ಗಡಿ ಠಾಣೆ ತಾಲಿಬಾನ್ ವಶ: ಪಾಕ್ ನಲ್ಲಿ ಆಶ್ರಯ ಪಡೆದ 46 ಅಫ್ಘಾನ್ ಸೈನಿಕರು

Update: 2021-07-26 18:39 GMT

 ಇಸ್ಲಾಮಾಬಾದ್,ಜು.26: ಪಾಕ್ ಗಡಿ ಸಮೀಪದ ಸೇನಾಠಾಣೆಯ ಮೇಲೆ ನಿಯಂತ್ರಣವನ್ನು ಕಳೆದುಕೊಂಡ ಬಳಿಕ ಕನಿಷ್ಠ 46 ಮಂದಿ ಅಫ್ಘಾನ್ ಯೋಧರು ವಾಯವ್ಯ ಪಾಕಿಸ್ತಾನದ ಖೈಬರ್-ಪಖ್ತೂನ್ಖ್ವಾ ಪ್ರಾಂತವನ್ನು ದಾಟಿ ಬಂದು ಆಶ್ರಯಪಡೆದುಕೊಂಡಿದ್ದಾರೆಂದು ಮಾಧ್ಯಮ ವರದಿಯೊಂದು ತಿಳಿಸಿದೆ.

   ಅಫ್ಘಾನಿಸ್ತಾನ ರಾಷ್ಟ್ರೀಯ ಸೇನೆ (ಎಎನ್ಎ) ಹಾಗೂ ಗಡಿಭದ್ರತಾಪಡೆಗೆ ಸೇರಿದ ಐವರು ಅಧಿಕಾರಿಗಳು ಸೇರಿದಂತೆ46 ಮಂದಿ ಯೋಧರು ವಾಯವ್ಯ ಪಾಕಿಸ್ತಾನದ ಚಿತ್ರಾಲ್ ಜಿಲ್ಲೆಯಲ್ಲಿರುವ ಅರುಂಡು ವಲಯದಲ್ಲಿ ಗಡಿದಾಟಿ ಬಂದು ಆಶ್ರಯ ಪಡೆದಿದ್ದಾರೆಂದು ಪಾಕಿಸ್ತಾನದ ಆಂತರಿಕ ಸೇವೆಗಳ ಸಾರ್ವಜನಿಕ ಬಾಂಧವ್ಯಗಳ (ಐಎಸ್ಪಿಆರ್)ನ ಹೇಳಿಕೆ ತಿಳಿಸಿದೆ.

 ಕೆಲವು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಅವರನ್ನು ಅಫ್ಘಾನ್ ಸರಕಾರದ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಪಾಕ್ ಸೇನಾಧಿಕಾರಿಗಳು ತಿಳಿಸಿದ್ದಾರೆಂದು ಡಾನ್ ಸುದ್ದಿಸಂಸ್ಥೆ ವರದಿ ಮಾಡಿದೆ.
 
 ಜುಲೈ 1ರಂದು ಇಂತಹದೇ ಒಂದು ಘಟನೆಯಲ್ಲಿ, ತಾಲಿಬಾನ್ ದಾಳಿಯಿಂದ ಪಾಕ್-ಅಫ್ಘಾನ್ ಗಡಿಯಲ್ಲಿನ ಸೇನಾಠಾಣೆಯ ಮೇಲಿನ ನಿಯಂತ್ರಣವನ್ನು ಕಳೆದುಕೊಂಡ ಕನಿಷ್ಠ 35 ಮಂದಿ ಅಫ್ಘಾನಿಸ್ತಾನದ ಯೋಧರು, ಗಡಿದಾಟಿ ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದರು.

 ಈ ಮಧ್ಯೆ ಅಫ್ಘಾನಿಸ್ತಾನದ ಗಝನಿ ಜಿಲ್ಲೆಯಲ್ಲಿ ರವಿವಾರ ನಡೆದ ಭೀಕರ ಘರ್ಷಣೆಯಲ್ಲಿ ನಾಗರಿಕರು ಹಾಗೂ ಸೈನಿಕರು ಸೇರಿದಂತೆ 43 ಮಂದಿಯನ್ನು ತಾಲಿಬಾನ್ ಬಂಡುಕೋರರು ಹತ್ಯೆಗೈದಿದ್ದಾರೆಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News