ಕಾಬೂಲ್ ವಿಮಾನ ನಿಲ್ದಾಣದಲ್ಲಿ ಗುಂಡಿನ ದಾಳಿಗೆ ಕನಿಷ್ಠ ಐವರು ಮೃತ್ಯು

Update: 2021-08-16 08:20 GMT
Photo: www.ndtv.com

ಕಾಬೂಲ್: ಅಫ್ಘಾನಿಸ್ತಾನದಿಂದ ಹೊರಡುವ ಕೊನೆಯ ಕೆಲವು ವಿಮಾನಗಳಲ್ಲಿ ಹತ್ತಲು ಸಾವಿರಾರು ಅಫ್ಘಾನ್ ನಾಗರಿಕರು ನೆರೆದಿರುವ ಅವ್ಯವಸ್ಥೆಯ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ನಡುವೆ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಭಾರೀ ಗುಂಡಿನ ಸದ್ದಿನ ವರದಿಗಳ ನಡುವೆ ಕನಿಷ್ಠ ಐದು ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಸಾಕ್ಷಿಯನ್ನು ಉಲ್ಲೇಖಿಸಿ ವರದಿ ಮಾಡಿದ ರಾಯಿಟರ್ಸ್, ಐವರು  ಗುಂಡೇಟಿನಿಂದ ಸಾವನ್ನಪ್ಪಿದ್ದಾರೆಯೇ ಅಥವಾ ಕಾಲ್ತುಳಿತದಿಂದ ಸಾವನ್ನಪ್ಪಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಹೇಳಿದೆ.

ಕಾಬೂಲ್ ವಿಮಾನ ನಿಲ್ದಾಣನಲ್ಲಿ ಭಾರೀ ಜನಸಂದಣಿಯು ಸೇರಿದ್ದರಿಂದ ಅಮೆರಿಕದ ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿದರು ಎಂದು ಈ ಮೊದಲು ವರದಿಗಳು ಹೇಳಿವೆ.

ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಳ್ಳಲಾದ ವೀಡಿಯೊಗಳು ಅಫ್ಘಾನ್ ಪ್ರಜೆಗಳ ತಂಡವು ದೇಶದಿಂದ ಹೊರಹೋಗಲು ವಿಮಾನವನ್ನು ಏರಲು ಜೋತುಬೀಳುತ್ತಿರುವುದನ್ನು ತೋರಿಸಿದೆ.

NOTAM ನಲ್ಲಿ (ಏರ್‌ಮೆನ್‌ಗಳಿಗೆ ಸೂಚನೆ), ಕಾಬೂಲ್‌ನ ಹಮೀದ್ ಕರ್ಝೈ ವಿಮಾನ ನಿಲ್ದಾಣದ ನಾಗರಿಕರ ವಿಭಾಗವನ್ನು ಮುಚ್ಚಲಾಗಿದೆ ಹಾಗೂ  ವಿಮಾನ ನಿಲ್ದಾಣದ ವಾಯುಪ್ರದೇಶವನ್ನು ಸೇನೆಗೆ ಮುಕ್ತಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು.

ಏರ್ ಇಂಡಿಯಾ ಕೂಡ ಅಫ್ಘಾನ್ ವಾಯುಪ್ರದೇಶದ ಮೇಲೆ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಎಲ್ಲಾ ದಿಲ್ಲಿ-ಕಾಬೂಲ್-ದಿಲ್ಲಿ ವಿಮಾನಗಳನ್ನೂ ರದ್ದುಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News