ಫ್ಯೂಚರ್ ಗ್ರೂಪ್ ಸ್ವತ್ತು ಮಾರಾಟ ವಿವಾದ: ರಿಲಯನ್ಸ್ ಗೆ ಹಿನ್ನಡೆ, ಅಮೆಝಾನ್ ಪರ ಸುಪ್ರೀಂ ನಿರ್ಧಾರ

Update: 2021-08-06 17:43 GMT


ಹೊಸದಿಲ್ಲಿ,ಆ.6: ಫ್ಯೂಚರ್ ಗ್ರೂಪ್ನ ಚಿಲ್ಲರೆ ಉದ್ಯಮದ ಆಸ್ತಿಗಳನ್ನು 3.4 ಶತಕೋಟಿ ಡಾ.ಗಳಿಗೆ ಖರೀದಿಸುವ ಒಪ್ಪಂದವನ್ನು ರಿಲಯನ್ಸ್ ಮುಂದುವರಿಸುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಮಹತ್ವದ ತೀರ್ಪನ್ನು ನೀಡಿದ್ದು,ಇದರೊಂದಿಗೆ ಅಮೆರಿಕ ಮೂಲಕದ ಅಮೆಝಾನ್ ಭಾರೀ ಗೆಲುವನ್ನು ಸಾಧಿಸಿದೆ. ಜೆಫ್ ಬೆರೆಸ್ ಮತ್ತು ಮುಕೇಶ ಅಂಬಾನಿ ಅವರ ನಡುವಿನ ಕಾನೂನು ಸಮರದಲ್ಲಿ ಫ್ಯೂಚರ್ನೊಂದಿಗಿನ ಒಪ್ಪಂದಕ್ಕೆ ತಡೆಯನ್ನು ನೀಡಿದ್ದ ಸಿಂಗಾಪುರದ ತುರ್ತು ಮಧ್ಯಸ್ಥಿಕೆ ನ್ಯಾಯಾಧಿಕರಣದ ನಿರ್ಧಾರವನ್ನು ಸರ್ವೋಚ್ಚ ನ್ಯಾಯಾಲಯವು ಬೆಂಬಲಿಸಿದೆ.

ಕಳೆದ ವರ್ಷ ತನ್ನ ಚಿಲ್ಲರೆ ಉದ್ಯಮದ ಆಸ್ತಿಗಳನ್ನು ರಿಲಯನ್ಸ್ಗೆ 24,731 ಕೋ.ರೂ.ಗಳಿಗೆ ಮಾರಾಟ ಮಾಡಲು ಒಪ್ಪಿಕೊಳ್ಳುವ ಮೂಲಕ ತನ್ನ ಪಾಲುದಾರ ಫ್ಯೂಚರ್ ಗ್ರೂಪ್ ತನ್ನೊಂದಿಗೆ ಮಾಡಿಕೊಂಡಿದ್ದ ಒಪ್ಪಂದಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಅಮೆಝಾನ್ ನ್ಯಾಯಾಲಯದ ಮೆಟ್ಟಿಲನ್ನೇರಿತ್ತು. ಫ್ಯೂಚರ್ ರಿಟೇಲ್ನಲ್ಲಿ ಶೇ.9.8ರಷ್ಟು ಶೇರುಗಳನ್ನು ಹೊಂದಿರುವ ಫ್ಯೂಚರ್ ಕೂಪನ್ಸ್ ಲಿ.ನಲ್ಲಿ ಶೇ.49ರಷ್ಟು ಪಾಲುದಾರಿಕೆಯನ್ನು ಅಮೆಝಾನ್ ಹೊಂದಿದೆ.

ಸಿಂಗಾಪುರ ತುರ್ತು ಮಧ್ಯಸ್ಥಿಕೆ ನ್ಯಾಯಾಧಿಕರಣವು 2020 ಅಕ್ಟೋಬರ್ನಲ್ಲಿ ರಿಲಯನ್ಸ್ ರಿಟೇಲ್ನೊಂದಿಗೆ ವಿಲೀನಗೊಳ್ಳುವುದನ್ನು ಮುಂದುವರಿಸದಂತೆ ಫ್ಯೂಚರ್ ರಿಟೇಲ್ ಅನ್ನು ನಿರ್ಬಂಧಿಸಿತ್ತು. ಈ ನಿರ್ಧಾರವು ಸಿಂಧುವಾಗಿದೆ ಮತ್ತು ಅನುಷ್ಠಾನಿಸಬಹುದಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಹೇಳಿದೆ.

ಪ್ರಕರಣದ ವಿಚಾರಣೆ ನಡೆಸಿದ್ದ ಮೂವರು ಸದಸ್ಯರ ಮಧ್ಯಸ್ಥಿಕೆ ನ್ಯಾಯಾಧಿಕರಣವು ರಿಲಯನ್ಸ್-ಫ್ಯೂಚರ್ ಒಪ್ಪಂದದ ಕುರಿತು ತನ್ನ ಅಂತಿಮ ನಿರ್ಧಾರವನ್ನು ಇನ್ನಷ್ಟೇ ಪ್ರಕಟಿಸಬೇಕಿದೆ.
 
ನ್ಯಾಯಾಧಿಕರಣದ ನಿರ್ಧಾರದ ಅನುಷ್ಠಾನವನ್ನು ಕೋರಿ ಅಮೆಝಾನ್ ದಿಲ್ಲಿ ಉಚ್ಚ ನ್ಯಾಯಾಲಯದ ಮೊರೆ ಹೋಗಿತ್ತು. ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಆದೇಶಿಸಿದ್ದ ಏಕ ನ್ಯಾಯಾಧೀಶ ಪೀಠವು ಫ್ಯೂಚರ್ ಗ್ರೂಪ್ ನ ಕಿಶೋರ್ ಬಿಯಾನಿಯವರ ಆಸ್ತಿಗಳನ್ನು ಜಫ್ತಿ ಮಾಡುವಂತೆ ನಿರ್ದೇಶಿಸಿತ್ತಲ್ಲದೆ,ಅವರಿಗೇಕೆ ಮೂರು ತಿಂಗಳ ಜೈಲುಶಿಕ್ಷೆಯನ್ನು ವಿಧಿಸಬಾರದು ಎಂದು ಪ್ರಶ್ನಿಸಿತ್ತು.

ಫ್ಯೂಚರ್ ಗ್ರೂಪ್-ರಿಲಯನ್ಸ್ ನಡುವಿನ ಒಪ್ಪಂದವನ್ನು ನಿರ್ಬಂಧಿಸಿದ್ದ ಏಕ ನ್ಯಾಯಾಧಿಶ ಪೀಠದ ಆದೇಶಕ್ಕೆ ದಿಲ್ಲಿ ಉಚ್ಚ ನ್ಯಾಯಾಲಯದ ವಿಶಾಲ ಪೀಠವು ಫೆಬ್ರವರಿಯಲ್ಲಿ ತಡೆಯಾಜ್ಞೆ ನೀಡಿತ್ತು. ಇದನ್ನು ಅಮೆಝಾನ್ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು.

ದಿಲ್ಲಿ ಉಚ್ಚ ನ್ಯಾಯಾಲಯದ ಆದೇಶವು ‘ಕಾನೂನು ಬಾಹಿರ ’ ಮತ್ತು ‘ನಿರಂಕುಶ ’ವಾಗಿದೆ ಮತ್ತು ಸರ್ವೋಚ್ಚ ನ್ಯಾಯಾಲಯವು ಮಧ್ಯ ಪ್ರವೇಶಿಸದಿದ್ದರೆ ಭಾರತದಲ್ಲಿ 6.5 ಶತಕೋಟಿ ಡಾ.ಹೂಡಿಕೆಗಳಿಗೆ ಬದ್ಧವಾಗಿರುವ ಕಂಪನಿಯು ಸರಿಪಡಿಸಲಾಗದಷ್ಟು ಹಾನಿಯನ್ನು ಎದುರಿಸಬೇಕಾಗುತ್ತದೆ ಎಂದು ಅಮೆಝಾನ್ ವಾದಿಸಿತ್ತು.

ಫ್ಯೂಚರ್ ನ ಆಸ್ತಿಗಳ ಕುರಿತು ಕಾನೂನು ಸಮರವು ವಿಶ್ವದ ಇಬ್ಬರು ಭಾರೀ ಸಿರಿವಂತ ವ್ಯಕ್ತಿಗಳಾದ ಬೆರೆಸ್ ಮತ್ತು ಅಂಬಾನಿ ಅವರನ್ನು ಭಾರತದ ಬೃಹತ್ ಚಿಲ್ಲರೆ ವ್ಯಾಪಾರ ಕ್ಷೇತ್ರದ ಮೇಲೆ ಪ್ರಾಬಲ್ಯ ಸಾಧಿಸಲು ಪರಸ್ಪರರ ವಿರುದ್ಧ ಹೋರಾಟಕ್ಕಿಳಿಯುವಂತೆ ಮಾಡಿತ್ತು.

ತಾನು 2019ರಲ್ಲಿ ಫ್ಯೂಚರ್ ಜೊತೆ ಮಾಡಿಕೊಂಡಿದ್ದ ಒಪ್ಪಂದದಲ್ಲಿ ರಿಲಯನ್ಸ್ ಸೇರಿದಂತೆ ‘ನಿರ್ಬಂಧಿತ ವ್ಯಕ್ತಿಗಳ ’ಪಟ್ಟಿಯಲ್ಲಿನ ಯಾರಿಗೂ ಅದು ತನ್ನ ಆಸ್ತಿಗಳನ್ನು ಮಾರಾಟ ಮಾಡುವಂತಿಲ್ಲ ಎಂಬ ನಿಬಂಧನೆಯು ಸೇರಿದೆ ಎಂದು ಅಮೆಝಾನ್ ವಾದಿಸಿತ್ತು.
1,700ಕ್ಕೂ ಅಧಿಕ ಮಳಿಗೆಗಳೊಂದಿಗೆ ಭಾರತದ ಎರಡನೇ ಅತಿ ದೊಡ್ಡ ಚಿಲ್ಲರೆ ವ್ಯಾಪಾರ ಸಂಸ್ಥೆಯಾಗಿರುವ ಫ್ಯೂಚರ್,ರಿಲಯನ್ ಜೊತೆ ತನ್ನ ಒಪ್ಪಂದವು ವಿಫಲಗೊಂಡರೆ ತಾನು ದಿವಾಳಿತನಕ್ಕೆ ತಳ್ಳಲ್ಪಡುತ್ತೇನೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News