2017-2019ರ ನಡುವೆ 24,568 ಮಕ್ಕಳ ಆತ್ಮಹತ್ಯೆ: ಎನ್ಸಿಆರ್ಬಿ ಮಾಹಿತಿ

Update: 2021-08-01 14:47 GMT

ಹೊಸದಿಲ್ಲಿ,ಆ.1: 2017ರಿಂದ 2019ರವರೆಗಿನ ಅವಧಿಯಲ್ಲಿ 14ರಿಂದ 18 ವರ್ಷ ವಯೋಮಾನದ 24,568 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದು,ಇಂತಹ 4,000ಕ್ಕೂ ಅಧಿಕ ಪ್ರಕರಣಗಳಲ್ಲಿ ಪರೀಕ್ಷಾ ವೈಫಲ್ಯ ಕಾರಣವಾಗಿತ್ತು ಎಂದು ಇತ್ತೀಚಿಗೆ ಸಂಸತ್ತಿನಲ್ಲಿ ಮಂಡಿಸಲಾದ ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕ (ಎನ್ಸಿಆರ್ಬಿ)ದ ಕ್ರೋಢೀಕೃತ ಅಂಕಿಸಂಖ್ಯೆಗಳು ತೋರಿಸಿವೆ. ಆತ್ಮಹತ್ಯೆಗೆ ಶರಣಾದವರಲ್ಲಿ 13,325 ಬಾಲಕಿಯರು ಸೇರಿದ್ದಾರೆ.

2017ರಲ್ಲಿ 14ರಿಂದ 18 ವರ್ಷ ವಯೋಮಾನದ 8,029 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದು,ಈ ಸಂಖ್ಯೆ 2018ರಲ್ಲಿ 8,162ಕ್ಕೆ ಮತ್ತು 2019ರಲ್ಲಿ 8,377ಕ್ಕೆ ಏರಿಕೆಯಾಗಿತ್ತು ಎಂದು ವರದಿಯು ತಿಳಿಸಿದೆ. ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳ ಆತ್ಮಹತ್ಯೆಗಳು ಮಧ್ಯಪ್ರದೇಶದಲ್ಲಿ (3,115) ನಡೆದಿದ್ದು,ನಂತರದ ಸ್ಥಾನಗಳಲ್ಲಿ ಪ.ಬಂಗಾಳ (2,802),ಮಹಾರಾಷ್ಟ್ರ (2,527) ಮತ್ತು ತಮಿಳುನಾಡು (2,035) ಇವೆ.
ಪರೀಕ್ಷೆಯಲ್ಲಿ ವೈಫಲ್ಯ 4,046 ಮಕ್ಕಳ ಆತ್ಮಹತ್ಯೆಗೆ ಕಾರಣವಾಗಿದ್ದು,ವಿವಾಹ ಸಂಬಂಧಿ ವಿಷಯಗಳು 411 ಬಾಲಕಿಯರು ಸೇರಿದಂತೆ 639 ಮಕ್ಕಳ ಆತ್ಮಹತ್ಯೆಗೆ ಕಾರಣವಾಗಿತ್ತು. ಪ್ರೇಮ ವ್ಯವಹಾರಕ್ಕೆ ಸಂಬಂಧಿತ ಕಾರಣಗಳಿಂದ 3,315,ಅನಾರೋಗ್ಯದಿಂದಾಗಿ 2,567,ದೈಹಿಕ ಶೋಷಣೆಯಿಂದ 81 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಪ್ರೀತಿಪಾತ್ರರ ಸಾವು, ಮಾದಕದ್ರವ್ಯ ಅಥವಾ ಮದ್ಯಸೇವನೆ ಚಟ, ಅಕ್ರಮ ಗರ್ಭಧಾರಣೆ, ಸಾಮಾಜಿಕ ವರ್ಚಸ್ಸಿಗೆ ಹಾನಿ, ನಿರುದ್ಯೋಗ, ಬಡತನ ಮತ್ತು ಸೈದ್ಧಾಂತಿಕ ಕಾರಣಗಳನ್ನೂ ಈ ಆತ್ಮಹತ್ಯೆಗಳಿಗೆ ನೀಡಲಾಗಿದೆ.
 
ಕೋವಿಡ್ ಸಾಂಕ್ರಾಮಿಕದಿಂದಾಗಿ ಸ್ಥಿತಿಯು ಇನ್ನಷ್ಟು ಹದಗೆಡುವ ಸಾಧ್ಯತೆಯ ಬಗ್ಗೆ ಎಚ್ಚರಿಕೆಯ ಗಂಟೆ ಮೊಳಗಿಸಿರುವ ಮಕ್ಕಳ ಹಕ್ಕುಗಳ ಕಾರ್ಯಕರ್ತರು ಶಾಲಾ ಪಠ್ಯಕ್ರಮದಲ್ಲಿ ಕೌಶಲ್ಯ ತರಬೇತಿಯ ಸೇರ್ಪಡೆಗೆ ಮತ್ತು ಮಾನಸಿಕ ಆರೋಗ್ಯವನ್ನು ಮುಖ್ಯವಾಹಿನಿ ಆರೋಗ್ಯ ರಕ್ಷಣೆಯ ಅಜೆಂಡಾದ ಭಾಗವಾಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಆತ್ಮಹತ್ಯೆಗೆ ಯತ್ನಿಸುವ ಹೆಚ್ಚಿನ ಮಕ್ಕಳು ಮತ್ತು ಹದಿಹರೆಯದವರು ಗಮನಾರ್ಹ ಮಾನಸಿಕ ಆರೋಗ್ಯ ಸಮಸ್ಯೆಗೆ,ಸಾಮಾನ್ಯವಾಗಿ ಖಿನ್ನತೆಗೆ ಗುರಿಯಾಗಿರುತ್ತಾರೆ. ಎಳೆಯ ಮಕ್ಕಳು ದಿಢೀರ್ ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ. ವಿಷಾದದ ಭಾವನೆ, ಗೊಂದಲ, ಸಿಟ್ಟು, ಒತ್ತಡ, ಏಕಾಗ್ರತೆ ಮತ್ತು ಚರುಕುತನದ ಸಮಸ್ಯೆಗಳು ಇಂತಹ ಮಕ್ಕಳ ಆತ್ಮಹತ್ಯೆ ಯತ್ನಗಳೊಂದಿಗೆ ಗುರುತಿಸಿಕೊಂಡಿರಹುದು ಎಂದು ಹೇಳಿದ ಚೈಲ್ಡ್ ರೈಟ್ಸ್ ಆ್ಯಂಡ್ ಯು (ಕ್ರೈ)ದ ಸಿಇಒ ಪೂಜಾ ಮಾರ್ವಾ,ಹದಿಹರೆಯದವರಲ್ಲಿ ಆತ್ಮಹತ್ಯೆ ಯತ್ನಗಳಿಗೆ ಒತ್ತಡದ ಭಾವನೆಗಳು,ತಮ್ಮಲ್ಲಿಯೇ ಅಪನಂಬಿಕೆ,ಯಶಸ್ಸು ಸಾಧಿಸುವ ಒತ್ತಡ,ಆರ್ಥಿಕ ಅನಿಶ್ಚಿತತೆ,ನಿರಾಶೆ,ಖಿನ್ನತೆ ಇತ್ಯಾದಿಗಳು ಕಾರಣವಾಗಿರಬಹುದು. ಕೆಲವು ಹದಿಹರೆಯದವರ ಪಾಲಿಗೆ ಆತ್ಮಹತ್ಯೆ ತಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರವೆಂಬಂತೆ ಕಂಡುಬರಬಹುದು ಎಂದರು.
 
ಎಲ್ಲ ಮಕ್ಕಳು ಮತ್ತು ಹದಿಹರೆಯದವರು ಗುಣಮಟ್ಟದ ಮಾನಸಿಕ ಆರೋಗ್ಯ ರಕ್ಷಣೆ ಮತ್ತು ಮಾನಸಿಕ-ಸಾಮಾಜಿಕ ಬೆಂಬಲ ವ್ಯವಸ್ಥೆಯ ಹಕ್ಕನ್ನು ಹೊಂದಿರುತ್ತಾರೆ. ಅವರ ಮಾನಸಿಕ ಯೋಗಕ್ಷೇಮವನ್ನು ಖಚಿತ ಪಡಿಸಿಕೊಳ್ಳುವುದರಿಂದ ಅದು ದೀರ್ಘಾವಧಿಯಲ್ಲಿ ಅವರನ್ನು ಉತ್ತಮ ನಾಗರಿಕರನ್ನಾಗಿಸುವ ನಿಟ್ಟಿನಲ್ಲಿ ನೆರವಾಗುತ್ತದೆ ಎಂದೂ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News