ತಂತ್ರಾಂಶ ಪರಿಶೀಲನೆಯಲ್ಲಿ ನ್ಯೂನತೆಗಳಿದ್ದ ಇವಿಎಂ, ವಿವಿಪ್ಯಾಟ್ ಗಳ ಸಂಖ್ಯೆ ಬಹಿರಂಗಕ್ಕೆ ಸಿಐಸಿ ಆದೇಶ

Update: 2021-08-08 15:00 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಆ.8: ಮಾನಕೀಕರಣ,ಪರೀಕ್ಷಣೆ ಮತ್ತು ಗುಣಮಟ್ಟ ಪ್ರಮಾಣೀಕರಣ (ಎಸ್ಟಿಕ್ಯೂಸಿ) ನಿರ್ದೇನಾಲಯವು ನಡೆಸಿದ್ದ ತಂತ್ರಾಂಶ ಪರೀಕ್ಷೆ ಮತ್ತು ವೌಲ್ಯಮಾಪನ ಸಂದರ್ಭದಲ್ಲಿ ದೋಷಗಳು ಮತ್ತು ನ್ಯೂನತೆಗಳು ಕಂಡುಬಂದಿದ್ದ ವಿದ್ಯುನ್ಮಾನ ಮತದಾನ ಯಂತ್ರ (ಇವಿಎಂ)ಗಳು ಮತ್ತು ವಿವಿಪ್ಯಾಟ್ ಗಳ ಒಟ್ಟು ಸಂಖ್ಯೆಯನ್ನು ಬಹಿರಂಗಗೊಳಿಸುವಂತೆ ಕೇಂದ್ರೀಯ ಮಾಹಿತಿ ಆಯೋಗ (ಸಿಐಸಿ)ವು ಆದೇಶಿಸಿದೆ.

ವೆಂಕಟೇಶ ನಾಯಕ್ ಎನ್ನುವವರು ಆರ್ಟಿಐ ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸಿಐಸಿಯ ಈ ತೀರ್ಪು ಹೊರಬಿದ್ದಿದೆ.

2019ರ ಲೋಕಸಭಾ ಚುನಾವಣೆಗಳಲ್ಲಿ ಬಳಕೆಯಾಗಿದ್ದ ಇಸಿಐಎಲ್ ಮತ್ತು ಬಿಇಎಲ್ ತಯಾರಿಕೆಯ ಎಂ3 ಮತ್ತು ಎಂ2 ಪೀಳಿಗೆಯ ಇವಿಎಮ್ಗಳು ಮತ್ತು ವಿವಿಪ್ಯಾಟ್ ಘಟಕಗಳ ತಂತ್ರಾಂಶ ಪರಿಶೀಲನೆಗೆ ಸಂಬಂಧಿಸಿದ ಮಾಹಿತಿಯನ್ನು ಮತ್ತು ನ್ಯೂನತೆಗಳು ಕಂಡು ಬಂದಿದ್ದ ಯಂತ್ರಗಳ ಒಟ್ಟು ಸಂಖ್ಯೆಯನ್ನು ಕೋರಿ ನಾಯಕ್ ಎಸ್ಟಿಕ್ಯೂಸಿ ನಿರ್ದೇಶನಾಲಯಕ್ಕೆ ಈ ಅರ್ಜಿಯನ್ನು ಸಲ್ಲಿಸಿದ್ದರು.

ಗೌಪ್ಯ ಮಾಹಿತಿಗಳ ಬಹಿರಂಗಕ್ಕೆ ವಿನಾಯಿತಿ ನೀಡಿರುವ ಆರ್ಟಿಐ ಕಾಯ್ದೆಯ ಕಲಂ 8(1)(ಡಿ) ಅನ್ನು ಉಲ್ಲೇಖಿಸಿ ನಿರ್ದೇಶನಾಲಯವು ಮಾಹಿತಿಗಳನ್ನು ನೀಡಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ನಾಯಕ್ ಸಿಐಸಿ ಮೆಟ್ಟಿಲನ್ನೇರಿದ್ದರು.

ಪರೀಕ್ಷೆಗೊಳಪಡಿಸಲಾದ ಯಂತ್ರಗಳು ಮತ್ತು ನ್ಯೂನತೆಗಳು ಕಂಡು ಬಂದ ಯಂತ್ರಗಳ ಒಟ್ಟು ಸಂಖ್ಯೆಗೆ ಸಂಬಂಧಿಸಿದಂತೆ ಮಾಹಿತಿ ಆಯುಕ್ತೆ ವನಜಾ ಎನ್.ಸರ್ನಾ ಅವರು,ನಾಯಕ್ ಅವರ ಅರ್ಜಿಯು ಸಮರ್ಥನೀಯವಾಗಿದೆ,ಅವರು ಸಂಖ್ಯಾಶಾಸ್ತ್ರೀಯ ಮಾಹಿತಿಯನ್ನು ಕೋರಿದ್ದಾರೆ ಮತ್ತು ಈ ಸಂಖ್ಯೆಗಳ ಬಹಿರಂಗಕ್ಕೆ ಯಾವುದೇ ವಿನಾಯಿತಿಯು ಅನ್ವಯಿಸುವುದಿಲ್ಲ ಎಂದು ತನ್ನ ತೀರ್ಪಿನಲ್ಲಿ ಹೇಳಿದ್ದಾರೆ.

ನಾಯಕ್ ಅವರು ಈ ಯಂತ್ರಗಳ ತಂತ್ರಾಂಶ ಪರಿಶೀಲನೆಯನ್ನು ನಡೆಸಿದ್ದ ಎಸ್ಟಿಕ್ಯೂಸಿ ಅಧಿಕಾರಿಗಳ ಹೆಸರುಗಳು,ಪರಿಶೀಲನೆ ನಡೆಸಲಾದ ಸ್ಥಳಗಳು ಮತ್ತು ದಿನಾಂಕಗಳನ್ನೂ ಕೋರಿದ್ದರು. ಪರಿಶೀಲನಾ ಅಧಿಕಾರಿಗಳ ಹೆಸರುಗಳು ಮತ್ತು ಹುದ್ದೆಯ ವಿವರಗಳನ್ನು ತಡೆಹಿಡಿಯಲು ಸಿಐಸಿಯು ಎಸ್ಟಿಕ್ಯೂಸಿಗೆ ಅನುಮತಿ ನೀಡಿದೆಯಾದರೂ ಪರಿಶೀಲನೆಯ ದಿನಾಂಕಗಳು ಮತ್ತು ಸ್ಥಳಗಳ ವಿವರಗಳನ್ನು ಬಹಿರಂಗಗೊಳಿಸುವಂತೆ ಸೂಚಿಸಿದೆ.
ಚುನಾವಣೆಗಳಲ್ಲಿ ಇವಿಎಂ ಬಳಕೆಯು ರಾಜಕೀಯ ಪಕ್ಷಗಳಲ್ಲಿ ಮತ್ತು ಜನರ ನಡುವೆ ಬಿಸಿಚರ್ಚೆಯ ವಿಷಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News