ಸಾಮಾಜಿಕ-ಆರ್ಥಿಕ ಸಮಸ್ಯೆಯಾದ ಭಿಕ್ಷಾಟನೆಯನ್ನು ನಿಷೇಧಿಸಲು ಸಾಧ್ಯವಿಲ್ಲ: ಸುಪ್ರೀಂ

Update: 2021-07-27 14:25 GMT

ಹೊಸದಿಲ್ಲಿ,ಜು.27: ಭಿಕ್ಷಾಟನೆಯು ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಯಾಗಿದೆಯಾದರೂ ಅದನ್ನು ನಿಷೇಧಿಸಲು ಸಾಧ್ಯವಿಲ್ಲವೆಂದು ಸುಪ್ರೀಂಕೋರ್ಟ್ ಮಂಗಳವಾರ ಅಭಿಪ್ರಾಯಿಸಿದೆ. ಶಿಕ್ಷಣ ಹಾಗೂ ಉದ್ಯೋಗದ ಕೊರತೆಯಿಂದಾಗಿ ಅನಿವಾರ್ಯವಾಗಿ ಜನರು ಭಿಕ್ಷೆ ಬೇಡುತ್ತಿದ್ದಾರೆ ಎಂದು ಅದು ಹೇಳಿದೆ.

ಕೋವಿಡ್19 ಹಾವಳಿ ಹಿನ್ನೆಲೆಯಲ್ಲಿ ನಿರ್ವಸಿತರು,ಭಿಕ್ಷುಕರು ಹಾಗೂ ಅಲೆಮಾರಿಗಳನ್ನು ಲಸಿಕೀ ಕರಣ ಗೊಳಿಸಬೇಕು ಹಾಗೂ ಅರನ್ನು ಸಾರ್ವಜಿಕ ಸ್ಥಳಗಳಿಂದ ತೆರವುಗೊಳಿಸಬೇಕೆಂದು ಕೋರಿ ಸಲ್ಲಿಕೆಯಾದ ಅರ್ಜಿಯ ಆಲಿಕೆ ನಡೆಸಿದ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ಎಂ.ಆರ್.ಶಾ ಅವರಿದ್ದ ನ್ಯಾಯಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.
   
‘‘ತಮ್ಮ ಪ್ರಾಥಮಿಕ ಜೀವನನಿರ್ವಹಣೆಗಾಗಿ ಈ ಜನರು ಭಿಕ್ಷೆ ಬೇಡಲು ಬೀದಿಗಿಳಿಯುತ್ತಾರೆ. ಇದೊಂದು ಸಾಮಾಜಿಕ-ಆರ್ಥಿಕ ಸಮಸ್ಯೆಯಾಗಿದೆ. ಹೀಗಾಗಿ ಭಿಕ್ಷುಕರನ್ನು ಸಾರ್ವಜನಿಕ ಸ್ಥಳಗಳಿಂದ ತೆರವುಗೊಳಿಸಲು ಆದೇಶವನ್ನು ಹೊರಡಿಸಲು ಸಾಧ್ಯವಿಲ್ಲವೆಂದು ನ್ಯಾಯಪೀಠ ತಿಳಿಸಿತು.
  ‌
ಕೋವಿಡ್19 ಸಾಂಕ್ರಾಮಿಕ ದೇಶಾದ್ಯಂತ ಹರಡುವುದನ್ನು ತಪ್ಪಿಸಲು ಬೀದಿಗಳು, ಟ್ರಾಫಿಕ್ ಜಂಕ್ಷನ್ ಗಳು ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷಕರು, ನಿರ್ವಸಿತರು ಹಾಗೂ ಅಲೆಮಾರಿಗಳು ಭಿಕ್ಷೆ ಬೇಡುವುದನ್ನು ನಿಷೇಧಿಸಬೇಕೆಂದು ಕೋರಿ ನ್ಯಾಯವಾದಿ ಕುಶ್ ಕಾಲ್ರಾ ಅವರು ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸಲ್ಲಿಸಿದ್ದರು.
 
ಭಿಕ್ಷಾಟನೆಯಂತಹ ಮಾನವೀಯ ಸಮಸ್ಯೆಯನನ್ನು ನಿಭಾಯಿಸಲು ಕೈಗೊಳ್ಳಲಾದ ಕ್ರಮಗಳ ಬಗ್ಗೆ ತನಗೆ ಎರಡುವಾರಗಳೊಳಗೆ ಮಾಹಿತಿ ನೀಡುವಂತೆ ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಹಾಗೂ ದಿಲ್ಲಿ ಸರಕಾರಕ್ಕೆ ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News