'ಐ ಇನ್ ದಿ ಸ್ಕೈ' ಉಪಗ್ರಹ ಉಡಾವಣೆಗೆ ಕ್ಷಣಗಣನೆ

Update: 2021-08-11 06:21 GMT
Photo : ISRO

ಹೊಸದಿಲ್ಲಿ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯ ಮಹತ್ವಾಕಾಂಕ್ಷಿ ’ಐ ಇನ್ ದಿ ಸ್ಕೈ’ (ಜಿಎಸ್‌ಎಲ್‌ವಿ-ಎಫ್10 ಇಓಎಸ್-03 ಮಿಷನ್) ಉಪಗ್ರಹ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ.

ಜಿಯೊಸಿಂಕ್ರೊನಸ್ ಉಪಗ್ರಹ ಉಡಾವಣೆ ವಾಹಕ (ಜಿಎಸ್‌ಎಲ್‌ವಿ), ಜಿಐಸ್ಯಾಟ್-1 ಭೂ ಸರ್ವೇಕ್ಷಣಾ ಉಪಗ್ರಹವನ್ನು ಗುರುವಾರ (ಆಗಸ್ಟ್ 12) ಬೆಳಗ್ಗೆ 5.43ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾಯಿಸಲಿದೆ.

ಸ್ವಾತಂತ್ರ್ಯ ದಿನಾಚರಣೆಗೆ ಪೂರ್ವಭಾವಿಯಾಗಿ ಈ ಉಪಗ್ರಹ ಉಡಾವಣೆಯನ್ನು ದೇಶ ಕುತೂಹಲದಿಂದ ಎದುರು ನೋಡುತ್ತಿದೆ. ಆದರೆ ಉಡಾವಣೆ ಹವಾಮಾನ ಪರಿಸ್ಥಿತಿಗೆ ಅನುಸಾರವಾಗಿರುತ್ತದೆ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

"ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ (ಎಸ್‌ಡಿಎಸ್‌ಸಿ)ದಿಂದ ಜಿಎಸ್‌ಎಲ್‌ವಿ-ಎಫ್10/ಇಓಎಸ್-03 ಮಿಷನ್‌ಗೆ ಕ್ಷಣಗಣನೆ ಇಂದು ಮುಂಜಾನೆ 0.343ಕ್ಕೆ ಆರಂಭವಾಗಿದೆ" ಎಂದು ಇಸ್ರೊದ ಅಧಿಕೃತ ಹ್ಯಾಂಡಲ್ ಟ್ವೀಟ್ ಮಾಡಿದೆ. ಜಿಎಸ್‌ಎಲ್‌ವಿ-ಎಫ್10 ಮಿಷನ್‌ನ ಚಿತ್ರವನ್ನು ಇದು ಒಳಗೊಂಡಿದ್ದು, ಶ್ರೀಹರಿಕೋಟಾ ಸ್ಪೇಸ್‌ಪೋರ್ಟ್‌ನಲ್ಲಿ ರಾಕೆಟ್ ಸಜ್ಜಾಗಿರುವುದನ್ನು ತೋರಿಸಲಾಗಿದೆ.

ಜಿಎಸ್‌ಎಲ್‌ವಿ-ಎಫ್10 ಮಿಷನ್ ಭೌಗೋಳಿಕ ಇಮೇಜಿಂಗ್ ಉಪಗ್ರಹ ಜಿಐಸ್ಯಾಟ್-1ನ್ನು ಒಯ್ಯಲಿದೆ. ಭೂಮಿಯ ಕಕ್ಷೆಗೆ ಇದು ಸೇರಿದ ಬಳಿಕ, ಇದು ಭಾರತದ "ಐ ಇನ್ ದ ಸ್ಕೈ" ಆಗಿ ಕಾರ್ಯನಿರ್ವಹಿಸಲಿದೆ. ಅಂದರೆ ನಿರ್ದಿಷ್ಟ ಆಸಕ್ತಿಯ ಸ್ಥಳಗಳ ಮೇಲೆ ನಿಶ್ಚಲ ಸ್ಥಿತಿಯಲ್ಲಿ ಕಣ್ಗಾವಲು ಇಡಲು ಇದು ಸಹಕಾರಿಯಾಗಲಿದೆ. ಈ ಉಪಗ್ರಹ ಭಾರತಕ್ಕೆ ನೈಸರ್ಗಿಕ ವಿಕೋಪ ಮತ್ತು ಅಲ್ಪಾವಧಿ ಘಟನಾವಳಿಗಳಿಗೆ ತ್ವರಿತವಾಗಿ ಸ್ಪಂದಿಸಲು ಕೂಡಾ ಸಹಕಾರಿಯಾಗಲಿದೆ. ಕೃಷಿ, ಅರಣ್ಯ, ಗಣಿಗಾರಿಕೆ, ಮೋಡದ ಗುಣಲಕ್ಷಣ, ಹಿಮ ಮತ್ತು ಹಿಮನದಿಗಳು ಹಾಗೂ ಸಾಗರ ವಿಷಯಗಳಿಗೆ ನೆರವಾಗುವ ವಿಶೇಷ ಚಿತ್ರಗಳನ್ನು ಕೂಡಾ ಇದು ಒದಗಿಸಲಿದೆ ಎಂದು ಉನ್ನತ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News