ಮುಸ್ಲಿಮರಿಗೆ ಮನೆ ನೀಡಿದ್ದಕ್ಕೆ ಸಾಮೂಹಿಕ ವಲಸೆ ಹೋಗುತ್ತೇವೆಂದು ಕಾಲನಿ ನಿವಾಸಿಗಳ ಬೆದರಿಕೆ: ವರದಿ

Update: 2021-08-05 10:40 GMT
Photo: Twitter

ಲಕ್ನೋ: ಪಶ್ಚಿಮ ಉತ್ತರ ಪ್ರದೇಶದ ಮೊರಾದಾಬಾದ್ ನಗರದಲ್ಲಿ ಮಧ್ಯಮವರ್ಗದ ಕುಟುಂಬಗಳೇ ಹೆಚ್ಚಾಗಿ ವಾಸಿಸುವ ಶಿವ್ ಮಂದಿರ್ ಕಾಲನಿಯಲ್ಲಿನ ಎರಡು ಮನೆಗಳನ್ನು ಮುಸ್ಲಿಮರಿಗೆ ಮಾರಾಟ ಮಾಡಿದ ನಂತರ ಅಲ್ಲಿನ ಹೆಚ್ಚಿನ ಕುಟುಂಬಗಳು ತಮ್ಮ ಮನೆಗಳನ್ನು ಮಾರಾಟಕ್ಕಿಟ್ಟಿವೆ ಎಂದು indianexpress.com ವರದಿ ಮಾಡಿದೆ.

ಲಾಜಪತ್ ನಗರ್ ಪ್ರದೇಶದ ಈ ಕಾಲನಿಯ ಪ್ರತಿಯೊಂದು ಮನೆಯ ಎದುರು "ಸಾಮೂಹಿಕ ವಲಸೆ. ಈ ಆಸ್ತಿ ಮಾರಾಟಕ್ಕಿದೆ, ದಯವಿಟ್ಟು ಸಂಪರ್ಕಿಸಿ'' ಎಂದು ಬರೆಯಲಾಗಿರುವ ಪೋಸ್ಟರುಗಳನ್ನು ಕಳೆದ ವಾರ ಹಾಕಲಾಗಿದೆ.

ಕಾಲನಿಯ ಎರಡು ಪ್ರತ್ಯೇಕ ಪ್ರವೇಶ ಸ್ಥಳಗಳಲ್ಲಿರುವ ಹಾಗೂ ಮುಸ್ಲಿಮರಿಗೆ ಮಾರಾಟ ಮಾಡಿರುವ ಎರಡು ಮನೆಗಳು ಈಗ ಬೀಗ ಹಾಕಲ್ಪಟ್ಟ ಸ್ಥಿತಿಯಲ್ಲಿವೆ.

ಎರಡು ಮನೆಗಳನ್ನು ಮುಸ್ಲಿಮರಿಗೆ ಮಾರಾಟ ಮಾಡಿದ್ದನ್ನು ಪ್ರತಿಭಟಿಸಿ ನಿವಾಸಿಗಳು ಪ್ರತಿ ದಿನ ಕಾಲನಿಯಲ್ಲಿರುವ ಶಿವ ಮಂದಿರಲ್ಲಿ ಸಭೆ ಸೇರುತ್ತಿದ್ದಾರೆ. ದೇವಸ್ಥಾನವನ್ನು ರಕ್ಷಿಸುವ ಉದ್ದೇಶವೂ ಪ್ರತಿಭಟನೆಯ ಹಿಂದಿದೆ ಎಂದು indianexpress.com ವರದಿ ಮಾಡಿದೆ.

ಇಲ್ಲಿನ ಬೆಳವಣಿಗೆಯ ಮಾಹಿತಿ ಪಡೆದ ಜಿಲ್ಲಾ ಮ್ಯಾಜಿಸ್ಟ್ರೇಟ್ ಶೈಲೇಂದ್ರ ಕುಮಾರ್ ಸಿಂಗ್  ಮಂಗಳವಾರ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

"ಕಾಲನಿಯಲ್ಲಿ 81 ಮನೆಗಳಿವೆ. ಎರಡು ತಿಂಗಳ ಹಿಂದೆ ಎರಡು ಮನೆಗಳ ಮಾಲೀಕರು ತಮ್ಮ ಮನೆಗಳನ್ನು ಮುಸ್ಲಿಂ ಸಮುದಾಯದವರಿಗೆ ಮಾರಾಟ ಮಾಡಿದ್ದಾರೆ. ತಮ್ಮ ಆಸ್ತಿಯನ್ನು ಯಾರಿಗೆ ಬೇಕಾದರೂ ಯಾರೂ ಮಾರಾಟ ಮಾಡುವುದನ್ನು ತಡೆಯಲು ಸಾಧ್ಯವಿಲ್ಲ. ಮಾರಾಟವಾದ ಮನೆಯನ್ನು ಕೆಲ ಸ್ಥಳೀಯ ನಿವಾಸಿಗಳು ಖರೀದಿಸಲು ಬಯಸಿದ್ದರು ಆದರೆ ಅವು ಅದಾಗಲೇ ಮಾರಾಟವಾಗಿವೆ ಎಂದು ಅವರಿಗೆ ನಂತರ ತಿಳಿಯಿತು,'' ಎಂದು ಸಿಂಗ್ ಹೇಳಿದ್ದಾರೆ.

ತಮ್ಮ ಕಾಲನಿಯಲ್ಲಿನ ಮನೆಗಳನ್ನು ತಮ್ಮ ಅನುಮತಿಯಿಲ್ಲದೆ 'ಹೊರಗಿನವರಿಗೆ' ಮಾರಾಟ ಮಾಡಬಾರದೆಂಬುದು ಇಲ್ಲಿನ ನಿವಾಸಿಗಳ ಬೇಡಿಕೆ ಎಂದು ಪೊಲೀಸರು ಹೇಳಿದ್ದು ಜನರಿಗೆ ಎಲ್ಲಿ ಬೇಕಾದರೂ ವಾಸಿಸುವ ಹಕ್ಕಿನ ಬಗ್ಗೆ ಅಲ್ಲಿನವರಿಗೆ ಮನವರಿಕೆ ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News