ಇಸ್ರೇಲ್ ಆಕ್ರಮಣದ ಬಳಿಕ ಗಾಝಾದಿಂದ 4 ಸಾವಿರ ವಿದ್ಯಾರ್ಥಿಗಳ ಸ್ಥಳಾಂತರ

Update: 2021-08-20 14:36 GMT
file photo [PTI]

ಜೆರುಸಲೇಂ, ಆ.20: ಮೇ ತಿಂಗಳಿನಲ್ಲಿ ಇಸ್ರೇಲ್ ಆಕ್ರಮಣ ಆರಂಭವಾದಂದಿನಿಂದ ಗಾಝಾ ಪಟ್ಟಯಲ್ಲಿ ವಿಶ್ವಸಂಸ್ಥೆಯ ಉಸ್ತುವಾರಿಯಲ್ಲಿರುವ ಶಾಲೆಗಳಿಂದ 4 ಸಾವಿರಕ್ಕೂ ಅಧಿಕ ಪೆಲೆಸ್ತೀನ್ ವಿದ್ಯಾರ್ಥಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು ಅವರ ಶೈಕ್ಷಣಿಕ ಭವಿಷ್ಯ ಅನಿಶ್ಚಿತತೆಯಲ್ಲಿ ಸಿಲುಕಿದೆ ಎಂದು ವಿಶ್ವಸಂಸ್ಥೆಯ ರಕ್ಷಣೆ ಮತ್ತು ಪರಿಹಾರ ಏಜೆನ್ಸಿ(ಯುಎನ್ಆರ್ಡಬ್ಯ್ಲೂಎ)ಯ ವಕ್ತಾರರು ಹೇಳಿದ್ದಾರೆ.

 ಗಾಝಾ ಪಟ್ಟಿಯ ಸಮೀಪದ ಝೀಟೌನ್ ನಗರದಲ್ಲಿ ಯುಎನ್ಆರ್ಡಬ್ಲ್ಯೂಎ ಮೇಲುಸ್ತುವಾರಿಯಲ್ಲಿ ನಡೆಯುತ್ತಿರುವ 2 ಶಾಲೆಗಳು ಇಸ್ರೇಲ್ ನ ವಾಯುದಾಳಿಯಿಂದ ಹಾನಿಗೊಳಗಾದ ಬಳಿಕ ಅಲ್ಲಿಂದ ಸುಮಾರು 4 ಸಾವಿರ ಮಕ್ಕಳನ್ನು ಸ್ಥಳಾಂತರಿಸಲಾಗಿದೆ. 

ಈ ಮಧ್ಯೆ, 2 ವಾರದ ಬಳಿಕ ಕದನವಿರಾಮ ಒಪ್ಪಂದ ಏರ್ಪಟ್ಟಾಗ ವಿಶ್ವಸಂಸ್ಥೆಯ ಅಧಿಕಾರಿಗಳು ಹಾನಿಗೀಡಾದ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ, ಶಾಲೆಯ ಆವರಣದಲ್ಲಿ ನೆಲದೊಳಗೆ ಸುಮಾರು 7.5 ಮೀಟರ್ ಆಳದಲ್ಲಿ ಬೃಹತ್ ಕಂದಕವೊಂದು ಪತ್ತೆಯಾಗಿದೆ. ಈ ಬಗ್ಗೆ ವಿಚಾರಣೆ ನಡೆಸಿದಾಗ, ಗಾಝಾ ಪಟ್ಟಿಯನ್ನು ನಿಯಂತ್ರಿಸುತ್ತಿರುವ ಹಮಾಸ್ ಗುಂಪು ತನ್ನ ಯೋಧರ ಚಲನವಲನಕ್ಕಾಗಿ ನೆಲದಡಿ ಸುರಂಗಗಳ ಜಾಲವೊಂದನ್ನು ನಿರ್ಮಿಸಿದ್ದು ಇದು ವಿಶ್ವಸಂಸ್ಥೆ ಉಸ್ತುವಾರಿಯ ಶಾಲೆಗಳ ಆವರಣದ ಮೂಲಕ ಹಾದುಹೋಗಿರುವುದು ಬೆಳಕಿಗೆ ಬಂದಿದೆ.

ಇದೀಗ ಈ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳನ್ನು ಪುನರಾರಂಭಿಸಿದರೆ ಮಕ್ಕಳ ಜೀವಕ್ಕೆ ಅಪಾಯವಾಗಬಹುದೇ ಎಂಬ ಬಗ್ಗೆ ವಿಶ್ವಸಂಸ್ಥೆಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲು ಸ್ಥಳೀಯ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ವಿಶ್ವಸಂಸ್ಥೆಯ ಯಾವುದೇ ನಿರ್ಮಾಣವನ್ನು ಉಲ್ಲಂಸುವಂತಿಲ್ಲ ಮತ್ತು ಇವುಗಳ ತಟಸ್ಥತೆಯನ್ನು ಗೌರವಿಸಬೇಕು. ಶಾಲೆಯ ಅಡಿಯಲ್ಲಿ ಪೆಲೆಸ್ತೀನ್ನ ಸಶಸ್ತ್ರ ಗುಂಪುಗಳ ಸುರಂಗ ಮತ್ತು ಅದರ ಬಳಕೆಯನ್ನು ವಿಶ್ವಸಂಸ್ಥೆ ಕಠಿಣ ಶಬ್ದಗಳಲ್ಲಿ ಖಂಡಿಸಿದೆ. ಇದೀಗ ಪೆಲೆಸ್ತೀನ್ ಅಧಿಕಾರಿಗಳು ಶಾಲೆಯ ಪರಿಶೀಲನೆಗೆ ಅನುಮತಿ ನೀಡಿದ್ದು ಶೀಘ್ರ ಪರಿಶೀಲನೆ ನಡೆಸಲಾಗುವುದು ಎಂದವರು ಹೇಳಿದ್ದಾರೆ. ಇದೀಗ ವಿದ್ಯಾರ್ಥಿಗಳು ವಿಶ್ವಸಂಸ್ಥೆ ನಿರ್ಮಿಸಿದ ಇತರ ಶಾಲೆಗಳಿಗೆ ದಾಖಲಾಗಿದ್ದಾರೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News