ತಿರುಚಿದ ಚಿತ್ರಗಳನ್ನು ಬಳಸಿದ ಆರೋಪ: ವಿವಾದದ ಸುಳಿಯಲ್ಲಿ ಜೆಎನ್ ಯು ವಿಜ್ಞಾನಿಯ ಸಂಶೋಧನಾ ಲೇಖನ

Update: 2021-08-04 18:06 GMT

ಹೊಸದಿಲ್ಲಿ,ಆ.2: ಪಶ್ಚಿಮಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಜವಾಹಲ್ ಲಾಲ್ ನೆಹರೂ ವಿವಿ ವಿಜ್ಞಾನಿ ಗೋವರ್ಧನ್ ದಾಸ್ ಸಹ ಲೇಖಕರಾಗಿದ್ದ 11 ಸಂಶೋಧನಾ ಲೇಖನಗಳನ್ನು ಕೃತ್ರಿಮವಾದ ಚಿತ್ರಗಳನ್ನು ಹೊಂದಿವೆಯೆಂಬ ಆರೋಪದಲ್ಲಿ ಫ್ಲಾಗ್ ಮಾಡಲಾಗಿದೆ.

ಸಂಶೋಧನಾ ಬರಹಗಳ ಕುರಿತ ಚರ್ಚೆ ಹಾಗೂ ವಿಮರ್ಶೆಗಾಗಿನ ಜಾಲತಾಣವಾದ ಪಬ್ಪೀರ್ನಲ್ಲಿ ಈ ಸಂಶೋಧನಾ ಪ್ರಬಂಧಗಳ ಪ್ರಕಟಣೆಯನ್ನು ಫ್ಲಾಗ್ ಮಾಡಲಾಗಿದೆ. ಸಾಮಾನ್ಯವಾಗಿ ಪಬ್ ಪೀರ್ ಜಾಲತಾಣವನ್ನು ವಿಜ್ಞಾನಿಗಳು ಪ್ರಕಟಿತ ಸಂಶೋಧನಾ ಪ್ರಬಂಧಗಳು, ಲೇಖನಗಳ ಬಗ್ಗೆ ಚರ್ಚಿಸಲು ಬಳಸಿಕೊಳ್ಳುತ್ತಾರೆ.

ಗೋವರ್ಧನ್ ದಾಸ್ ಅವರು ಸಹಲೇಖಕರಾಗಿರುವ 11 ಪ್ರಬಂಧಗಳಲ್ಲಿ ಹೆಚ್ಚಿನವು ಕ್ಷಯರೋಗಕ್ಕೆ ಸಂಬಂಧಿಸಿದ ಸಂಶೋಧನಾ ಪ್ರಬಂಧಗಳಾಗಿದ್ದವು. ಪ್ರಬಂಧದಲ್ಲಿ ಪ್ರಕಟಿಸಲಾದ ಸಂಶೋಧನೆಗಳಿಗೆ ಸಂಬಂಧಿಸಿದ ಪ್ರಯೋಗಗಳ ಚಿತ್ರಗಳು ಕೃತ್ರಿಮವಾದವು ಎಂಬ ಕಾರಣಕ್ಕಾಗಿ ಅವುಗಳನ್ನು ಫ್ಲಾಗ್ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

ಈ ಸಂಶೋಧನಾ ಪ್ರಬಂಧದಲ್ಲಿ ವಿಭಿನ್ನ ಪ್ರಯೋಗಗಳಿಗೆ ಒಂದೇ ಚಿತ್ರವನ್ನು ಬಳಸಿಕೊಂಡಿರುವುದು ಅನುಮಾನಕ್ಕೆಡೆ ಮಾಡಿಕೊಟ್ಟಿದೆ ಎಂದು ವೆಬ್ಸೈಟ್ ಸಂದರ್ಶಿಸಿದ ಅನೇಕ ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ತನ್ನ ಸಂಶೋಧನಾ ಬರಹದಲ್ಲಿ ಪ್ರಕಟಿಸಲಾದ ಚಿತ್ರಗಳು ಕೃತ್ರಿಮವೆಂಬ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಗೋವರ್ಧನ್ ದಾಸ್ ಅವರು, ತಾನು ಬಿಜೆಪಿ ನಿಷ್ಠನೆಂಬ ಕಾರಣಕ್ಕಾಗಿ ತನ್ನನ್ನು ಗುರಿಯಿಡಲಾಗಿದೆಯೆಂದು ಹೇಳಿದ್ದಾರೆ.

ತಾನು ಜೆಎನ್ಯು ವಿಶ್ವವಿದ್ಯಾನಿಲಯದ ನಿರ್ದೇಶಕ ಸ್ಥಾನಕ್ಕಾಗಿ ಅರ್ಜಿ ಸಲ್ಲಿಸಿದ ಬಳಿಕ ತನ್ನ ಸಂಶೋಧನಾ ಲೇಖನದ ವಿರುದ್ಧ ಅನಿಸಿಕೆಗಳು ವ್ಯಕ್ತವಾಗಿವೆ ಎಂದವರು ತಿಳಿಸಿದ್ದಾರೆ. ಯಾರಿಗಾದರೂ ಈ ಲೇಖನದ ಬಗ್ಗೆ ಸಮಸ್ಯೆಯಿದ್ದಲ್ಲಿ ಅವರು ನೇರವಾಗಿ ನನ್ನೊಂದಿಗೆ ವಿಜ್ಞಾನದ ಕುರಿತಾಗಿ ಮಾತನಾಡಬಹುದು ಎಂದು ಪ್ರತಿಕ್ರಿಯಿಸಿದ್ದಾರೆ. ನಾನು ಪ್ರಕಟಿಸಿದ ಚಿತ್ರಗಳಲ್ಲಿ ಯಾವುದೇ ಪ್ರಮಾದವಿಲ್ಲ. ಆದಾಗ್ಯೂ, ಈ ಚಿತ್ರಗಳನ್ನು ವಿದ್ಯಾರ್ಥಿಗಳೇ ಸಂಗ್ರಹಿಸಿದ್ದರು ಎಂದವರು ತಿಳಿಸಿದ್ದಾರೆ.

ಸಂಶೋಧನಾ ಪ್ರಬಂಧದ ಇನ್ನೋರ್ವ ಸಹ ಬರಹಗಾರರಾದ ವೇದ್ ಪ್ರಕಾಶ್ ದ್ವಿವೇದಿ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಫ್ಲಾಗ್ ಮಾಡಲಾದ ಒಂದು ಸಂಶೋಧನಾ ಲೇಖನದಲ್ಲಿ ಮಾನವ ಸಹಜ ತಪ್ಪುಗಳಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಈಗಾಗಲೇ ಈ ಲೇಖನವು ಪಿಎಲ್ಓಎಸ್ ಪ್ಯಾಥೊಜೆನ್ಸ್ ಎಂಬ ಪತ್ರಿಕೆ ಯಲ್ಲೂ ಪ್ರಕಟವಾಗಿದೆ. ಆ ನಿಯತಕಾಲಿಕವನ್ನು ನಾವು ಸಂಪರ್ಕಿಸಿದ್ದು, ಆಗಿರುವ ಪ್ರಮಾದದ ಬಗ್ಗೆ ಮಾಹಿತಿ ನೀಡಿದ್ದೇವೆ ಎಂದವರು ಹೇಳಿದ್ದಾರೆ.

ಕ್ಷಯ ರೋಗದ ವಿರುದ್ಧ ರಕ್ಷಣೆಗೆ ಬಳಸಲಾಗುವ ಬಿಸಿಜಿ ಲಸಿಕೆಯನ್ನು ಕೋವಿಡ್ ಸೋಂಕು ತಡೆಗಟ್ಟಲೂ ಬಳಸಬಹುದೆಂದು ಗೋಬರ್ಧನ್ ದಾಸ್ ಅವರು ಕಳೆದ ವರ್ಷ ಪ್ರಸ್ತಾಪಿಸಿರುವುದು ವಿವಾದಕ್ಕೆ ಕಾರಣವಾಗಿತ್ತು.

ಫ್ಲಾಗ್ಡ್ ಎಂದರೇನು?

  

ಜಾಲತಾಣಗಳಲ್ಲಿ ಪ್ರಕಟವಾದ ಲೇಖನಗಳು, ವಿಷಯಗಳು, ಸಂಶೋಧನಾ ಬರಹಗಳು ಅಪರಿಪೂರ್ಣವೆಂದು ಅನಿಸಿದಲ್ಲಿ ಅಥವಾ ಅವುಗಳ ವಿಶ್ವಸನೀಯತೆಯ ಬಗ್ಗೆ ಸಂದೇಹವಿದ್ದಲ್ಲಿ ಅಥವಾ ಆ ಲೇಖನದಲ್ಲಿ ಇನ್ನಷ್ಟು ಪರಿಷ್ಕರಣೆಯ ಅಗತ್ಯವಿದೆಯೆಂದು ಕಂಡುಬಂದಲ್ಲಿ ಅಂತಹ ಲೇಖನಗಳ ಮುಂದೆ ಧ್ವಜದ (ಫ್ಲಾಗ್) ಚಿಹ್ನೆಯನ್ನು ಪ್ರದರ್ಶಿಸಲಾಗುತ್ತದೆ. ಇದನ್ನು ಫ್ಲಾಗ್ಡ್ ಎಂದು ಕರೆಯಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News