ಬೇಡಿಕೆ ಈಡೇರುವ ತನಕ ಜಿಎಸ್‍ಟಿ ಪಾವತಿಸಬೇಡಿ: ವರ್ತಕರಿಗೆ ಸಲಹೆ ನೀಡಿದ ಪ್ರಧಾನಿ ಸೋದರ ಪ್ರಹ್ಲಾದ್ ಮೋದಿ

Update: 2021-07-31 10:21 GMT

ಥಾಣೆ: ಬೇಡಿಕೆ ಈಡೇರುವ ತನಕ ಜಿಎಸ್‍ಟಿ ಪಾವತಿಸಬೇಡಿ ಎಂದು ವರ್ತಕರಿಗೆ  ಪ್ರಧಾನಿ ನರೇಂದ್ರ ಮೋದಿಯ ಸೋದರ ಪ್ರಹ್ಲಾದ್ ಮೋದಿ ಕರೆ ನೀಡಿದ್ದಾರೆ. ಅಖಿಲ ಭಾರತ ನ್ಯಾಯಬೆಲೆ ಅಂಗಡಿಗಳ ಸಂಘದ ಉಪಾಧ್ಯಕ್ಷರೂ ಆಗಿರುವ ಪ್ರಹ್ಲಾದ್ ಮೋದಿ, ಕೇಂದ್ರ ಮತ್ತು ಮಹಾರಾಷ್ಟ್ರ ಸರಕಾರಗಳಿಗೆ ಚುರುಕು ಮುಟ್ಟಿಸಲು ಪ್ರತಿಭಟನೆಯ ಹಾದಿ ಹಿಡಿಯುವಂತೆಯೂ ವರ್ತಕರಿಗೆ ಕರೆ ನೀಡಿದ್ದಾರೆ.

ನಗರದಲ್ಲಿ ವರ್ತಕರ ಒಂದು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು "ನಿಮ್ಮ ಹೋರಾಟ ಹೇಗಿರಬೇಕೆಂದರೆ ಉದ್ಧವ್ (ಮಹಾರಾಷ್ಟ್ರ ಸಿಎಂ) ಹಾಗೂ ನರೇಂದ್ರ (ಮೋದಿ) ನಿಮ್ಮ ಮನೆಬಾಗಿಲಿಗೆ ಬರಬೇಕು" ಎಂದು ಹೇಳಿದರು.

ತಾವು ದೇಶದ 6.50 ಲಕ್ಷ ನ್ಯಾಯಬೆಲೆ ಅಂಗಡಿ ಮಾಲಿಕರನ್ನು ಪ್ರತಿನಿಧಿಸುತ್ತಿರುವುದಾಗಿಯೂ ಹೇಳಿದ ಅವರು ಬೇಡಿಕೆ ಈಡೇರುವ ತನಕ ಜಿಎಸ್‍ಟಿ ಪಾವತಿಸಬೇಡಿ ಎಂದ ಸಲಹೆ ನೀಡಿದ್ದಾರೆ.

"ಅದು ನರೇಂದ್ರ ಮೋದಿಯಾಗಿರಬಹುದು, ಅಥವಾ ಬೇರಿನ್ಯಾರಾದರೂ ಆಗಿರಬಹುದು, ಅವರು ನಿಮ್ಮ ಮಾತುಗಳನ್ನು ಕೇಳಬೇಕು. ನಾನು ಇಂದು ನಿಮಗೆ ಹೇಳುತ್ತಿದ್ದೇನೆ, ನೀವು ನಮ್ಮ ಮಾತುಗಳನ್ನು ಕೇಳುವ ತನಕ ನಾವು ಜಿಎಸ್‍ಟಿ ಪಾವತಿಸುವುದಿಲ್ಲ ಎಂದು ಮೊದಲು ಮಹಾರಾಷ್ಟ್ರ ಸರಕಾರಕ್ಕೆ ಬರೆಯಿರಿ. ನಾವು ಲೋಕಶಾಹಿ (ಪ್ರಜಾಪ್ರಭುತ್ವ)ದಲ್ಲಿದ್ದೇವೆ, ಗುಲಾಮಗಿರಿಯಲ್ಲಲ್ಲ," ಎಂದು ಅವರು ಹೇಳಿದರು.

ಕೋವಿಡ್ ಸಾಂಕ್ರಾಮಿಕ ಮತ್ತು ಲಾಕ್ ಡೌನ್‍ನಿಂದ ಸಮಸ್ಯೆಗೀಡಾಗಿರುವ ವರ್ತಕರನ್ನು ಪ್ರಹ್ಲಾದ್ ಮೋದಿ ಅವರು ಥಾಣೆ ಜಿಲ್ಲೆಯಲ್ಲಿ ಭೇಟಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News