ಕೊರೋನ ಬಾಧಿತ ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಜಾಗತಿಕ ಶಿಕ್ಷಣ ಶೃಂಗಸಭೆ ಸಂಕಲ್ಪ

Update: 2021-07-29 17:07 GMT

ಲಂಡನ್, ಜು.29: ಕೊರೋನ ಸಾಂಕ್ರಾಮಿಕದ ಹೊಡೆತಕ್ಕೆ ತತ್ತರಿಸಿರುವ ಜಗತ್ತಿನ ಅತ್ಯಂತ ಬಡತನದ ದೇಶಗಳ ಇನ್ನೂ 88 ಮಿಲಿಯನ್ ಮಕ್ಕಳನ್ನು ಶಾಲೆಗೆ ಸೇರಿಸುವ ಉದ್ದೇಶಕ್ಕೆ ಸುಮಾರು 5 ಬಿಲಿಯನ್ ಡಾಲರ್ ನಿಧಿ ಸಂಗ್ರಹಿಸುವ ಉದ್ದೇಶದ ಜಾಗತಿಕ ಶಿಕ್ಷಣ ಶೃಂಗಸಭೆ ಲಂಡನ್‌ನಲ್ಲಿ ನಡೆದಿದ್ದು ಈ ಅಭಿಯಾನಕ್ಕೆ 430 ಮಿಲಿಯ ಪೌಂಡ್ ದೇಣಿಗೆ ನೀಡುವುದಾಗಿ ಬ್ರಿಟನ್ ಘೋಷಿಸಿದೆ.

92 ದೇಶಗಳ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಉದ್ದೇಶದ ಈ ಶೃಂಗಸಭೆ ಬ್ರಿಟನ್ ಮತ್ತು ಕೆನ್ಯಾದ ಜಂಟಿ ಆತಿಥೇಯತ್ವದಲ್ಲಿ ನಡೆದಿದೆ. ವಿಶ್ವದೆಲ್ಲೆಡೆ ಹಲವು ಮಕ್ಕಳು, ವಿಶೇಷವಾಗಿ ಹೆಣ್ಣುಮಕ್ಕಳು, ಕೊರೋನ ಸೋಂಕಿನ ಸಮಸ್ಯೆ ಆರಂಭವಾಗುವುದಕ್ಕೂ ಮುನ್ನವೇ ಶಾಲೆಯಿಂದ ಹೊರಗುಳಿದಿದ್ದಾರೆ. ಅವರಿಗೆ ಶಿಕ್ಷಣದ ಅವಕಾಶ ಕಲ್ಪಿಸುವುದು ಮತ್ತು ಅವರ ಸಾಮರ್ಥ್ಯ ಪ್ರದರ್ಶನಕ್ಕೆ ಅನುವು ಮಾಡಿಕೊಡುವುದು ಈ ಬಿಕ್ಕಟ್ಟಿನಿಂದ ಹೊರಬರಲು ನಾವು ಮಾಡುವ ಏಕೈಕ ಮಹತ್ತರ ಕಾರ್ಯವಾಗಿದೆ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.

ಕಡಿಮೆ ಆದಾಯದ ದೇಶಗಳಲ್ಲಿ ಶಿಕ್ಷಣಕ್ಕೆ ಪೂರಕ ವ್ಯವಸ್ಥೆ ಕಲ್ಪಿಸುವ ಮೂಲಕ ವಿಶ್ವದ ಕೆಲವು ಅವಕಾಶ ವಂಚಿತ ಸಮುದಾಯಗಳಿಗೆ ಆರೋಗ್ಯ ಸುಧಾರಣೆ, ಬದುಕಿನಲ್ಲಿ ಅಭಿವೃದ್ಧಿ ಹಾಗೂ ಹೆಚ್ಚಿನ ಅವಕಾಶಗಳನ್ನು ಒದಗಿಸುವುದು ಈ ಅಭಿಯಾನದ ಉದ್ದೇಶವಾಗಿದೆ.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಬ್ರಿಟನ್‌ನ ವಿದೇಶ ವ್ಯವಹಾರ ಇಲಾಖೆ ಕಾರ್ಯದರ್ಶಿ ಡೊಮಿನಿಕ್ ರಾಬ್, ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೂಡಿಕೆ ಮಾಡುವ ಕಾರ್ಯ ಅತ್ಯಂತ ವೌಲ್ಯಯುತವಾಗಿದೆ. ಉತ್ತಮ ಶಿಕ್ಷಣ ಪಡೆದ ತಾಯಂದಿರು ಕುಟುಂಬದ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸುಧಾರಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಾರೆ ಎಂದರು.

ಕೆನ್ಯಾದ ವಿದೇಶ ವ್ಯವಹಾರ ಇಲಾಖೆಯ ಕಾರ್ಯದರ್ಶಿ ರಚೆಲ್ ಒಮಾಮೊ ಮಾತನಾಡಿ, ಕೊರೋನ ಸೋಂಕಿನಿಂದ ಉಂಟಾಗಿರುವ ಬಿಕ್ಕಟ್ಟಿನಿಂದ ಹೊರಬರುವ ಏಕೈಕ ಮಾರ್ಗವೆಂದರೆ ಶಿಕ್ಷಣ ಕ್ರಮದ ಸುಧಾರಣೆಯಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News