ಕೋವಿಡ್ ತುರ್ತು ಪ್ರತಿಕ್ರಿಯೆ ಪ್ಯಾಕೇಜ್ ನಡಿ 14,745 ಕೋ.ರೂ. ಬಿಡುಗಡೆಗೆ ಕೇಂದ್ರ ಆರೋಗ್ಯ ಸಚಿವಾಲಯದ ಒಪ್ಪಿಗೆ

Update: 2021-08-14 18:02 GMT

ಹೊಸದಿಲ್ಲಿ,ಆ.14: ಭಾರತ ಕೋವಿಡ್-19 ತುರ್ತು ಪ್ರತಿಕ್ರಿಯಾ ಮತ್ತು ಆರೋಗ್ಯ ವ್ಯವಸ್ಥೆ ಸನ್ನದ್ಧತೆ ಪ್ಯಾಕೇಜ್: ಹಂತ-II  (ಇಸಿಆರ್ಪಿ-II ಪ್ಯಾಕೇಜ್)ರಡಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 14,744.99 ಕೋ.ರೂ.ಗಳ ಇನ್ನೊಂದು ಕಂತು ಬಿಡುಗಡೆಗೆ ಕೇಂದ್ರ ಆರೋಗ್ಯ ಸಚಿವಾಲಯವು ಒಪ್ಪಿಗೆ ನೀಡಿದೆ.

ಎರಡನೇ ಅಲೆಯ ಸಂದರ್ಭದಲ್ಲಿ ಸಾಂಕ್ರಾಮಿಕವು ಗ್ರಾಮೀಣ,ಅರೆನಗರ ಮತ್ತು ಬುಡಕಟ್ಟು ಪ್ರದೇಶಗಳಿಗೆ ಹರಡಿದ್ದ ಹಿನ್ನೆಲೆಯಲ್ಲಿ ಜು.8ರಂದು ಕೇಂದ್ರ ಸಂಪುಟವು 23,123 ಕೋ.ರೂ.ಗಳ ಈ ನೂತನ ಯೋಜನೆಗೆ ಅನುಮೋದನೆಯನ್ನು ನೀಡಿತ್ತು. ಯೋಜನೆಯು 2021,ಜು.1ರಿಂದ 2022,ಮಾ.31ರವರೆಗೆ ಜಾರಿಯಲ್ಲಿರುತ್ತದೆ ಎಂದು ಆರೋಗ್ಯ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ಇಸಿಆರ್ಪಿ-II ಯೋಜನೆಯ ತ್ವರಿತ ಅನುಷ್ಠಾನಕ್ಕಾಗಿ ಪೂರ್ವಭಾವಿ ಚಟುವಟಿಕೆಗಳನ್ನು ಕೈಗೊಳ್ಳಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಜು.22ರಂದು ಶೇ.15ರಷ್ಟು ಮುಂಗಡವಾಗಿ 1827.80 ಕೋ.ರೂ.ಗಳನ್ನು ಬಿಡುಗಡೆಗೊಳಿಸಲಾಗಿತ್ತು. ಈಗ ಇನ್ನೊಂದು ಕಂತಿನಲ್ಲಿ ಶೇ.35ರಷ್ಟು ಹಣವನ್ನು ಬಿಡುಗಡೆಗೊಳಿಸಲಾಗಿದ್ದು,ಒಟ್ಟು ಶೇ.50ರಷ್ಟು ಮೊತ್ತ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕೈಸೇರಿದೆ. ಸಾಂಕ್ರಾಮಿಕವನ್ನು ನಿರ್ವಹಿಸಲು ರಾಜ್ಯ ಮತ್ತು ಜಿಲ್ಲಾ ಮಟ್ಟಗಳಲ್ಲಿ ಸಾರ್ವಜನಿಕ ಆರೋಗ್ಯ ರಕ್ಷಣೆ ವ್ಯವಸ್ಥೆಯನ್ನು ಸಜ್ಜುಗೊಳಿಸಲು ಈ ಹಣ ಬಳಕೆಯಾಗಲಿದೆ.

ಇದು ಕೇಂದ್ರ ಪ್ರಾಯೋಜಿತ ಯೋಜನೆ (ಸಿಎಸ್ಎಸ್)ಯಾಗಿದ್ದು,ಮಕ್ಕಳ ಆರೋಗ್ಯ ರಕ್ಷಣೆ ಸೇರಿದಂತೆ ಆರಂಭದಲ್ಲಿಯೇ ಸೋಂಕಿನ ತಡೆ,ಪತ್ತೆ ಮತ್ತು ನಿರ್ವಹಣೆಗಾಗಿ ತಕ್ಷಣದ ಪ್ರತಿಕ್ರಿಯೆಗೆ ಆರೋಗ್ಯ ವ್ಯವಸ್ಥೆಯ ಸಿದ್ಧತೆಗೆ ವೇಗ ನೀಡುವ ಉದ್ದೇಶವನ್ನು ಹೊಂದಿದೆ. ಸೋಂಕಿನ ನಿಯಂತ್ರಣಕ್ಕಾಗಿ ಸೃಷ್ಟಿಸಬೇಕಾದ ಮೂಲಸೌಕರ್ಯಗಳ ಪ್ರಸ್ತಾವಗಳನ್ನು ರಾಜ್ಯಗಳು ಸ್ವೀಕರಿಸಿವೆ.

ಈ ಪ್ಯಾಕೇಜ್ ಜಿಲ್ಲೆಗಳಲ್ಲಿ 827 ಮಕ್ಕಳ ಆರೋಗ್ಯ ರಕ್ಷಣೆ ಘಟಕಗಳ ಸ್ಥಾಪನೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೆರವಾಗಲಿದೆ ಮತ್ತು ತನ್ಮೂಲಕ ಹೆಚ್ಚುವರಿಯಾಗಿ 19,030 ಆಮ್ಲಜನಕ ಹಾಸಿಗೆಗಳು ಮತ್ತು 10,440 ಐಸಿಯು/ಎಚ್ಡಿಯು ಹಾಸಿಗೆಗಳು ಸೇರ್ಪಡೆಗೊಳ್ಳಲಿವೆ ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ 23,056 ಐಸಿಯು ಹಾಸಿಗೆಗಳು ಹೆಚ್ಚಲಿದ್ದು,ಈ ಪೈಕಿ ಶೇ.20ರಷ್ಟು ಮಕ್ಕಳಿಗಾಗಿ ಮೀಸಲಾಗಿರುತ್ತವೆ.
 
ಪ್ಯಾಕೇಜ್ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಟೆಲಿ-ಐಸಿಯು ಸೇವೆಗಳನ್ನು ಹಾಗೂ ಜಿಲ್ಲಾ ಮಕ್ಕಳ ಆರೋಗ್ಯ ಕೇಂದ್ರಗಳಿಗೆ ಮಾರ್ಗದರ್ಶನ ಮತ್ತು ತಾಂತ್ರಿಕ ನೆರವನ್ನು ಒದಗಿಸಲು ವೈದ್ಯಕೀಯ ಕಾಲೇಜುಗಳು,ರಾಜ್ಯ ಸರಕಾರದ ಆಸ್ಪತ್ರೆಗಳು ಅಥವಾ ಕೇಂದ್ರ ಸರಕಾರದ ಆಸ್ಪತ್ರೆಗಳಲ್ಲಿ ಕನಿಷ್ಠ ಒಂದರಂತೆ 42 ಉನ್ನತ ಪೀಡಿಯಾಟ್ರಿಕ್ ಕೇಂದ್ರಗಳನ್ನು ಸ್ಥಾಪಿಸಲು ನೆರವಾಗಲಿದೆ.

ಅಗತ್ಯಕ್ಕನುಗುಣವಾಗಿ ಎರಡು ಅಥವಾ ಮೂರನೇ ದರ್ಜೆಯ ನಗರಗಳು ಮತ್ತು ಜಿಲ್ಲಾ ಕೇಂದ್ರಗಳಲ್ಲಿ 203 ಕ್ಷೇತ್ರ ಆಸ್ಪತ್ರೆಗಳನ್ನು ಸ್ಥಾಪಿಸಲು ನೆರವಾಗುವ ಮೂಲಕ ಯೋಜನೆಯು 13,065 ಆಮ್ಲಜನಕ ಬೆಂಬಲಿತ ಹಾಸಿಗೆಗಳ ಸೃಷ್ಟಿಗೆ ಮತ್ತು 961 ದ್ರವ ವೈದ್ಯಕೀಯ ಆಮ್ಲಜನಕ ದಾಸ್ತಾನು ಟ್ಯಾಂಕ್ಗಳ ಸ್ಥಾಪನೆಗೂ ನೆರವಾಗಲಿದೆ. ಪ್ರತಿ ಜಿಲ್ಲೆಗೆ ಒಂದು ಕೋ.ರೂ.ಮೌಲ್ಯದವರೆಗಿನ ಮೀಸಲು ದಾಸ್ತಾನು ಸೇರಿದಂತೆ ಅಗತ್ಯ ಔಷಧಿಗಳನ್ನು ಒದಗಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 740 ಜಿಲ್ಲೆಗಳಿಗೆ ಅನುಮತಿಯನ್ನೂ ನೀಡಲಾಗಿದೆ.

ಇಸಿಆರ್ಪಿ-II  ಯೋಜನೆಯಡಿ 2021,ಎಪ್ರಿಲ್ನಲ್ಲಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 15,000 ಕೋ.ರೂ.ಗಳನ್ನು ಬಿಡುಗಡೆಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News