ಹರ್ಯಾಣದ ಇಬ್ಬರು ಹಾಕಿ ಆಟಗಾರರಿಗೆ 2.5 ಕೋ.ರೂ.ಬಹುಮಾನ, ಸರಕಾರಿ ಉದ್ಯೋಗ

Update: 2021-08-05 13:45 GMT

ಹೊಸದಿಲ್ಲಿ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಗುರುವಾರ ನಡೆದ ಕಂಚಿನ ಪದಕ ಪಂದ್ಯದಲ್ಲಿ ಜರ್ಮನಿಯನ್ನು 5-4 ರಿಂದ ರೋಚಕವಾಗಿ ಸೋಲಿಸಿದ ರಾಷ್ಟ್ರೀಯ ಪುರುಷರ ಹಾಕಿ ತಂಡದಲ್ಲಿರುವ ಹರ್ಯಾಣ ಹಾಗೂ ಮಧ್ಯಪ್ರದೇಶದ ಆಟಗಾರರಿಗೆ ಉದ್ಯೋಗ ಹಾಗೂ ನಗದು ಬಹುಮಾನ ನೀಡಲಾಗುವುದು ಎಂದು ಎರಡೂ ರಾಜ್ಯ ಸರಕಾರಗಳು ಘೋಷಿಸಿವೆ. ಜರ್ಮನಿ ವಿರುದ್ಧ ಗೆಲುವಿನಿಂದಾಗಿ ಭಾರತದ ಹಾಕಿ ತಂಡವು ಒಲಿಂಪಿಕ್ಸ್ ನಲ್ಲಿ  41 ವರ್ಷಗಳ ಬಳಿಕ ಪದಕ ಜಯಿಸಿತ್ತು.

ಐತಿಹಾಸಿಕ ಗೆಲುವಿನ ಗೌರವಾರ್ಥವಾಗಿ ಪಂಜಾಬ್ ಸರಕಾರ ಈಗಾಗಲೇ ರಾಜ್ಯದ ಆಟಗಾರರಿಗೆ ನಗದು ಬಹುಮಾನವನ್ನು ಘೋಷಿಸಿದೆ. 18 ಜನರ ತಂಡದಲ್ಲಿ ಅವಳಿ ಗೋಲ್ ಗಳಿಸಿರುವ ಸಿಮ್ರಾನ್ ಜಿತ್ ಸಿಂಗ್ ಸೇರಿದಂತೆ 10 ಆಟಗಾರರು ಪಂಜಾಬ್ ನವರಾಗಿದ್ದಾರೆ.

"ಹರ್ಯಾಣ ಸರಕಾರದ ಪರವಾಗಿ ಭಾರತೀಯ ಪುರುಷರ ಹಾಕಿ ತಂಡದಲ್ಲಿರುವ ಹರ್ಯಾಣದ ಇಬ್ಬರೂ ಆಟಗಾರರಿಗೆ ತಲಾ 2.5 ಕೋಟಿ ರೂ. ಬಹುಮಾನವನ್ನು ನೀಡುವುದಾಗಿ ನಾನು ಘೋಷಿಸುತ್ತೇನೆ. ಜೊತೆಗೆ ಕ್ರೀಡಾ ಇಲಾಖೆಯಲ್ಲಿ ಉದ್ಯೋಗ ಹಾಗೂ ರಿಯಾಯಿತಿ ದರದಲ್ಲಿ ಫ್ಲ್ಯಾಟ್ ನೀಡಲಾಗುವುದು" ಎಂದು ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹಾಕಿ ತಂಡದ ಫೋಟೋ ಸಹಿತ ಟ್ವೀಟ್ ಮಾಡಿದ್ದಾರೆ.

ಮಧ್ಯಪ್ರದೇಶದ ಆಟಗಾರರಾದ ವಿವೇಕ್ ಸಾಗರ್ ಹಾಗೂ  ನೀಲಕಂಠ ಅವರು ತಲಾ 1 ಕೋಟಿ ರೂ. ಬಹುಮಾನ  ಪಡೆಯುತ್ತಾರೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸುದ್ದಿ ಸಂಸ್ಥೆ ANI ಗೆ ತಿಳಿಸಿದರು.

"ಮಧ್ಯಪ್ರದೇಶದಲ್ಲಿ ತರಬೇತಿ ಪಡೆದ ಹಾಕಿ ಆಟಗಾರರಾದ ವಿವೇಕ್ ಸಾಗರ್ ಹಾಗೂ ನೀಲಕಂಠ ಅವರಿಗೆ ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್‌ನ ಪ್ರದರ್ಶನಕ್ಕಾಗಿ ತಲಾ 1 ಕೋಟಿ ರೂ. ಬಹುಮಾನ ನೀಡಲಾಗುವುದು" ಎಂದು ಚೌಹಾಣ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News