ಸಂಸದರು, ಶಾಸಕರ ಮೇಲಿನ ಕ್ರಿಮಿನಲ್ ಪ್ರಕರಣ ಗಣನೀಯ ಹೆಚ್ಚಳ

Update: 2021-08-10 04:15 GMT

ಹೊಸದಿಲ್ಲಿ, ಆ.10: ಹಾಲಿ ಹಾಗೂ ಮಾಜಿ ಸಂಸದರು, ಶಾಸಕರ ವಿರುದ್ಧ ಬಾಕಿ ಇರುವ ಅಪರಾಧ ಪ್ರಕರಣಗಳ ಸಂಖ್ಯೆ ಕಳೆದ ಎರಡು ವರ್ಷಗಳಲ್ಲಿ ಶೇಕಡ 17ರಷ್ಟು ಹೆಚ್ಚಿದೆ. ಇದು ರಾಜಕೀಯ ಮತ್ತು ಅಪರಾಧ ನಡುವಿನ ನಂಟಿಗೆ ಸ್ಪಷ್ಟ ಪುರಾವೆಯಾಗಿದೆ. ಜನಪ್ರತಿನಿಧಿಗಳ ಹಣ ಮತ್ತು ತೋಳ್ಬಲದಿಂದಾಗಿ ದೀರ್ಘ ಕಾಲದಿಂದ ನನೆಗುದಿಗೆ ಬಿದ್ದಿರುವ ವಿಚಾರಣೆ ತ್ವರಿತಗೊಳಿಸಲು ಸುಪ್ರೀಂಕೋರ್ಟ್ ಪ್ರಯತ್ನಗಳನ್ನು ಮಾಡಿದ ಹೊರತಾಗಿಯೂ ಇದನ್ನು ನಿಯಂತ್ರಿಸಲು ಹೆಣಗಾಡಬೇಕಾಗಿದೆ.

ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳ ವಿಚಾರಣೆಯನ್ನು ತ್ವರಿತಗೊಳಿಸಲು ಆದೇಶಿಸಬೇಕು ಹಾಗೂ ಇದಕ್ಕಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬೇಕು ಎಂದು ಕೋರಿ ಅಶ್ವಿನಿ ಉಪಾಧ್ಯಾಯ ಒಂಭತ್ತು ತಿಂಗಳ ಹಿಂದೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರ ಮುಂದೆ ವಿಚಾರಣೆಗೆ ಬರಲಿರುವ ಹಿನ್ನೆಲೆಯಲ್ಲಿ, ಜನಪ್ರತಿನಿಧಿಗಳ ವಿರುದ್ಧದ ವಿಚಾರಣೆಯ ಸ್ಥಿತಿಗತಿಯ ನಿರಾಶಾದಾಯಕ ಚಿತ್ರಣವನ್ನು ಎಮಿಕಸ್ ಕ್ಯೂರಿ ಮತ್ತು ಹಿರಿಯ ವಕೀಲ ವಿಜಯ ಹನ್ಸಾರಿಯಾ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದಾರೆ.

ವಕೀಲೆ ಸ್ನೇಹಾ ಕಲಿಟಾ ನೆರವಿನಿಂದ ಈ ವರದಿ ಸಲ್ಲಿಸಲಾಗಿದೆ. ಮಾಜಿ ಹಾಗೂ ಹಾಲಿ ಸಂಸದರು, ಶಾಸಕರ ವಿರುದ್ಧ 2018ರ ಡಿಸೆಂಬರ್ ವೇಳೆಗೆ 4,122 ಪ್ರಕರಣಗಳು ವಿಚಾರಣೆಗೆ ಬಾಕಿ ಇದ್ದರೆ, 2020ರ ಸೆಪ್ಟೆಂಬರ್‌ನಲ್ಲಿ ಇದು ಶೇಕಡ 17ರಷ್ಟು ಏರಿಕೆ ಕಂಡು 4,859 ಆಗಿದೆ ಎಂದು 54 ಪುಟಗಳ ವರದಿಯಲ್ಲಿ ವಿವರಿಸಲಾಗಿದೆ. ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ತನಿಖೆಯ ಸ್ಥಿತಿಗತಿ ಬಗ್ಗೆ ವರದಿ ಸಲ್ಲಿಸುವಂತೆ ಸಿಬಿಐ ಸೇರಿದಂತೆ ತನಿಖಾ ಏಜೆನ್ಸಿಗಳಿಗೆ ಸುಪ್ರೀಂಕೋರ್ಟ್ ಕಳೆದ ವರ್ಷದ ಸೆಪ್ಟಂಬರ್ 16, ಅಕ್ಟೋಬರ್ 6, ನವೆಂಬರ್ 4 ಹೀಗೆ ಹಲವು ಬಾರಿ ಸೂಚಿಸಿತ್ತು. ಪದೇಪದೇ ಸೂಚನೆಗಳನ್ನು ನೀಡಿದ ಹೊರತಾಗಿಯೂ, ಕೇಂದ್ರ ಸರ್ಕಾರ ಇಂಥ ವರದಿಗಳನ್ನು ಸಲ್ಲಿಸಿಲ್ಲ ಎಂದು ಹನ್ಸಾರಿಯಾ ವಿವರಿಸಿದ್ದಾರೆ.

ರಾಜ್ಯ ಸರ್ಕಾರಗಳು ತಮ್ಮ ಪಕ್ಷದ ಶಾಸಕರು ಮತ್ತು ಸಂಸದರ ವಿರುದ್ಧದ ಗಂಭೀರ ಪ್ರಕರಣಗಳನ್ನು ಹಿಂಪಡೆಯುವ ಪ್ರವೃತ್ತಿ ಕಂಡುಬರುತ್ತಿವೆ. ಉತ್ತರ ಪ್ರದೇಶ ಸರ್ಕಾರ, ಮುಜಾಫರ್‌ನಗರ ಗಲಭೆಯಲ್ಲಿ ಸಂಗೀತ್ ಸೋಮ್, ಕಪಿಲ್ ದೇವ್, ಸುರೇಶ್ ರಾಣಾ ಮತ್ತು ಸಾಧ್ವಿ ಪ್ರಾಚಿ ವಿರುದ್ಧದ ಪ್ರಕರಣ ಸೇರಿದಂತೆ ಚುನಾಯಿತ ಪ್ರತಿನಿಧಿಗಳ ವಿರುದ್ಧದ 76 ಪ್ರಕರಣಗಳನ್ನು ವಾಪಸ್ ಪಡೆಯಲು ಮುಂದಾಗಿದೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News