ಅಸ್ಸಾಂ-ಮಿಜೋರಾಂ ಗಡಿ ಘರ್ಷಣೆ: ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ವಿಪಕ್ಷ ನಾಯಕರು

Update: 2021-07-27 12:44 GMT

ಹೊಸದಿಲ್ಲಿ: ಸೋಮವಾರ ಅಸ್ಸಾಂ-ಮಿಜೋರಾಂ ಗಡಿ ಭಾಗದಲ್ಲಿ ನಡೆದ ಘರ್ಷಣೆಯಲ್ಲಿ ಐದು ಮಂದಿ ಪೊಲೀಸ್ ಅಧಿಕಾರಿಗಳು ಮೃತರಾದ ಘಟನೆಗೆ ಸಂಬಂಧಿಸಿದಂತೆ  ವಿಪಕ್ಷ ನಾಯಕರು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಹಾಗೂ ಸರಕಾರ ಆ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

"ಜನರ ಜೀವನಗಳಲ್ಲಿ ದ್ವೇಷ ಮತ್ತು ಅವಿಶ್ವಾಸ ಬೆಳೆಸುವ ಮೂಲಕ ಗೃಹ ಸಚಿವರು ಮತ್ತೆ ವಿಫಲರಾಗಿದ್ದಾರೆ, ಭಾರತ ಅದರ ಭಯಾನಕ ಪರಿಣಾಮಗಳನ್ನು ಅನುಭವಿಸುತ್ತಿದೆ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಕೂಡ ಟ್ವೀಟ್ ಮಾಡಿ "ಅಸ್ಸಾಂ ಹಾಗೂ ಮಿಜೋರಾಂನಲ್ಲಿ ಎನ್‍ಡಿಎ-ಬಿಜೆಪಿ ಸರಕಾರಗಳಿವೆ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರಕಾರವಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಎರಡೂ ಮುಖ್ಯಮಂತ್ರಿಗಳು ವಿಫಲರಾಗಿದ್ದಾರೆ. ಈ ಕುರಿತು ಅಮಿತ್ ಶಾ ಅವರ ಹೊಣೆಗಾರಿಕೆಯೇನು?, ರಾಜೀನಾಮೆ ನೀಡಿ ಅಥವಾ ಕ್ರಮ ಕೈಗೊಳ್ಳಿ" ಎಂದು ಬರೆದಿದ್ದಾರೆ.

ಘಟನೆ ಕುರಿತು ತನಿಖೆ ನಡೆಸುವಂತೆ ಲೋಕಸಭೆಯಲ್ಲಿ ಕಾಂಗ್ರೆಸ್ ಉಪನಾಯಕ ಗೌರವ್ ಗೊಗೊಯಿ ಅವರು ಅಮಿತ್ ಶಾಗೆ ಪತ್ರ ಬರೆದಿದ್ದಾರೆ.

ಘಟನೆ ಕುರಿತು ಆಘಾತ ವ್ಯಕ್ತಪಡಿಸಿ ಟ್ವೀಟ್ ಮಾಡಿದ  ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ, "ಬಿಜೆಪಿಯ ಕಣ್ಗಾವಲಿನಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿರುವುದು ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯನ್ನು ಆಹ್ವಾನಿಸಿದಂತಾಗಿದೆ" ಎಂದು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News