ಮಿಝೋರಾಂ ಗಡಿ ವಿವಾದ ಇತ್ಯರ್ಥಕ್ಕೆ ಸುಪ್ರೀಂ ಮೆಟ್ಟಿಲೇರಲು ಅಸ್ಸಾಂ ನಿರ್ಧಾರ

Update: 2021-08-01 19:57 GMT

ಗುವಾಹಟಿ: ಮಿಝೋರಾಂನೊಂದಿಗಿನ ಗಡಿವಿವಾದ ಇತ್ಯರ್ಥಗೊಳಿಸುವಂತೆ ಕೋರಿ ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸುವುದಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಹೇಳಿದ್ದಾರೆ.

ಉಭಯ ರಾಜ್ಯಗಳ ನಡುವಿನ ದೀರ್ಘ ಕಾಲದ ಗಡಿವಿವಾದ ಕೆಲದಿನಗಳಿಂದ ಹಿಂಸಾತ್ಮಕ ರೂಪಕ್ಕೆ ತಿರುಗಿದ್ದು ಘರ್ಷಣೆಯಲ್ಲಿ ಹಲವು ಮಂದಿ ಮೃತಪಟ್ಟಿದ್ದಾರೆ. ಈ ಹಿಂಸಾಚಾರಕ್ಕೆ ಸಂಬಂಧಿಸಿ ಹಿಮಂತ ಬಿಸ್ವ ಹಾಗೂ ಅವರ ಸರಕಾರದ ಕೆಲ ಅಧಿಕಾರಿಗಳ ವಿರುದ್ಧ ಮಿಝೋರಾಂನಲ್ಲಿ ಎಫ್ಐಆರ್ ದಾಖಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸ್ವ, ಸಮನ್ಸ್ ನಿಂದ ಸಮಸ್ಯೆ ಪರಿಹಾರವಾಗುವುದಾದರೆ ತಾನು ಸಮನ್ಸ್ ಪಾಲಿಸುತ್ತೇನೆ. ಆದರೆ ಅಧಿಕಾರಿಗಳ ವಿಚಾರಣೆಗೆ ಅವಕಾಶ ನೀಡುವುದಿಲ್ಲ. ಈಶಾನ್ಯ ರಾಜ್ಯಗಳ ಸ್ಫೂರ್ತಿಯನ್ನು ಜೀವಂತವಾಗಿರಿಸುವುದು ತಮ್ಮ ಮೊದಲ ಆದ್ಯತೆಯಾಗಿದೆ ಎಂದಿದ್ದಾರೆ.
 
ರವಿವಾರ ಬೆಳಿಗ್ಗೆ ಹಿಮಂತ ಬಿಸ್ವ ಮಿಝೋರಂ ಮುಖ್ಯಮಂತ್ರಿ ಝೊರಾಮ್ಥಂಗ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಮಿಶ್ರಾ ಜತೆ ದೂರವಾಣಿಯಲ್ಲಿ ಮಾತನಾಡಿದ್ದರು. ಬಳಿಕ ಸುದ್ಧಿಗಾರರಿಗೆ ಪ್ರತಿಕ್ರಿಯಿಸಿದ್ದ ಝೊರಾಮ್ಥಂಗ, ಅರ್ಥಪೂರ್ಣ ಮಾತುಕತೆಯ ಮೂಲಕ ಗಡಿ ವಿವಾದಕ್ಕೆ ಸೌಹಾರ್ದಯುತ ಪರಿಹಾರ ರೂಪಿಸಬೇಕು ಎಂಬ ಶಾ ಹಾಗೂ ಶರ್ಮ ನಿಲುವಿಗೆ ತಮ್ಮ ಸಹಮತವಿದೆ ಎಂದಿದ್ದಾರೆ.

ಈ ಮಧ್ಯೆ, ಗಡಿಯಲ್ಲಿನ ಉದ್ವಿಗ್ನತೆ ಶಮನಗೊಳಿಸುವ ನಿಟ್ಟಿನಲ್ಲಿ ಉಭಯ ರಾಜ್ಯಸರಕಾರಗಳ ಮಧ್ಯೆ ಹೊಸದಾಗಿ ಮಾತುಕತೆ ಆರಂಭವಾಗಿದೆ. ಶರ್ಮ ವಿರುದ್ಧದ ಎಫ್ಐಆರ್ ರದ್ದುಗೊಳಿಸುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಮಿಝೋರಾಂ ಸರಕಾರದ ಮೂಲಗಳು ಹೇಳಿವೆ. ವಿವಾದದ ಸ್ಥಳವಾಗಿರುವ ಗಡಿಪ್ರದೇಶಕ್ಕೆ ಭೇಟಿ ನೀಡುವ ಅಧಿಕಾರಿಗಳು ಅಥವಾ ಪಡೆಗಳು ಶಸ್ತ್ರಾಸ್ತ್ರ ಕೊಂಡೊಯ್ಯಲು ಅವಕಾಶವಿಲ್ಲ ಎಂದು ಕೇಂದ್ರ ಸರಕಾರ ಉಭಯ ರಾಜ್ಯಗಳಿಗೂ ಸೂಚಿಸಿದೆ.

ಕಳೆದ ಸೋಮವಾರ ಗಡಿಭಾಗದಲ್ಲಿ ನಡೆದ ಹಿಂಸಾಚಾರದಲ್ಲಿ ಅಸ್ಸಾಂನ 6 ಪೊಲೀಸ್ ಸಿಬ್ಬಂದಿ ಸಹಿತ 7 ಮಂದಿ ಮೃತರಾಗಿ ಹಲವರು ಗಾಯಗೊಂಡ ಬಳಿಕ ಉಭಯ ರಾಜ್ಯಗಳು ಪರಸ್ಪರರ ಮೇಲೆ ಆರೋಪ-ಪ್ರತ್ಯಾರೋಪದಲ್ಲಿ ನಿರತವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News