ಸಚಿನ್ ಪೈಲಟ್ ಪಕ್ಷಕ್ಕೆ ಸೇರ್ಪಡೆ ನಿರೀಕ್ಷೆ : ಬಿಜೆಪಿ ಉಪಾಧ್ಯಕ್ಷ ಎ.ಪಿ. ಅಬ್ದುಲ್ಲಾಕುಟ್ಟಿ

Update: 2021-08-09 04:39 GMT
ಸಚಿನ್ ಪೈಲಟ್ (PTI Photo)

ಜೈಪುರ: ಕಾಂಗ್ರೆಸ್ ಪಕ್ಷದ ಯುವ ಮುಖಂಡ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಉತ್ತಮ ನಾಯಕನಾಗಿದ್ದು, ಭವಿಷ್ಯದಲ್ಲಿ ಬಿಜೆಪಿ ಸೇರಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎ.ಪಿ. ಅಬ್ದುಲ್ಲಾಕುಟ್ಟಿ ಹೇಳಿದ್ದಾರೆ.

ಕಳೆದ ವರ್ಷ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಪೈಲಟ್ ನಿಷ್ಠ ಶಾಸಕರು ಬಂಡೆದ್ದ ಸಂದರ್ಭದಲ್ಲಿ ಈ ಯುವ ಮುಖಂಡ ಬಿಜೆಪಿ ಸೇರುತ್ತಾರೆ ಎಂಬ ವದಂತಿ ದಟ್ಟವಾಗಿ ಹಬ್ಬಿತ್ತು. ಆದಾಗ್ಯೂ ಸಚಿನ್ ಸ್ಪಷ್ಟನೆ ನೀಡಿ, ರಾಜಸ್ಥಾನದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ತಾವು ಕಠಿಣ ಪರಿಶ್ರಮ ಹಾಕಿದ ಹಿನ್ನೆಲೆಯಲ್ಲಿ ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದರು.

ರಾಜಸ್ಥಾನದಲ್ಲಿ ಬಹುನಿರೀಕ್ಷಿತ ಸಂಪುಟ ಪುನರ್ ರಚನೆ ಬಗ್ಗೆ ಚರ್ಚಿಸಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕನ್ ಇತ್ತೀಚೆಗೆ ಪೈಲಟ್ ಜತೆ ಚರ್ಚೆ ನಡೆಸಿದ್ದರು. ಪೈಲಟ್ ಬಣದಲ್ಲಿ ವ್ಯಾಪಕ ಅಸಮಾಧಾನ ಹೊಗೆಯಾಡುತ್ತಿರುವ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಮತ್ತು ರಾಜಕೀಯ ನೇಮಕಾತಿಗಳ ಆಗ್ರಹ ಬಲವಾಗಿ ಕೇಳಿ ಬರುತ್ತಿದೆ.

ಕಳೆದ ತಿಂಗಳು ಪೈಲಟ್ ಹೇಳಿಕೆ ನೀಡಿ, ತಾವು ಎತ್ತಿದ ವಿಚಾರಗಳ ಬಗ್ಗೆ ಪಕ್ಷ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂಬ ನಿರೀಕ್ಷೆ ವ್ಯಕ್ತಪಡಿಸಿದ್ದರು.
ಬಿಜೆಪಿ ಮುಸ್ಲಿಂ ವಿರೋಧಿ ಎಂಬ ಬಗ್ಗೆ ಕೆಲ ವ್ಯಕ್ತಿಗಳು ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಎ.ಪಿ. ಅಬ್ದುಲ್ಲಾಕುಟ್ಟಿ ಹೇಳಿದ್ದಾರೆ. "ಬಿಜೆಪಿ ಮುಸ್ಲಿಂ ವಿರೋಧಿ ಎನ್ನುವುದು ಸುಳ್ಳು. ಹಿಂದೂ ಮತ್ತು ಮುಸ್ಲಿಮರು ಒಂದೇ; ಅವರ ಡಿಎನ್‌ಎ ಕೂಡ ಒಂದೇ ಎಂದು ನಮ್ಮ ಗೌರವಾನ್ವಿತ ಆರೆಸ್ಸೆಸ್ ಮುಖ್ಯಸ್ಥರು ಸ್ಪಷ್ಟಪಡಿಸಿದ್ದಾರೆ'' ಎಂದು ಅಬ್ದುಲ್ಲಾಕುಟ್ಟಿ ವಿವರಿಸಿದರು. ಪಕ್ಷದ ಸಿದ್ಧಾಂತಗಳನ್ನು ಒಪ್ಪಿಕೊಳ್ಳುವ ಎಲ್ಲರನ್ನೂ ಬಿಜೆಪಿ ಸ್ವಾಗತಿಸುತ್ತದೆ ಎಂದೂ ಅಬ್ದುಲ್ಲಾಕುಟ್ಟಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News