ಭಯೋತ್ಪಾದನೆಗೆ ಹಣಕಾಸು ನೆರವು ಪ್ರಕರಣ: ಜಮ್ಮುಕಾಶ್ಮೀರದ ವಿವಿಧ ಸ್ಥಳಗಳಲ್ಲಿ ಎನ್ಐಎ ದಾಳಿ

Update: 2021-08-08 18:36 GMT

ಹೊಸದಿಲ್ಲಿ, ಆ. 8: ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಜಮ್ಮು ಹಾಗೂ ಕಾಶ್ಮೀರದ 14ಕ್ಕೂ ಅಧಿಕ ಜಿಲ್ಲೆಗಳ 40ಕ್ಕೂ ಅಧಿಕ ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ರವಿವಾರ ದಾಳಿ ನಡೆಸಿತು. ನಿಷೇಧಿತ ಜಮಾಅತೆ ಇಸ್ಲಾಮಿಯ ಕೆಲವು ಹಿರಿಯ ಸದಸ್ಯರಿಗೆ ಸೇರಿದ ಸ್ಥಳಗಳ ಮೇಲೂ ಎನ್ಐಎ ದಾಳಿ ನಡೆಸಿತು.

ಈ ವಲಯದಲ್ಲಿ ತಮ್ಮನ್ನು ಸಮರ್ಥಿಸಿಕೊಳ್ಳುತ್ತಿರುವ ಭಯೋತ್ಪಾದಕರ ವಿರುದ್ಧದ ಸಾಮೂಹಿಕ ದಮನದ ಒಂದು ಭಾಗವಾಗಿದೆ ಈ ದಾಳಿ. ಕಳೆದ ಒಂದು ತಿಂಗಳಲ್ಲಿ ಎನ್ಐಎ ನಡೆಸಿದ ಮೂರನೇ ಪ್ರಮುಖ ದಾಳಿ ಇದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೋಡಾ, ಕಿಸಾತ್ಜೃರ್, ರಾಂಬನ್, ಅನಂತ್ನಾಗ್, ರಾಜೌರಿ, ಶೋಪಿಯಾನ ಹಾಗೂ ಇತರ ಪ್ರದೇಶಗಳಲ್ಲಿ ಜಮ್ಮು ಹಾಗೂ ಕಾಶ್ಮೀರ ಪೊಲೀಸರು ಹಾಗೂ ಸಿಆರ್ಪಿಎಫ್ನ ನೆರವಿನಲ್ಲಿ ಎನ್ಐಎ ಈ ದಾಳಿ ನಡೆಸಿದೆ ಎಂದು ಅವರು ಹೇಳಿದ್ದಾರೆ.

ಕಳೆದ ತಿಂಗಳು ಗೃಹ ಸಚಿವಾಲಯದ ಪರಿಶೀಲನಾ ಸಭೆಯಲ್ಲಿ 2019ರಲ್ಲಿ ನಿಷೇಧಿತ ಸಂಘಟನೆಯಾದ ಜಮಾಅತೆ ಇಸ್ಲಾಮಿಯ ಪ್ರಭಾವ ಹೆಚ್ಚುತ್ತಿರುವ ಬಗ್ಗೆ ಚರ್ಚೆಯಾಗಿತ್ತು. ಯುವಕರು ಉಗ್ರವಾದ ಅಪ್ಪಿಕೊಳ್ಳುವುದನ್ನು ತಡೆಯಲು ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭದ್ರತಾ ಪಡೆಗೆ ಸೂಚಿಸಿದ್ದರು.

ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡಿರುವುದಕ್ಕೆ ಸಂಬಂಧಿಸಿ ಜಮ್ಮು ಹಾಗೂ ಕಾಶ್ಮೀರದಲ್ಲಿ ಜುಲೈ 10ರಂದು ಎನ್ಐಎ 6 ಮಂದಿಯನ್ನು ಬಂಧಿಸಿತ್ತು. ಉಗ್ರರೊಂದಿಗೆ ನಂಟು ಹೊಂದಿದ ಆರೋಪದಲ್ಲಿ ಕಳೆದ ತಿಂಗಳು ಜಮ್ಮು ಹಾಗೂ ಕಾಶ್ಮೀರ ಸರಕಾರದ 11 ಮಂದಿ ಉದ್ಯೋಗಿಗಳನ್ನು ವಜಾಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News