ಆನ್ಲೈನ್ ಗೇಮ್‌ 'ಫ್ರೀಫೈರ್‌' ಪಿಡುಗು: 40,000 ರೂ.ಕಳೆದುಕೊಂಡ 13ರ ಬಾಲಕನ ಆತ್ಮಹತ್ಯೆ

Update: 2021-07-31 15:25 GMT

ಭೋಪಾಲ, ಜು.31: ಆನ್‌ ಲೈನ್ ನಲ್ಲಿಯ ‘ಫ್ರೀ ಫೈರ್’ ಗೇಮ್ ನಲ್ಲಿ 40,000 ರೂ.ಗಳನ್ನು ಕಳೆದುಕೊಂಡ 13ರ ಹರೆಯದ ಬಾಲಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಛತ್ತರಪುರದ ಶಾಂತಿನಗರದಲ್ಲಿ ನಡೆದಿದೆ. ಬಾಲಕ ತನ್ನ ಹೆತ್ತವರಿಗೆ ಗೊತ್ತಿಲ್ಲದೆ ಈ ಮೊತ್ತವನ್ನು ಆನ್ಲೈನ್ ಗೇಮ್ ಗೆ ವ್ಯಯಿಸಿದ್ದ ಎಂದು ತಿಳಿದು ಬಂದಿದೆ.

ಘಟನೆ ನಡೆದಾಗ ಬಾಲಕ ಮತ್ತು ಸೋದರಿ ಮನೆಯಲ್ಲಿದ್ದರು. ಆಸ್ಪತ್ರೆಯಲ್ಲಿ ನರ್ಸ್ ಆಗಿರುವ ತಾಯಿಗೆ ಆಕೆಯ ಬ್ಯಾಂಕ್ ಖಾತೆಯಿಂದ 1,500 ರೂ.ಕಡಿತವಾದ ಬಗ್ಗೆ ಸಂದೇಶ ಬಂದಿತ್ತು. ಆಕೆ ತಕ್ಷಣ ಮಗನಿಗೆ ಕರೆ ಮಾಡಿ ಈ ಬಗ್ಗೆ ವಿಚಾರಿಸಿದ್ದು,ಆನ್ಲೈನ್ ಗೇಮ್ ಗಾಗಿ ತಾನು ಹಣ ವ್ಯಯಿಸಿದ್ದನ್ನು ಆತ ಒಪ್ಪಿಕೊಂಡಿದ್ದ. ಹೀಗಾಗಿ ಆಕೆ ಮಗನಿಗೆ ಛೀಮಾರಿ ಹಾಕಿದ್ದರು. ಇದಾದ ಬಳಿಕ ಬಾಲಕ ತನ್ನ ಕೋಣೆಗೆ ತೆರಳಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳದಲ್ಲಿ ಆತ್ಮಹತ್ಯಾ ಚೀಟಿ ಪತ್ತೆಯಾಗಿದ್ದು, ತಾನು ತಾಯಿಯ ಬ್ಯಾಂಕ್ ಖಾತೆಯಿಂದ 40,000 ರೂ.ಗಳನ್ನು ತೆಗೆದಿದ್ದನ್ನು ಬಾಲಕ ಒಪ್ಪಿಕೊಂಡಿದ್ದಾನೆ.

ಬಾಲಕ ಗೇಮ್ನಲ್ಲಿ ಸ್ವತಃ ವಹಿವಾಟು ನಡೆಸುತ್ತಿದ್ದನೇ ಅಥವಾ ಯಾರಾದರೂ ಹಣಕ್ಕಾಗಿ ಆತನಿಗೆ ಹೆದರಿಸುತ್ತಿದ್ದರೇ ಎನ್ನುವುದನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News