"ನಾನು ಭಾಷಣದಲ್ಲಿ ಹಿಂಸೆಗೆ ಕರೆ ನೀಡಿಲ್ಲ, ನನ್ನ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ"

Update: 2021-08-23 12:44 GMT

ಹೊಸದಿಲ್ಲಿ: ತಾನು ತನ್ನ ಭಾಷಣದಲ್ಲಿ ಹಿಂಸೆಗೆ ಕರೆ ನೀಡಿಲ್ಲವಾದುದರಿಂದ ತನ್ನ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ಸಿಎಎ ಹಾಗೂ ಎನ್‍ಆರ್‍ಸಿ ವಿರುದ್ಧದ ಪ್ರತಿಭಟನೆಗಳ ವೇಳೆ ಪ್ರಚೋದನಕಾರಿ ಭಾಷಣಗಳನ್ನು ನೀಡಿದ ಆರೋಪದ ಮೇಲೆ ಬಂಧಿತರಾಗಿರುವ ಜೆಎನ್‍ಯು ವಿದ್ಯಾರ್ಥಿ ಶರ್ಜೀಲ್ ಇಮಾಮ್ ತಮ್ಮ ಜಾಮೀನು ಅರ್ಜಿಯಲ್ಲಿ ಹೇಳಿದ್ದಾರೆ.

ಎರಡು ವಿವಿಗಳಲ್ಲಿ ತಾನು ಮಾಡಿದ ಎರಡು ಭಾಷಣಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಜಾಮೀನು ಕೋರಿ ಇಮಾಮ್ ನ್ಯಾಯಾಲಯದ ಕದ ತಟ್ಟಿದ್ದರು. ತಮ್ಮ ಭಾಷಣದಲ್ಲಿ ಅವರು ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳನ್ನು ಭಾರತದಿಂದ ಕತ್ತರಿಸುವ ಬೆದರಿಕೆಯೊಡ್ಡಿದ್ದರೆಂದು ಆರೋಪಿಸಲಾಗಿತ್ತು. ಅವರ ವಿರುದ್ಧ ದೇಶದ್ರೋಹ ಪ್ರಕರಣದ ಹೊರತಾಗಿ ಅಕ್ರಮ ಚಟುವಟಿಕೆ ನಿಯಂತ್ರಣ ಕಾಯಿದೆಯನ್ನೂ ಹೇರಲಾಗಿತ್ತು.

ಶರ್ಜೀಲ್ ಪರ ವಾದ ಮಂಡಿಸಿದ ಅವರ ವಕೀಲ ತನ್ವೀರ್ ಅಹ್ಮದ್ ಮೀರ್, ತಮ್ಮ ಕಕ್ಷಿಗಾರರ ಭಾಷಣದ ಯಾವುದೇ ಭಾಗದಲ್ಲಿ ಹಿಂಸೆಗೆ ಪ್ರಚೋದನೆಯಿರಲಿಲ್ಲ ಎಂದು ಹೇಳಿದರು.

"ಈ ಕಾನೂನು (ಸಿಎಎ/ಎನ್‍ಆರ್‍ಸಿ) ಅಸಂವಿಧಾನಿಕ, ಸರಕಾರ ಅದರ ಕುರಿತು ಮರುಪರಿಶೀಲಿಸಬೇಕು ಹಾಗೆ ಮಾಡದೇ ಇದ್ದಲ್ಲಿ ನಾವು ಬೀದಿಗಿಳಿಯುತ್ತೇವೆ ಎಂದು ಶರ್ಜೀಲ್ ಇಮಾಂ ಹೇಳಿರುವಾಗ ಅದಕ್ಕಾಗಿ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವ ಹಾಗಿಲ್ಲ" ಎಂದು ವಕೀಲರು ತಮ್ಮ ವಾದ ಮಂಡನೆ ವೇಳೆ ಹೇಳಿದರು.

ಪ್ರತಿಭಟಿಸುವ, ಅಡ್ಡಿಯುಂಟು ಮಾಡುವ  ಹಾಗೂ ದೇಶವನ್ನು ಸ್ಥಬ್ಧಗೊಳಿಸುವ ಹಕ್ಕು ದೇಶದ್ರೋಹಕ್ಕೆ ಸಮವಲ್ಲ, ಅವರು ಕೇವಲ ರಸ್ತೆ ತಡೆ ಬಗ್ಗೆ ಹೇಳಿದ್ದರು. ಅವರು ಈಶಾನ್ಯ ಬೇರೆಯೇ ದೇಶವಾಗಬೇಕು ಹಾಗೂ ಸ್ವಾತಂತ್ರ್ಯ ಘೋಷಿಸಬೇಕೆಂದು ಹೇಳಿಲ್ಲ. ಹಾಗೆ ಹೇಳಿದ್ದರೆ ಅದು ದೇಶದ್ರೋಹವಾಗುತ್ತಿತ್ತು" ಎಂದು ವಕೀಲರು ಹೇಳಿದರು.

ಶರ್ಜೀಲ್ ಯಾವುದೇ ನಿಷೇಧಿತ ಸಂಘಟನೆ ಅಥವಾ ಉಗ್ರ ಸಂಘಟನೆಯ ಭಾಗವಾಗಿಲ್ಲ ಬದಲು ಕೇವಲ ಒಬ್ಬ ವಿದ್ಯಾರ್ಥಿಯಾಗಿದ್ದಾರೆ, ಎಂದೂ ಅವರು ಹೇಳಿದರು.

ದಿಲ್ಲಿಯ ಜಾಮಿಯಾ ಮಿಲ್ಲಿಯಾ ವಿವಿಯಲ್ಲಿ ಡಿಸೆಂಬರ್ 13, 2019ರಂದು ಹಾಗೂ ಆಲಿಘರ್ ಮುಸ್ಲಿಂ ವಿವಿಯಲ್ಲಿ ಡಿಸೆಂಬರ್ 16, 2019ರಲ್ಲಿ ನೀಡಿದ ಭಾಷಣಗಳಿಗೆ ಸಂಬಂಧಿಸಿದಂತೆ ಆತ ಜನವರಿ 28, 2020ರಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News