ಒಲಿಂಪಿಕ್ಸ್ ಚಿನ್ನದ ಪದಕಕ್ಕೆ ‘ತಂದೆ’ಯರಾಗುವ ಮುನ್ನ....!

Update: 2021-08-09 09:21 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ರೈತನ ಮಗನೊಬ್ಬ ಎಸೆದ ಈಟಿ, ಒಲಿಂಪಿಕ್ಸ್‌ನ ಚಿನ್ನದ ಪದಕವನ್ನು ಗೆದ್ದಿದೆ. ಹರ್ಯಾಣದ ಪಾಣಿಪತ್‌ನ ರೈತನೊಬ್ಬನ ಮಗನಾದ ನೀರಜ್ ಚೋಪ್ರಾ ಅವರು ಟೋಕಿಯೊ ಒಲಿಂಪಿಕ್ಸ್‌ನ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಗೆದ್ದ ಮೊದಲ ಚಿನ್ನ ಇದಾಗಿದ್ದರೆ, ಒಲಿಂಪಿಕ್ಸ್ ಇತಿಹಾಸದಲ್ಲಿ ಗೆದ್ದ ಎರಡನೇ ಚಿನ್ನ ಇದು ಎನ್ನುವುದಕ್ಕಾಗಿ ನಾವು ಏಕಕಾಲದಲ್ಲಿ ಸಂಭ್ರಮ ಮತ್ತು ವಿಷಾದವನ್ನು ವ್ಯಕ್ತಪಡಿಸಬೇಕಾಗಿದೆ. ವಿಶ್ವದ ಹಲವು ಬಡ ರಾಷ್ಟ್ರಗಳೂ ಒಲಿಂಪಿಕ್ಸ್‌ನಲ್ಲಿ ಸಾಲು ಸಾಲು ಚಿನ್ನಗಳನ್ನು ತನ್ನದಾಗಿಸಿಕೊಂಡು ಸಂಭ್ರಮಿಸುತ್ತಿರುವಾಗ, ಜಗತ್ತಿನಲ್ಲೇ ಹೆಚ್ಚು ಮಾನವ ಸಂಪನ್ಮೂಲಗಳನ್ನು ಹೊಂದಿರುವ ಭಾರತ ಒಲಿಂಪಿಕ್ಸ್ ನಲ್ಲಿ ಬರೇ ಎರಡು ಚಿನ್ನಗಳನ್ನಷ್ಟೇ ತನ್ನದಾಗಿಸಿಕೊಂಡಿದೆಯೆನ್ನುವುದು ಮುಜುಗರದ ವಿಷಯವೂ ಹೌದು. ಇದೇ ಸಂದರ್ಭದಲ್ಲಿ, ಕ್ರೀಡಾ ರಾಜಕಾರಣದ ಎಲ್ಲ ಅಡೆತಡೆಗಳನ್ನು ಮೀರಿ, ನಮ್ಮ ಪ್ರತಿಭಾವಂತ ಯುವಕರು ಎರಡು ಚಿನ್ನವನ್ನಾದರೂ ತಂದುಕೊಟ್ಟರಲ್ಲ ಎಂದು ನಾವು ಸಂಭ್ರಮಿಸಬೇಕಾಗಿದೆ.

ಚಾನು ಮತ್ತು ದಹಿಯಾ ತಂದು ಕೊಟ್ಟ ಬೆಳ್ಳಿ, ಇದೇ ಸಂದರ್ಭದಲ್ಲಿ ಐತಿಹಾಸಿಕವಾಗಿ ಹಾಕಿ ತಂಡ ಗೆದ್ದ ಕಂಚಿನ ಪದಕದ ಬಳಿಕ, ಚೋಪ್ರಾ ಭಾರತದ ಚಿನ್ನದ ಕನಸನ್ನೂ ನನಸಾಗಿಸಿದರು. ಇದೇ ಸಂದರ್ಭದಲ್ಲಿ ಸೋಲಿನಲ್ಲೂ ಭಾರತೀಯರ ಮನವನ್ನು ಗೆದ್ದ, ಮಹಿಳಾ ಹಾಕಿ ತಂಡದ ಸಾಧನೆಯನ್ನು ಮರೆಯುವಂತಿಲ್ಲ. ಕ್ರಿಕೆಟ್‌ಗೆ ಹೋಲಿಸಿದರೆ ಭಾರತ ಅತ್ಲೆಟಿಕ್ ಕುರಿತಂತೆ ಹೊಂದಿರುವ ತಾತ್ಸಾರದ ನಡುವೆಯೇ ಇವರೆಲ್ಲರೂ ಸಾಧನೆಗಳನ್ನು ಮಾಡಿದ್ದಾರೆ. ಒಂದು ರೀತಿಯಲ್ಲಿ ಇವರೆಲ್ಲರೂ ಬೆಂಕಿಯಲ್ಲಿ ಅರಳಿದ ಹೂವುಗಳು. ‘ಸೋಲು ಅನಾಥ, ಗೆಲುವಿಗೆ ಹಲವು ತಂದೆಯರು’ ಎನ್ನುವ ಆಡು ಮಾತೊಂದಿದೆ. ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಗೆದ್ದ ಆಟಗಾರರ ಪದಕಗಳೊಂದಿಗೆ ಹಕ್ಕು ಸಾಧಿಸಲು ರಾಜಕಾರಣಿಗಳು ಯತ್ನಿಸಿದ್ದಾರೆ. ಇದನ್ನು ಸರಕಾರದ ಸಾಧನೆಯಾಗಿಯೂ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಒಂದೆಡೆ, ಪ್ರಧಾನಿಯವರು ‘ಅಭಿನಂದಿಸುವ’ ನೆಪದಲ್ಲಿ ರಾಜಕೀಯ ಮೇಲೋಡ್ರಾಮಗಳನ್ನು ನಡೆಸುತ್ತಿದ್ದರೆ, ಮಗದೊಂದೆಡೆ ‘ಪ್ರಧಾನಿಯೇ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಚಿನ್ನ, ಕಂಚು ಗೆದ್ದರೋ’ ಎಂಬಂತೆ ನಕಲಿ ಸ್ಕ್ರೀನ್ ಶಾಟ್‌ಗಳನ್ನು ಹರಿಯಬಿಡಲಾಗುತ್ತಿದೆ.

ಕ್ರೀಡಾಪಟುಗಳ ಸಾಧನೆಗೆ ಪ್ರಧಾನಿ ಮೋದಿಯೇ ಕಾರಣ ಎಂದೆಲ್ಲ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ. ಹಾಕಿ ತಂಡವನ್ನು ಮೋದಿಯವರು ಅಭಿನಂದಿಸಿ ಮಾತನಾಡುವಾಗ, ಅದರೊಂದಿಗೆ ಅನಗತ್ಯ ರಾಜಕೀಯ ಹೇಳಿಕೆಗಳನ್ನು ಸೇರಿಸಿದರು. ವಿರೋಧ ಪಕ್ಷಗಳನ್ನು ನಿಂದಿಸುವುದಕ್ಕೆ ಬಳಸಿಕೊಂಡರು. ನಿಜಕ್ಕೂ, ಇದು ಕ್ರೀಡಾ ವೌಲ್ಯಗಳಿಗೆ ಮಾಡಿದ ಅಪಮಾನವಾಗಿದೆ. ಕ್ರೀಡೆ ಎಲ್ಲ ಜಾತಿ, ಧರ್ಮ, ರಾಜಕೀಯಗಳನ್ನು ಮೀರಿದ್ದು. ಇದನ್ನು ಅರ್ಥಮಾಡಿಕೊಳ್ಳದ ರಾಜಕಾರಣಿಗಳಷ್ಟೇ ಕ್ರೀಡಾ ಸಾಧನೆಗಳಲ್ಲೂ ರಾಜಕೀಯದ ಮೀಸೆಯನ್ನು ತುರುಕಿಸುವ ಪ್ರಯತ್ನವನ್ನು ಮಾಡುತ್ತಾರೆ.

ಇಷ್ಟಕ್ಕೂ, ಕ್ರೀಡಾ ಸಾಧಕರ ಸಾಧನೆಗಳಿಗೆ ತಮ್ಮ ಕೊಡುಗೆಯೇನು ಎನ್ನುವುದರ ಕುರಿತ ಕನಿಷ್ಠ ಆತ್ಮವಿಮರ್ಶೆಯನ್ನಾದರೂ ಆಳುವವರು ಮಾಡಬೇಕು. ಕನಿಷ್ಠ ಮೋದಿ ಸರಕಾರ ಅತ್ಲೆಟಿಕ್ಸ್‌ಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿಶೇಷ ಕೊಡುಗೆಗಳನ್ನು, ಅನುದಾನಗಳನ್ನು, ಯೋಜನೆಗಳನ್ನು ಘೋಷಿಸಿದ್ದಿದ್ದರೆ ಇಂದು ಅದನ್ನು ರಾಜಕೀಯಗೊಳಿಸುವುದನ್ನು ಒಂದಿಷ್ಟಾದರೂ ಸಹಿಸಬಹುದಿತ್ತು. ಆದರೆ, ಸರಕಾರ ಹೆಚ್ಚುವರಿ ಪ್ರೋತ್ಸಾಹ ಧನವನ್ನು ನೀಡುವುದಿರಲಿ, ಕ್ರೀಡಾ ಬಜೆಟ್‌ನಲ್ಲಿ 230 ಕೋಟಿ ರೂಪಾಯಿ ಅನುದಾನವನ್ನು ಕಡಿತಗೊಳಿಸಿತ್ತು. ಖೇಲೋ ಇಂಡಿಯಾಗೆ ನೀಡುತ್ತಿದ್ದ ಅನುದಾನದಲ್ಲಿ 232 ಕೋಟಿ ರೂಪಾಯಿಯನ್ನು ಕಡಿತಗೊಳಿಸಿತ್ತು. ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿಗೆ ನೀಡುತ್ತಿದ್ದ ಅನುದಾನದಲ್ಲಿ ಶೇ. 50ರಷ್ಟು ಕಡಿತ ಮಾಡಿತ್ತು. ಕಾಮನ್‌ವೆಲ್ತ್ ಗೇಮ್ಸ್ ಸ್ಟೇಡಿಯಂ ಆಧುನೀಕರಣ ಅನುದಾನವನ್ನು 75 ಕೋಟಿ ರೂಪಾಯಿಂದ 30 ಕೋಟಿ ರೂಪಾಯಿಗೆ ಇಳಿಸಿತ್ತು. ಇದೇ ಸಂದರ್ಭದಲ್ಲಿ, ಗುಜರಾತ್‌ನಲ್ಲಿ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಮೈದಾನಕ್ಕೆ ಹಣವನ್ನು ಸುರಿದು, ಅದಕ್ಕೆ ತನ್ನ ಹೆಸರನ್ನು ನಾಮಕರಣಗೊಳಿಸಿದ ಹೆಮ್ಮೆ ಪ್ರಧಾನಿ ಮೋದಿಯವರದು. ಇದೀಗ, ತಾನೇ ಒಲಿಂಪಿಕ್ಸ್‌ನಲ್ಲಿ ಆಟವಾಡಿ ಪದಕ ಗೆದ್ದವರಂತೆ ಮಾಧ್ಯಮಗಳಲ್ಲಿ ಮಿಂಚಲು ಹೋಗಿ ತೀವ್ರ ಟೀಕೆಗೆ ಈಡಾಗಿದ್ದಾರೆ.

ಭಾರತಕ್ಕೆ ಚಿನ್ನ ತಂದುಕೊಟ್ಟ ಜಾವೆಲಿನ್ ವಿಭಾಗಕ್ಕೆ ನಮ್ಮ ವ್ಯವಸ್ಥೆ ಎಷ್ಟರಮಟ್ಟಿಗೆ ಪ್ರೋತ್ಸಾಹ ನೀಡಿದೆ ಎಂದು ಅವಲೋಕಿಸಿದರೆ ನಿರಾಸೆಯಾಗುತ್ತದೆ. ಈ ಬಗ್ಗೆ ಕಳೆದ ಜೂನ್ ತಿಂಗಳಲ್ಲೇ ಜಾವೆಲಿನ್ ಕೋಚ್ ಉವೆ ಹೋನ್ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ‘ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಅತ್ಲೀಟ್‌ಗಳನ್ನು ಸಮರ್ಪಕವಾಗಿ ಸಿದ್ಧಗೊಳಿಸುವಲ್ಲಿ ದೇಶದ ಕ್ರೀಡಾ ಸಂಸ್ಥೆಗಳು ಸಂಪೂರ್ಣವಾಗಿ ವಿಫಲವಾಗಿವೆ’ ಎಂದು ಅವರು ಬಹಿರಂಗ ಹೇಳಿಕೆ ನೀಡಿದ್ದರು. ‘ತನ್ನ ಅತ್ಲ್ಲೀಟ್‌ಗಳಿಗೆ ಬೇಕಾದ ದೈಹಿಕ ಪೌಷ್ಟಿಕತೆಯನ್ನು ನೀಡಲು ತನಗೆ ಸಾಧ್ಯವಾಗುತ್ತಿಲ್ಲ’ ಎಂದೂ ಅವರು ಆರೋಪಿಸಿದ್ದರು. ‘ಕ್ರೀಡಾ ಸಂಸ್ಥೆಗಳಿಗೆ ಈ ಕುರಿತಂತೆ ನಿರ್ಲಕ್ಷವಿದೆಯೋ ಅಥವಾ ಅವರಿಗೆ ಆ ಕುರಿತಂತೆ ಅರಿವೇ ಇಲ್ಲವೋ ಎನ್ನುವುದು ನನಗೆ ಗೊತ್ತಿಲ್ಲ. ನಾನು ಇಲ್ಲಿಗೆ ಬರುವಾಗ ಏನಾದರೂ ಬದಲಾವಣೆ ತರಬಹುದು ಎಂಬ ಆತ್ಮವಿಶ್ವಾಸದೊಂದಿಗೆ ಬಂದಿದ್ದೆ. ಆದರೆ ಅದು ಸಾಧ್ಯವಾಗುತ್ತದೆ ಎಂದು ಅನ್ನಿಸುತ್ತಿಲ್ಲ’ ಎಂದೂ ಮಾಧ್ಯಮಗಳಿಗೆ ಅವರು ಹೇಳಿಕೆ ನೀಡಿದ್ದರು. ಅವರು ಆ ಹೇಳಿಕೆ ನೀಡಿದಾಗ, ನಮ್ಮ ಕ್ರೀಡಾಳು ಜಾವೆಲಿನ್ ಥ್ರೋದಲ್ಲಿ ಚಿನ್ನ ಗಳಿಸಬಹುದು ಎಂದು ಯಾರೂ ಎಣಿಸಿಯೇ ಇರಲಿಲ್ಲ. ಎಲ್ಲ ಅಡೆತಡೆಗಳನ್ನು ಮೀರಿ, ಕ್ರೀಡಾಳು ಚೋಪ್ರಾ ತನ್ನ ಈಟಿಯನ್ನು ಎಸೆದು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರು. ಗೆದ್ದ ಬಳಿಕ ದೇಶದ ವಿವಿಧೆಡೆಗಳಿಂದ ಅವರಿಗೆ ಕೊಡುಗೆಗಳ ಪೂರವೇ ಹರಿದು ಬಂದಿದೆ. ಹಲವು ರಾಜ್ಯಗಳು ನಗದು ಪುರಸ್ಕಾರಗಳನ್ನು ಘೊಷಿಸಿದ್ದರೆ, ಹಲವು ಸಂಸ್ಥೆಗಳು ತಮ್ಮ ತಮ್ಮ ಸಂಸ್ಥೆಯ ಪ್ರಚಾರವನ್ನು ದೃಷ್ಟಿಯಲ್ಲಿಟ್ಟುಕೊಂಡು ಬೇರೆ ಬೇರೆ ಕೊಡುಗೆಗಳನ್ನು ನೀಡಿವೆ. ಕೊಡುಗೆಗಳನ್ನು ನೀಡಿರುವುದೇನೋ ಸಂತೋಷವೆ. ಆದರೆ, ಒಬ್ಬ ಕ್ರೀಡಾಪಟುವಿಗೆ ಗೆದ್ದ ಬಳಿಕ ಸಿಗುವ ಪ್ರೋತ್ಸಾಹಕ್ಕಿಂತಲೂ, ಗೆಲುವಿನ ಹಾದಿಯೆಡೆಗೆ ಮುನ್ನಡೆಯುತ್ತಿರುವ ಸಂದರ್ಭದಲ್ಲಿ ಪ್ರೋತ್ಸಾಹಗಳ ಅಗತ್ಯವಿರುತ್ತದೆ. ಬೇಸರದ ಸಂಗತಿಯೆಂದರೆ, ‘ಚಿನ್ನ ಗೆದ್ದವರಿಗೆ ಒಂದು ಕೋಟಿ ರೂಪಾಯಿ’ಯ ಭರವಸೆಯನ್ನು ಸರಕಾರ ನೀಡುತ್ತದೆ. ಆದರೆ ಗೆಲ್ಲುವುದಕ್ಕಾಗಿ ಅವರನ್ನು ಸಿದ್ಧಗೊಳಿಸುವುದಕ್ಕೆ ಆ ಹಣವನ್ನು ನೀಡಲು ಅದೇ ಸರಕಾರ ಸಿದ್ಧವಿರುವುದಿಲ್ಲ.

ಇದೊಂದು ರೀತಿಯಲ್ಲಿ, ತೆಂಗಿನ ಗಿಡ ಒಳ್ಳೆಯ ಫಸಲುಕೊಟ್ಟರೆ ಅವುಗಳ ಬುಡಕ್ಕೆ ಗೊಬ್ಬರ ಸುರಿಯುವ ಕೃಷಿಕನ ಮನಸ್ಥಿತಿಯಂತಿದೆ. ತೆಂಗಿನ ಮರ ಒಳ್ಳೆಯ ಫಸಲು ಬಿಡಬೇಕಾದರೆ ಮೊದಲು ಅದಕ್ಕೆೆ ಒಳ್ಳೆಯ ಆರೈಕೆಗಳ ಅಗತ್ಯವಿದೆ. ಸರಿಯಾದ ಗೊಬ್ಬರ, ನೀರು ಇತ್ಯಾದಿಗಳು ಆರಂಭದಿಂದಲೇ ಸಿಕ್ಕಿದರೆ ಮಾತ್ರ, ಆ ಮರ ಒಳ್ಳೆಯ ಫಸಲು ಬಿಡುವುದಕ್ಕೆ ಸಾಧ್ಯ. ಫಸಲು ಬಿಟ್ಟ ಬಳಿಕ ಹಾಕುವ ಗೊಬ್ಬರದಿಂದ ವಿಶೇಷ ಬದಲಾವಣೆಗಳೇನೂ ಆಗುವುದಿಲ್ಲ. ಭಾರತ ಬೆಟ್ಟ ಗುಡ್ಡಗಳ ದೇಶ. ಶ್ರಮಿಕರ ದೇಶ. ಇಲ್ಲಿ ಅತ್ಲೀಟ್‌ಗಳ ಸೃಷ್ಟಿ ಬಹಳ ಸುಲಭ. ಕ್ರೀಡಾ ಕ್ಷೇತ್ರವನ್ನು ರಾಜಕೀಯ ಮುಕ್ತಗೊಳಿಸಿ, ಅರ್ಹರನ್ನು ಗುರುತಿಸಿ ಅವರನ್ನು ಬೆಳೆಸುವ ಕೆಲಸ ತೀರಾ ಪ್ರಾಥಮಿಕ ಮಟ್ಟದಿಂದ ನಡೆಯಬೇಕು. ಇಂದು ಬಿತ್ತಿ, ನಾಳೆ ಫಸಲು ನಿರೀಕ್ಷಿಸಲು ಸಾಧ್ಯವಿಲ್ಲ. ಅದಕ್ಕಾಗಿ ದೂರಗಾಮಿ ಯೋಜನೆಗಳನ್ನು ರೂಪಿಸಬೇಕು. ಅತ್ಲೀಟ್‌ಗಳು ಹುಟ್ಟುವುದು ಬಡವರ, ಶ್ರಮಿಕರ ಮನೆಯಲ್ಲಿ. ಅಲ್ಲಿ ಹುಟ್ಟುವ ಮಕ್ಕಳು ಅಪೌಷ್ಟಿಕತೆಯೊಂದಿಗೆ ನರಳುತ್ತಾ ಬೆಳೆದರೆ ಅವರಿಂದ ಭವಿಷ್ಯದಲ್ಲಿ ದೊಡ್ಡ ಸಾಧನೆಗಳು ಹೇಗೆ ಸಾಧ್ಯ? ಈ ನಿಟ್ಟಿನಲ್ಲಿ, ಪ್ರತಿಭಾವಂತ ಕ್ರೀಡಾಳುಗಳನ್ನು ಬಾಲ್ಯದಲ್ಲೇ ಗುರುತಿಸಿ ಅವರನ್ನು ಪೋಷಿಸುವ ಕೆಲಸ ನಡೆಯಬೇಕು. ಆಗ ರಾಜಕೀಯ ನಾಯಕರೂ ಹೆಮ್ಮೆಯಿಂದ ಅವರ ಸಾಧನೆಯಲ್ಲಿ ತಮ್ಮ ಪಾಲನ್ನು ಪಡೆದುಕೊಳ್ಳುವ ಅರ್ಹತೆಯನ್ನು ತನ್ನದಾಗಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News