ಉಗಾಂಡಾ: ಮಹಿಳೆಯರಿಗೆ ಮಿನಿಸ್ಕರ್ಟ್ ನಿಷೇಧಿಸುವ ವಿವಾದಾತ್ಮಕ ಕಾನೂನು ರದ್ದು

Update: 2021-08-18 17:52 GMT

ಕಂಪಾಲಾ, ಆ.18: ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಮಿನಿಸ್ಕರ್ಟ್ ಧರಿಸುವಂತಿಲ್ಲ ಮುಂತಾದ ವಿವಾದಾತ್ಮಕ ಅಂಶಗಳುಳ್ಳ, ಅಶ್ಲೀಲತೆಯನ್ನು ವಿರೋಧಿಸುವ 2014ರಲ್ಲಿ ಜಾರಿಯಾಗಿದ್ದ ಕಾನೂನನ್ನು ಉಗಾಂಡಾದ ಸಾಂವಿಧಾನಿಕ ನ್ಯಾಯಾಲಯ ಮಂಗಳವಾರ ರದ್ದುಗೊಳಿಸಿದೆ ಎಂದು ವರದಿಯಾಗಿದೆ. ಈ ಆದೇಶವನ್ನು ಮಹಿಳಾ ಹಕ್ಕುಗಳ ಸಂಘಟನೆಗಳು ಶ್ಲಾಘಿಸಿವೆ.

ಮಿನಿಸ್ಕರ್ಟ್ ವಿರೋಧಿ ಕಾನೂನು ಎಂದೇ ಕರೆಯಲಾಗುವ 2014ರ ಕಾನೂನು ಅಸಂಗತವಾಗಿದೆ ಮತ್ತು ಉಗಾಂಡಾ ಗಣರಾಜ್ಯದ ಸಂವಿಧಾನದ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಅಶ್ಲೀಲತೆ ವಿರೋಧಿ ಕಾಯ್ದೆಯ ಸೆಕ್ಷನ್‌ಗಳನ್ನು ರದ್ದುಗೊಳಿಸಲಾಗಿದೆ. ಅಲ್ಲದೆ ಈ ಕಾಯ್ದೆಯ ಅನುಷ್ಟಾನಕ್ಕೆ ರೂಪಿಸಲಾಗಿದ್ದ 9 ಸದಸ್ಯರ ಸಮಿತಿಯ ಅಧಿಕಾರವನ್ನೂ ಹಿಂಪಡೆಯಲಾಗಿದೆ ಎಂದು ನ್ಯಾಯಾಧೀಶ ಫ್ರೆಡೆರಿಕ್ ಎಗೋಂಡ ಮಂಗಳವಾರ ನೀಡಿದ ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಈ ತೀರ್ಪನ್ನು ಮಹಿಳಾ ಹಕ್ಕುಗಳ ಹೋರಾಟಗಾರರು ಸ್ವಾಗತಿಸಿದ್ದಾರೆ. ಇದೊಂದು ಕಠಿಣ ಹೋರಾಟವಾಗಿತ್ತು ಮತ್ತು ಮಹಿಳಾ ಹಕ್ಕುಗಳ ಬಗ್ಗೆ ವಿಶ್ವಾಸ ಇರಿಸಿರುವವರ ಬಗ್ಗೆ ನಾವು ಕೃತಜ್ಞರಾಗಿದ್ದೇವೆ ಎಂದು, ಕಾಯ್ದೆ ವಿರೋಧಿಸಿ ಅರ್ಜಿ ಸಲ್ಲಿಸಿದವರಲ್ಲಿ ಒಬ್ಬರಾಗಿರುವ ಲಿಲಿಯನ್ ಡ್ರಾಬೋ ಪ್ರತಿಕ್ರಿಯಿಸಿದ್ದಾರೆ.

ಮಿನಿ ಸ್ಕರ್ಟ್ ಧರಿಸುವುದು, ಅಶ್ಲೀಲ ಸಾಹಿತ್ಯವಿರುವ ಹಾಡುಗಳನ್ನು ರಚಿಸುವುದು ಕ್ರಿಮಿನಲ್ ಅಪರಾಧ ಎಂದು ಕಾಯ್ದೆ ಜಾರಿಯಾದ ಬಳಿಕ, ಅಶ್ಲೀಲ ಬಟ್ಟೆ ಧರಿಸಿದ ಆರೋಪದಲ್ಲಿ ಮಹಿಳೆಯರ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕಿರುಕುಳ ನೀಡುವ ಪ್ರಕರಣ ಹೆಚ್ಚಾಗಿತ್ತು. 2014ರಲ್ಲಿ ಹಾಡಿನ ವೀಡಿಯೊದಲ್ಲಿ ಕೇವಲ ಒಳ ಉಡುಪು ಧರಿಸಿ ಕಾಣಿಸಿಕೊಂಡಿದ್ದ ಉಗಾಂಡಾದ ಜನಪ್ರಿಯ ಪಾಪ್ ಗಾಯಕಿ ಜೆಮೀಮಾ ಕ್ಯಾನ್‌ಸ್ಲಿಮ್‌ರನ್ನು ಬಂಧಿಸಲಾಗಿತ್ತು. ಅವರ ವಿಚಾರಣೆ ಮುಂದುವರಿದಿದ್ದು ಅಪರಾಧ ಸಾಬೀತಾದರೆ 10 ವರ್ಷದ ಜೈಲುಶಿಕ್ಷೆಯಾಗುತ್ತದೆ. ಆದರೆ ಕಾಯ್ದೆ ರದ್ದಾಗಿರುವುದರಿಂದ ಅವರು ಖುಲಾಸೆಯಾಗುವ ಸಾಧ್ಯತೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News