ಅಸ್ಸಾಂ-ಮಿಝೋರಾಂ ಗಡಿ ಘರ್ಷಣೆ: 100 ಮೀ.ಹಿಂದಕ್ಕೆ ಸರಿದ ಪೊಲೀಸ್ ಪಡೆಗಳು, ಬಂದ್ ನಿಂದ ಟ್ರಕ್‌ಗಳ ಸಂಚಾರಕ್ಕೆ ವ್ಯತ್ಯಯ

Update: 2021-07-28 14:18 GMT
photo: twitter/@CeeMalsawmi

ಗುವಾಹಟಿ,ಜು.28: ಅಂತರರಾಜ್ಯ ಗಡಿಯಲ್ಲಿ ಸಂಭಾವ್ಯ ಹಿಂಸಾಚಾರದ ಭೀತಿ ಮತ್ತು ಪ್ರತಿಭಟನಾಕಾರರು ಅಸ್ಸಾಮಿನ ಬರಾಕ್ ಕಣಿವೆಯಲ್ಲಿ ಕರೆ ನೀಡಿರುವ ಬಂದ್ ನಿಂದಾಗಿ ಸರಕುಗಳನ್ನು ಹೊತ್ತಿರುವ ಹಲವಾರು ಟ್ರಕ್ ಗಳು ಮಿಜೋರಾಮ್ ಪ್ರವೇಶಿಸಲು ಸಾಧ್ಯವಾಗದೇ ರಸ್ತೆಯಲ್ಲಿಯೇ ಬಾಕಿಯಾಗಿವೆ,ಹೀಗಾಗಿ ಮಿಝೋರಾಂ ಒಂದು ರೀತಿಯ ಆರ್ಥಿಕ ದಿಗ್ಬಂಧನವನ್ನು ಅನುಭವಿಸುತ್ತಿದೆ.

ಅಸ್ಸಾಂ ಮತ್ತು ಮಿಝೋರಾಂನ ಸಶಸ್ತ್ರ ಪೊಲೀಸ್ ಪಡೆಗಳು ಉದ್ವಿಗ್ನ ಗಡಿಯ ಬಳಿಯೇ ಮೊಕ್ಕಾಂ ಹೂಡಿವೆಯಾದರೂ,ಸಹಜ ಸ್ಥಿತಿಯನ್ನು ಮರಳಿಸುವ ಪ್ರಯತ್ನವಾಗಿ ಅವುಗಳನ್ನು ಕನಿಷ್ಠ 100 ಮೀ.ಗಳಷ್ಟು ಹಿಂದಕ್ಕೆ ಸರಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ದೃಢಪಡಿಸಿದರು.

ಸೋಮವಾರ ಗಡಿಯಲ್ಲಿ ಸಂಭವಿಸಿದ್ದ ಹಿಂಸಾತ್ಮಕ ಘರ್ಷಣೆಗಳಲ್ಲಿ ಆರು ಪೊಲೀಸರು ಸೇರಿದಂತೆ ಏಳು ಜನರ ಹತ್ಯೆಯನ್ನು ಪ್ರತಿಭಟಿಸಿ ಬುಧವಾರ ಕರೆ ನೀಡಲಾಗಿದ್ದ 12 ಗಂಟೆಗಳ ಬಂದ್ನಿಂದಾಗಿ ಅಸ್ಸಾಮಿನ ಬರಾಕ್ ಕಣಿವೆಯ ಮೂರು ಜಿಲ್ಲೆಗಳಲ್ಲಿ ಸಾಮಾನ್ಯ ಜನಜೀವನ ವ್ಯತ್ಯಯಗೊಂಡಿತ್ತು. ಘರ್ಷಣೆಯಲ್ಲಿ ಅಸ್ಸಾಮಿನ ಕಾಚಾರ್ ಜಿಲ್ಲಾ ಎಸ್ಪಿ ವೈ.ಸಿ.ನಿಂಬಾಳ್ಕರ್ ಸೇರಿದಂತೆ 50 ಜನರು ಗಾಯಗೊಂಡಿದ್ದರು. ನಿಂಬಾಳ್ಕರ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈನ ಆಸ್ಪತ್ರೆಗೆ ಸಾಗಿಸಲಾಗಿದೆ.

ಬುಧವಾರ ಕಾಚಾರ್, ಹೈಲಕಂಡಿ ಮತ್ತು ಕರೀಮಗಂಜ್ ಜಿಲ್ಲೆಗಳಲ್ಲಿ ಎಲ್ಲ ಅಂಗಡಿ-ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದು, ರಸ್ತೆಗಳಲ್ಲಿ ಕೆಲವೇ ವಾಹನಗಳು ಕಂಡು ಬಂದಿದ್ದವು. ಆದರೆ ತುರ್ತು ಸೇವೆಗಳಿಗೆ ಬಂದ್ ನಿಂದ ವಿನಾಯಿತಿ ನೀಡಲಾಗಿತ್ತು. ರೈಲುಗಳು ಎಂದಿನಂತೆ ಸಂಚರಿಸಿದವು.

ಬರಾಕ್ ಡೆಮಾಕ್ರಟಿಕ್ ಫ್ರಂಟ್ (ಬಿಡಿಎಫ್) ನೀಡಿದ್ದ ಬಂದ್ ಅನ್ನು ಪ್ರತಿಪಕ್ಷಗಳು ಸೇರಿದಂತೆ ರಾಜಕೀಯ ಸಂಘಟನೆಗಳನ್ನು ಬೆಂಬಲಿಸಿದ್ದವು. ಯಾವುದೇ ಜಿಲ್ಲೆಯಲ್ಲಿ ಹಿಂಸಾಚಾರ ವರದಿಯಾಗಿಲ್ಲ ಎಂದು ಅಧಿಕಾರಿಯೋರ್ವರು ತಿಳಿಸಿದರು.
‘ನಮ್ಮ ಪೊಲೀಸ್ ಸಿಬ್ಬಂದಿಗಳು ಕೊಲ್ಲಲ್ಪಟ್ಟಿದ್ದರಿಂದ ಬಂದ್ ಗೆ ಕರೆ ನೀಡುವುದು ಅನಿವಾರ್ಯವಾಗಿತ್ತು. ಉಭಯ ರಾಜ್ಯಗಳ ನಡುವಿನ ಗಡಿ ವಿವಾದಕ್ಕೆ ಶಾಶ್ವತ ಪರಿಹಾರದ ಅಗತ್ಯವಿದೆ. ಇನ್ನಷ್ಟು ರಕ್ತಪಾತ ನಮಗೆ ಬೇಕಿಲ್ಲ ’ಎಂದು ಬಿಡಿಎಫ್ನ ಮುಖ್ಯ ಸಂಚಾಲಕ ಪಿ.ಡಿ.ರೇ ಹೇಳಿದರು.

ಹೈಲಕಂಡಿಯಲ್ಲಿ ಹಲವಾರು ಸಾಮಾಜಿಕ ಸಂಘಟನೆಗಳು ಮಿಝೋರಾಂಗೆ ಹೋಗುವ ರಸ್ತೆಗಳಲ್ಲಿ ತಡೆಗಳನ್ನು ನಿರ್ಮಿಸಿ ಸರಕು ಸಾಗಾಟದ ಲಾರಿಗಳು ಆ ರಾಜ್ಯವನ್ನು ಪ್ರವೇಶಿಸುವುದನ್ನು ತಡೆಯಲು ಅನಿರ್ದಿಷ್ಟಾವಧಿಯ ‘ಆರ್ಥಿಕ ದಿಗ್ಬಂಧನ ’ವನ್ನು ಆರಂಭಿಸಿವೆ.

ತನ್ಮಧ್ಯೆ ಉಭಯ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಪೊಲೀಸ್ ಮುಖ್ಯಸ್ಥರು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬುಧವಾರ ದಿಲ್ಲಿಯಲ್ಲಿ ಗೃಹಸಚಿವಾಲಯದ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆಯನ್ನು ನಡೆಸಿದರು.
ಹೊಟ್ಟೆಗೆ ತೀವ್ರ ಗುಂಡಿನ ಗಾಯವಾಗಿದ್ದ ಆರನೇ ಅಸ್ಸಾಂ ಪೊಲೀಸ್ ಬೆಟಾಲಿಯನ್ ಸಿಬ್ಬಂದಿ ಶ್ಯಾಮಪ್ರಸಾದ್ ದುಸತ್ ಅವರು ಮಂಗಳವಾರ ರಾತ್ರಿ ಸಿಲ್ಚಾರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು,ಹಿಂಸಾಚಾರಗಳಲ್ಲಿ ಸತ್ತವರ ಸಂಖ್ಯೆ ಏಳಕ್ಕೇರಿದೆ.

ಉಭಯ ರಾಜ್ಯಗಳ ನಡುವಿನ ಗಡಿ ವಿವಾದ ಕಾವು ಪಡೆದುಕೊಳ್ಳುತ್ತಿದ್ದು,ಮನೆಗಳಿಗೆ ಬೆಂಕಿ ಹಚ್ಚುವ ಮತ್ತು ಭೂ ಅತಿಕ್ರಮಣದಂತಹ ಘಟನೆಗಳೊಂದಿಗೆ ಕಳೆದ ವರ್ಷದ ಅಕ್ಟೋಬರ್ ನಿಂದ ಕಾಚಾರ್ ಮತ್ತು ಹೈಲಕಂಡಿ ಜಿಲ್ಲೆಗಳ ಅಂತರರಾಜ್ಯ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚುತ್ತಲೇ ಇದೆ.
ಅಸ್ಸಾಮಿನ ಕಾಚಾರ್,ಹೈಲಕಂಡಿ ಮತ್ತು ಕರೀಮಗಂಜ್ ಹಾಗೂ ಮಿಝೋರಾಂನ  ಕೊಲಾಸಿಬ್, ಮಮಿತ್ ಮತ್ತು ಐಜ್ವಾಲ್ ಜಿಲ್ಲೆಗಳ ನಡುವೆ 164.6 ಕಿ.ಮೀ.ಉದ್ದದ ಗಡಿಯನ್ನು ಉಭಯ ರಾಜ್ಯಗಳು ಹಂಚಿಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News