ಜೈಪುರ ಕೋಟೆಯಲ್ಲಿ ಬುಡಕಟ್ಟು ಜನರ ದೇವರು ಮತ್ತು ಕೇಸರಿ ಧ್ವಜದ ವಿವಾದ

Update: 2021-07-29 18:34 GMT
Photo: Twitter

ಜೈಪುರ(ರಾಜಸ್ಥಾನ): ಇಲ್ಲಿಯ 18ನೇ ಶತಮಾನದ ಆಮಾಗಡ ಕೋಟೆಯು ಈಗ ಬುಡಕಟ್ಟು ಮೀನಾ ಸಮುದಾಯ ಮತ್ತು ಸಂಘಪರಿವಾರ ಸಂಘಟನೆಗಳ ನಡುವೆ ವಿವಾದದ ಕೇಂದ್ರವಾಗಿದ್ದು ಕಳೆದೆರಡು ತಿಂಗಳುಗಳಿಂದಲೂ ಉದ್ನಿಗ್ನತೆ ಹೆಚ್ಚುತ್ತಿದೆ. ಈ ವಾರ ಕೋಟೆಯಲ್ಲಿ ಕೇಸರಿ ಧ್ವಜವನ್ನು ಹಾರಿಸಲು ಕರೆ ನೀಡಲಾಗಿದ್ದು, ಸಂಭಾವ್ಯ ಸಂಘರ್ಷವನ್ನು ತಡೆಯಲು ಪೊಲೀಸರು ಸಜ್ಜಾಗುತ್ತಿದ್ದಾರೆ ಎಂದು indianexpress.com ವರದಿ ಮಾಡಿದೆ.

ಸ್ಥಳೀಯ ಸಂಘಪರಿವಾರ ಸಂಘಟನೆಗಳು ಬುಡಕಟ್ಟು ಸಂಸ್ಕೃತಿಯನ್ನು ಮತ್ತು ಕೋಟೆಯಲ್ಲಿನ ಬುಡಕಟ್ಟು ಚಿಹ್ನೆಗಳನ್ನು ಹಾಳುಗೆಡವಲು ಪ್ರಯತ್ನಿಸುತ್ತಿದ್ದಾರೆ ಎಂದು ಮೀನಾ ಸಮುದಾಯದ ನಾಯಕರು ಆರೋಪಿಸಿದ್ದಾರೆ. ತನ್ಮಧ್ಯೆ ಕೋಟೆಯಲ್ಲಿ ಹಾರಿಸಲಾಗಿದ್ದ ಕೇಸರಿ ಧ್ವಜವನ್ನು ಕೆಳಗಿಳಿಸಿದ್ದಕ್ಕಾಗಿ ಮೀನಾಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸಂಘಪರಿವಾರ ಸಂಘಟನೆಗಳು ಆ.1ರಂದು ಕೋಟೆಯ ಮೇಲೆ ಇನ್ನೊಂದು ಕೇಸರಿ ಧ್ವಜದ ಆರೋಹಣಕ್ಕೆ ಕರೆ ನೀಡಿದ್ದಾರೆ ಎಂದು ವರದಿಯಾಗಿದೆ.

ನೂರಾರು ವರ್ಷಗಳ ಹಿಂದೆ ಮೀನಾ ದೊರೆಗಳು ಆಮಾಗಡ ಕೋಟೆಯನ್ನು ನಿರ್ಮಿಸಿದ್ದರು. ಕೋಟೆಯೊಳಗೆ ಮೀನಾ ಸಮುದಾಯವು ಆರಾಧಿಸುತ್ತಿರುವ ಅಂಬಾ ದೇವಿ,ಭೈರುಜಿ ಮತ್ತು ಶಿವ ಪರಿವಾರದಂತಹ ಹಲವಾರು ದೇವತೆಗಳ ಮೂರ್ತಿಗಳಿವೆ. ಇತ್ತೀಚಿಗೆ ಕೆಲವು ವಿಗ್ರಹಗಳನ್ನು ಕಳವು ಮಾಡಲಾಗಿದೆ, ಧ್ವಂಸಗೊಳಿಸಲಾಗಿದೆ. ಕೆಲವರು ಕೋಟೆಯ ಮೇಲೆ ಎತ್ತರದ ಕೇಸರಿ ಧ್ವಜವನ್ನು ಹಾರಿಸಿದ್ದಾರೆ ಎಂಬ ಮಾಹಿತಿ ನಂತರ ನಮಗೆ ಲಭಿಸಿತ್ತು ಎಂದು ರಾಜಸ್ಥಾನ ಆದಿವಾಸಿ ಮೀನಾ ಸೇವಾ ಸಂಘದ ರಾಜ್ಯಾಧ್ಯಕ್ಷರೂ ಆಗಿರುವ ಗಂಗಾಪುರದ ಪಕ್ಷೇತರ ಶಾಸಕ ರಾಮಕೇಶ ಮೀನಾ ತಿಳಿಸಿದರು.

ಮೀನಾ ಸಮುದಾಯವು ರಾಜಸ್ಥಾನದಲ್ಲಿ ಪರಿಶಿಷ್ಟ ಪಂಗಡಗಳಿಗೆ ಸೇರಿದೆ.

ಕೆಲವು ದೇವತೆಗಳ ಹೆಸರುಗಳನ್ನು ಬದಲಿಸಲಾಗಿದೆ. ಅಂಬಾ ಮಾತಾ ಹೆಸರನ್ನು ಅಂಬಿಕಾ ಭವಾನಿ ಎಂದು ಬದಲಿಸಲಾಗಿದೆ ಎಂದು ತಿಳಿಸಿದ ರಾಮಕೇಶ ಮೀನಾ, ಮೂರ್ತಿಗಳ ಧ್ವಂಸವು ಹಿಂದು-ಮುಸ್ಲಿಂ ಕೋನವನ್ನು ಹೊಂದಿಲ್ಲ ಎಂದು ಒತ್ತಿ ಹೇಳಿದರು.

ಕಳೆದ ವಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ, ಜು.21ರಂದು ಗುಂಪೊಂದು ಕೇಸರಿ ಧ್ವಜವನ್ನು ಕೆಳಗಿಳಿಸಲು ಪ್ರಯತ್ನಿಸುತ್ತಿರುವ ಮತ್ತು ಆ ಪ್ರಯತ್ನದಲ್ಲಿ ಧ್ವಜವು ಹರಿದುಹೋದ ವೀಡಿಯೊ ಉದ್ವಿಗ್ನತೆಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ವರದಿಯಾಗಿದೆ.

ಕೇಸರಿ ಧ್ವಜವನ್ನು ಹರಿದಿರುವುದು ಹಿಂದು ಸಮುದಾಯದ ಧಾರ್ಮಿಕ ನಂಬಿಕೆಗಳಿಗೆ ನೋವನ್ನುಂಟು ಮಾಡಿದೆ ಎಂದು ಧರೋಹರ ಬಚಾವೊ ಸಮಿತಿಯ ಮುಖ್ಯಸ್ಥ ಭರತ ಶರ್ಮಾ ಹೇಳಿದರು.

ಘಟನೆಯ ಬಗ್ಗೆ ಉಭಯ ಸಮುದಾಯಗಳು ಪೊಲೀಸರಲ್ಲಿ ದೂರು-ಪ್ರತಿದೂರುಗಳನ್ನು ದಾಖಲಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News