ಎಲ್ಲಾ ಹುಡುಗಿಯರ ಭದ್ರತೆಗೆ ಪೊಲೀಸರನ್ನು ನಿಯೋಜಿಸಲು ಆಗದು: ಗೋವಾ ಸಚಿವರ ಹೇಳಿಕೆ

Update: 2021-07-30 18:30 GMT

ಪಣಜಿ, ಜು.30: ರಾಜ್ಯದಲ್ಲಿರುವ ಎಲ್ಲಾ ಹುಡುಗಿಯರಿಗೂ ಪೊಲೀಸ್ ಭದ್ರತೆ ಒದಗಿಸಲು ಸಾಧ್ಯವಾಗದು ಎಂದು ಗೋವಾದ ಕಲೆ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಗೋವಿಂದ್ ಗೂಡೆ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಗೋವಾದ ಬೀಚ್ನಲ್ಲಿ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ನಡೆದ ಅತ್ಯಾಚಾರಕ್ಕೆ ಅವರ ಪೋಷಕರ ನಿರ್ಲಕ್ಷ್ಯವೇ ಕಾರಣ ಎಂದು ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೀಡಿದ ಹೇಳಿಕೆ ತೀವ್ರ ಟೀಕೆಗೆ ಗುರಿಯಾದ ಬೆನ್ನಿಗೇ, ಈಗ ಸಚಿವರು ನೀಡಿದ ಹೇಳಿಕೆಯ ಬಗ್ಗೆಯೂ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಎಲ್ಲಾ ವ್ಯಕ್ತಿಗೂ ಪೊಲೀಸ್ ಭದ್ರತೆ ಒದಗಿಸಿದರೆ ಎಷ್ಟು ಪೊಲೀಸ್ ಸಿಬಂದಿಯ ಅಗತ್ಯವಿದೆ ಎಂದು ಯೋಚಿಸಿ. ಇದು ವಾಸ್ತವ ವಿಷಯ. ಸರಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿಲ್ಲ. ಸರಕಾರ ರಕ್ಷಣೆ ನೀಡುತ್ತಿದೆ. ಸರಕಾರ ಜನರೊಂದಿಗಿದೆ ಎಂದು ಸುದ್ಧಿಗಾರರ ಪ್ರಶ್ನೆಗೆ ಉತ್ತರವಾಗಿ ಹೇಳಿದ್ದಾರೆ. ಅಪ್ರಾಪ್ತ ವಯಸ್ಸಿನ ಮಕ್ಕಳ ರಕ್ಷಣೆ ಸರಕಾರ ಮತ್ತು ಪೋಷಕರ ಜಂಟಿ ಹೊಣೆಯಾಗಿದೆ. ಇದನ್ನೇ ಮುಖ್ಯಮಂತ್ರಿ ಹೇಳಿದ್ದಾರೆ. ಮಕ್ಕಳು ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬ ಬಗ್ಗೆ ಪೋಷಕರು ನಿಗಾ ಇರಿಸಬೇಕು ಎಂದು ಹೇಳಿದ್ದರಲ್ಲಿ ತಪ್ಪೇನಿದೆ? ಎಂದು ಸಚಿವ ಗೋವಿಂದ್ ಗೂಡೆ ಪ್ರಶ್ನಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News