ಒಲಿಂಪಿಕ್ಸ್ : ಭಾರತೀಯ ಮಹಿಳಾ ಹಾಕಿ ತಂಡದ ಆಟಗಾರರಿಗೆ ವಜ್ರ ವ್ಯಾಪಾರಿ ಉಡುಗೊರೆ ಘೋಷಣೆ

Update: 2021-08-05 05:13 GMT

ಅಹ್ಮದಾಬಾದ್: ಒಲಿಂಪಿಕ್ಸ್ ಹಾಕಿ ಸ್ಪರ್ಧೆಯ ಸೆಮಿಫೈನಲ್ಸ್‌ನಲ್ಲಿ ಪ್ರಬಲ ಅರ್ಜೆಂಟೀನಾ ವಿರುದ್ಧ ಸೋತ ಭಾರತೀಯ ಮಹಿಳಾ ಹಾಕಿ ತಂಡದ ಸದಸ್ಯರಿಗೆ ಗುಜರಾತ್‌ನ ಕೋಟ್ಯಾಧೀಶ ವಜ್ರದ ವ್ಯಾಪಾರಿ ಸವ್‌ಜಿ ಧೊಲಾಕಿಯಾ ಭರ್ಜರಿ ಉಡುಗೊರೆ ಘೋಷಿಸಿದ್ದಾರೆ.

ಮನೆ ಕಟ್ಟಿಕೊಳ್ಳಲು ಬಯಸುವ ಎಲ್ಲ ಮಹಿಳಾ ಆಟಗಾರ್ತಿಯರಿಗೆ 11 ಲಕ್ಷ ರೂಪಾಯಿ ನೆರವನ್ನು ತಮ್ಮ ಕಂಪನಿ ನೀಡಲಿದೆ. ಜತೆಗೆ ತಂಡ ಪದಕ ಗೆದ್ದಲ್ಲಿ, ಈಗಾಗಲೇ ಮನೆ ಇರುವ ಆಟಗಾರ್ತಿಯರಿಗೆ 5 ಲಕ್ಷ ರೂಪಾಯಿ ಮೌಲ್ಯದ ಹೊಸ ಕಾರು ಉಡುಗೊರೆ ನೀಡುವುದಾಗಿಯೂ ಆಶ್ವಾಸನೆ ನೀಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದ್ದ ಭಾರತ ತಂಡ, ತನ್ನ ಚೊಚ್ಚಲ ಸೆಮಿಫೈನಲ್‌ನಲ್ಲಿ 2-1 ಅಂತರದಿಂದ ಅರ್ಜೆಂಟೀನಾಗೆ ಶರಣಾಗಿತ್ತು. ಕಂಚಿನ ಪದಕಕ್ಕಾಗಿ ನಡೆಯುವ ಸ್ಪರ್ಧೆಯಲ್ಲಿ ಬ್ರಿಟನ್ ವಿರುದ್ಧ ಭಾರತ ಸೆಣೆಸಲಿದೆ.

"ನನ್ನ ಅಂತರಾಳದಲ್ಲಿ ನಂಬಲಸಾಧ್ಯ ಹೆಮ್ಮೆ ಇದೆ. ಮಹಿಳಾ ಹಾಕಿ ತಂಡದ ಆಟಗಾರ್ತಿಯರನ್ನು ಎಚ್‌ಕೆ ಗ್ರೂಪ್ ಗೌರವಿಸಲಿದೆ ಎಂದು ನಾನು ಘೋಷಿಸುತ್ತಿದ್ದೇನೆ. ತಮ್ಮ ಕನಸಿನ ಮನೆ ಕಟ್ಟಿಕೊಳ್ಳಲು ಬಯಸುವ ಎಲ್ಲ ಆಟಗಾರ್ತಿಯರಿಗೆ 11 ಲಕ್ಷ ರೂ. ನೆರವು ನೀಡಲಾಗುವುದು" ಎಂದು ಉದ್ಯಮಿ ಟ್ವೀಟ್ ಮಾಡಿದ್ದಾರೆ.

"ಟೋಕಿಯೊ ಒಲಿಂಪಿಕ್ಸ್‌ನ ಪ್ರತಿ ಹೆಜ್ಜೆಯಲ್ಲೂ ನಮ್ಮ ಮಹಿಳೆಯರು ಇತಿಹಾಸ ಬರೆದಿದ್ದಾರೆ.. ನಮ್ಮ ಆಟಗಾರ್ತಿಯರ ಮನೋಸ್ಥೈರ್ಯವನ್ನು ಹೆಚ್ಚಿಸುವುದು ನಮ್ಮ ಪ್ರಾಮಾಣಿಕ ಪ್ರಯತ್ನ" ಎಂದು ಹೇಳಿದ್ದಾರೆ.

ಈ ಘೋಷಣೆ ಬಳಿಕ ಇತರ ಹಲವು ಮಂದಿ ತಂಡಕ್ಕೆ ಸ್ಫೂರ್ತಿ ತುಂಬಿದ್ದಾರೆ. "ನನ್ನ ಸಹೋದರನ ಸ್ನೇಹಿತ ಅಮೆರಿಕದ ಡಾ.ಕಮಲೇಶ್ ದವೆ ತಂಡದ ಎಲ್ಲ ಆಟಗಾರ್ತಿಯರಿಗೆ ತಲಾ ಒಂದು ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ" ಎಂದು ಧೋಲಾಕಿಯಾ ಟ್ವೀಟಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News