ಜಾತಿ ನಿಂದನೆಗೆ ಒಳಗಾಗಿದ್ದ ಹಾಕಿ ತಾರೆ ವಂದನಾ ಕಟಾರಿಯಾ ಉತ್ತರಾಖಂಡದ ಸದ್ಭಾವನಾ ರಾಯಭಾರಿ ಆಗಿ ನೇಮಕ

Update: 2021-08-09 05:54 GMT

ಹರಿದ್ವಾರ: ಭಾರತದ ಹಾಕಿ ತಾರೆ ವಂದನಾ ಕಟಾರಿಯಾ ಅವರನ್ನು ರವಿವಾರ ಉತ್ತರಾಖಂಡದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸದ್ಭಾವನಾ ರಾಯಭಾರಿ  ಹಾಗೂ ಹರಿದ್ವಾರ ಜಿಲ್ಲೆಗೆ ಕೇಂದ್ರ ಸರಕಾರದ 'ಬೇಟಿ ಬಚಾವೋ, ಬೇಟಿ ಪಡಾವೋ' ಯೋಜನೆಯ ಬ್ರಾಂಡ್ ಅಂಬಾಸಿಡರ್ ಆಗಿಯೂ ಹೆಸರಿಸಲಾಗಿದೆ.

ಮಹಿಳೆಯರಿಗೆ ರಾಜ್ಯದ ಅತ್ಯುನ್ನತ ಗೌರವವಾದ ಟಿಲು ರೌಟೇಲಿ ಪ್ರಶಸ್ತಿಯನ್ನುವಂದನಾಗೆ  ನೀಡಿದ ದಿನದಂದೇ  ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ಅವರು ಈ ಘೋಷಣೆಗಳನ್ನು ಮಾಡಿದರು. ಒಲಿಂಪಿಕ್ಸ್ ನಲ್ಲಿ ತೋರಿದ  ಸಾಧನೆಗೆ ರಾಜ್ಯ ಸರಕಾರ 25 ಲಕ್ಷ ರೂ.ನಗದು ಬಹುಮಾನವನ್ನುವಂದನಾಗೆ ಘೋಷಿಸಿತು. ವಂದನಾ ಅವರು ಒಲಿಂಪಿಕ್ಸ್ ನಲ್ಲಿ ಹ್ಯಾಟ್ರಿಕ್ ಗೋಲು ಗಳಿಸಿದ ಭಾರತದ ಮೊದಲ ಮಹಿಳೆ.

ರಾಜ್ಯ ಕ್ರೀಡಾ ಹಾಗೂ  ಶಿಕ್ಷಣ ಸಚಿವ ಅರವಿಂದ ಪಾಂಡೆ ಹರಿದ್ವಾರದ ರೊಶ್ನಾಬಾದ್ ಹಳ್ಳಿಯಲ್ಲಿರುವ ವಂದನಾ ಅವರ ಮನೆಗೆ ಭೇಟಿ ನೀಡಿ ವಂದನಾ ಅವರ ತಾಯಿಗೆ ಬ್ರಾಂಡ್ ಅಂಬಾಸಿಡರ್ ಆಗಿ ಘೋಷಿಸಿದ ಪ್ರಮಾಣಪತ್ರಗಳನ್ನು ಹಸ್ತಾಂತರಿಸಿದರು.

"ಇದು ನಮಗೆ ಹೆಮ್ಮೆಯ ಕ್ಷಣ" ಎಂದು ವಂದನಾರ ತಾಯಿ ಸೌರನ್ ಕಟಾರಿಯಾ ಹೇಳಿದರು.

"ಉತ್ತರಾಖಂಡದ ಮಗಳು ವಂದನಾ ಕಟಾರಿಯಾ ಅವರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬ್ರಾಂಡ್ ಅಂಬಾಸಿಡರ್ ಆಗಿ ಘೋಷಿಸಲು ಸಂತೋಷವಾಗುತ್ತಿದೆ" ಎಂದು ಸಿಎಂ ಧಾಮಿ ಹೇಳಿದರು. "ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಹಾಕಿ ಪಂದ್ಯದಲ್ಲಿ ಅವರು ಅದ್ಭುತವಾಗಿ ಆಡಿದರು ಹಾಗೂ  ನಮಗೆಲ್ಲರಿಗೂ ಹೆಮ್ಮೆ ತಂದರು" ಎಂದು ಅವರು ಹೇಳಿದರು.

ಬುಧವಾರ ಮಹಿಳಾ ಹಾಕಿ ತಂಡವು ಕಂಚಿಗಾಗಿ ನಡೆದ ಪ್ಲೇ-ಆಫ್‌ ಪಂದ್ಯದಲ್ಲಿ ಗ್ರೇಟ್ ಬ್ರಿಟನ್‌ಗೆ ಸೋತು ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದ ನಂತರ ರೊಶ್ನಾಬಾದ್‌ನ ಕಟಾರಿಯಾ ಅವರ ಮನೆಯ ಹೊರಗೆ ಕೆಲವು ಕಿಡಿಗೇಡಿಗಳು ಸಂಭ್ರಮ ಆಚರಿಸಿ ಪಟಾಕಿ ಸಿಡಿಸಿದ್ದರು. ತಂಡದಲ್ಲಿ ಹಲವಾರು ದಲಿತ ಆಟಗಾರ್ತಿಯರು ಇದ್ದ ಕಾರಣಕ್ಕೆ ತಂಡವು ಸೋತಿದೆ ಎಂದು ಆರೋಪಿಸಿದ್ದರು.

ಘಟನೆ ಕುರಿತು ಎಫ್ ಐ ಆರ್ ದಾಖಲಿಸಲಾಗಿದ್ದು,  ಈವರೆಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News