‘ಕ್ರಿಮಿನಲ್ ರಾಜಕಾರಣಿ’ ಗಳಿಗೆ ಸುಪ್ರೀಂ ಮೂಗುದಾರ!

Update: 2021-08-12 04:34 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

 ರಾಜಕೀಯದಲ್ಲಿ ಕ್ರಿಮಿನಲ್ ಹಿನ್ನೆಲೆ ಒಂದು ಅರ್ಹತೆಯಾಗಿ ಪರಿಗಣಿಸಲ್ಪಡುತ್ತಿದೆ. ರೈತರನ್ನು, ಕಾರ್ಮಿಕರನ್ನು, ಜನಸಾಮಾನ್ಯರನ್ನು ಸಂಘಟಿಸಿ, ಅವರ ಮೂಲಭೂತ ಹಕ್ಕುಗಳಿಗಾಗಿ ಹೋರಾಡಿ ನಾಯಕರಾಗುವುದಕ್ಕಿಂತ, ಸಮಾಜದ ನಡುವೆ ದ್ವೇಷ ಬಿತ್ತಿ, ದಂಗೆ, ಕೋಮುಗಲಭೆಗಳಿಗೆ ಕರೆ ನೀಡುವ ಮೂಲಕ ರಾತ್ರಿ ಬೆಳಗಾಗುವಷ್ಟರಲ್ಲಿ ನಾಯಕರಾಗಿ ಮಿಂಚಬಹುದು ಎಂದು ಜನಪ್ರತಿನಿಧಿಗಳು ನಂಬಿದ್ದಾರೆ. ಜನರ ಅಗತ್ಯವಾಗಿರುವ ಅಕ್ಕಿ, ಬೇಳೆ ಇತ್ಯಾದಿಗಳ ಬಗ್ಗೆ ತಲೆಕೆಡಿಸಿಕೊಂಡು ರಾಜಕೀಯ ನಡೆಸಿದ ನಾಯಕರು ಮೂಲೆಗುಂಪಾಗುತ್ತಿದ್ದರೆ, ‘ಹೊಡಿ-ಬಡಿ’ ಎನ್ನುವ ನಾಯಕರು ಮುನ್ನೆಲೆಗೆ ಬರುತ್ತಿದ್ದಾರೆ ಮಾತ್ರವಲ್ಲ, ಚುನಾವಣೆಯಲ್ಲಿ ಸುಲಭವಾಗಿ ಗೆಲ್ಲುತ್ತಿದ್ದಾರೆ. ದೇಶ ದಿನದಿಂದ ದಿನ ಆರ್ಥಿಕವಾಗಿ ಹಿಂದಕ್ಕೆ ಚಲಿಸುತ್ತಿರುವ ಈ ಸಂದರ್ಭದಲ್ಲಿ, ಅಭಿವೃದ್ಧಿಯ ಹೆಸರಿನಲ್ಲಿ ಮತ ಯಾಚನೆ ಕಷ್ಟವೆನ್ನುವುದನ್ನು ಅರಿತುಕೊಂಡಿರುವ ಜನನಾಯಕರು, ಭಾವನಾತ್ಮಕ ರಾಜಕೀಯವನ್ನೇ ಬಂಡವಾಳವಾಗಿ ಬಳಸಿಕೊಳ್ಳುತ್ತಿದ್ದಾರೆ. ಆದುದರಿಂದಲೇ ದೇಶಾದ್ಯಂತ ಕೋಮು ದ್ವೇಷದ ಸಮಾರಂಭ, ರ್ಯಾಲಿಗಳಲ್ಲಿ ರಾಜಕೀಯ ನಾಯಕರು ಬಹಿರಂಗವಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ತಮ್ಮ ಮೇಲೆ ಕ್ರಿಮಿನಲ್ ಪ್ರಕರಣಗಳು ದಾಖಲಾಗಬಹುದು ಎಂಬ ಭಯವೂ ಅವರಿಗೆ ಇದ್ದಂತಿಲ್ಲ. ಸಚಿವ ಸ್ಥಾನ, ಮುಖ್ಯಮಂತ್ರಿ ಸ್ಥಾನದಂತಹ ಉನ್ನತ ಹುದ್ದೆಗಳಿಗೆ ಇಂತಹ ಕ್ರಿಮಿನಲ್ ಹಿನ್ನೆಲೆಗಳಿರುವ ನಾಯಕರನ್ನೇ ಇಂದು ಹುಡುಕಲಾಗುತ್ತಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ರಾಜಕೀಯ ಹಿನ್ನೆಲೆಯನ್ನು ಬಿಡಿಸಿ ನೋಡಿದರೆ ಇವೆಲ್ಲವನ್ನು ಸುಲಭದಲ್ಲಿ ಅರ್ಥಮಾಡಿಕೊಳ್ಳಬಹುದು. ಇದೇ ಸಂದರ್ಭದಲ್ಲಿ ಬೇರೆ ಬೇರೆ ರೀತಿಯಲ್ಲಿ ಸಮಾಜ ಘಾತುಕ ಕೃತ್ಯಗಳನ್ನು ಎಸಗಿದ ಆರೋಪಗಳನ್ನು ಹೊಂದಿದವರು ರಾಜಕೀಯ ಸೇರಿದಾಕ್ಷಣ ಅವರ ಮೇಲಿರುವ ಕ್ರಿಮಿನಲ್ ಪ್ರಕರಣಗಳನ್ನು ಹಿಂದೆಗೆಯುವ ಪರಿಪಾಠ ಆರಂಭವಾಗಿದೆ. ಈಗಾಗಲೇ ಹಲವು ಬಾರಿ ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ಜನಪ್ರತಿನಿಧಿಗಳ ಮೇಲಿರುವ ಪ್ರಕರಣಗಳನ್ನು ಹಿಂದೆಗೆದುಕೊಳ್ಳಲಾಗಿದೆ. ಒಂದೆಡೆ ಕ್ರಿಮಿನಲ್ ಕೃತ್ಯಗಳ ಮೂಲಕ ಜನನಾಯಕರಾಗುವುದು, ಇನ್ನೊಂದೆಡೆ ಜನಪ್ರತಿನಿಧಿಗಳಾಗಿ ಆಯ್ಕೆಯಾದ ಬೆನ್ನಿಗೇ ಸರಕಾರ ಅವರ ಮೇಲಿನ ಪ್ರಕರಣಗಳನ್ನು ಹಿಂದೆಗೆಯುವುದು ಒಂದು ಚಾಳಿಯಾಗಿ ಬಿಟ್ಟಿದೆ. ಇದರಿಂದಾಗಿ, ಕೋಮುದ್ವೇಷ ರಾಜಕಾರಣದಲ್ಲಿ ರಾಜಕಾರಣಿಗಳು ಬಹಿರಂಗವಾಗಿ ಆತ್ಮವಿಶ್ವಾಸದಿಂದ ಭಾಗವಹಿಸುತ್ತಿದ್ದಾರೆ ಮತ್ತು ಆ ಹಿನ್ನೆಲೆಯಲ್ಲಿ ತಮ್ಮ ಮೇಲೆ ದಾಖಲಾಗುವ ಕ್ರಿಮಿನಲ್ ಪ್ರಕರಣಗಳನ್ನು ಸಾಧನೆಗಳೆಂಬಂತೆ ಬಿಂಬಿಸುತ್ತಿದ್ದಾರೆ. ಕರ್ನಾಟಕದಲ್ಲಿ ಕೇವಲ ರಾಜಕಾರಣಿಗಳ ಮೇಲಿನ ಪ್ರಕರಣಗಳನ್ನು ಮಾತ್ರವಲ್ಲ, ಸಂಘಪರಿವಾರ ಕಾರ್ಯಕರ್ತರ ಮೇಲಿನ ಕ್ರಿಮಿನಲ್ ಪ್ರಕರಣಗಳನ್ನೂ ಹಿಂದೆಗೆಯಲಾಗಿದೆ. ಕಾನೂನು ಇಲಾಖೆ ಪ್ರಕರಣವನ್ನು ಹಿಂದೆಗೆಯಬಾರದು ಎಂದು ಸೂಚಿಸಿದರೂ ಅದನ್ನು ನಿರ್ಲಕ್ಷಿಸಿ ರಾಜಕಾರಣಿಗಳು ಮತ್ತು ಸಂಘಪರಿವಾರದ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಹಿಂದೆಗೆದ ಉದಾಹರಣೆಗಳಿವೆ. ಸುರತ್ಕಲ್ ಕೋಮುಗಲಭೆ, ತೊಕ್ಕೊಟ್ಟು ಗಲಭೆ ಸೇರಿದಂತೆ ರಾಜ್ಯದಲ್ಲಿ ನಡೆದ ಹಲವು ಕೋಮುಗಲಭೆಗಳಿಗೆ ಕಾರಣಕರ್ತರಾದ ಸಂಘಪರಿವಾರ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಸರಕಾರ ಈಗಾಗಲೇ ಹಿಂದೆಗೆದುಕೊಂಡಿದೆ. ಒಂದು ಕಾಲವಿತ್ತು. ಆಗ, ಪೆಟ್ರೋಲಿಗೆ ಪೈಸೆ ಹೆಚ್ಚಾದರೂ ಜನರು ಬೀದಿಗಿಳಿದು ಅದರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದರು. ಗೊಬ್ಬರದ ದರ ಹೆಚ್ಚಳವಾದರೆ ರೈತರು ಒಂದಾಗಿ ಸರಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದರು. ಜನರಲ್ಲಿ ತಮ್ಮ ಬದುಕುವ ಹಕ್ಕಿನ ಕುರಿತಂತೆ ಜಾಗೃತಿ ಇದ್ದ ದಿನಗಳು ಅವು. ಕೆಲವೊಮ್ಮೆ ಪ್ರತಿಭಟನೆ ವಿಪರೀತಕ್ಕೆ ತಲುಪಿ ಸರಕಾರ ಮತ್ತು ಜನರ ನಡುವೆ ಸಂಘರ್ಷಗಳು ನಡೆಯುತ್ತಿದ್ದವು. ಇಂತಹ ಸಂದರ್ಭದಲ್ಲಿ ಸಂಘರ್ಷದ ನೇತೃತ್ವ ವಹಿಸಿದ ರೈತರು, ಕಾರ್ಮಿಕ ಮುಖಂಡರ ಮೇಲೆ ಕ್ರಿಮಿನಲ್ ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ ಮುಂದೆ ಸರಕಾರ ಅನುಕಂಪದ ಆಧಾರದ ಮೇಲೆ ಅವರ ಮೇಲಿನ ಪ್ರಕರಣಗಳನ್ನು ಹಿಂದೆಗೆದುಕೊಳ್ಳುತ್ತಿತ್ತು. ಆ ಪ್ರತಿಭಟನೆ, ಸಂಘರ್ಷಕ್ಕೆ ಪರೋಕ್ಷವಾಗಿ ಸರಕಾರದ ವೈಫಲ್ಯ ಕಾರಣವಾಗಿರುವುದರಿಂದ, ಜೊತೆಗೆ ಜನರು ಬೀದಿಗಿಳಿಯಲು ಯಾವುದೇ ಕ್ರಿಮಿನಲ್ ಉದ್ದೇಶಗಳಿಲ್ಲದೇ ಇದ್ದುದರಿಂದ, ಸಾಮಾಜಿಕ ಬದ್ಧತೆಯಿಂದ ಅವರ ಮೇಲಿನ ಪ್ರಕರಣ ಹಿಂದೆಗೆದುಕೊಳ್ಳುವುದು ಸರಕಾರಕ್ಕೆ ಅನಿವಾರ್ಯವಾಗಿತ್ತು. ಆದರೆ ಇಂದು ರೈತರು, ಕಾರ್ಮಿಕರು, ವಿದ್ಯಾರ್ಥಿಗಳ ಮೇಲೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿ, ಅವರನ್ನು ಜೈಲಿಗೆ ಕಳುಹಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಕೋಮುಗಲಭೆಗಳಲ್ಲಿ ಭಾಗವಹಿಸಿ ಸಾವು ನೋವುಗಳಿಗೆ ಕಾರಣರಾದವರ ಮೇಲಿನ ಪ್ರಕರಣಗಳನ್ನು ಸರಕಾರ ಅತ್ಯಾಸಕ್ತಿಯಿಂದ ಹಿಂದೆಗೆಯುತ್ತಿದೆ. ಯಾವುದೇ ಸಾಮಾಜಿಕ ಉದ್ದೇಶಗಳಿಲ್ಲದ, ಸಮಾಜದಲ್ಲಿ ಉದ್ವಿಗ್ನತೆಯನ್ನು ಹರಡುವುದಕ್ಕಾಗಿಯೇ ಕುಕೃತ್ಯಗಳನ್ನು ಮಾಡಿದ ಕ್ರಿಮಿನಲ್ ಆರೋಪಿಗಳಿಗೆ ಸರಕಾರವೇ ಅತ್ಯಾಸಕ್ತಿಯಿಂದ ಕ್ಲೀನ್ ಚಿಟ್ ನೀಡುತ್ತದೆಯಾದರೆ, ಆ ಸರಕಾರದ ಉದ್ದೇಶವಾದರೂ ಏನು? ‘ಇನ್ನಷ್ಟು ಹಿಂಸೆ, ಕುಕೃತ್ಯಗಳನ್ನು’ ಎಸಗಲು ಸರಕಾರವೇ ಕುಮ್ಮಕ್ಕು ನೀಡಿದಂತಲ್ಲವೇ? ಸರಕಾರವೇ ಹೀಗೆ ಕ್ಲೀನ್ ಚಿಟ್ ನೀಡುವುದಾದರೆ, ನ್ಯಾಯ ವ್ಯವಸ್ಥೆ ಅಸ್ತಿತ್ವದಲ್ಲಿರುವುದು ಯಾಕಾಗಿ?

     ಸುಪ್ರೀಂಕೋರ್ಟ್ ಮಂಗಳವಾರ ನೀಡಿದ ಮಹತ್ವದ ತೀರ್ಪೊಂದರಲ್ಲಿ ದೇಶದ ಸಂಸದರು ಅಥವಾ ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಹೈಕೋರ್ಟ್‌ನ ಅನುಮತಿಯಿಲ್ಲದೆ ಹಿಂದೆಗೆದುಕೊಳ್ಳುವಂತಿಲ್ಲ ಎಂದು ಆದೇಶಿಸಿದೆ. ಅಷ್ಟೇ ಅಲ್ಲ, ‘ಸಂಸದರು, ಶಾಸಕರ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರನ್ನು ಕನಿಷ್ಠ ಎರಡು ವರ್ಷಗಳ ಕಾಲ ವರ್ಗಾವಣೆಗೊಳಿಸುವಂತಿಲ್ಲ. ಮುಂದಿನ ಆದೇಶದವರೆಗೆ ನ್ಯಾಯಾಧೀಶರು ತಮ್ಮ ಹುದ್ದೆಯಲ್ಲಿಯೇ ಮುಂದುವರಿಯಬೇಕು’ ಎಂದೂ ಸುಪ್ರೀಂಕೋರ್ಟ್ ಹೇಳಿದೆ. ಇದೇ ಸಂದರ್ಭದಲ್ಲಿ ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆ ಘೋಷಿಸದ ಬಿಜೆಪಿ, ಕಾಂಗ್ರೆಸ್ ಸಹಿತ 9 ಪಕ್ಷಗಳಿಗೆ ನ್ಯಾಯಾಲಯ ದಂಡ ವಿಧಿಸಿದೆ. ‘ದ್ವೇಷ, ಹಿಂಸೆಯನ್ನೇ ರಾಜಕೀಯ’ ಎಂದು ನಂಬಿರುವ ರಾಜಕಾರಣಿಗಳ ಮತ್ತು ಪಕ್ಷಗಳ ಸಂಖ್ಯೆ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಸುಪ್ರೀಂಕೋರ್ಟ್‌ನ ಈ ತೀರ್ಪು ಅತ್ಯಂತ ಮಹತ್ವ ಪೂರ್ಣದ್ದಾಗಿದೆ. ರಾಜಕೀಯ ಮಹತ್ವಾಕಾಂಕ್ಷಿಗಳಾಗಿರುವ ನಾಯಕರು ಇನ್ನು ಮುಂದೆ ಸಾರ್ವಜನಿಕವಾಗಿ ಕ್ರಿಮಿನಲ್ ಕೃತ್ಯಗಳನ್ನು ಎಸಗುವಾಗ, ಅವುಗಳಿಗೆ ಪ್ರಚೋದಿಸುವಾಗ ಯೋಚಿಸುವ ಸ್ಥಿತಿ ನಿರ್ಮಾಣವಾಗಬಹುದು. ಆದರೆ ಇದೇ ಸಂದರ್ಭದಲ್ಲಿ, ಇತ್ತೀಚಿನ ದಿಲ್ಲಿ ಗಲಭೆಗೆ ಕಾರಣವಾಗಿರುವ ರಾಜಕಾರಣಿಗಳ ವಿರುದ್ಧ ಈವರೆಗೆ ಪ್ರಕರಣಗಳೇ ದಾಖಲಾಗಿಲ್ಲ. ಅಂದರೆ ಪೊಲೀಸ್ ಇಲಾಖೆಯೇ ಪರೋಕ್ಷವಾಗಿ ಕ್ರಿಮಿನಲ್ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದರೆ, ಈ ರಾಜಕಾರಣಿಗಳ ಮೇಲೆ ಪ್ರಕರಣಗಳನ್ನು ದಾಖಲಿಸುವವರು ಯಾರು? ಪ್ರಕರಣ ದಾಖಲಿಸಿದ ಬಳಿಕ ತಾನೇ ಅವುಗಳನ್ನು ಹಿಂದೆಗೆಯುವ ಪ್ರಶ್ನೆ ಬರುವುದು? ಕನಿಷ್ಠ ನ್ಯಾಯಾಲಯ ಸ್ವಯಂ ಆಸಕ್ತಿಯಿಂದ ಇಂತಹ ಪ್ರಕರಣಗಳನ್ನು ಕೈಗೆತ್ತಿ, ಅವರ ಮೇಲೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲು ಪೊಲೀಸರಿಗೆ ಆದೇಶ ನೀಡಿದಾಗ ಮಾತ್ರ ರಾಜಕೀಯದಲ್ಲಿ ಸುಧಾರಣೆ ಕಾಣಲು ಸಾಧ್ಯ. ಈ ದೇಶದ ಚುಕ್ಕಾಣಿಯನ್ನು ಕ್ರಿಮಿನಲ್‌ಗಳು ಕೈಗೆತ್ತಿಕೊಳ್ಳದಂತೆ ನೋಡಿಕೊಳ್ಳಬೇಕಾದ, ಆ ಮೂಲಕ ಸಂವಿಧಾನದ ಉದ್ದೇಶಗಳನ್ನು ಕಾಪಾಡಬೇಕಾದ ಹೊಣೆಗಾರಿಕೆ ನ್ಯಾಯಾಲಯದ ಮುಂದಿದೆ. ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ರಾಜಕಾರಣಿಗಳನ್ನು ಮಾತ್ರವಲ್ಲ, ಪೊಲೀಸ್ ವ್ಯವಸ್ಥೆಯನ್ನು ಕೂಡ ಎಚ್ಚರಿಕೆಯ ಕಣ್ಣಿನಿಂದ ಗಮನಿಸಬೇಕಾಗಿದೆ. ಪೊಲೀಸ್ ವ್ಯವಸ್ಥೆಗೂ ಅತ್ಯಗತ್ಯ ಮಾರ್ಗದರ್ಶನ ಮಾಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News