ಸಂಪುಟ ರಚನೆ: ಇತಿಹಾಸ ಪುನರಾವರ್ತನೆಯಾಗದಿರಲಿ...

Update: 2021-08-02 07:44 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಅಧಿಕಾರಕ್ಕೇರಿದ ದಿನದಿಂದ ಯಡಿಯೂರಪ್ಪ ಪಕ್ಷದೊಳಗಿಂದ ಏನೇನು ಕಿರಿಕಿರಿಗಳನ್ನು ಅನುಭವಿಸಿದ್ದರೋ, ಅವೆಲ್ಲವೂ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯ ಪಾಲಿಗೆ ಪುನರಾವರ್ತನೆಯಾಗುವ ಸಾಧ್ಯತೆಗಳು ಕಾಣುತ್ತಿವೆ. ಒಂದೆಡೆ ಕೆಲವು ಹಿರಿಯರು ‘ನಾವು ಸಂಪುಟದಲ್ಲಿ ಸೇರ್ಪಡೆಗೊಳ್ಳುವುದಿಲ್ಲ’ ಎಂಬ ಹೇಳಿಕೆ ನೀಡುತ್ತಾ ನೂತನ ಮುಖ್ಯಮಂತ್ರಿಯನ್ನು ಬೆದರಿಸುತ್ತಿದ್ದರೆ, ‘ನಾನು ಸಚಿವನಾಗಿಯೇ ಆಗುತ್ತೇನೆ’ ಎಂಬ ಹೇಳಿಕೆ ನೀಡುತ್ತಾ ಉಳಿದವರು ಬೆದರಿಸುತ್ತಿದ್ದಾರೆ. ಸಂಪುಟ ವಿಸ್ತರಣೆ ನೂತನ ಸರಕಾರದ ಭವಿಷ್ಯವನ್ನು ನಿಜವಾದ ಅರ್ಥದಲ್ಲಿ ಬಿಚ್ಚಿಡುತ್ತದೆ. ಇಂದು ಯಡಿಯೂರಪ್ಪ ಅವರು ಅಧಿಕಾರದಿಂದ ಕೆಳಗಿಳಿದ ಸಂಭ್ರಮ, ಸಂಪುಟ ರಚನೆಯ ಬಳಿಕವೂ ಬಿಜೆಪಿಯೊಳಗೆ ಉಳಿಯುತ್ತದೆಯೇ? ಎನ್ನುವ ಪ್ರಶ್ನೆಗೆ ಉತ್ತರ ಸುಲಭವಿಲ್ಲ. ಮುಖ್ಯಮಂತ್ರಿ ಅಧಿಕಾರ ಸ್ವೀಕರಿಸಿ ನಾಲ್ಕು ದಿನ ಕಳೆದರೂ ಇನ್ನೂ ಸಂಪುಟ ರಚನೆಯಾಗಿಲ್ಲ ಎನ್ನುವುದು, ಬಿಜೆಪಿಯೊಳಗೆ ಎಲ್ಲವೂ ಸರಿಯಾಗಿಲ್ಲ ಎನ್ನುವುದನ್ನು ಹೇಳುತ್ತಿದೆ. ಇದೇ ಸಂದರ್ಭದಲ್ಲಿ ‘ವರಿಷ್ಠರ ಸಂದೇಶಕ್ಕಾಗಿ’ ರಾಜ್ಯ ಸರಕಾರ ಕಾಯುತ್ತಿದೆ.

ಈಗಾಗಲೇ ಬಿಜೆಪಿಯ ಒಳಜಗಳದಿಂದಾಗಿ ರಾಜ್ಯದ ಸಮಸ್ಯೆಗಳನ್ನು ಕೇಳುವವರಿಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ಸಂಪುಟ ವಿಸ್ತರಣೆಗೆ ಆದಷ್ಟು ಬೇಗ ಅನುಮತಿ ನೀಡುವುದು ವರಿಷ್ಠರ ಕರ್ತವ್ಯವಾಗಿತ್ತು. ದುರದೃಷ್ಟಕ್ಕೆ ಮುಖ್ಯಮಂತ್ರಿ ಬೊಮ್ಮಾಯಿಯವರು ರಾಜ್ಯದ ಜನರ ಹಿತಾಸಕ್ತಿಯ ಬಗ್ಗೆ ಯೋಚಿಸುವುದನ್ನು ಬಿಟ್ಟು ‘ವರಿಷ್ಠರ ಸಂದೇಶಕ್ಕಾಗಿ’ ಕಾಯುತ್ತಾ ಕೂರುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯಕ್ಕೆ ಬೇಕಾದ ಸವಲತ್ತುಗಳನ್ನು ಒದಗಿಸುವುದಕ್ಕಾಗಿ ವರಿಷ್ಠರನ್ನು ಆಗ್ರಹಿಸಲು ದಿಲ್ಲಿಗೆ ತೆರಳಬೇಕಾಗಿದ್ದ ಮುಖ್ಯಮಂತ್ರಿ, ಸಂಪುಟರಚನೆಗೆ ಅನುಮತಿ ನೀಡಿ ಎಂದು ಬೇಡಿಕೊಳ್ಳಲು ದಿಲ್ಲಿಗೆ ಧಾವಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸಂಪುಟ ರಚನೆಗೆ ಅನುಮತಿ ನೀಡುವುದೇ ದಿಲ್ಲಿಯ ಬಿಜೆಪಿಯ ವರಿಷ್ಠರು ರಾಜ್ಯಕ್ಕೆ ಮಾಡುವ ‘ಮಹದುಪಕಾರ’ ಎಂದು ಭಾವಿಸುವಂತಾಗಿದೆ. ರಾಜೀನಾಮೆ ಘೋಷಿಸಿದ ಸಂದರ್ಭದಲ್ಲಿ ಯಡಿಯೂರಪ್ಪ ಅವರೂ ತನಗೆ ಒದಗಿದ ಕಿರುಕುಳವನ್ನು ಪರೋಕ್ಷವಾಗಿ ಹೇಳಿಕೊಂಡಿದ್ದರು ‘‘ಸಂಪುಟ ವಿಸ್ತರಣೆಗೆ ವರಿಷ್ಠರು ಅನುಮತಿ ನೀಡಲು ಕಾಲವ್ಯಯ ಮಾಡಿದ ಕಾರಣದಿಂದ ಬಹಳಷ್ಟು ಸಮಸ್ಯೆಯಾಯಿತು’ ಎಂದು ಅವರು ತಿಳಿಸಿದ್ದರು. ಸರಕಾರದೊಳಗೆ ಭಿನ್ನಮತ ಉಲ್ಬಣಿಸುವುದಕ್ಕೆ ವರಿಷ್ಠರು ಸಂಪುಟ ವಿಸ್ತರಣೆಗೆ ಅನುಮತಿ ನೀಡದೇ ಇದ್ದುದು ಮುಖ್ಯ ಕಾರಣವಾಯಿತು. ಹಲವು ಬಾರಿ ಅವರು ಅನುಮತಿಗಾಗಿ ದಿಲ್ಲಿಗೆ ತೆರಳಿದರಾದರೂ, ವರಿಷ್ಠರು ಅವರನ್ನು ಭೇಟಿ ಮಾಡುವುದಕ್ಕೆ ಸಿದ್ಧರಿರಲಿಲ್ಲ. ರಾಜ್ಯದಲ್ಲಿ ನೆರೆ ತಾಂಡವವಾಡುತ್ತಿರುವಾಗ, ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಏಕಪಾತ್ರಾಭಿನಯ ಮಾಡಬೇಕಾಯಿತು.

ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ವಿಫಲರಾಗಲು ಕೇಂದ್ರದ ವರಿಷ್ಠರ ಕೊಡುಗೆ ಬಹುದೊಡ್ಡದಿದೆ. ರಾಜ್ಯ ನೆರೆಯಿಂದ ಕೊಚ್ಚಿ ಹೋದಾಗ ಕೇಂದ್ರ ಸರಕಾರ ಪರಿಹಾರ ಧನವನ್ನು ಬಿಡುಗಡೆ ಮಾಡಲಿಲ್ಲ. ರಾಜ್ಯದ ಸಂಸದರೂ ಕೇಂದ್ರ ಸರಕಾರವನ್ನು ಈ ನಿಟ್ಟಿನಲ್ಲಿ ಒತ್ತಾಯಿಸಲಿಲ್ಲ. ಸಂಪುಟ ವಿಸ್ತರಣೆ ಮುಂದೆ ಹಾಕಿದಂತೆಯೇ ಸರಕಾರದೊಳಗೆ ಬಿರುಕು ದೊಡ್ಡದಾಗುತ್ತಾ ಹೋಗುತ್ತದೆ ಎನ್ನುವ ಅಂಶ ಕೇಂದ್ರ ವರಿಷ್ಠರಿಗೆ ತಿಳಿಯದ್ದೇನೂ ಅಲ್ಲ. ಆರೆಸ್ಸೆಸ್‌ನೊಳಗಿರುವ ನಾಯಕರು ಗರಿಷ್ಠ ಮಟ್ಟದಲ್ಲಿ ಯಡಿಯೂರಪ್ಪರಿಗೆ ಅಸಹಕಾರ ವ್ಯಕ್ತಪಡಿಸಿದ್ದರು. ಇದೀಗ ಯಡಿಯೂರಪ್ಪ ಸ್ಥಾನದಲ್ಲಿ ಬೊಮ್ಮಾಯಿ ಅವರು ದಿಲ್ಲಿಯ ಸಂದೇಶಕ್ಕಾಗಿ ಕಾಯುತ್ತಾ ಕೂತಿದ್ದಾರೆ. ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಬಿಜೆಪಿ ಸರಕಾರ ಅನೈತಿಕ ದಾರಿಯಲ್ಲಿ ಅಧಿಕಾರವನ್ನು ಹಿಡಿದಿದೆ. ‘ಅನರ್ಹ ಶಾಸಕ’ರ ಬಲದಿಂದ ಅದು ಅಧಿಕಾರ ಹಿಡಿಯಿತು. ಇವರೆಲ್ಲರಿಗೂ ವೈಯಕ್ತಿಕ ಹಿತಾಸಕ್ತಿ ಮುಖ್ಯವಾಗಿತ್ತೇ ಹೊರತು, ರಾಜ್ಯದ ಹಿತಾಸಕ್ತಿಯಲ್ಲ. ಹಣ ಮತ್ತು ಅಧಿಕಾರದ ಲಾಲಸೆಯಿಂದ ಬಿಜೆಪಿಗೆ ತೆರಳಿದವರು, ಅಲ್ಲಿ ಹಣ ಮತ್ತು ಅಧಿಕಾರಕ್ಕಾಗಿ ಆಸೆ ಪಟ್ಟರೆ ಅದರಲ್ಲಿ ಅಚ್ಚರಿಯೇನೂ ಇಲ್ಲ.

‘ಬಾಂಬೇ ಹುಡುಗ’ರಿಂದಾಗಿಯೇ ಬಿಜೆಪಿಗೆ ಸರಕಾರ ರಚನೆ ಸಾಧ್ಯವಾಯಿತು. ಆದುದರಿಂದ, ಈಗ ಬೊಮ್ಮಾಯಿ ನೇತೃತ್ವದ ಸರಕಾರದಲ್ಲೂ ಅವರಿಗೆ ಅರ್ಹ ಸ್ಥಾನಮಾನ ನೀಡಲೇಬೇಕಾಗಿದೆ. ಇದೇ ಸಂದರ್ಭದಲ್ಲಿ ಸರಕಾರ ಹಳ್ಳ ಹಿಡಿಯುವುದಕ್ಕಾಗಿ ಬಿಜೆಪಿಯೊಳಗಿರುವ ಆರೆಸ್ಸೆಸ್ ಮುಖಂಡರು ಯೋಜನೆಗಳನ್ನು ರೂಪಿಸುತ್ತಲೇ ಇದ್ದಾರೆ. ಎರಡು ವರ್ಷದ ಬಳಿಕ ಹೊಸ ಚುನಾವಣೆಯನ್ನು ಆರೆಸ್ಸೆಸ್‌ನ ಮುಖಂಡರ ನೇತೃತ್ವದಲ್ಲಿ ಎದುರಿಸುವುದಕ್ಕೆ ಬೇಕಾದ ನೀಲನಕಾಶೆ ಈಗಾಗಲೇ ಸಿದ್ಧವಾಗಿದೆ. ಸರಕಾರ ಎಷ್ಟರಮಟ್ಟಿಗೆ ವಿಫಲವಾಗುತ್ತದೆಯೋ, ಅಷ್ಟರ ಮಟ್ಟಿಗೆ ಅವರ ಯೋಜನೆ ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ಬರುತ್ತದೆ. ಬಿಜೆಪಿಯೊಳಗೆ ಈಗ ಇರುವ ಹಿರಿ ತಲೆಗಳ ಬಗ್ಗೆ ಜನರಿಗೆ ಜಿಗುಪ್ಸೆ ಹುಟ್ಟುವುದು ಅವರಿಗೆ ಬೇಕಾಗಿದೆ. ಬಿಜೆಪಿಯೊಳಗೆ ಅಧಿಕಾರಕ್ಕಾಗಿ ಕಚ್ಚಾಟ ಶುರುವಾಗಿ ರಣಾರಂಪ ನಡೆದರೆ ಮಾತ್ರ, ಹೊಸ ಮುಖಗಳು ಮುನ್ನೆಲೆಗೆ ಬರುವುದಕ್ಕೆ ಸಾಧ್ಯ. ಅಂತಹ ‘ಹೊಸ ಮುಖ’ಗಳು ಈಗಾಗಲೇ ಮೇಕಪ್ ಹಚ್ಚಿ ಆರೆಸ್ಸೆಸ್ ಗ್ರೀನ್ ರೂಂನಲ್ಲಿ ಸಿದ್ಧವಾಗಿ ಕುಳಿತಿವೆ. ಈ ಕಾರಣದಿಂದಲೇ ವರಿಷ್ಠರು ಕೂಡ ಸಂಪುಟ ರಚನೆಯ ಸಮಯವನ್ನು ವಿಸ್ತರಿಸುತ್ತಿದ್ದಾರೆ.

ಸಂಪುಟ ವಿಸ್ತರಣೆಯಾದ ಕೆಲವೇ ದಿನಗಳಲ್ಲಿ ಬಿಜೆಪಿಯೊಳಗೆ ಇನ್ನೊಂದು ಬಣ ಬಂಡೇಳುವುದು ಖಚಿತ. ಇದಕ್ಕಿಂತ ಯಡಿಯೂರಪ್ಪ ಅವರೇ ಮುಂದುವರಿದಿದ್ದರೆ ಚೆನ್ನಾಗಿತ್ತು ಎಂದು ಜನರಿಗೆ ಅನ್ನಿಸುವ ಸಾಧ್ಯತೆಗಳೂ ಇಲ್ಲದಿಲ್ಲ. ಬಿಜೆಪಿಯೊಳಗಿರುವ ವಿವಿಧ ಲಾಬಿಗಳನ್ನು ನಿಭಾಯಿಸುವ ಮುತ್ಸದ್ದಿತನ ಬೊಮ್ಮಾಯಿಯವರಲ್ಲಿ ಇಲ್ಲ. ಹಾಗೆಯೇ ಒಂದೆಡೆ ಭಿನ್ನಮತ, ಮಗದೊಂದೆಡೆ ರಾಜ್ಯದ ಸಮಸ್ಯೆಗಳನ್ನು ಜೊತೆ ಜೊತೆಯಾಗಿ ನಿಭಾಯಿಸುವ ಶಕ್ತಿಯೂ ಅವರಲ್ಲಿಲ್ಲ. ಆದರೆ ಇವೆಲ್ಲದಕ್ಕೂ ಸಂಪುಟ ರಚನೆಯ ಅವಧಿಯನ್ನು ಮುಂದೂಡುವುದು ಖಂಡಿತ ಪರಿಹಾರವಲ್ಲ. ಲಾಕ್‌ಡೌನ್‌ನಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ. ಇದೇ ಸಂದರ್ಭದಲ್ಲಿ ನೆರೆಯಿಂದಾಗಿ ಉತ್ತರ ಕರ್ನಾಟಕ ಸಂಪೂರ್ಣ ತತ್ತರಿಸಿದೆ. ಜೊತೆಗೆ ಕೊರೋನ ಮತ್ತೆ ಉಲ್ಬಣಿಸುವ ಸೂಚನೆಯನ್ನು ನೀಡಿದೆ. ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿ ಸರಕಾರವೇ ಇಲ್ಲವಾದರೆ, ಏನಾದೀತು? ಮುಖ್ಯಮಂತ್ರಿಯೊಬ್ಬರೇ ಇದನ್ನು ಎಷ್ಟು ದಿನ ನಿಭಾಯಿಸಿಯಾರು? ಬಿಜೆಪಿ ಅಧಿಕಾರ ಹಿಡಿದ ದಿನದಿಂದ ಆಡಳಿತಕ್ಕೆ ಗಮನ ಕೊಟ್ಟದ್ದು ಕಡಿಮೆ ಅಥವಾ ಅನರ್ಹ ಶಾಸಕರ ಸಮಸ್ಯೆ, ಸಂಪುಟ ವಿಸ್ತರಣೆ, ಭಿನ್ನಮತೀಯರ ಲಾಬಿ ಇವೆಲ್ಲವೂ ಆಡಳಿತ ನಡೆಸುವುದಕ್ಕೆ ಅವಕಾಶ ನೀಡಲಿಲ್ಲ. ಇನ್ನಾದರೂ ಬಿಜೆಪಿ ಎಲ್ಲ ಭಿನ್ನಮತವನ್ನು ಬದಿಗಿಟ್ಟು ರಾಜ್ಯದ ಹಿತಾಸಕ್ತಿಯ ಕಡೆಗೆ ಗಮನ ನೀಡಬೇಕು.

ನಾಡು ಸಂಕಟದಲ್ಲಿರುವಾಗ ಇನ್ನೂ ಕಚ್ಚಾಡುತ್ತಾ ಕೂತರೆ ಅದನ್ನು ಜನರು ಖಂಡಿತ ಕ್ಷಮಿಸಲಾರರು. ಇನ್ನೊಮ್ಮೆ ಮುಖ್ಯಮಂತ್ರಿ ಬದಲಾವಣೆಯಾದರೆ ಅದನ್ನು ಸಹಿಸುವ ಶಕ್ತಿ ನಾಡಿಗಿಲ್ಲ. ಆದುದರಿಂದ ಇರುವ ದಿನಗಳನ್ನು ರಾಜ್ಯದ ಅಭಿವೃದ್ಧಿಗಾಗಿ ಮೀಸಲಿಡಲು ಬಿಜೆಪಿಯೊಳಗಿರುವ ನಾಯಕರು ಬದ್ಧರಾಗಬೇಕು. ಇದೇ ಸಂದರ್ಭದಲ್ಲಿ, ರಾಜ್ಯಕ್ಕೆ ಕೇಂದ್ರದಿಂದ ಸಲ್ಲಬೇಕಾಗಿರುವ ಪರಿಹಾರ ನಿಧಿ, ಅನುದಾನಗಳಿಗಾಗಿ ಕೇಂದ್ರ ವರಿಷ್ಠರ ಮೇಲೆ ಒತ್ತಡ ಹಾಕುವ ಇಚ್ಛಾಶಕ್ತಿಯನ್ನು ರಾಜ್ಯದ ಬಿಜೆಪಿ ಸಂಸದರು ಬೆಳೆಸಿಕೊಳ್ಳಬೇಕು. ತಮಿಳುನಾಡು, ಉತ್ತರ ಪ್ರದೇಶದಂತಹ ರಾಜ್ಯಗಳಿಗೆ ತಮ್ಮ ತಮ್ಮ ಹಕ್ಕುಗಳನ್ನು ಕೇಂದ್ರದಿಂದ ಪಡೆಯಲು ಸಾಧ್ಯವಾಗುತ್ತದೆಯಾದರೆ, ರಾಜ್ಯಕ್ಕೆ ಯಾಕೆ ಸಾಧ್ಯವಾಗುತ್ತಿಲ್ಲ? ಈ ಪ್ರಶ್ನೆಗೆ ಉತ್ತರಿಸುವ ಹೊಣೆ ರಾಜ್ಯದ ಸಂಸದರಿಗೆ ಸೇರಿದ್ದು. ಇದೇ ಸಂದರ್ಭದಲ್ಲಿ, ಬರೇ ಟೀಕೆಗೆ ಸಮಯವನ್ನು ಮೀಸಲಿಡದೆ, ಆಡಳಿತ ಪಕ್ಷದೊಂದಿಗೆ ಕೈಜೋಡಿಸಿ ನಾಡಿನ ಅಭಿವೃದ್ಧಿಗಾಗಿ ವಿರೋಧಪಕ್ಷಗಳು ದುಡಿಯಬೇಕಾಗಿದೆ. ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತೆ, ರಾಜಕೀಯ ಒಳಜಗಳದಲ್ಲಿ ನಾಡು ಬಲಿಯಾಗಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News