ತಮಿಳುನಾಡಿನಲ್ಲಿ ಕಾಂಗ್ರೆಸ್‌ ತನ್ನ ಸಿದ್ಧಾಂತ ಸ್ಪಷ್ಟತೆಯನ್ನು ಮರುಗಳಿಸಬೇಕು: ಶಶಿಕಾಂತ್‌ ಸೆಂಥಿಲ್

Update: 2021-07-31 15:28 GMT
Photo: twitter

ಮಾಜಿ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್, ಈಗ ತಮಿಳುನಾಡು ಕಾಂಗ್ರೆಸ್ ಸಮಿತಿಯ ಸಾಮಾಜಿಕ ಮಾಧ್ಯಮ ವಿಭಾಗ ಮತ್ತು  (ಟಿಎನ್‌ಸಿಸಿ) ಇತರ ಮುಂಚೂಣಿ ತಂಡಗಳಿಗೆ ಸಂಯೋಜಕರಾಗಿ ನೇಮಕಗೊಂಡಿದ್ದಾರೆ. "ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷವನ್ನು ತಳಮಟ್ಟದಿಂದ ಬಲಿಷ್ಠಪಡಿಸಲು ನಾನು ಪ್ರಯತ್ನಿಸುತ್ತೇನೆ" ಎಂದು ಅವರು ಹೇಳಿದ್ದಾಗಿ indianexpress.com ವರದಿ ಮಾಡಿದೆ.

2019ರಲ್ಲಿ "ನಾನು ತುಂಬಾ ಪ್ರೀತಿಸುವ ಈ ದೇಶದ ಮೇಲೆ ನಿರಂಕುಶವಾಗಿ ದಾಳಿ ನಡೆಯುತ್ತಿದ್ದು, ಇದನ್ನು ತಡೆಯುವ ವಿಧಾನದ ಹುಡುಕಾಟಕ್ಕಾಗಿ ನಾಗರಿಕ ಸೇವೆಗಳನ್ನು ತೊರೆಯುತ್ತೇನೆ" ಎಂದು ಸೆಂಥಿಲ್‌ ಟ್ವೀಟ್‌ ಮಾಡಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. 2020ರ ನವೆಂಬರ್‌ ನಲ್ಲಿ ಅವರು ಅಧಿಕತೃವಾಗಿ ಟಿಎನ್ಸಿಸಿ ಸೇರ್ಪಡೆಗೊಂಡಿದ್ದರು.

ತಮಿಳುನಾಡು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತಮಿಳುನಾಡಿನ ಖ್ಯಾತ ಆಹಾರ ತಯಾರಿಕಾ ಯೂಟ್ಯೂಬ್‌ ಚಾನೆಲ್‌ ನಲ್ಲಿ ರಾಹುಲ್‌ ಗಾಂಧಿಯವರು ಕಾಣಿಸಿಕೊಂಡಿದ್ದ ವೀಡಿಯೋ ವೈರಲ್‌ ಆಗಿತ್ತು. ಇದರ ಹಿಂದೆ ಶಶಿಕಾಂತ್ ಸೆಂಥಿಲ್‌ ನೇತೃತ್ವದ ತಂಡ ಕೆಲಸ ಮಾಡಿತ್ತು ಎಂದು ವರದಿ ತಿಳಿಸಿದೆ. 

"ರಾಜಕೀಯವೆಂದರೆ ಜನರ ಜೊತೆಗೆ ನಿಲ್ಲುವುದು ಎಂದು ನಾನು ಭಾವಿಸಿದ್ದೇನೆ. ಸಾಮಾಜಿಕ ತಾಣದಲ್ಲಿ ಪೋಸ್ಟ್‌ ಮಾಡುತ್ತಾ ಹೇಳಿಕೆಗಳನ್ನು ನೀಡುವ ರೀತಿ ಕಾಂಗ್ರೆಸ್‌ ನದ್ದಲ್ಲ. ಕೆಲವೊಂದು ಹೇಳಿಕೆಗಳಿಗೆ ಸಾಮಾಜಿಕ ತಾಣಗಳಲ್ಲಿ ಪ್ರತಿಕ್ರಿಯೆ ನೀಡುತ್ತಾ ಕೂರುವುದು ಕಾಂಗ್ರೆಸ್‌ ಜಾಯಮಾನವಾಗಬಾರದು. ಕಾಂಗ್ರೆಸ್‌ ಜನರ ಸಮಸ್ಯೆಗಳನ್ನು ಗುರುತಿಸಬೇಕು. ಜನರೊಂದಿಗೆ ನಿಲ್ಲಬೇಕು. ಅದು ನನ್ನ ರಾಜಕೀಯ ವ್ಯಾಖ್ಯಾನ. ಇದರರ್ಥ ನಮಗೆ ಸಾಮಾಜಿಕ ತಾಣಗಳ ಉಪಯುಕ್ತತೆಯ ಬಗ್ಗೆ ಅರಿವಿಲ್ಲವೆಂದಲ್ಲ. ಆದರೆ ನಿಜವಾದ ಕಾರ್ಯಗಳು ನಡೆಯವುದು ಸಂಸ್ಥೆಯನ್ನು ಬಲಿಷ್ಠಪಡಿಸಿದಾಗ ಮಾತ್ರ" ಎಂದು ಅವರು ಹೇಳಿದ್ದಾರೆ.

"ಸಂಸ್ಥೆಯನ್ನು ಹೇಗೆ ಬಲಪಡಿಸಬೇಕು ಎಂದು ನಮಗೆ ತಿಳಿಸಿದೆ. ಪಕ್ಷದಲ್ಲಿ ಜನರು ಹೆಚ್ಚಿದ್ದಾಗ ನಮಗೆ ಸಾಮಾಜಿಕ ತಾಣಗಳಲ್ಲಿ ಸದ್ದು ಮಾಡಲು ಸಾಧ್ಯವಾಗುತ್ತದೆ. ಅಂತಹ ನೆಟ್‌ ವರ್ಕ್‌ ಗಳನ್ನು ಬೆಳೆಸಿಕೊಳ್ಳಲು ನಾವು ಸಂಘಟನೆ ಕಟ್ಟಬೇಕಾಗಿದೆ. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳು ನಮಗೆ ಉತ್ತಮ ಅವಕಾಶ. ತಮಿಳುನಾಡಿನಲ್ಲಿ ಕಾಂಗ್ರೆಸ್‌ ಪಕ್ಷವು ತಮ್ಮ ಸಿದ್ಧಾಂತ ಸ್ಪಷ್ಟತೆಯನ್ನು ಮರಳಿ ಗಳಿಸಬೇಕಾಗಿದೆ. ಕಾಂಗ್ರೆಸ್‌ ಸದ್ಯ ಜನರಿಗೆ ನೆರವಾಗುವ ನಿಟ್ಟಿನಲ್ಲಿ ತಮ್ಮ ಸಿದ್ಧಾಂತವನ್ನು ಪ್ರಚುರಪಡಿಸಬೇಕು" ಎಂದು ಅವರು ಹೇಳಿದ್ದಾರೆ.

ಸಸಿಕಾಂತ್‌ ಸೆಂಥಿಲ್ ಮತ್ತು ಪ್ರಸ್ತುತ ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರ ನಡುವಿನ ಹೋಲಿಕೆಯ ಬಗ್ಗೆ ಕೇಳಿದಾಗ,  "ಬಿಜೆಪಿ, ಮೋದಿ, ಶಾ ಮತ್ತು ಆರೆಸ್ಸೆಸ್, ಅದು ಏನು ಬೇಕಾದರೂ ಮಾಡಬಹುದು. ಯಾರನ್ನೂ ಹೊರಹಾಕಬಹುದು, ಯಾರನ್ನಾದರೂ ನೇಮಿಸಬಹುದು. ನನಗೆ ತಮಿಳುನಾಡಿನಲ್ಲಿ ಬಿಜೆಪಿ ಒಂದು ನಾಟಕ ಕಂಪನಿಯಂತೆ ಕಾಣುತ್ತದೆ. ಅವರು ನಟರನ್ನು ಬದಲಾಯಿಸುತ್ತಲೇ ಇದ್ದಾರೆ. ದಿನದ ಕೊನೆಯಲ್ಲಿ, ಅವರ ಸಿದ್ಧಾಂತವು ಕೆಟ್ಟದ್ದಾಗಿದೆ ಮತ್ತು ಇದು ತಮಿಳರಿಗೆ ಹೇಳಿದ್ದಲ್ಲ" ಎಂದು ಹೇಳಿದ್ದಾಗಿ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News