಲ್ಲದೆ ಬ್ಯಾಂಕುಗಳು ಕೆಲವು ಪ್ರಮಾಣದಲ್ಲಿ ಕೆಟ್ಟ ಸಾಲಗಳನ್ನು ವಸೂಲು ಮಾಡುವಲ್ಲಿ ಯಶಸ್ವಿಯಾಗಿರುತ್ತಿದ್ದವು, ಅಂದರೆ ಕೆಟ್ಟ ಸಾಲಗಳ ಮೊತ್ತ ಇನ್ನಷ್ಟು ತಗ್ಗಬೇಕಿತ್ತು. 

ಆದರೆ 2021 ಮಾರ್ಚ್ ಗೆ ಇದ್ದಂತೆ ಬ್ಯಾಂಕುಗಳಲ್ಲಿಯ ಕೆಟ್ಟ ಸಾಲಗಳ ಮೊತ್ತ 8.35 ಲ.ಕೋ.ರೂ.ಆಗಿತ್ತು. ಆದರೆ ಇಲ್ಲೇನಾಗಿತ್ತು? ಪ್ರಾಥಮಿಕವಾಗಿ ಆ ವರ್ಷ ಹೊಸದಾಗಿ ಕೆಟ್ಟ ಸಾಲಗಳು ಸೇರ್ಪಡೆಗೊಂಡು ಒಟ್ಟು ಮೊತ್ತವನ್ನು 8.35 ಲ.ಕೋ.ರೂ.ಗೆ ಹೆಚ್ಚಿಸಿದ್ದವು. ಹೀಗಾಗಿ ಬ್ಯಾಂಕುಗಳು ಕೆಟ್ಟ ಸಾಲಗಳ ಶೇಖರಣೆಯನ್ನು ಮುಂದುವರಿಸಿವೆ. ನಾಲ್ಕು ವರ್ಷಗಳ ನಂತರ ಕೆಟ್ಟ ಸಾಲಗಳನ್ನು ತೊಡೆದುಹಾಕುವುದರಿಂದ ಅದು ಒಟ್ಟಾರೆ ಮೊತ್ತವನ್ನು ಕಡಿಮೆ ಮಾಡಲು ನೆರವಾಗುತ್ತದೆ ಮತ್ತು ಇದು ಸ್ಥಿತಿಯನ್ನು ವಾಸ್ತವಕ್ಕಿಂತ ಹೆಚ್ಚು ಉತ್ತಮವಾಗಿ ಬಿಂಬಿಸುತ್ತದೆ.

 2018 ಮಾರ್ಚ್ ಮತ್ತು 2021 ಮಾರ್ಚ್ ನಡುವೆ 6.6 ಲ.ಕೋ.ರೂ.ಗಳ ಕೆಟ್ಟ ಸಾಲಗಳನ್ನು ತೊಡೆದುಹಾಕಲಾಗಿತ್ತು. ಅದೇನೇ ಇದ್ದರೂ ಕೆಟ್ಟ ಸಾಲಗಳಲ್ಲಿ ವಾಸ್ತವಿಕ ಇಳಿಕೆ ಸುಮಾರು ಎರಡು ಲ.ಕೋ.ಗೂ.ಗಳಷ್ಟು ಮಾತ್ರ ಆಗಿತ್ತು,ಕೆಟ್ಟ ಸಾಲಗಳ ಮೊತ್ತ 10.36 ಲ.ಕೋ.ರೂ.ಗಳಿಂ.ದ 8.35 ಲ.ಕೋ.ರೂ.ಗೆ ಇಳಿದಿತ್ತು. ಕೆಟ್ಟ ಸಾಲಗಳ ಶೇಖರಣೆ ಮುಂದುವರಿಯುತ್ತಲೇ ಇದೆ ಎನ್ನುವುದನ್ನು ಇದು ಸೂಚಿಸುತ್ತದೆ.

ಕಳೆದ ಎಂಟು ವರ್ಷಗಳಲ್ಲಿ 10.83 ಲ.ಕೋ.ರೂ.ಗಳ ಕೆಟ್ಟ ಸಾಲಗಳನ್ನು ತೊಡೆದುಹಾಕಲಾಗಿದ್ದು,ಇದಕ್ಕೆ ಮಾರ್ಚ್ 2021ಕ್ಕೆ ಇದ್ದ 8.35 ಲ.ಕೋ.ರೂ.ಗಳ ಕೆಟ್ಟ ಸಾಲವನ್ನು ಸೇರಿಸಿದರೆ ಒಟ್ಟು ಮೊತ್ತ 19.18 ಲ.ಕೋ.ರೂ.ಆಗುತ್ತದೆ. ಇದು ಆರ್ಬಿಐನ ಮಾಜಿ ಡೆಪ್ಯೂಟಿ ಗವರ್ನರ್ ಡಾ.ಕೆ.ಸಿ.ಚಕ್ರವರ್ತಿ ಅವರು ಫಸ್ಟ್‌ ಫೋರ್ಸ್‌ ಗೆ ನೀಡಿದ್ದ ಸಂದರ್ಶನದಲ್ಲಿ ಸೂಚಿಸಿದ್ದ 20 ಲ.ಕೋ.ರೂ.ಗಳಿಗೆ ಸಮೀಪವಾಗಿದೆ. ವರದಿಯಾಗಿರುವ ಕೆಟ್ಟ ಸಾಲಗಳು,ಪುನರ್ರಚನೆಯಾದ ಸಾಲಗಳು, ಮನ್ನಾ ಮಾಡಿದ ಸಾಲಗಳು ಮತ್ತು ಈವರೆಗೆ ಗುರುತಿಸಲಾದ ಕೆಟ್ಟ ಸಾಲಗಳು ಸೇರಿದಂತೆ ತೊಂದರಗೊಳಗಾದ ಎಲ್ಲ ಸಾಲಗಳನ್ನು ಪರಿಗಣಿಸಬೇಕಾಗುತ್ತದೆ ಎಂದು ಅವರು ಹೇಳಿದ್ದರು.

ರೈಟ್ ಆಫ್ ಅಥವ ತೊಡೆದುಹಾಕುವಿಕೆಯನ್ನು ಟೆಕ್ನಿಕಲ್ ರೈಟ್ ಆಫ್ ಎಂದು ಆರ್ಬಿಐ ಪರಿಭಾವಿಸುತ್ತದೆ.ಅಂದರೆ ಬ್ಯಾಂಕಿನ ಕೇಂದ್ರ ಕಚೇರಿ ಮಟ್ಟದಲ್ಲಿ ತೊಡೆದುಹಾಕಲಾದ ಕೆಟ್ಟ ಸಾಲಗಳು ಶಾಖೆಗಳಲ್ಲಿಯ ಲೆಕ್ಕಪುಸ್ತಕಗಳಲ್ಲಿ ಕೆಟ್ಟ ಸಾಲಗಳಾಗಿಯೇ ಉಳಿದುಕೊಳ್ಳುತ್ತವೆ ಮತ್ತು ಶಾಖಾ ಮಟ್ಟದಲ್ಲಿ ಅದರ ವಸೂಲಿಗೆ ಪ್ರಯತ್ನಗಳು ಮುಂದುವರಿಯುತ್ತಿರುತ್ತವೆ.

ತಾಂತ್ರಿಕವಾಗಿ ರೈಟ್ ಆಫ್ ಆದ ಕೆಟ್ಟ ಸಾಲ ಭಾಗಶಃ ಅಥವಾ ಪೂರ್ಣವಾಗಿ ಮರುವಸೂಲಾದರೆ ಅದನ್ನು ಬ್ಯಾಂಕಿನ ಆದಾಯವನ್ನಾಗಿ ಘೋಷಿಸಲಾಗುತ್ತದೆ. ಅದೇನೇ ಇದ್ದರೂ ಈ ಎಲ್ಲ ವರ್ಷಗಳಲ್ಲಿ ರೈಟ್ ಆಫ್ ಮಾಡಲಾಗಿರುವ ಸಾಲಗಳ ವಸೂಲಾತಿ ದರವು ನಿರಾಶಾದಾಯಕವಾಗಿದೆ.

2000-01ರಿಂದ 2012-13ರ ನಡುವಿನ ಅವಧಿಯಲ್ಲಿ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು ತೊಡೆದುಹಾಕಿದ್ದ ಸಾಲಗಳ ಪೈಕಿ ಒಟ್ಟು ವಸೂಲಾತಿಯು ಇಂತಹ ಸಾಲಗಳ ಶೇ.23.4ರಷ್ಟಿತ್ತು. ಎಪ್ರಿಲ್ 2014 ಮತ್ತು ಮಾರ್ಚ್ 2018ರ ನಡುವಿನ ಅವಧಿಯಲ್ಲಿ ಈ ಬ್ಯಾಂಕುಗಳು ತೊಡೆದುಹಾಕಿದ್ದ ಸಾಲಗಳ ಒಟ್ಟು ಮೊತ್ತ 3.17 ಲ.ಕೋ.ರೂ.ಆಗಿತ್ತು. ಈ ಪೈಕಿ 44,900 ಕೋ.ರೂ.(ಸುಮಾರು ಶೇ.14)ಗಳನ್ನು ವಸೂಲು ಮಾಡಲು ಸಾಧ್ಯವಾಗಿತ್ತು.

ಅಂದರೆ ಸಾಲ ತೊಡೆದುಹಾಕುವಿಕೆಗೂ ಸಾಲಮನ್ನಾಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ.

ಕೃಪೆ: newslaundry.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News