ಆನ್‌ಲೈನ್ ಶಿಕ್ಷಣಕ್ಕೆ ಬಲಿಯಾಗದಿರಲಿ ಏಕಲವ್ಯರ ಹೆಬ್ಬೆರಳುಗಳು

Update: 2021-08-26 05:04 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಈ ದೇಶದ ಮೊತ್ತ ಮೊದಲ ಆನ್‌ಲೈನ್ ಶಿಕ್ಷಣದ ವಿದ್ಯಾರ್ಥಿ ಯಾರು? ನಿಸ್ಸಂಶಯವಾಗಿ ಏಕಲವ್ಯ. ಗುರು ದ್ರೋಣಾಚಾರ್ಯರ ಬಳಿ ಶಿಕ್ಷಣ ಕಲಿಯಲೆಂದು ಆತ ಹೋದಾಗ ‘ಕ್ಷತ್ರಿಯರಿಗಲ್ಲದೆ ಇನ್ನೊಬ್ಬರಿಗೆ ವಿದ್ಯೆ ಕಲಿಸುವುದಿಲ್ಲ’ ಎಂದು ನಿರಾಕರಿಸಿದ. ಆದರೆ ಕಲಿಕೆಯಲ್ಲಿ ಅಪಾರ ಆಸಕ್ತಿಯನ್ನು ಹೊಂದಿದ್ದ ಏಕಲವ್ಯ, ಮತ್ತೆ ತನ್ನ ಗುಡಿಸಲಿಗೆ ಮರಳಿ, ಅಲ್ಲಿ ಸಾಂಕೇತಿಕವಾಗಿ ದ್ರೋಣಾಚಾರ್ಯನ ಮೂರ್ತಿಯನ್ನು ಮಾಡಿ, ಅದರ ಮುಂದೆ ಬಿಲ್ವಿದ್ಯೆಯನ್ನು ಕಲಿತು, ದ್ರೋಣಾಚಾರ್ಯರ ಶಿಷ್ಯ ಅರ್ಜುನನನ್ನೂ ಮೀರಿಸಿದ. ‘ಶಬ್ದವೇಧಿ’ ವಿದ್ಯೆಯಲ್ಲೂ ಪಾರಂಗತನಾದ. ಅಂದರೆ ಬರೇ ಪ್ರಾಣಿಗಳ ಶಬ್ದವನ್ನು ಕೇಳಿ, ಅವುಗಳಿಗೆ ಗುರಿ ಇಡುವುದು. ಏಕಲವ್ಯ ಶಬ್ದವೇಧಿ ವಿದ್ಯೆಯಲ್ಲಿ ಪಾರಂಗತನಾದುದು ತಿಳಿದದ್ದೇ ದ್ರೋಣಾಚಾರ್ಯರು ಏಕಲವ್ಯನ ಬಳಿ ಧಾವಿಸಿ, ಗುರುದಕ್ಷಿಣೆಯಾಗಿ ಆತನ ಹೆಬ್ಬೆರಳನ್ನು ಕೇಳಿದರು. ಏಕಲವ್ಯ ಗುರುದಕ್ಷಿಣೆಯನ್ನು ಅರ್ಪಿಸಿ ತನ್ನ ಗುರು ಭಕ್ತಿಯನ್ನು ಪ್ರದರ್ಶಿಸಿದ. ಆದರೆ ಹೆಬ್ಬೆರಳು ಇಲ್ಲದೇ ಬಾಣ ಬಿಡುವುದಕ್ಕೆ ಸಾಧ್ಯವೇ ಇಲ್ಲ. ಸ್ವ ಪರಿಶ್ರಮದಿಂದ ಕಲಿತ ವಿದ್ಯೆಯನ್ನು, ಸಾಂಕೇತಿಕ ಗುರುವಿಗಾಗಿ ಆತ ತ್ಯಾಗ ಮಾಡಿದ ಅಥವಾ ಒಂದು ರೀತಿಯಲ್ಲಿ ಮೋಸ ಹೋದ. ಕ್ಷತ್ರಿಯ ಕುಲಕ್ಕೆ ಯಾವ ಸ್ಪರ್ಧಿಗಳೂ ಇರಬಾರದು ಎನ್ನುವ ಒಂದೇ ಒಂದು ಸ್ವಾರ್ಥದಿಂದ ದ್ರೋಣಾಚಾರ್ಯರು ಏಕಲವ್ಯನ ಹೆಬ್ಬೆರಳನ್ನು ಕಿತ್ತುಕೊಂಡರು. ಇಂದು ಈ ದೇಶದ ಕೋಟ್ಯಂತರ ಏಕಲವ್ಯರು ಶಬ್ದವೇಧಿ ವಿದ್ಯೆಯನ್ನು ಗುರುಗಳಿಲ್ಲದೆಯೇ ಕಲಿಯಲು ಮುಂದಾಗಿದ್ದಾರೆ. ಆನ್‌ಲೈನ್ ಶಿಕ್ಷಣ ಎಂಬ ಹಣೆಪಟ್ಟಿಯನ್ನು ಇದಕ್ಕೆ ನೀಡಲಾಗಿದೆ. ಈ ಶಿಕ್ಷಣದಲ್ಲಿ ಅರ್ಜುನಾದಿ ಶಿಷ್ಯರಿಗೆ ಸಿಗುವ ಸವಲತ್ತು ಈ ಏಕಲವ್ಯರಿಗಿಲ್ಲ. ಈ ಶಬ್ದವೇಧಿ ಕಲಿಕೆಯಲ್ಲಿ ಅದೆಷ್ಟು ಏಕಲವ್ಯರು ತಮ್ಮ ಹೆಬ್ಬೆರಳುಗಳನ್ನು ಕಳೆದುಕೊಳ್ಳಲಿದ್ದಾರೆ ಎನ್ನುವುದನ್ನು ಭವಿಷ್ಯವೇ ಹೇಳಬೇಕು.

ಈ ಕಲಿಕೆಯಲ್ಲಿ ಅರ್ಜುನ ಪ್ರತಿನಿಧಿಸುವ ಶ್ರೀಮಂತ ಮೇಲ್‌ವರ್ಗ ಯಾವುದೇ ರೀತಿಯ ತೊಂದರೆಯನ್ನು ಅನುಭವಿಸುತ್ತಿಲ್ಲ. ಆರ್ಥಿಕವಾಗಿ ಸಬಲರಾಗಿರುವ ವಿದ್ಯಾರ್ಥಿಗಳು ಅತ್ಯುತ್ತಮ ಮೊಬೈಲ್, ಟ್ಯಾಬ್‌ಗಳ ಮೂಲಕ ಶಿಕ್ಷಣವನ್ನು ತನ್ನದಾಗಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ಶ್ರೀಮಂತವರ್ಗ ವಿದ್ಯಾವಂತ ಕುಟುಂಬ ಹಿನ್ನೆಲೆಯನ್ನು ಹೊಂದಿರುತ್ತದೆ. ಅಲ್ಲಿ ಸಹಜವಾಗಿಯೇ ತಮ್ಮ ಮಕ್ಕಳಿಗೆ ಶೈಕ್ಷಣಿಕ ಮಾರ್ಗದರ್ಶನ ನೀಡಬಲ್ಲ ಪಾಲಕರಿರುತ್ತಾರೆ. ಜೊತೆಗೆ ಖಾಸಗಿಯಾಗಿ ಮನೆಯಲ್ಲೇ ಟ್ಯೂಶನ್ ನೀಡುವ ವ್ಯವಸ್ಥೆಯನ್ನೂ ಮಾಡಿರುತ್ತಾರೆ. ಆದರೆ ಇತ್ತ, ಗುಡಿಸಲಲ್ಲಿರುವ ಏಕಲವ್ಯರು ಕೈಯಲ್ಲಿ ಮೊಬೈಲ್‌ಗಳೂ ಇಲ್ಲದೆ ಚಡಪಡಿಸುತ್ತಿದ್ದಾರೆ. ಮೊಬೈಲ್‌ಗಳಿದ್ದರೂ ನೆಟ್‌ವರ್ಕ್‌ಗಳಿಲ್ಲದೆ ಗುರುಗಳ ಧ್ವನಿಯೂ ಕೇಳಿಸದಂತಹ ಸ್ಥಿತಿ ಅವರದು. ಇತ್ತೀಚೆಗಷ್ಟೇ ಒಬ್ಬ ವಿದ್ಯಾರ್ಥಿ ನೆಟ್‌ವರ್ಕ್ ಹುಡುಕುತ್ತಾ ಬಂಡೆಯ ಮೇಲೆ ಹತ್ತಿ, ಅದರಿಂದ ಕೆಳಗುರುಳಿ ಮೃತಪಟ್ಟ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಯಿತು. ಕತ್ತಲಲ್ಲೇ ಕಂಡ ಅಕ್ಷರಗಳನ್ನು ಮುಟ್ಟಿ, ಕಲಿಯಬೇಕಾದ ಕುರುಡರ ಸ್ಥಿತಿ ಇವರದು. ಒಂದು ರೀತಿಯಲ್ಲಿ ಮಹಾಭಾರತದ ಏಕಲವ್ಯರ ಸ್ಥಿತಿಗಿಂತಲೂ ಇವರ ಸ್ಥಿತಿ ಚಿಂತಾಜನಕ. ಯಾಕೆಂದರೆ ಆ ಏಕಲವ್ಯನಿಗೆ ಕಣ್ಣುಗಳಾದರೂ ಇದ್ದವು. ಇವರು ಕಣ್ಣಿದ್ದೂ ಕುರುಡರು. ಕನಿಷ್ಠ ತನ್ನದೇ ಬಿಲ್ಲುಬಾಣವಾದರೂ ಅವರ ಬಳಿಯಿತ್ತು. ದುರದೃಷ್ಟಕ್ಕೆ ಈ ಏಕಲವ್ಯರ ಬಳಿ ಅಂತಹ ಬಿಲ್ಲು ಬಾಣಗಳೂ ಇಲ್ಲ. ಶಬ್ದಗಳನ್ನು ಆಲಿಸಲು ತನ್ನದೇ ಕಿವಿಗಳು ಏಕಲವ್ಯನಿಗಿತ್ತು. ಆದರೆ ನೆಟ್‌ವರ್ಕ್ ಇಲ್ಲದೆ ಕಿವಿಗಳಿದ್ದೂ ಇವರು ಕಿವುಡರು. ಕನಿಷ್ಠ ಪಠ್ಯ ಪುಸ್ತಕಗಳನ್ನಾದರೂ ವಿದ್ಯಾರ್ಥಿಗಳಿಗೆ ತಲುಪಿಸಿದ್ದಿದ್ದರೆ ಏಕಲವ್ಯನಂತೆ ನಿರಾಳವಾಗಿ ತಮಗೆ ತಾವೇ ಗುರುಗಳಾಗಿ ವಿದ್ಯೆ ಕಲಿಯುತ್ತಿದ್ದರು.

ಶಾಲೆ ಆರಂಭವಾಗಿ ಹಲವು ತಿಂಗಳುಗಳು ಕಳೆದಿವೆಯಾದರೂ ಅವರಿಗೆ ಇನ್ನೂ ಪಠ್ಯ ಪುಸ್ತಕಗಳೇ ತಲುಪಿಲ್ಲ. ಪಠ್ಯ ಪುಸ್ತಕ ವಿತರಣೆಗೆ ಸಂಬಂಧಿಸಿದಂತೆ ಈಗಾಗಲೇ ಹೈಕೋರ್ಟ್ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಕಾಟಾಚಾರಕ್ಕೆ ತರಗತಿ ಆರಂಭಿಸದೇ ಪಠ್ಯ ಪುಸ್ತಕಗಳನ್ನು ಒದಗಿಸಿ ಎಂದು ಅದು ಸರಕಾರಕ್ಕೆ ಸೂಚನೆ ನೀಡಿದೆ. 9ರಿಂದ 12ನೇ ತರಗತಿಯವರೆಗೆ ಈಗಾಗಲೇ ಪಿಡಿಎಫ್ ರೂಪದಲ್ಲಷ್ಟೇ ಪಠ್ಯವನ್ನು ವಿತರಿಸಲಾಗಿದೆ ಎಂದು ಸರಕಾರ ಹೇಳಿಕೊಂಡಿದೆ. ಈ ಪಿಡಿಎಫ್ ಪಠ್ಯ ಪುಸ್ತಕಗಳನ್ನು ಓದಬೇಕೆಂದರೂ ಮೊಬೈಲ್‌ಗಳ ಅಗತ್ಯವಿದೆ. ಜೊತೆಗೆ ಅವುಗಳನ್ನು ಡೌನ್‌ಲೋಡ್ ಮಾಡಲು ಪ್ರತ್ಯೇಕ ವೆಚ್ಚಗಳನ್ನು ವಿದ್ಯಾರ್ಥಿಗಳು ಭರಿಸಬೇಕು. ಮೊಬೈಲ್‌ಗಳೇ ಇಲ್ಲದ ವಿದ್ಯಾರ್ಥಿಗಳಿಗೆ ಈ ಪಿಡಿಎಫ್ ಪಠ್ಯಗಳು ತಲುಪುವ ಬಗೆ ಹೇಗೆ? ಇತ್ತ ಸರಕಾರ ಭೌತಿಕವಾಗಿ ತರಗತಿ ಆರಂಭಿಸಿದ್ದರೂ, ಗೊಂದಲಗಳು ಮಾತ್ರ ಮುಗಿದಿಲ್ಲ. ಒಂದನೇ ತರಗತಿಯಿಂದ ಎಂಟನೆ ತರಗತಿಯವರೆಗಿನ ವಿದ್ಯಾರ್ಥಿಗಳು ಪಕ್ಕಕ್ಕಿರಲಿ. ಆರಂಭಗೊಂಡಿರುವ ಭೌತಿಕ ತರಗತಿಯೂ ಆತಂಕದಿಂದಲೇ ಮುಂದುವರಿಯುತ್ತಿದೆ.

ಪಠ್ಯ ಪುಸ್ತಕಗಳು ಪಿಡಿಎಫ್ ರೂಪದಲ್ಲಿರುವ ಕಾರಣ, ಮೊಬೈಲ್ ಜೊತೆಗೇ ವಿದ್ಯಾರ್ಥಿಗಳು ಶಾಲೆಗಳಿಗೆ ಆಗಮಿಸಬೇಕಾಗುತ್ತದೆ. ಯಾವುದೇ ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿಯಲ್ಲಿ ಕೊರೋನ ಸೋಂಕು ಕಂಡು ಬಂದರೂ ಆ ಶಾಲೆಗೆ ನಿರ್ಬಂಧ ಹೇರಲಾಗುತ್ತದೆ ಎಂದು ಈಗಾಗಲೇ ಸಚಿವರು ಹೇಳಿದ್ದಾರೆ. ಒಂದು ಶಾಲೆ ತೆರೆದಿದ್ದು, ಇನ್ನೊಂದು ಮುಚ್ಚಿದ್ದರೆ ಕಲಿಕೆಯಲ್ಲಿ ಅಸಮಾನತೆ ಸೃಷ್ಟಿಯಾಗುವುದಿಲ್ಲವೇ? ಎಷ್ಟೇ ಜಾಗರೂಕತೆವಹಿಸಿದರೂ ಕೊರೋನ ಸೋಂಕು ಹರಡುವುದನ್ನು ತಡೆಯುವುದಕ್ಕೆ ಸಾಧ್ಯವಿಲ್ಲ ಎನ್ನುವುದು ಈಗಾಗಲೇ ಸಾಬೀತಾಗಿದೆ. ಕೊರೋನ ಸೋಂಕಿನಿಂದ ಒಂದು ಶಾಲೆ ಮುಚ್ಚಲ್ಪಟ್ಟರೆ, ಆ ಶಾಲೆಯ ವಿದ್ಯಾರ್ಥಿಗಳ ಮಾನಸಿಕ ಒತ್ತಡ, ಆತಂಕಗಳಿಗೆ ಸರಕಾರ ಯಾವ ರೀತಿಯಲ್ಲಿ ಪರಿಹಾರವನ್ನು ನೀಡುತ್ತದೆ. ಉಳಿದೆಲ್ಲ ಶಾಲೆಗಳ ವಿದ್ಯಾರ್ಥಿಗಳು ಭೌತಿಕ ತರಗತಿಗಳನ್ನು ಪಡೆಯುತ್ತಿರುವಾಗ ಈ ಒಂದು ಶಾಲೆಯ ವಿದ್ಯಾರ್ಥಿಗಳು ಅದರಿಂದ ವಂಚಿತರಾಗುವುದು ಅವರಲ್ಲಿ ಖಿನ್ನತೆಯನ್ನು ಸೃಷ್ಟಿಸುವುದಿಲ್ಲವೆ?

ಒಟ್ಟಿನಲ್ಲಿ ಆನ್‌ಲೈನ್ ಕಲಿಕೆ ಎನ್ನುವ ‘ಶಬ್ದವೇಧಿ’ ವಿದ್ಯೆಯಿಂದ ಹೆಬ್ಬೆರಳನ್ನು ಕಳೆದುಕೊಳ್ಳುವ ಬಹುತೇಕರು ಬಡ ವರ್ಗದ ವಿದ್ಯಾರ್ಥಿಗಳೇ ಆಗಿದ್ದಾರೆ. ಗುರುದಕ್ಷಿಣೆ ನೀಡಿಯೂ ವಿದ್ಯೆಯಿಂದ ವಂಚಿತರಾಗಬೇಕಾದ ಸ್ಥಿತಿ ಅವರದು. ಮಹಾಭಾರತ ಕಾಲದಲ್ಲಿ, ಕ್ಷತ್ರಿಯರಿಗಷ್ಟೇ ವಿದ್ಯೆ ಎನ್ನುವ ಪರಿಕಲ್ಪನೆ ಈ ಲಾಕ್‌ಡೌನ್ ಕಾಲದಲ್ಲಿ ಹೊಸ ವೇಷದಿಂದ ಶೈಕ್ಷಣಿಕ ವಲಯದೊಳಗೆ ಪ್ರವೇಶವಾಗಿದೆ. ಇತ್ತ ಶಿಕ್ಷಕರದೋ ಬಡ ದ್ರೋಣಾಚಾರ್ಯರ ಸ್ಥಿತಿ. ಒಮ್ಮೆ ಶಾಲೆ ಆರಂಭವಾದರೆ ಸಾಕು, ತಮ್ಮ ಉದ್ಯೋಗ ಉಳಿದರೆ ಸಾಕು, ವೇತನ ಸಿಕ್ಕಿದರೆ ಸಾಕು ಎನ್ನುವಂತಹ ಸ್ಥಿತಿಯಲ್ಲಿ ಅವರಿದ್ದಾರೆ. ಈ ಎಲ್ಲ ಆತಂಕಗಳ ನಡುವೆ ವಿದ್ಯಾರ್ಥಿಗಳ ಕುರಿತಂತೆ ವಿಶೇಷ ಕಾಳಜಿ ವಹಿಸುವಂತಹ ಸ್ಥಿತಿಯಲ್ಲಿ ಅವರಿಲ್ಲ. ಹೆಚ್ಚಿನ ಶಿಕ್ಷಕರು ಶ್ರೀಮಂತ ಮಕ್ಕಳಿಗೆ ಗುಟ್ಟಾಗಿ ಟ್ಯೂಶನ್ ಹೇಳಿಕೊಡುತ್ತಾ ಆರ್ಥಿಕ ಸಮಸ್ಯೆಗಳನ್ನು ಸರಿದೂಗಿಸಿಕೊಳ್ಳುತ್ತಿದ್ದಾರೆ.

ಖಾಸಗಿ ಶಾಲೆಗಳ ದೊಡ್ಡ ಸಂಖ್ಯೆಯ ಶಿಕ್ಷಕರು ವೃತ್ತಿಯನ್ನೇ ತೊರೆದು ಸಣ್ಣ ಪುಟ್ಟ ಗೂಡಂಗಡಿಗಳನ್ನು ತೆರೆದು ಕೂತಿದ್ದಾರೆ. ಇಲ್ಲಿ ಶಿಕ್ಷಕರೂ ಅಸಹಾಯಕರು. ಇಂತಹ ಸಂದರ್ಭದಲ್ಲಿ ಏಕಲವ್ಯರ ಹೆಬ್ಬೆರಗಳುಗಳ ರಕ್ಷಣೆಯ ಹೊಣೆಗಾರಿಕೆಯನ್ನು ಸರಕಾರ ಹೊರಬೇಕು.ಏಕಲವ್ಯನ ಹೆಬ್ಬೆರಳಿಗೆ ಭವಿಷ್ಯದಲ್ಲಿ ದ್ರೋಣಾಚಾರ್ಯರು ತಮ್ಮ ಕೊರಳನ್ನೇ ಬಲಿಕೊಡಬೇಕಾಗಿ ಬಂತು. ಇಂದಿನ ಏಕಲವ್ಯನ ಹೆಬ್ಬೆರಳು ಈ ದೇಶದ ಭವಿಷ್ಯದ ಕೊರಳು. ಇಂದಿನ ತಪ್ಪಿಗೆ ನಮ್ಮ ದೇಶದ ಭವಿಷ್ಯ ಕೊರಳು ಕೊಡಬೇಕಾದ ಸನ್ನಿವೇಶ ನಿರ್ಮಾಣವಾಗಬಾರದು. ಆದುದರಿಂದ, ಸರಕಾರ ತಕ್ಷಣ ಶಿಕ್ಷಣ ವ್ಯವಸ್ಥೆಯೊಳಗಿರುವ ಗೊಂದಲಗಳನ್ನು ಸರಿಪಡಿಸಲು ತಂಡವೊಂದನ್ನು ರಚಿಸಬೇಕು. ಯಾವುದೇ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಅನ್ಯಾಯವಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಆ ತಂಡಕ್ಕೆ ಸರಕಾರ ನೀಡಬೇಕು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಇತರೆಲ್ಲ ಕ್ಷೇತ್ರಗಳಿಗೆ ವಿಶೇಷ ಪರಿಹಾರವನ್ನು ಒದಗಿಸಿದಂತೆ, ಶಿಕ್ಷಣ ಕ್ಷೇತ್ರಕ್ಕೂ ವಿಶೇಷ ಅನುದಾನವನ್ನು ಘೋಷಿಸಿ, ಇಡೀ ರಾಜ್ಯದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ದೊರೆಯುವಂತೆ ಮಾಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News