ರೈತ ಹೋರಾಟದ ಗರ್ಭಕ್ಕೆ ಒಂಭತ್ತು ತಿಂಗಳು

Update: 2021-08-25 04:55 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಬಹುಶಃ ಸ್ವಾತಂತ್ರೋತ್ತರ ಭಾರತದಲ್ಲಿ ಪ್ರಭುತ್ವದ ವಿರುದ್ಧ ತಳಸ್ತರದ ಜನರಿಂದ ಸುದೀರ್ಘ ಹೋರಾಟವೊಂದು ‘ರೈತರ ಮೂಲಕ’ ನಡೆಯುತ್ತಿದೆ. ಬ್ರಿಟಿಷರ ಕಾಲದಲ್ಲಿ ಜನರ ನಡುವೆ ಇಂತಹದೊಂದು ಹೋರಾಟ ಹುಟ್ಟಿಕೊಂಡಿತ್ತು. ರೈತರ ಮೇಲೆ ನಡೆದ ತೆರಿಗೆ ಶೋಷಣೆಗಳ ವಿರುದ್ಧದ ಸಣ್ಣ ಪುಟ್ಟ ಹೋರಾಟಗಳೇ ಮುಂದೆ ವಿಸ್ತಾರವಾಗುತ್ತ ಬ್ರಿಟಿಷರನ್ನು ಭಾರತದಿಂದ ಓಡಿಸುವ ಸ್ವಾತಂತ್ರ ಹೋರಾಟವಾಗಿ ಬೆಳೆದಿತ್ತು. ಇಂದು ನಮ್ಮದು ಪ್ರಜಾಸತ್ತಾತ್ಮಕವಾದ ದೇಶ. ಪ್ರಜೆಗಳೇ ಇಲ್ಲಿ ಪ್ರಭುಗಳು. ನಮ್ಮ ನೀತಿಯನ್ನು ನಾವೇ ರೂಪಿಸುತ್ತಿದ್ದೇವೆ ಎಂದು ಈವರೆಗೆ ನಂಬುತ್ತಾ ಬಂದಿದ್ದೆವು. ಆದರೆ ಅದು ಸುಳ್ಳು ಎನ್ನುವುದು ಕಳೆದ ಒಂದು ದಶಕಗಳಿಂದ ಜನರ ಅರಿವಿಗೆ ಬರುತ್ತಿದೆ. ಒಂದು ವೇಳೆ ಜನರ ಕಾಯ್ದೆಯನ್ನು ಜನರೇ ರೂಪಿಸುತ್ತಿರುವುದು ನಿಜವೇ ಆಗಿದ್ದರೆ, ಒಂಭತ್ತು ತಿಂಗಳಿನಿಂದ ರೈತರು ಕೃಷಿ ನೀತಿಯ ವಿರುದ್ಧ ದಿಲ್ಲಿಯ ಬೀದಿಯಲ್ಲಿ ಕಳೆಯುವ ಸ್ಥಿತಿ ಬರುತ್ತಿರಲಿಲ್ಲ. ಆರಂಭದಲ್ಲಿ ಬೇರೆ ತಂತ್ರಗಳ ಮೂಲಕ ರೈತರ ಪ್ರತಿಭಟನೆಯನ್ನು ಸರಕಾರ ದಮನಿಸಲು ನೋಡಿತು. ಪ್ರತಿಭಟನೆ ನಡೆಸುತ್ತಿರುವವರು ರೈತರೇ ಅಲ್ಲ ಎಂದಿತು. ಬಳಿಕ, ಅವರನ್ನು ಉಗ್ರಗಾಮಿಗಳು ಎಂದು ಕರೆಯಿತು. ಗಣರಾಜ್ಯೋತ್ಸವದ ದಿನ ಶಾಂತವಾಗಿ ನಡೆಯುತ್ತಿದ್ದ ರ್ಯಾಲಿಯನ್ನು ಉದ್ವಿಗ್ನಗೊಳಿಸಲು ಯತ್ನಿಸಿತು. ಇದಾದ ಬಳಿಕ ಕೊರೋನ ಹೆಸರಿನಲ್ಲಿ ರೈತರನ್ನು ಎಬ್ಬಿಸುವ ಬೆದರಿಕೆಯೊಡ್ಡಿತು. ದಿಲ್ಲಿಯಲ್ಲಿ ನೆರೆದ ರೈತರಿಗೆ ನೀರು, ಊಟ ಸಿಗದ ಸ್ಥಿತಿಯನ್ನು ನಿರ್ಮಿಸಿತು. ಇವಾವುದಕ್ಕೂ ಜಗ್ಗದ ರೈತ ಹೋರಾಟ ಆಗಸ್ಟ್ 26ಕ್ಕೆ ತನ್ನ ಒಂಭತ್ತು ತಿಂಗಳನ್ನು ಪೂರೈಸಲಿದೆ.

   ಸಾಧಾರಣವಾಗಿ ಒಂಭತ್ತನೇ ತಿಂಗಳು ಅತ್ಯಂತ ಮಹತ್ವ ಪೂರ್ಣವಾದ ತಿಂಗಳು. ಹೆಣ್ಣು ಗರ್ಭ ಧರಿಸಿ ಅಂತಿಮ ಹೆರಿಗೆಗೆ ಸಿದ್ಧವಾಗುವುದು ಒಂಭತ್ತು ತಿಂಗಳ ಬಳಿಕ. ಅಲ್ಲಿಯವರೆಗೆ ಆಕೆ ಅತ್ಯಂತ ಸಂಯಮದಿಂದ, ಜಾಗರೂಕತೆಯಿಂದ ಆ ಗರ್ಭವನ್ನು ಕಾಪಾಡಿಕೊಳ್ಳಬೇಕು. ಇಲ್ಲವಾದರೆ ಮಗುವಿಗೆ ತೊಂದರೆಯಾಗಬಹುದು ಅಥವಾ ಅಬಾರ್ಷನ್‌ನಂತಹ ಸ್ಥಿತಿ ನಿರ್ಮಾಣವಾಗಬಹುದು. ಸಹಜ ಹೆರಿಗೆ ಕಷ್ಟವಾಗಬಹುದು. ಈ ನಿಟ್ಟಿನಲ್ಲಿ ಒಬ್ಬ ತಾಯಿ ತನ್ನ ಮಗುವನ್ನು ಬಸಿರಲ್ಲಿ ಕಾಪಾಡಿಕೊಂಡು ಬಂದಷ್ಟೇ ಜಾಗರೂಕತೆಯಿಂದ ರೈತರು ತಮ್ಮ ಹೋರಾಟವನ್ನು ಕಾಪಾಡಿಕೊಂಡು ಬಂದಿದ್ದಾರೆ. ಎಲ್ಲೂ ಆವೇಶಕ್ಕೆ ತಲೆ ಕೊಟ್ಟಿಲ್ಲ. ಸಾವಿರಾರು ಜನರು ಭಾಗವಹಿಸಿದ ಗಣರಾಜ್ಯೋತ್ಸವ ರ್ಯಾಲಿ ಹಿಂಸೆಗೆ ಕಾರಣವಾಗಬಹುದು ಎನ್ನುವ ಭಯ ಬಹುತೇಕ ಎಲ್ಲರಿಗೂ ಇತ್ತು. ಭಾವೋದ್ವೇಗಕ್ಕೆ ಬಲಿಯಾಗಿ ಪ್ರತಿಭಟನಾಕಾರರು ಪೊಲೀಸರ ಲಾಠಿಯ ವಿರುದ್ಧ ಹಿಂಸೆಗೆ ಇಳಿದಿದ್ದರೆ, ಅದು ಪ್ರಭುತ್ವದ ಗೆಲುವಾಗಿ ಬಿಡುತ್ತಿತ್ತು. ಅದಾಗಲೇ ರೈತರ ತಲೆಗೆ ಉಗ್ರರ ಪಟ್ಟ ಕಟ್ಟಲು ಹೊಂಚು ಹಾಕುತ್ತಿದ್ದ ಪ್ರಭುತ್ವಕ್ಕೆ ಪ್ರತಿಭಟನಾಕಾರರೇ ಸಹಾಯ ಮಾಡಿದಂತಾಗುತ್ತಿತ್ತು. ರಾಷ್ಟ್ರಮಟ್ಟದಲ್ಲಿ ಕಟ್ಟಿ ಬೆಳೆಸಿದ ಹೋರಾಟ ಅರ್ಧದಲ್ಲೇ ಗರ್ಭಪಾತವಾಗಿ ಬಿಡುತ್ತಿತ್ತು. ಆದರೆ ಕಳೆದ ಎಂಟು ತಿಂಗಳಲ್ಲಿ 60ಕ್ಕೂ ಅಧಿಕ ರೈತರು ರಸ್ತೆಯಲ್ಲೇ ಪ್ರಾಣ ತ್ಯಾಗ ಮಾಡಿದರೂ, ಪ್ರತಿಭಟನಾಕಾರರು ಸಿಟ್ಟಿಗೇಳದೆ, ಹಿಂಸೆಗಿಳಿಯದೆ ‘ನಾವು ಈ ನೆಲದ ನಿಜವಾದ ರೈತರು’ ಎನ್ನುವುದು ಸಾಬೀತು ಮಾಡಿದರು. ರೈತರ ಸಹನೆಯೇ ಪ್ರಭುತ್ವಕ್ಕೆ ನುಂಗಲಾರದ ತುತ್ತಾಗಿದೆ. ಇಲ್ಲವಾದರೆ ಇಡೀ ಪ್ರತಿಭಟನೆಯನ್ನು ಸಿಎಎ ಪ್ರತಿಭಟನಾಕಾರರನ್ನು ದಮನಿಸಿದಂತೆ ದಮನಿಸಿ ಬಿಡುತ್ತಿತ್ತು. ಇದೀಗ ಒಂಭತ್ತು ತಿಂಗಳು ಪೂರ್ತಿಯಾಗುವ ಹಿನ್ನೆಲೆಯಲ್ಲಿ ಆಗಸ್ಟ್ 26ರಿಂದ ಎರಡು ದಿನಗಳ ರೈತ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ರೈತರನ್ನು ಪ್ರತಿನಿಧಿಸಿ 1,500 ಮಂದಿ ಮುಖಂಡರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ. ಮುಂದಿನ ಕಾರ್ಯಯೋಜನೆಗಳನ್ನು, ಪ್ರತಿಭಟನೆಗಳ ಸ್ವರೂಪವನ್ನು ಈ ಸಮಾವೇಶದಲ್ಲಿ ಚರ್ಚಿಸಲಾಗುವುದು ಎಂದು ರೈತ ಮುಖಂಡರು ಹೇಳಿದ್ದಾರೆ. ಈ ಸಮಾವೇಶದಲ್ಲಿ ಹುಟ್ಟುವ ಕೂಸು ಹೋರಾಟಕ್ಕೆ ಹೊಸ ದಿಕ್ಕನ್ನು ನೀಡುವ ಎಲ್ಲ ಸಾಧ್ಯತೆಗಳಿವೆ.

ಸ್ವಾತಂತ್ರೋತ್ತರ ಭಾರತ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಪ್ರಭುತ್ವದ ವಿರುದ್ಧ ಪಕ್ಷಾತೀತ ಹೋರಾಟವೊಂದಕ್ಕೆ ಸಾಕ್ಷಿಯಾಗಿತ್ತು. ಅದರ ಹೊರತು, ಅಂತಹದೇ ಇನ್ನೊಂದು ಪಕ್ಷಾತೀತ ಹೋರಾಟವೊಂದಕ್ಕೆ ಇದೀಗ ನಾವು ಸಾಕ್ಷಿಯಾಗುತ್ತಿದ್ದೇವೆ. ತುರ್ತು ಪರಿಸ್ಥಿತಿಯ ಹೋರಾಟಗಾರರಿಗೂ, ರೈತ ಹೋರಾಟಗಾರರಿಗೂ ವ್ಯತ್ಯಾಸವೊಂದಿದೆ. ಆ ಹೋರಾಟದಲ್ಲಿ ಭಾಗವಹಿಸಿದ ಬಹುತೇಕರು ರಾಜಕಾರಣಿಗಳು. ಹಾಗೆಯೇ ಸಮಾಜದ ಮೇಲ್‌ಸ್ತರಕ್ಕೆ ಸೇರಿದ ವಿದ್ಯಾವಂತರು. ಅವರಲ್ಲೂ ಚಿಂತಕರು, ಪತ್ರಕರ್ತರು, ಬರಹಗಾರರು. ಆದರೆ ಈ ಬಾರಿಯ ಹೋರಾಟ ತಳಸ್ತರದಿಂದ ಹೊರಹೊಮ್ಮಿದೆ. ಇಲ್ಲಿ ಹೋರಾಡುತ್ತಿರುವವರು ರೈತರೆಂದು ಕರೆಸಿಕೊಂಡವರು. ಅಷ್ಟೇ ಅಲ್ಲ ತುರ್ತು ಪರಿಸ್ಥಿತಿಯಲ್ಲಿ ಧ್ವನಿಯೆತ್ತಿದ ಮೇಲ್‌ಸ್ತರದ ವರ್ಗ ಈ ಹೋರಾಟದಿಂದ ದೂರ ಉಳಿದಿದೆ ಮಾತ್ರವಲ್ಲ, ಪ್ರಭುತ್ವದ ಜೊತೆಗೆ ನಿಂತಿದ್ದಾರೆ. ಅಂದು ಹೋರಾಡುವುದಕ್ಕೆ ಹೋರಾಟಗಾರರ ಮುಂದೆ ಸರ್ವಾಧಿಕಾರಿ ಪ್ರಭುತ್ವವೊಂದಿತ್ತು. ಆದರೆ ಇಂದು ಪ್ರಜಾಸತ್ತಾತ್ಮಕ ಮುಖವಾಡದಲ್ಲಿ ಸರ್ವಾಧಿಕಾರಿ ಅಧಿಕಾರದಲ್ಲಿದ್ದಾನೆ ಮತ್ತು ತನ್ನೆಲ್ಲ ಜನವಿರೋಧಿ ನೀತಿಗಳನ್ನು, ರೈತ ವಿರೋಧಿ ನೀತಿಗಳನ್ನು ಪ್ರಜಾಸತ್ತಾತ್ಮಕ ದಾರಿಯಲ್ಲೇ ಅನುಷ್ಠಾನಗೊಳಿಸುತ್ತಿದ್ದಾನೆ. ಆದುದರಿಂದಲೇ, ಈ ಹೋರಾಟದ ದಾರಿ ಅತ್ಯಂತ ಕ್ಲಿಷ್ಟಕರವಾದುದು. ಶತ್ರು ಇಲ್ಲಿ ‘ನಮ್ಮವರ’ ರೂಪದಲ್ಲಿದ್ದಾನೆ. ದೇಶದ ರೈತರು, ಕಾರ್ಮಿಕರು, ಬಿಡಿ ವ್ಯಾಪಾರಿಗಳು, ಸಣ್ಣ ಉದ್ದಿಮೆದಾರರು ಹಂತ ಹಂತವಾಗಿ ತಮ್ಮ ಹಕ್ಕುಗಳನ್ನು ಕಳೆದುಕೊಂಡು ಕಾರ್ಪೊರೇಟ್ ಗುಲಾಮರಾಗುತ್ತಿರುವ ಈ ಸಂದರ್ಭದಲ್ಲಿ, ಭಾರತವನ್ನು ಉಳಿಸುವುದಕ್ಕೆ ಇರುವ ಸಣ್ಣ ೆಳಕಿನ ಕಿರಣವಾಗಿದೆ ರೈತ ಹೋರಾಟ.

ರೈತರ ಒಳಿತಿಗೆ ನೀತಿಯನ್ನು ಜಾರಿಗೊಳಿಸುತ್ತಿದ್ದೇನೆ ಎಂದು ಪದೇ ಪದೇ ತನ್ನನ್ನು ಸಮರ್ಥಿಸಿಕೊಳ್ಳುತ್ತಿರುವ ಸರಕಾರ, ಮೊತ್ತ ಮೊದಲು ಹೋರಾಟಗಾರರು ರೈತರು ಎನ್ನುವುದನ್ನು ಮನಃಪೂರ್ವಕವಾಗಿ ಒಪ್ಪಿಕೊಳ್ಳಬೇಕು. ಕಾನೂನು ರೈತರಿಗೆ ಒಳಿತನ್ನು ಮಾಡುತ್ತದೆಯಾದರೆ, ಅವರೇಕೆ ಕಳೆದ ಒಂಭತ್ತು ತಿಂಗಳಿಂದ ಬೀದಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆಯನ್ನು ತನಗೆ ತಾನೇ ಕೇಳಿಕೊಳ್ಳಬೇಕು. ರೈತರಿಗೆ ಬೇಡವಾದ ನೀತಿಯನ್ನು ತಾನು ಯಾರಿಗಾಗಿ ಅತ್ಯುತ್ಸಾಹದಿಂದ ಅನುಷ್ಠಾನಗೊಳಿಸುತ್ತಿದ್ದೇನೆ ಎಂಬ ಬಗ್ಗೆ ಆತ್ಮವಿಮರ್ಶೆ ನಡೆಸಬೇಕು. ಈ ನೀತಿಯಿಂದ ರೈತರಿಗೆ ಎಷ್ಟು ಲಾಭ? ಅಂಬಾನಿ, ಅದಾನಿಗಳಿಗೆ ಎಷ್ಟು ಲಾಭ? ಎನ್ನುವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು. ಪ್ರತಿಭಟನಾಕಾರರು ಸುಸ್ತಾಗಿ ಮನೆಗೆ ಮರಳುತ್ತಾರೆ ಎನ್ನುವ ಒಂದೇ ಒಂದು ಆಶಾವಾದವಷ್ಟೇ ಸರಕಾರದ ಬಳಿ ಇದೆ. ಆದರೆ ರೈತ ಹೋರಾಟ ಇನ್ನಷ್ಟು ಬಲವಾಗುತ್ತಿದೆ ಎನ್ನುವ ವಾಸ್ತವವನ್ನು ಸರಕಾರ ಅರ್ಥ ಮಾಡಿಕೊಳ್ಳಲೇ ಬೇಕಾಗಿದೆ. ನೀರು ಮೂಗಿನವರೆಗೆ ಬಂದ ಬಳಿಕ ತಲೆ ಮೇಲಿರುವ ಎರಡು ಮರಿಕೋತಿಗಳನ್ನು ಕೆಳ ಹಾಕಿ ನೀರಿನಿಂದ ಹಾರುವುದಕ್ಕಿಂತ, ಸೊಂಟದವರೆಗೆ ನೀರು ಬಂದಾಗಲೇ ಎಚ್ಚೆತ್ತುಕೊಳ್ಳುವುದು ಸರಕಾರಕ್ಕೂ, ದೇಶಕ್ಕೂ ಒಳ್ಳೆಯದು. ಆದುದರಿಂದ, ಪ್ರತಿಷ್ಠೆಯನ್ನು ಬದಿಗಿಟ್ಟು ರೈತರ ಮನದಾಳವನ್ನು ಆಲಿಸಿ, ರೈತ ನೀತಿಗಳನ್ನು ರೈತರ ಬೇಡಿಕೆಗಳಂತೆ ರೂಪಿಸಲು ಮುಂದಾಗಬೇಕು. ದೇಶದ ಸ್ವಾತಂತ್ರಕ್ಕೂ, ಆಹಾರ ಸ್ವಾವಲಂಬನೆಗೂ ನೇರ ಸಂಬಂಧವಿದೆ. ಆದುದರಿಂದ ಅನ್ನ ಬೆಳೆಯುವ ರೈತರ ಹೋರಾಟ ಇನ್ನೊಂದು ಸ್ವಾತಂತ್ರ ಹೋರಾಟವೇ ಆಗಿದೆ. ಈ ಭೂಮಿಯ ಮೇಲಿನ ಹಕ್ಕನ್ನು, ಈ ಭೂಮಿಯಲ್ಲಿ ಬೆಳೆಯುವ ಆಹಾರದ ಮೇಲಿನ ಹಕ್ಕನ್ನು ಉಳಿಸಿಕೊಳ್ಳುವ ಕಟ್ಟ ಕಡೆಯ ಈ ಹೋರಾಟಕ್ಕೆ ಹೊಟ್ಟೆಗೆ ಅನ್ನ ತಿನ್ನುವ ಎಲ್ಲ ಮೇಲ್‌ಸ್ತರದಲ್ಲಿರುವ ಪತ್ರಕರ್ತರು, ಲೇಖಕರು, ಕವಿಗಳು, ಉಪನ್ಯಾಸಕರೂ ಜೋಡಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News