ಮೀಸಲು ಹುದ್ದೆ: ದೇವರು ಕೊಟ್ಟರೂ ಪೂಜಾರಿ ಬಿಡ

Update: 2021-08-03 08:42 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಭಾರತದಲ್ಲಿ ಮೀಸಲಾತಿ ಕೊನೆಯ ದಿನಗಳನ್ನು ಎಣಿಸುತ್ತಿದೆ. ಇದರ ಅರ್ಥ ಭಾರತದಲ್ಲಿ ಜಾತೀಯ ಅಸಮಾನತೆ ಕೊನೆಯಾಗಿ ಮೀಸಲಾತಿಯ ಅಗತ್ಯ ಇನ್ನಿಲ್ಲ ಎಂದೇನೂ ಅಲ್ಲ. ಅಥವಾ, ಮೀಸಲಾತಿಯಿಂದಾಗಿ ಈಗಾಗಲೇ ದಲಿತರು ಮತ್ತು ಹಿಂದುಳಿದವರ್ಗ ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಂಡಿದ್ದು, ಆ ಕಾರಣದಿಂದ ಮೀಸಲಾತಿ ಮಹತ್ವವನ್ನು ಕಳೆದುಕೊಂಡಿದೆ ಎಂದೂ ಅಲ್ಲ. ಯಾವಾಗ ಮೀಸಲಾತಿ ತನ್ನ ನಿಜವಾದ ಉದ್ದೇಶಗಳನ್ನೇ ಕಳೆದುಕೊಳ್ಳುತ್ತದೆಯೋ, ಆ ಬಳಿಕ ಅದು ಅಸ್ತಿತ್ವದಲ್ಲಿದ್ದೂ ಶೋಷಿತರಿಗೆ ಯಾವ ಲಾಭಗಳಿಲ್ಲ. ವಿಪರ್ಯಾಸವೆಂದರೆ, ಶೋಷಿತ ದುರ್ಬಲ ಜಾತಿಗಳನ್ನು ಮೇಲೆತ್ತುವುದಕ್ಕಾಗಿ ಜಾರಿಗೊಂಡ ಮೀಸಲಾತಿ ಇಂದು ಮೇಲ್‌ಜಾತಿಯ ದುರ್ಬಲರ ಕುರಿತಂತೆ ತಲೆಕೆಡಿಸಿಕೊಳ್ಳುತ್ತಿದೆ. ಒಂದು ಕಾಲದಲ್ಲಿ ‘ಮೀಸಲಾತಿ ಇಲ್ಲವಾಗಲಿ’ ಎಂದು ಕೇಳುತ್ತಿದ್ದವರು, ಇಂದು ಸದ್ದುಗದ್ದಲವಿಲ್ಲದೆ ಶೇ. 10ರಷ್ಟು ಮೀಸಲಾತಿಯನ್ನು ಮೆಲ್ಲುತ್ತಿದ್ದಾರೆ. ಬಲಾಢ್ಯ ಜಾತಿಗೆ ಸೇರಿದ ಅತಿ ಸಣ್ಣ ಸಮುದಾಯ ಇಂದು ‘ಬಡವರ್ಗ’ ಎನ್ನುವ ಹಣೆಪಟ್ಟಿಯೊಂದಿಗೆ ದೊಡ್ಡ ಪ್ರಮಾಣದ ಮೀಸಲಾತಿಯನ್ನು ಅನುಭವಿಸುತ್ತಿದೆ. ಇಷ್ಟಕ್ಕೂ ಮೇಲ್‌ಜಾತಿಯ ಪಾಲಿಗೆ ಬಡತನವೆನ್ನುವುದೂ ಬಹಳ ಹಿತಕರವಾಗಿದೆ. ಯಾಕೆಂದರೆ ಮಾಸಿಕವಾಗಿ 60,000 ರೂಪಾಯಿ ದುಡಿಯುತ್ತಿದ್ದರೆ ಅವರು ಮೇಲ್‌ಜಾತಿಯ ಶೋಷಿತ ಸಮುದಾಯವಾಗಿ ಪರಿಗಣಿಸಲ್ಪಟ್ಟು, ದಲಿತ ಶೋಷಿತ ಸಮುದಾಯದ ತಕ್ಕಡಿಯಲ್ಲಿ ಸಮವಾಗಿ ತೂಗುತ್ತಾರೆ. ವಿಶೇಷವೆಂದರೆ, ಈ ಶೇ. 10 ಮೀಸಲಾತಿಯನ್ನು ತನ್ನದಾಗಿಸುತ್ತಲೇ, ‘ದಲಿತರಿಗೆ ಮೀಸಲಾತಿ ಇನ್ನಾದರೂ ನಿಲ್ಲಲಿ’ ಎಂಬ ಘೋಷಣೆಗಳನ್ನೂ ಆಗಾಗ ಕೂಗುತ್ತಾರೆ. ಇವರ ಪ್ರಕಾರ, ಮೀಸಲಾತಿಯ ಸಕಲ ಸೌಲಭ್ಯಗಳನ್ನು ತನ್ನದಾಗಿಸಿಕೊಂಡ ಕೆಳಜಾತಿಯ ಜನರು ಭಾರತಾದ್ಯಂತ ಕೊಬ್ಬಿ ಮೆರೆಯುತ್ತಿದ್ದಾರೆ. ಮೀಸಲಾತಿಯನ್ನು ಮೇಲ್‌ವರ್ಗ ದಲಿತರನ್ನು, ಹಿಂದುಳಿದವರ್ಗವನ್ನು ತುಳಿಯುವುದಕ್ಕಾಗಿಯೇ ಪರಿಣಾಮಕಾರಿಯಾಗಿ ಬಳಸುತ್ತಿದೆ.

  ದೇಶದಲ್ಲಿ ಮೀಸಲಾತಿಯನ್ನು ಎರಡು ಬಗೆಯ ತಂತ್ರಗಳ ಮೂಲಕ ನಾಶ ಪಡಿಸಲಾಗುತ್ತಿದೆ. ಒಂದೆಡೆ ಮೀಸಲಾತಿಯನ್ನು ಸಮರ್ಪಕವಾಗಿ ಜಾರಿಗೊಳ್ಳದಂತೆ ನೋಡಿಕೊಳ್ಳುವುದು. ಇನ್ನೊಂದೆಡೆ ‘ಬಡವರಿಗೆ ಮೀಸಲಾತಿ’ ಎನ್ನುವ ಘೋಷಣೆಯ ಮೂಲಕ ಹಂತ ಹಂತವಾಗಿ ಮೇಲ್‌ಜಾತಿಗಳು ಮೀಸಲಾತಿಯಲ್ಲಿ ಪಾಲು ಪಡೆಯುವುದು. ಈಗಾಗಲೇ ಮೇಲ್‌ಜಾತಿಯ ಬಡವರಿಗೆ ಶೇ. 10ರಷ್ಟು ಮೀಸಲಾತಿಯನ್ನು ನೀಡುವ ಮೂಲಕ ಮೀಸಲಾತಿಯ ಉದ್ದೇಶವನ್ನು ಭಾಗಶಃ ವಿರೂಪಗೊಳಿಸಲಾಗಿದೆ. ಇದೇ ಸಂದರ್ಭದಲ್ಲಿ ಜಾಟ್, ಮರಾಠ ಗುಜ್ಜಾರ್, ಲಿಂಗಾಯತ, ಒಕ್ಕಲಿಗ, ಪಟೇಲ್ ಮೊದಲಾದ ವರ್ಗಗಳೂ ತಮ್ಮ ತಮ್ಮ ಜನಸಂಖ್ಯಾಬಲವನ್ನು ಮುಂದಿಟ್ಟುಕೊಂಡು ಮೀಸಲಾತಿಗಾಗಿ ಹೋರಾಟಕ್ಕಿಳಿದಿವೆ. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಅತ್ಯಧಿಕ ಪ್ರಾತಿನಿಧ್ಯವುಳ್ಳ ಮೇಲ್‌ಜಾತಿಗಳು ಮೀಸಲಾತಿಯನ್ನು ತನ್ನದಾಗಿಸಿಕೊಳ್ಳುವುದು ಎಂದರೆ ಬಲಾಢ್ಯರು ಇನ್ನಷ್ಟು ಬಲಾಢ್ಯರಾಗುವುದು. ಆ ಮೂಲಕ ಶೋಷಿತ ಸಮುದಾಯವನ್ನು ಇನ್ನಷ್ಟು ದುರ್ಬಲಗೊಳಿಸುವುದು.

 ಮೀಸಲಾತಿಗೆ ಕಾಲಾವಧಿಯನ್ನು ನಿಗದಿಗೊಳಿಸಿ ಎನ್ನುವವರು, ಎಲ್ಲಿಯವರೆಗೆ ಜಾತೀಯ ಅಸಮಾನತೆ ಈ ದೇಶದಲ್ಲಿ ಅಸ್ತಿತ್ವದಲ್ಲಿರುತ್ತದೆಯೋ ಅಲ್ಲಿಯವರೆಗೆ ಮೀಸಲಾತಿ ಜಾರಿಯಲ್ಲಿರಬೇಕು ಎನ್ನುವುದನ್ನು ಒಪ್ಪುವುದಿಲ್ಲ. ಕನಿಷ್ಠ ಮೀಸಲಾತಿಯಿಂದ ದಲಿತರಿಗೆ, ದುರ್ಬಲ ಸಮುದಾಯಕ್ಕೆ ಎಷ್ಟರಮಟ್ಟಿಗೆ ಪ್ರಯೋಜನವಾಗಿದೆ ಎನ್ನುವುದನ್ನು ಪರಿಶೀಲಿಸಿದರೆ ನಿರಾಸೆ ಕಟ್ಟಿಟ್ಟ ಬುತ್ತಿ. ಇರುವ ಖಾಲಿ ಹುದ್ದೆಗಳನ್ನೂ ದಲಿತರು, ಹಿಂದುಳಿದವರ್ಗಕ್ಕೆ ನೀಡದೆ, ಅವುಗಳಿಗೆ ಸೂಕ್ತ ಅಭ್ಯರ್ಥಿಯಿಲ್ಲ ಎಂದು ಘೋಷಿಸಿ ಅಂತಿಮವಾಗಿ ಸಾಮಾನ್ಯವರ್ಗಕ್ಕೆ ತೆರವು ಮಾಡಿಕೊಡುತ್ತಿ ರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ. ಕೇಂದ್ರ ಸರಕಾರದ 10 ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ, ವರ್ಗ ಹಾಗೂ ಇತರ ಹಿಂದುಳಿದ ವರ್ಗ(ಒಬಿಸಿ)ಗಳಿಗೆ ಮೀಸಲಿರಿಸಿದ ಹುದ್ದೆಗಳಲ್ಲಿ 50ಶೇ.ಕ್ಕೂ ಹೆಚ್ಚು ಹುದ್ದೆಗಳು ಖಾಲಿಯಿದ್ದು ಈ ಪಟ್ಟಿಯಲ್ಲಿ ರೈಲ್ವೇ ಮತ್ತು ಗೃಹ ಇಲಾಖೆ ಅಗ್ರಸ್ಥಾನದಲ್ಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ರೈಲ್ವೇ ಹಾಗೂ ಗೃಹ ಇಲಾಖೆಯಲ್ಲಿ 50ಶೇ.ಕ್ಕೂ ಅಧಿಕ ಮೀಸಲಾತಿ ಹುದ್ದೆ ಭರ್ತಿಯಾಗಿಲ್ಲ. ರೈಲ್ವೇ ಸಚಿವಾಲಯದಲ್ಲಿ ಒಬಿಸಿ/ಎಸ್ಸಿ/ಎಸ್ಟಿ ವಿಭಾಗದವರಿಗೆ 29,541 ಹುದ್ದೆ ಮೀಸಲಿರಿಸಿದ್ದು ಇದರಲ್ಲಿ 17,769 ಹುದ್ದೆ ಭರ್ತಿಯಾಗಿಲ್ಲ. ಗೃಹ ಇಲಾಖೆಯಲ್ಲಿ 30,943 ಮೀಸಲು ಹುದ್ದೆಯಿದ್ದು 17,493 ಹುದ್ದೆ ಖಾಲಿಯಿದೆ ಎಂದು ಸಿಬ್ಬಂದಿ ಹಾಗೂ ಕಾನೂನು ಇಲಾಖೆಯ ಸ್ಥಾಯಿ ಸಮಿತಿ ಇತ್ತೀಚೆಗೆ ತಿಳಿಸಿದೆ.

 ಗೃಹ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ ಎಸ್ಟಿಗಿಂತ ಎಸ್ಸಿ ಮತ್ತು ಒಬಿಸಿ ಮೀಸಲು ಹುದ್ದೆಗಳ ಪ್ರಮಾಣ ಹೆಚ್ಚಿದೆ. ವಿತ್ತ ಇಲಾಖೆಯಲ್ಲಿ ಮೀಸಲಿರುವ 10,921 ಹುದ್ದೆಗಳಲ್ಲಿ 7,040 ಹುದ್ದೆಗಳು ಖಾಲಿಯಿವೆ. ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಯಲ್ಲಿ 1,251 ಮೀಸಲು ಹುದ್ದೆಗಳಲ್ಲಿ 555 ಭರ್ತಿಯಾಗಬೇಕಿದೆ. ರಕ್ಷಣಾ ಇಲಾಖೆಯಡಿಯ ರಕ್ಷಣಾ ಉತ್ಪಾದನೆ ವಿಭಾಗದಲ್ಲಿರುವ 20,648 ಮೀಸಲು ಹುದ್ದೆಗಳಲ್ಲಿ 16,621 ಹುದ್ದೆ ಭರ್ತಿ ಮಾಡಿಕೊಳ್ಳಲಾಗಿದ್ದು, ಅತ್ಯಧಿಕ ಮೀಸಲು ಹುದ್ದೆ ಭರ್ತಿ ಮಾಡಿದ ಇಲಾಖೆ ಎಂದು ಗುರುತಿಸಲಾಗಿದೆ. ಕೇಂದ್ರದಲ್ಲಿ 53 ಇಲಾಖೆಗಳಿದ್ದು ಕೇಂದ್ರ ಸರಕಾರದ ಸಿಬ್ಬಂದಿಯ 90ಶೇ.ಕ್ಕೂ ಅಧಿಕ ಸಿಬ್ಬಂದಿ 16 ಇಲಾಖೆಗಳಲ್ಲಿದ್ದಾರೆ. ಈ 16 ಇಲಾಖೆಗಳಲ್ಲಿ 10 ಇಲಾಖೆಗಳು ಮಾತ್ರ ಮೀಸಲು ಹುದ್ದೆಯ ಕುರಿತ ಮಾಹಿತಿ ಹಂಚಿಕೊಂಡಿವೆ.

 ಗೃಹ ಇಲಾಖೆಯಲ್ಲಿ ಮಂಜೂರಾಗಿರುವ 11 ಲಕ್ಷ ಹುದ್ದೆಗಳಲ್ಲಿ(ಅರೆಸೇನಾ ಪಡೆ ಸಿಬ್ಬಂದಿ ಸೇರಿದಂತೆ) ಕೇವಲ 1,27,049 ಹುದ್ದೆಗಳು ಮಾತ್ರ ಭರ್ತಿಯಾಗಬೇಕಿವೆ. ಆದರೆ ಮೀಸಲು ಹುದ್ದೆಗಳಲ್ಲಿ 50ಶೇಕ್ಕೂ ಅಧಿಕ ಹುದ್ದೆ ಖಾಲಿಯಿದೆ. ಬಿಎಸ್‌ಎಫ್‌ನಲ್ಲಿ ಒಟ್ಟು ಹುದ್ದೆ 2,65,173, ಖಾಲಿ ಹುದ್ದೆ 28,095; ಸಿಐಎಸ್‌ಎಫ್‌ನಲ್ಲಿ ಒಟ್ಟು ಹುದ್ದೆ 1,63,313, ಖಾಲಿ ಹುದ್ದೆ 24,161; ಸಿಆರ್‌ಪಿಎಫ್‌ನಲ್ಲಿ ಒಟ್ಟುಹುದ್ದೆ 3,24,723, ಖಾಲಿ ಹುದ್ದೆ 27,825; ಎಸ್‌ಎಸ್‌ಬಿಯ 97,792 ಹುದ್ದೆಯಲ್ಲಿ 18,633 ಹುದ್ದೆ ಖಾಲಿಯಿದೆ.

ದೇಶಾದ್ಯಂತ ಸರಕಾರಿ ಹುದ್ದೆಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಲಾಕ್‌ಡೌನ್ ಬಳಿಕ ಖಾಸಗಿ ಉದ್ದಿಮೆಗಳು ಮುಚ್ಚುಗಡೆಯಾಗುವ ಮೂಲಕ ಲಕ್ಷಾಂತರ ಉದ್ಯೋಗಿಗಳು ಬೀದಿಗೆ ಬೀಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹೊಸ ಉದ್ಯೋಗ ಸೃಷ್ಟಿ ಕನಸಿನ ಮಾತು. ಕನಿಷ್ಠ ಮಂಜೂರಾದ ಹುದ್ದೆಗಳಿಗೂ ಮೀಸಲಾತಿ ಆಧಾರದಲ್ಲಿ ಅರ್ಹರನ್ನು ನೇಮಕಾತಿ ಮಾಡಲು ಸರಕಾರ ಸಿದ್ಧ್ದವಿಲ್ಲ ಎಂದ ಮೇಲೆ, ‘ಇನ್ನೂ ಎಷ್ಟು ಸಮಯ ಮೀಸಲಾತಿ?’ ಎಂಬ ಪ್ರಶ್ನೆಗೆ ಉತ್ತರದ ಅಗತ್ಯವಾದರೂ ಇದೆಯೆ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News