ಕೇವಲ ಶೇ.8ರಷ್ಟು ಅಲ್ಪಸಂಖ್ಯಾತ ಮಕ್ಕಳು ತಮ್ಮ ಸಮುದಾಯಗಳ ಶಾಲೆಗಳಲ್ಲಿ ಓದುತ್ತಿದ್ದಾರೆ: ವರದಿ

Update: 2021-08-11 18:01 GMT
ಸಾಂದರ್ಭಿಕ ಚಿತ್ರ

 ಹೊಸದಿಲ್ಲಿ,ಆ.11: ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ 5ರಿಂದ 15 ವರ್ಷ ವಯೋಮಾನದ ಒಟ್ಟು 4,81,91,351 ಮಕ್ಕಳ ಪೈಕಿ ಕೇವಲ ಶೇ.8ರಷ್ಟು ಮಕ್ಕಳು ಅಲ್ಪಸಂಖ್ಯಾಯ ಸಮುದಾಯಗಳಿಗಾಗಿರುವ ಶಾಲೆಗಳಲ್ಲಿ ಓದುತ್ತಿದ್ದಾರೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಮಂಡಳಿ (ಎನ್‌ಸಿಪಿಸಿಆರ್)ಯು ಮಂಗಳವಾರ ಬಿಡುಗಡೆಗೊಳಿಸಿದ ತನ್ನ ವರದಿಯಲ್ಲಿ ತಿಳಿಸಿದೆ.

ಅಲ್ಲದೆ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಶಾಲೆಗಳಲ್ಲಿ ಕೇವಲ ಶೇ.37.50 ರಷ್ಟು (38,44,074) ಮಕ್ಕಳು ಅಲ್ಪಸಂಖ್ಯಾತರಾಗಿದ್ದು,ಅಲ್ಪಸಂಖ್ಯಾತೇತರ ವಿದ್ಯಾರ್ಥಿಗಳೇ ಈ ಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದೂ ವರದಿಯು ಹೇಳಿದೆ.

ವರದಿಗಾಗಿ ಎನ್‌ಸಿಪಿಸಿಆರ್ ದೇಶಾದ್ಯಂತದ ಮದ್ರಸಗಳು ಸೇರಿದಂತೆ ಮುಸ್ಲಿಮರು, ಕ್ರೈಸ್ತರು, ಜೈನರು, ಸಿಕ್ಖರು,ಬೌದ್ಧರು,ಪಾರ್ಸಿಗಳು ಮತ್ತು ಇತರ ಭಾಷಾ ಅಲ್ಪಸಂಖ್ಯಾತ ಸಮುದಾಯಗಳ 23,487 ಶಾಲೆಗಳನ್ನು ಸಮೀಕ್ಷೆಗೊಳಪಡಿಸಿತ್ತು.
 
ಸಂವಿಧಾನದ 15(5) ವಿಧಿಯು ಸಾಮಾಜಿಕವಾಗಿ ಹಿಂದುಳಿದಿರುವ ವರ್ಗಗಳ ಉದ್ಧಾರಕ್ಕಾಗಿ ಯಾವುದೇ ನೀತಿಯನ್ನು ರೂಪಿಸಲು ಸರಕಾರಕ್ಕೆ ಅಧಿಕಾರವನ್ನು ನೀಡುತ್ತದೆ ಮತ್ತು ತನ್ಮೂಲಕ ದೇಶದಲ್ಲಿ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಸಕಾರಾತ್ಮಕ ಕ್ರಮಗಳಿಗೆ ಆಧಾರವನ್ನು ರೂಪಿಸುತ್ತದೆ ಎನ್ನುವುದನ್ನು ಇಲ್ಲಿ ಗಮನಿಸಬೇಕು. ಆದರೆ ಇದನ್ನು ಆರ್‌ಟಿಇ ಕಾಯ್ದೆ (ವಿಧಿ 21ಎ)ಯ ಜೊತೆಯಲ್ಲಿ ಅಲ್ಪಸಂಖ್ಯಾತ ಶಾಲೆಗಳಿಗೆ ಅನ್ವಯವಾಗದಂತೆ ಮಾಡಿರುವುದರಿಂದ ಮಕ್ಕಳ ಮೇಲೆ ಇವುಗಳ ವಿನಾಯಿತಿಯ ಪರಿಣಾಮವನ್ನು ತಿಳಿದುಕೊಳ್ಳುವುದು ಅಧ್ಯಯನದ ಉದ್ದೇಶವಾಗಿತ್ತು ಎಂದು ವರದಿಯು ತಿಳಿಸಿದೆ.
 
ಸಮೀಕ್ಷೆಯ ಬಳಿಕ ಎನ್‌ಸಿಪಿಸಿಆರ್ ಮದ್ರಸಗಳು ಸೇರಿದಂತೆ ಇಂತಹ ಎಲ್ಲ ಶಾಲೆಗಳನ್ನು ವಿಧಿ 21ಎ ಮತ್ತು ಸರ್ವ ಶಿಕ್ಷಾ ಅಭಿಯಾನದ ವ್ಯಾಪ್ತಿಯಡಿ ಸೇರಿಸುವಂತೆ ಶಿಫಾರಸು ಮಾಡಿದೆ.

ಈ ಅಲ್ಪಸಂಖ್ಯಾತ ಶಾಲೆಗಳ ಪ್ರವೇಶ ದತ್ತಾಂಶಗಳನ್ನು ಪರಿಶೀಲಿಸಿರುವ ಎನ್‌ಸಿಪಿಸಿಆರ್ ವರದಿಯಂತೆ ಶೇ.62.50ರಷ್ಟು ಅಥವಾ 64,07,070 ವಿದ್ಯಾರ್ಥಿಗಳು ಅಲ್ಪಸಂಖ್ಯಾತರಲ್ಲದ ಸಮುದಾಯಗಳಿಗೆ ಸೇರಿದವರಾಗಿದ್ದಾರೆ. ಅಲ್ಪಸಂಖ್ಯಾತ ಶಾಲೆಗಳ ಪೈಕಿ ಜೈನ ಸಮುದಾಯದ ಶಾಲೆಗಳಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆ (ಶೇ.81.41)ಯ ವಿದ್ಯಾರ್ಥಿಗಳು ಅಲ್ಪಸಂಖ್ಯಾತರಲ್ಲದ ಸಮುದಾಯಗಳಿಗೆ ಸೇರಿದ್ದಾರೆ. ಮುಸ್ಲಿಂ ಸಮುದಾಯದ ಶಾಲೆಗಳಲ್ಲಿ ಅತ್ಯಂತ ಕಡಿಮೆ ಸಂಖ್ಯೆ (ಶೇ.20.29)ಯ ವಿದ್ಯಾರ್ಥಿಗಳು ಅಲ್ಪಸಂಖ್ಯಾತರಲ್ಲದ ಸಮುದಾಯಗಳಿಗೆ ಸೇರಿದವರಾಗಿದ್ದಾರೆ.

 ಕ್ರಿಶ್ಚಿಯನ್ ಶಾಲೆಗಳಲ್ಲಿ ಶೇ.74.01ರಷ್ಟು ವಿದ್ಯಾರ್ಥಿಗಳು ಕ್ರೈಸ್ತೇತರ ಸಮುದಾಯಗಳಿಗೆ ಸೇರಿದ್ದರೆ,ಸಿಖ್ ಶಾಲೆಗಳಲ್ಲಿ ಶೇ.75.50ರಷ್ಟು ವಿದ್ಯಾರ್ಥಿಗಳು ಸಿಖ್ ಸಮುದಾಯಕ್ಕೆ ಸೇರಿದವರಲ್ಲ. ದೇಶದ ಧಾರ್ಮಿಕ ಅಲ್ಪಸಂಖ್ಯಾತ ಜನಸಂಖ್ಯೆಯ ಶೇ.11.54ರಷ್ಟಿರುವ ಕ್ರೈಸ್ತ ಸಮುದಾಯವು ಒಟ್ಟು ಧಾರ್ಮಿಕ ಅಲ್ಪಸಂಖ್ಯಾತ ಶಾಲೆಗಳ ಪೈಕಿ ಶೇ.71.96ರಷ್ಟು ಪಾಲನ್ನು ಹೊಂದಿರುವುದನ್ನು ವರದಿಯು ಪ್ರಮುಖವಾಗಿ ಬಿಂಬಿಸಿದೆ. ಈ ಗುಂಪಿನಲ್ಲಿ ಶೇ.69.18ರಷ್ಟು ಜನಸಂಖ್ಯೆಯನ್ನು ಹೊಂದಿರುವ ಮುಸ್ಲಿಂ ಸಮುದಾಯವು ಅಲ್ಪಸಂಖ್ಯಾತ ಶಾಲೆಗಳ ಪೈಕಿ ಶೇ.22.75ರಷ್ಟು ಪಾಲನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News