ಮಧ್ಯಪ್ರದೇಶ ಪ್ರವಾಹ: ಸಾವಿನ ಸಂಖ್ಯೆ 24ಕ್ಕೇರಿಕೆ

Update: 2021-08-08 17:08 GMT
ಸಾಂದರ್ಭಿಕ ಚಿತ್ರ

ಭೋಪಾಲ,ಆ.8: ಕಳೆದೊಂದು ವಾರದಿಂದಲೂ ಸುರಿಯುತ್ತಿರುವ ಭಾರೀಮಳೆಯಿಂದಾಗಿ ಮಧ್ಯಪ್ರದೇಶದ ಚಂಬಲ್-ಗ್ವಾಲಿಯರ್ ಪ್ರದೇಶದಲ್ಲಿ ಪ್ರವಾಹ ಸಂಬಂಧಿತ ಘಟನೆಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ ರವಿವಾರ 24ಕ್ಕೇರಿದೆ. ‌

ಗ್ವಾಲಿಯರ್,ಶಿವಪುರಿ,ಗುಣಾ,ಶೇವೊಪುರ,ದಾತಿಯಾ, ಅಶೋಕನಗರ,ಭಿಂದ್ ಮತ್ತು ಮೊರೆನಾ ಜಿಲ್ಲೆಗಳ ಸುಮಾರು 1,250 ಗ್ರಾಮಗಳು ಈಗಲೂ ಸಂಕಷ್ಟದಲ್ಲಿವೆ. ಗುಣಾ ಜಿಲ್ಲೆಯ ಸುಂದಾ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಪಾರ್ವತಿ ನದಿಯು ಉಕ್ಕಿ ಹರಿದಿದ್ದರಿಂದ ಸುಮಾರು 145 ಜನರು ತಮ್ಮ ಮನೆಗಳಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಶನಿವಾರ ಹೆಲಿಕಾಪ್ಟರ್ಗಳು ಮತ್ತು ಬೋಟ್ ಗಳೊಂದಿಗೆ ಯಶಸ್ವಿ ಕಾರ್ಯಾಚರಣೆಯನ್ನು ನಡೆಸಿದ ರಕ್ಷಣಾ ತಂಡಗಳು ಅವರನ್ನು ರಕ್ಷಿಸಿ ರಾಜಸ್ಥಾನದ ಛಾಬ್ರಾಕ್ಕೆ ಸ್ಥಳಾಂತರಿಸಿವೆ.
 
ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುವ ಎನ್ಆರ್ಡಿಎಫ್,ಎಸ್ಆರ್ಡಿಎಫ್,ಸೇನೆ ಮತ್ತು ವಾಯುಪಡೆ ಈವರೆಗೆ ನೆರೆಯಲ್ಲಿ ಸಿಲುಕಿದ್ದ 8,800 ಜನರನ್ನು ರಕ್ಷಿಸಿವೆ. 29,000 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿದೆ. ನೆರೆಯಿಂದಾಗಿ ರಾಜ್ಯದಲ್ಲಿ ಅಪಾರ ಹಾನಿ ಸಂಭವಿಸಿದ್ದು,25,000ಕ್ಕೂ ಅಧಿಕ ಮನೆಗಳು ಮತ್ತು ಕಟ್ಟಡಗಳಿಗೆ ಹಾನಿಯುಂಟಾಗಿದೆ. ನದಿಯ ನೀರಿನ ರಭಸಕ್ಕೆ ಆರು ಸೇತುವೆಗಳು ಕೊಚ್ಚಿಹೋಗಿವೆ.
 
ಗ್ವಾಲಿಯರ್ ಮತ್ತು ಚಂಬಲ್ ವಿಭಾಗಗಳಲ್ಲಿ ನೆರೆ ಸ್ಥಿತಿಯಲ್ಲಿ ಈಗ ಸುಧಾರಣೆಯಾಗಿದ್ದು ಜೀವಹಾನಿ ಬೆದರಿಕೆಯ ಪರಿಸ್ಥಿತಿಯಲ್ಲ ಎಂದು ವಿಭಾಗಾಧಿಕಾರಿ ಆಶಿಷ್ ಸಕ್ಸೇನಾ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಈ ನಡುವೆ ರಾಜ್ಯದಲ್ಲಿನ ಬಿಜೆಪಿ ಆಡಳಿತದ ವಿರುದ್ಧ ದಾಳಿ ನಡೆಸಿದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಕಮಲನಾಥ ಅವರು,ಮಳೆ ಮತ್ತು ನೆರೆಯಿಂದಾಗಿ ಜನರು ಸಂಕಷ್ಟದಲ್ಲಿದ್ದರೆ ಶಿವರಾಜ ಸಿಂಗ್ ಚೌಹಾಣ ನೇತೃತ್ವದ ಸರಕಾರವು ರಾಜಕೀಯದಲ್ಲಿ ವ್ಯಸ್ತವಾಗಿದೆ ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News