ಹರಿದ್ವಾರ: ಒಲಿಂಪಿಕ್ಸ್ ತಾರೆ ವಂದನಾ ಕಟಾರಿಯಾ ಕುಟುಂಬದ ಮೇಲೆ ಜಾತಿ ನಿಂದನೆ

Update: 2021-08-05 09:12 GMT
ವಂದನಾ ಕಟಾರಿಯಾ

ಹರಿದ್ವಾರ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬುಧವಾರ ನಡೆದ ಮಹಿಳಾ ಹಾಕಿ ಸೆಮಿಫೈನಲ್ ನಲ್ಲಿ ಭಾರತ ತಂಡ ಅರ್ಜೆಂಟೀನ ವಿರುದ್ಧ ಸೋತ ಕೆಲವೇ ಗಂಟೆಗಳ ಬಳಿಕ ಇಬ್ಬರು ಮೇಲ್ಜಾತಿಯ ಪುರುಷರು ಹರಿದ್ವಾರದ ರೋಶ್ನಾಬಾದ್ ಹಳ್ಳಿಯಲ್ಲಿರುವ ಹಾಕಿ ಆಟಗಾರ್ತಿ ವಂದನಾ ಕಟಾರಿಯಾ ಅವರ ಮನೆ ಬಳಿ ಹೋಗಿ  ಪಟಾಕಿ ಸಿಡಿಸಿ ಅಣಕು ಆಚರಣೆಯಲ್ಲಿ ನೃತ್ಯ ಮಾಡಿದ್ದಾರೆ ಎಂದು Times of India ವರದಿ ಮಾಡಿದೆ.

ಇಬ್ಬರು ನಮ್ಮ ಕುಟುಂಬಕ್ಕೆ ಜಾತಿ ನಿಂದನೆ ಮಾಡಿದ್ದಾರೆ. ಮಹಿಳಾ ಹಾಕಿ ತಂಡವು ಹಲವು ದಲಿತ ಆಟಗಾರ್ತಿಯರನ್ನು ಹೊಂದಿದ್ದರಿಂದ ಸೋತಿದೆ ಎಂದು ಅವರು ಆರೋಪಿಸಿದ್ದಾರೆ ಎಂದು ವಂದನಾರ ಕುಟುಂಬವು Times of Indiaಕ್ಕೆ ತಿಳಿಸಿದೆ. ಆರೋಪಿಗಳಲ್ಲಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

"ಸೋಲಿನ ನಂತರ ನಾವು ಅಸಮಾಧಾನಗೊಂಡಿದ್ದೇವೆ. ಆದರೆ ತಂಡ ನೀಡಿದ  ಹೋರಾಟಕ್ಕೆ ನಾವು ಹೆಮ್ಮೆಪಡುತ್ತೇವೆ’’ ಎಂದು ವಂದನಾಳ ಸಹೋದರ ಶೇಖರ್ Times of Indiaಗೆ ತಿಳಿಸಿದರು.

"ಇದ್ದಕ್ಕಿದ್ದಂತೆ, ಪಂದ್ಯದ ನಂತರ, ನಾವು ದೊಡ್ಡ ಶಬ್ದಗಳನ್ನು ಕೇಳಿದೆವು. ನಮ್ಮ ಮನೆಯ ಹೊರಗೆ ಪಟಾಕಿ ಸಿಡಿಸಲಾಯಿತು. ನಾವು ಹೊರಗೆ ಹೋದಾಗ, ನಮ್ಮ ಹಳ್ಳಿಯ ಇಬ್ಬರು ಪುರುಷರನ್ನು ನೋಡಿದೆವು.  ಅವರು ಯಾರು ಎಂದು ನಮಗೆ ತಿಳಿದಿದೆ. ಅವರು ಮೇಲ್ಜಾತಿಯವರು. ಅವರು  ನಮ್ಮ ಮನೆಯ ಮುಂದೆ ನೃತ್ಯ ಮಾಡುತ್ತಿದ್ದರು’’ ಎಂದು ಶೇಖರ್ ಹೇಳಿದರು.

"ಅವರು ಜಾತಿ ನಿಂದನೆಗಳನ್ನು ಮಾಡಿದರು. ನಮ್ಮ ಕುಟುಂಬವನ್ನು ಅವಮಾನಿಸಿದರು ಹಾಗೂ  ಹಲವಾರು ದಲಿತರು ತಂಡದಲ್ಲಿ ಸ್ಥಾನ ಪಡೆದಿದ್ದರಿಂದ ಭಾರತೀಯ ತಂಡ ಸೋತಿದೆ ಎಂದು ಅವರು ಹೇಳಿದ್ದರು. ಕೇವಲ ಹಾಕಿ ಮಾತ್ರವಲ್ಲ, ಪ್ರತಿ ಕ್ರೀಡೆಯಲ್ಲಿಯೂ ದಲಿತರನ್ನು ಹೊರಗಿಡಬೇಕು ಎಂದು ಅವರು ಹೇಳಿದ್ದಾಗಿ ಶೇಖರ್ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.

“ದೂರಿನ ಆಧಾರದ ಮೇಲೆ ಎಫ್ಐಆರ್ ಅನ್ನು ಇನ್ನಷ್ಟೇ ದಾಖಲಿಸಬೇಕಿದೆ. ಹೆಸರು ಕೇಳಿ ಬಂದ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ನಾವು ದೂರು ಸ್ವೀಕರಿಸಿದ್ದೇವೆ ಹಾಗೂ ವಿಚಾರಣೆ ನಡೆಯುತ್ತಿದೆ.  ನಂತರ ಪ್ರಕರಣ ದಾಖಲಿಸಲಾಗುವುದು" ಎಂದು ಸಿಡ್ಕಲ್ ಪೊಲೀಸ್ ಠಾಣೆಯ ಎಸ್ಎಚ್ಒ ಎಲ್ಎಸ್ ಬುಟೋಲಾ  Times of Indiaಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News