ಅಫ್ಘಾನ್ ದುರಂತ: ಅತ್ತ ಅಮೆರಿಕ, ಚೀನಾಗಳು-ಇತ್ತ ತಾಲಿಬಾನಿಗಳು!

Update: 2021-08-25 19:30 GMT

ಭಾಗ-2

ತಾಲಿಬಾನ್- ಬಾಣಲೆಯಿಂದ ಬೆಂಕಿಗೆ ಅಫ್ಘಾನ್
ಈ ಸಮಯದಲ್ಲಿ ಚಾಲ್ತಿಗೆ ಬಂದವರೇ ತಾಲಿಬಾನಿಗಳು. ಅಫ್ಘಾನಿಸ್ತಾನದಲ್ಲಿ ಪ್ರಧಾನವಾಗಿರುವ ಪಶ್ತೂನ್ ಜನಾಂಗಕ್ಕೆ ಸೇರಿದ ಸುನ್ನಿ ಮುಸ್ಲಿಮರಾದ ಈ ತಾಲಿಬಾನಿಗಳು ಸೌದಿ ಮೂಲದ ಅತ್ಯಂತ ಪ್ರತಿಗಾಮಿ ವಹಾಬಿ ಇಸ್ಲಾಮಿನಲ್ಲಿ ವಿಶ್ವಾಸವಿಡುತ್ತಾರೆ. ಹೀಗಾಗಿ ಸೌದಿ ಮೂಲದ ಅಲ್‌ಖಾಯಿದಾ ಸಂಸ್ಥಾಪಕ ಉಸಾಮಾ ಬಿನ್ ಲಾದೆನ್ ಕೂಡ ಇವರಿಗೆ ಗುರುವೇ. ಭಾರತದ ಕಟ್ಟರ್ ಮನುವಾದಿಗಳಂತೆ ಇಸ್ಲಾಮಿನ ಬಗ್ಗೆ ವಹಾಬಿ ವ್ಯಾಖ್ಯಾನವೂ ಕೂಡಾ ಮಹಿಳೆಯರು ಶಿಕ್ಷಣ-ನೌಕರಿ ಮಾಡದೆ ಗಂಡಸಿನ ಸೇವೆ ಮಾಡಬೇಕೆಂದು ತಾಕೀತು ಮಾಡುತ್ತದೆ. ಇಸ್ಲಾಮ್ ಎಲ್ಲರೂ ಸಮಾನರು ಎಂದು ಹೇಳಿದರೂ ತಾಲಿಬಾನಿಗಳು ಮಾತ್ರ ಭೂ ಹಂಚಿಕೆ ಹಾಗೂ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ವಿರೋಧಿಸುತ್ತದೆ. ಕಮ್ಯುನಿಸ್ಟರನ್ನು ದೈವದ್ರೋಹಿ ಕಾಫಿರರೆಂದು ಕೊಲ್ಲುವ ಈ ಪಂಥ ಅಮೆರಿಕನ್ ಸಾಮ್ರಾಜ್ಯವಾದಕ್ಕೆ ಮಾತ್ರ ಹತ್ತಿರದ ಸ್ನೇಹಿತರು. ಅವರ ಸಹಕಾರದ ಫಲಾನುಭವಿಗಳು ಮತ್ತು ಅಮೆರಿಕ-ರಶ್ಯಗಳ ನಡುವಿನ ಯುದ್ಧದಲ್ಲಿ ಅಮೆರಿಕದ ಏಜೆಂಟರಾಗಿ ಕೆಲಸ ಮಾಡಿದವರು. ಮುಜಾಹಿದೀನ್‌ಗಳಿಗಿಂತ ಸಂಘಟಿತ ಕಟ್ಟರ್ ಶಿಸ್ತಿನ ಪಡೆಯೂ ಆದ ತಾಲಿಬಾನಿಗಳಿಗೆ ಪಾಕಿಸ್ತಾನವೇ ಸಂಪೂರ್ಣ ಶಿಕ್ಷಣ ಹಾಗೂ ತರಬೇತಿಯನ್ನು ಕೊಟ್ಟಿದೆ ಹಾಗೂ ಅಮೆರಿಕವೂ ಶಸ್ತ್ರಾಸ್ತ್ರ ಸರಬರಾಜನ್ನು ಮಾಡಿದೆ.

1992ರಲ್ಲಿ ಮುಜಾಹಿದೀನ್‌ಗಳ ಅಂತಃಕಲಹ ಮತ್ತೊಮ್ಮೆ ಅಫ್ಘಾನಿಸ್ತಾನದಲ್ಲಿ ಅಸ್ಥಿರತೆಯನ್ನು ಹುಟ್ಟುಹಾಕುತ್ತಿದ್ದಾಗ ತಾಲಿಬಾನಿಗಳು ತಮ್ಮ ಉನ್ಮತ್ತ ಶಿಸ್ತು ಹಾಗೂ ಸಮರಶೀಲತೆಯಿಂದ ಹಾಗೂ ಪಾಕಿಸ್ತಾನದ ಸೈನಿಕ ಬೆಂಬಲದೊಂದಿಗೆ ಇಡೀ ಅಫ್ಘಾನಿಸ್ತಾನವನ್ನು ಗೆದ್ದುಕೊಳ್ಳುತ್ತಾರೆ. 1995ರಲ್ಲಿ ಕಾಬೂಲನ್ನು ವಶಪಡಿಸಿಕೊಂಡು ಇಡೀ ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಳ್ಳುತ್ತಾರೆ. ವಿಶ್ವಸಂಸ್ಥೆಯ ಕಚೇರಿಯಲ್ಲಿದ್ದ ಈ ಹಿಂದಿನ ಅಧ್ಯಕ್ಷ ನಜೀಬುಲ್ಲಾರನ್ನು ಹೊರಗೆ ಎಳೆತಂದು ಚಿತ್ರಹಿಂಸೆ ಕೊಟ್ಟು ಕೊಂದು ಅವರ ಹೆಣವನ್ನು ತನ್ನ ವಿಜಯದ ಬಾವುಟದಂತೆ ಕಂಬಕ್ಕೆ ನೇತುಹಾಕುತ್ತಾರೆ. ಇಲ್ಲಿಂದ ಅಫ್ಘನ್ನರ ಬದುಕು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಯಿತು. 1995-2001ರ ತನಕ ತಾಲಿಬಾನ್‌ಗಳು ಇಸ್ಲಾಮಿನ ಹೆಸರಿನಲ್ಲಿ, ಶರಿಯತ್‌ನ ಹೆಸರಿನಲ್ಲಿ ತನ್ನದೇ ಆದ ಅತ್ಯಂತ ಕ್ರೂರ ಹಾಗೂ ಬರ್ಬರ ಆಡಳಿತವನ್ನು ನಡೆಸಿದ್ದು ನಾವೆಲ್ಲರೂ ನೋಡಿಯೇ ಇದ್ದೇವೆ. ಮಹಿಳೆಯರ ಎಲ್ಲಾ ಅಧಿಕಾರವನ್ನು ಅಮಾನತ್ತಿನಲ್ಲಿಟ್ಟ ತಾಲಿಬಾನಿಗಳು ಎಲ್ಲರ ಮಾನವ ಹಕ್ಕುಗಳನ್ನು ಬರ್ಖಾಸ್ತು ಮಾಡುತ್ತಾರೆ. ಗ್ರಾಮೀಣ ಅಫ್ಘಾನಿಸ್ತಾನದಲ್ಲಿ ಮತ್ತೊಮ್ಮೆ ಪಾಳೆಗಾರರ-ಮುಲ್ಲಾಗಳ ಹಕ್ಕು ಬಲಗೊಳ್ಳುತ್ತದೆ. ರೈತಾಪಿ ಹಾಗೂ ಬಡವರ ಬದುಕು ಅತ್ಯಂತ ದಾರುಣವಾಯಿತು. ಆದರೆ ಇವೆಲ್ಲವನ್ನೂ ನೋಡಿಯೂ ಅಮೆರಿಕ ನೇತೃತ್ವದ ಪಾಶಿಮಾತ್ಯ ಪ್ರಜಾತಂತ್ರಗಳು ತಾಲಿಬಾನಿನ ಆಡಳಿತಕ್ಕೆ ಸಹಾಯವನ್ನು, ಅವರ ಬರ್ಬರ ಕ್ರೌರ್ಯಕ್ಕೆ ಮೌನ ಬೆಂಬಲವನ್ನೇ ಮುಂದುವರಿಸಿದವು. ಅದು ತಮ್ಮ ಬುಡಕ್ಕೆ ಬರುವವರೆಗೆ ಮಾತ್ರ..

ಸೆಪ್ಟಂಬರ್ 11 ಮತ್ತು ತಾಲಿಬಾನಿಗಳ ವಿರುದ್ಧ ಅಮೆರಿಕದ ಸೋಗಲಾಡಿ ಯುದ್ಧ

2001ರ ಸೆಪ್ಟಂಬರ್ 11ರಂದು ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ಭಯೋತ್ಪಾದಕ ದಾಳಿ ನಡೆಯಿತು. ಅಮೆರಿಕದ ಪ್ರಕಾರ ಅದನ್ನು ನಡೆಸಿದ್ದು ಅಲ್ ಖಾಯಿದಾ. ಅದರ ನಾಯಕ ತಾನು ಸಾಕಿದ ಕೂಸಾದ ಉಸಾಮ ಬಿನ್ ಲಾದೆನ್ ಅಫ್ಘಾನಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದಾನೆಂದು ಆರೋಪಿಸಿತು ಹಾಗೂ ಆತನನ್ನು ಕೂಡಲೇ ತನ್ನ ಅವಶಕ್ಕೆ ಒಪ್ಪಿಸಬೇಕೆಂದು ತಾಲಿಬಾನಿಗೆ ತಾಕೀತು ಮಾಡಿತು. ಪುರಾವೆ ಒದಗಿಸಿದರೆ ವಶಕ್ಕೆ ಒಪ್ಪಿಸುವುದಾಗಿ ತಾಲಿಬಾನ್ ಗೋಗೆರೆದರೂ ಕೇಳದ ಅಮೆರಿಕ ವಿಶ್ವಮಟ್ಟದಲ್ಲಿ ತನಗಾದ ಅವಮಾನಕ್ಕೆ ಸೇಡು ತೀರಿಸಿಕೊಳ್ಳಬೇಕಾದ ತುರ್ತಿನಿಂದ ಅಫ್ಘಾನಿಸ್ತಾನದ ಮೇಲೆ ಸೈನಿಕ ದಾಳಿ ಮಾಡಿತು. ಅಪಾರ ವಾಯುಬಲ ಹಾಗೂ ಶಸ್ತ್ರಾಸ್ತ್ರ ಬಲ ಹೊಂದಿದ್ದ ಅಮೆರಿಕದ ದಾಳಿಯನ್ನು ತಡೆದುಕೊಳ್ಳಲಾಗದ ತಾಲಿಬಾನ್ ಸರಕಾರ ಒಂದೇ ವಾರದಲ್ಲಿ ಕುಸಿಯುತ್ತದೆ. ತಾಲಿಬಾನಿಗಳು ಗ್ರಾಮೀಣ ಗಿರಿಕಂದರಗಳ ಹಿಂದೆ ಸರಿದರು. ಅಫ್ಘಾನಿಸ್ತಾನದ ಉತ್ತರ ಭಾಗದಲ್ಲಿ ತಾಲಿಬಾನಿನಿಂದ ಸೋತು ತಲೆಮರೆಸಿಕೊಂಡಿದ್ದ ತನ್ನ ಕೈಗೊಂಬೆ ಮಾಜಿ ಮುಜಾಹಿದೀನ್‌ಗಳಿಗೆ ಅಮೆರಿಕ ಹೊಸಬಟ್ಟೆ ಹಾಕಿಸಿ ಹೊಸ ಹೆಸರುಕೊಟ್ಟು ಕಾಬೂಲಿನಲ್ಲಿ ಸ್ಥಾಪಿಸಿತು. 2004ರಲ್ಲಿ ಹೊಸ ಸಂವಿಧಾನದ ನಾಟಕವೂ ನಡೆಯಿತು. ಮೊದಲು ಹಾಮಿದ್ ಕರ್ಝಾಯಿ ಆನಂತರ ಮೊನ್ನೆ ಆಗಸ್ಟ್ 15ರ ವರೆಗೆ ಅಶ್ರಫ್ ಘನಿ ಅಧ್ಯಕ್ಷರಾಗುತ್ತಾರೆ. ಕರ್ಝಾಯಿ ಅಮೆರಿಕದ ಸಿಐಎಯಿಂದ ಹಣಪಡೆಯುತ್ತಿದ್ದ ಏಜೆಂಟಾದರೆ ಘನಿ ವರ್ಲ್ಡ್ ಬ್ಯಾಂಕ್ ಉದ್ಯೋಗಿ. ಮೊನ್ನೆಯವರೆಗೆ ಉಪಾಧ್ಯಕ್ಷನಾಗಿದ್ದ ಅಹ್ಮದ್ ಸಾಲಿಹ್ ಕೂಡಾ ಸಿಐಎ ಏಜೆಂಟ್. ಇದು ಕೇವಲ ಕೆಲವು ಉದಾಹರಣೆಗಳಷ್ಟೆ.

ಅಮೆರಿಕದ 20 ವರ್ಷ- ಛಿದ್ರಗೊಂಡ, ಭಗ್ನಗೊಂಡ ಅಫ್ಘಾನಿಸ್ತಾನ

2001-21ರ ವರೆಗೆ ಅಘಾನಿಸ್ತಾನದಲ್ಲಿ ದ್ದದ್ದು ಅಮೆರಿಕದ ಕೈಗೊಂಬೆ ಸರಕಾರವೇ. ಉಸಾಮ ಬಿನ್ ಲಾದೆನ್ ಅನ್ನು ಕೊಂದು ಹಾಕುವ ಹಾಗೂ ಆತನಿಗೆ ಆಶ್ರಯ ಕೊಟ್ಟಿದ್ದ ತಾಲಿಬಾನಿಗಳನ್ನು ಮಣಿಸುವ ಘೋಷಿತ ಉದ್ದೇಶದಿಂದ ಅಫ್ಘಾನಿಸ್ತಾನಕ್ಕೆ ಬಂದ ಅಮೆರಿಕಕ್ಕೆ ಲಾದೆನ್ ಅಲ್ಲಿಲ್ಲ ಎಂಬುದು ಬಹಳ ಬೇಗನೆ ಅರಿವಿಗೆ ಬಂತು. 2011ರಲ್ಲಿ ಲಾಡೆನ್ ಪಾಕಿಸ್ತಾನದ ಅಬೊಟಾಬಾದ್‌ನಲ್ಲಿ ಅಮೆರಿಕ ಪಡೆಗಳಿಂದ ಹತ್ಯೆಯಾದ. ಆ ವೇಳೆಗಾಗಲೇ ತಾಲಿಬಾನ್‌ಗಳೂ ಗ್ರಾಮೀಣ ಪ್ರಾಂತದಲ್ಲಿ ತಲೆಮರೆಸಿಕೊಂಡು ನಿತ್ರಾಣರಾದರು. ಹೀಗೆ ಘೋಷಿತ ಉದ್ದೇಶಗಳು ಈಡೇರಿದ ಮೇಲೂ ಅಮೆರಿಕ ಸುಮಾರು ಒಂದು ಲಕ್ಷ ಸೈನ್ಯದೊಡನೆ ಅಫ್ಘಾನಿಸ್ತಾನದಲ್ಲೇ ಶಾಶ್ವತ ಠಿಕಾಣಿ ಹೂಡಿತು. ಹೇಳಿದ ಕಾರಣ ಅಫ್ಘಾನಿಸ್ತಾನದಲ್ಲಿ ಸ್ಥಿರತೆಯ ಮತ್ತು ಪ್ರಜಾತಂತ್ರದ ಮರುಸ್ಥಾಪನೆಯಾದರೂ ಅದರ ದೂರಗಾಮಿ ಉದ್ದೇಶ ನಿಧಾನವಾಗಿ ಬಲಾಢ್ಯವಾಗುತ್ತಿದ್ದ ಚೀನಾ-ರಶ್ಯಗಳ ಪ್ರಭಾವವು ಆ ಭೂಭಾಗದಲ್ಲಿ ವಿಸ್ತರಣೆಯಾಗದಂತೆ ತಡೆಯೊಡ್ಡುವುದು ಮತ್ತು ಅಫ್ಘಾನಿಸ್ತಾನದ ಪೆಟ್ರೋಲ್, ನೈಸರ್ಗಿಕ ಅನಿಲ ಹಾಗೂ ಖನಿಜ ಸಂಪನ್ಮೂಲಗಳ ಮೇಲೆ ನಿಯಂತ್ರಣ ಸ್ಥಾಪಿಸಿಕೊಳ್ಳುವುದೇ ಆಗಿತ್ತು. ಈ ಸಾಮ್ರಾಜ್ಯವಾದಿ ಆರ್ಥಿಕ ಉದ್ದೇಶದಿಂದ ಅಫ್ಘಾನಿಸ್ತಾನವನ್ನು ಅಮೆರಿಕ ಕಳೆದ ಇಪ್ಪತ್ತು ವರ್ಷಗಳು ಆಂತರಿಕ ವಸಾಹತುವಾಗಿ ಬಳಸಿಕೊಂಡಿದೆ. ಅಮೆರಿಕದ ವ್ಯಾಟ್ಸನ್ ಯುದ್ಧ ವೆಚ್ಚ ಸಂಸ್ಥೆಯ ಪ್ರಕಾರ ಕಳೆದ ಇಪ್ಪತ್ತು ವರ್ಷಗಳಲ್ಲಿ ಅಮೆರಿಕವು ಅಫ್ಘಾನಿಸ್ತಾನದಲ್ಲಿ ಮಾಡಿರುವ ವೆಚ್ಚ 2.5-6.4 ಟ್ರಿಲಿಯನ್ ಡಾಲರ್‌ಗಳು. ಅಂದರೆ 150 ಲಕ್ಷ ಕೋಟಿಯಿಂದ-470 ಲಕ್ಷ ಕೋಟಿ ರೂಪಾಯಿಗಳು. ಹಾಗೆ ನೋಡಿದರೆ ಈಗಲೂ ಅಫ್ಘಾನಿಸ್ತಾನದ ಜಿಡಿಪಿ ಕೇವಲ 20 ಬಿಲಿಯನ್ ಡಾಲರ್ ಅಂದರೆ 1.5 ಲಕ್ಷ ಕೋಟಿ ರೂಪಾಯಿಗಳು. ಅಂದರೆ ಅಫ್ಘಾನಿಸ್ತಾನದ ಜಿಡಿಪಿಗಿಂತ ಆಮೆರಿಕವು 2,000 ಪಟ್ಟು ಹೆಚ್ಚು ವೆಚ್ಚ ಮಾಡಿದೆ. ಆದರೆ 2008ರಲ್ಲಿ ಶೇ. 60 ಭಾಗದಷ್ಟು ಅಫ್ಘಾನ್ ಜನರು ಬಡತನ ರೇಖೆಗಿಂತ ಕೆಳಗಿದ್ದರೆ ಅಮೆರಿಕ ಆಧಿಪತ್ಯ ಮತ್ತು ಇಷ್ಟೆಲ್ಲಾ ವೆಚ್ಚಗಳ ನಂತರ 2018ರಲ್ಲಿ ಬಡತನ ರೇಖೆಯ ಕೆಳಗಿರುವವರ ಸಂಖ್ಯೆ ಶೇ. 30ರಷ್ಟು ಏರಿಕೆಯಾಗಿ ಶೇ. 90ಕ್ಕೆ ತಲುಪಿದೆ. ದೇಶದ ಅರ್ಧ ಭಾಗದಷ್ಟು ಪ್ರದೇಶಗಳಲ್ಲಿ ಕುಡಿಯುವ ನೀರಿಲ್ಲ. ದೇಶದ ಮುಕ್ಕಾಲು ಭಾಗದಲ್ಲಿ ವಿದ್ಯುತ್ತಿಲ್ಲ. ಶೇ. 90 ಭಾಗ ಜನ ಕೃಷಿಯನ್ನೇ ನೆಚ್ಚಿಕೊಂಡಿದ್ದಾರೆ.

ಹಾಗಿದ್ದಲ್ಲಿ 470 ಲಕ್ಷ ಕೋಟಿ ರೂಪಾಯಿ ಎಲ್ಲಿ ಹೋಯಿತು? 
ಇದರಲ್ಲಿ ಪ್ರಧಾನ ಭಾಗವನ್ನು ಅಮೆರಿಕ ಖರ್ಚು ಮಾಡಿದ್ದು ಅಫ್ಘಾನ್ ಸೈನಿಕರ ತರಬೇತಿ ಮತ್ತು ಶಸ್ತ್ರಾಸ್ತ್ರ ಸರಬರಾಜಿಗೆ. ಅಫ್ಘಾನ್ ಜನರ ತಲಾವಾರು ಆದಾಯ ಈ ಅವಧಿಯಲ್ಲಿ 2 ಡಾಲರ್ ಆಗಿದ್ದರೆ ಇದೇ ಆವಧಿಯಲ್ಲಿ ಆದ ತಲಾವಾರು ಸೈನಿಕ ವೆಚ್ಚ 22 ಡಾಲರ್.
 ಅಮೆರಿಕ ವೆಚ್ಚ ಮಾಡಿದ ಬಹುಪಾಲು ಹಣ ಸೇರಿದ್ದು ಅಮೆರಿಕ ನೋಂದಾಯಿಸಿಕೊಂಡಿದ್ದ ಭ್ರಷ್ಟ ಸೇನಾಧಿಕಾರಿಗಳ ಜೋಬಿಗೆ, ಸೈನ್ಯಕ್ಕೆ ಸರಬರಾಜು ಮಾಡುತ್ತಿದ್ದ 16,000 ಗುತ್ತಿಗೆದಾರರಿಗೆ, ಇದೆಲ್ಲದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅಮೆರಿಕದ ಸೇನಾಧಿಕಾರಿಗಳಿಗೆ ಹಾಗೂ ಅಮೆರಿಕದ ಶಸ್ತ್ರಾಸ್ತ್ರ ಕಂಪೆನಿಗಳಿಗೆ. ಅಮೆರಿಕದ ಈ ಭ್ರಷ್ಟ ಸಾಮ್ರಾಜ್ಯದಲ್ಲಿ ಅಫ್ಘಾನ್‌ಜನರಿಗೆ ಯಾವುದೇ ಲಾಭವಾಗುವುದಿರಲಿ ಅಮೆರಿಕ ನಿಗಾದಲ್ಲಿ ಕಟ್ಟಲಾದ 3 ಲಕ್ಷ ಸಾಮರ್ಥ್ಯದ ಅಫ್ಘಾನ್ ಸೈನ್ಯ ಅತ್ಯಂತ ಕಡುಭ್ರಷ್ಟ ಸೇನೆಯಾಯಿತು. ಸಾಮಾನ್ಯ ಸೈನಿಕರ ಯಾವುದೇ ವಿಶ್ವಾಸಕ್ಕೆ ಅರ್ಹವಲ್ಲದ ಪರಾವಲಂಬಿಯಾಯಿತು. ಅಮೆರಿಕದ ಈ ಭ್ರಷ್ಟಾಚಾರ ಯಾವ ಮಟ್ಟದಲ್ಲಿತ್ತೆಂದರೆ ಅಮೆರಿಕದ ಸೆನೆಟ್‌ಗೆ ನೀಡಿದ ವರದಿಯೊಂದು ಸ್ಪಷ್ಟಪಡಿಸುವಂತೆ ಸುಮಾರು 43,000 ಸೈನಿಕರು ಇಲ್ಲದಿದ್ದರೂ ಅವರ ಹೆಸರಲ್ಲಿ ಸಂಬಳ ಪಾವತಿಯಾಗುತ್ತಿತ್ತು. ಹೀಗಾಗಿಯೇ ಅಮೆರಿಕದ ಸೇನೆ ಹಿಂದೆಗೆದುಕೊಳ್ಳುತ್ತಿದ್ದಂತೆ ಯಾವುದೇ ಯುದ್ಧ ಮಾಡದೆ ಸೈನಿಕರು ತಾಲಿಬಾನಿಗಳ ಜೊತೆ ಸೇರಿಕೊಂಡರು.

ಸಿಐಎ ಕಟ್ಟಿದ ಕೊಲೆಗಡುಕ ಖಾಸಗಿ ಅಫೀಮು ಪಡೆ!
ಅಷ್ಟು ಮಾತ್ರವಲ್ಲದೆ, ಇದೇ ಅವಧಿಯಲ್ಲಿ ಅಮೆರಿಕದ ಸಿಐಎ ತನ್ನ ನೇರ ಉಸ್ತುವಾರಿಯಲ್ಲಿ 3,500ಕ್ಕೂ ಹೆಚ್ಚು ಕೊಲೆಗಡುಕ ಪಡೆಯೊಂದನ್ನು ಸಾಕಿಕೊಂಡಿತ್ತು. ಇದು ಯಾವುದೇ ಕಾನೂನುಕಟ್ಟಳೆಗಳ ನಿರ್ಬಂಧವಿಲ್ಲದೆ ಅಫ್ಘಾನಿಸ್ತಾನದಲ್ಲಿ ಪರ್ಯಾಯ ಸರಕಾರದಂತೆ ಕಾರ್ಯಾಚರಣೆ ಮಾಡುತ್ತಿತ್ತು. ಇವರ ಸಂಬಳ, ಸಾರಿಗೆ ನೋಡಿಕೊಳ್ಳುವುದಕ್ಕಾಗಿ ಸಿಐಎಯ ನೇರ ಉಸ್ತುವಾರಿಯಲ್ಲಿ ಅಫೀಮನ್ನು ಬೆಳೆಯಲಾಗುತ್ತಿತ್ತು. 1989ರ ವೇಳೆಗೆ ಅಫ್ಘಾನಿಸ್ತಾನದಲ್ಲಿ ಹೆಚ್ಚೆಂದರೆ 150 ಟನ್ ಅಫೀಮು ಉತ್ಪಾದನೆಯಾಗುತ್ತಿದ್ದರೆ 2019ರ ವೇಳೆಗೆ 6,900 ಟನ್ ಅಫೀಮು ಉತ್ಪಾದನೆಯಾಗುತ್ತಿತ್ತು. ಅಮೆರಿಕದ ಉಸ್ತುವಾರಿಯಲ್ಲಿ ಈಗ ಅಫ್ಘಾನಿಸ್ತಾನ ಜಗತ್ತಿನಲ್ಲೇ ದೊಡ್ಡ ಅಫೀಮು ಉತ್ಪಾದಕನಾಗಿದೆ.

ಅಫ್ಘಾನಿಸ್ತಾನದ 35 ಲಕ್ಷಕ್ಕೂ ಹೆಚ್ಚು ಯುವಜನ ಅಫೀಮು ಹಾಗೂ ಇನ್ನಿತರ ಡ್ರಗ್‌ಗಳ ದಾಸರಾಗಿದ್ದಾರೆ. ಇದು ಅಫ್ಘಾನಿಸ್ತಾನಕ್ಕೆ ಅಮೆರಿಕ ಸಾಮ್ರಾಜ್ಯವಾದ ಕೊಡುಗೆ. ತಾಲಿಬಾನಿಗಳೂ ಅಫೀಮು ವ್ಯಾಪಾರದ ಫಲಾನುಭವಿಗಳೇ ಆಗಿದ್ದಾರೆ. ಒಟ್ಟಾರೆ ಅಮೆರಿಕ ಪ್ರಾಯೋಜಿತ ಈ ಅರಾಜಕತೆಯಲ್ಲಿ ಲಕ್ಷಾಂತರ ಅಫ್ಘ್ಘಾನ್ ನಾಗರಿಕರು ಮೃತರಾಗಿರುವುದಲ್ಲದೆ ಸಾಮಾಜಿಕ ಹಂದರವೇ ಛಿದ್ರಗೊಂಡಿದೆ. ಹೀಗಾಗಿ ಅಮೆರಿಕ ಸೈನ್ಯ ಅಫ್ಘಾನಿಸ್ತಾನಕ್ಕೆ ಸಹಾಯ ಮಾಡಿದೆ ಎನ್ನುವುದಾಗಲೀ, ಅಮೆರಿಕನ್ನರು ಉಳಿದುಕೊಂಡಿದ್ದರೆ ಅ್ಘನ್ನರ ವಿಮೋಚನೆಯಾಗುತ್ತಿತ್ತು ಎಂಬುದಾಗಲೀ ತಪ್ಪುತಿಳುವಳಿಕೆ ಅಷ್ಟೆ.

ಅಮೆರಿಕ ಹಿಂದೆ ಸರಿದಿದ್ದೇಕೆ? ಚೀನಾ ಮುಂದೆ ಬಂದಿದ್ದೇಕೆ? 

2001ರಲ್ಲಿ ಅಮೆರಿಕ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಜಾಗತಿಕ ಸಮೀಕರಣಗಳು ಬದಲಾಗುತ್ತಿವೆ. ಈಗ ಈ ಇಡೀ ವಲಯದಲ್ಲಿ ಚೀನಾ ತನ್ನ ಆರ್ಥಿಕ ಹಾಗೂ ಸೈನಿಕ ಬಲದೊಂದಿಗೆ ಅಮೆರಿಕಕ್ಕೆ ಸಡ್ಡು ಹೊಡೆಯುತ್ತಿದೆ. ಅಫ್ಘಾನಿಸ್ತಾನದೊಂದಿಗೆ ಚೀನಾ ಗಡಿಯನ್ನು ಹೊಂದಿದ್ದು ಕಳೆದ ಕೆಲವು ವರ್ಷಗಳಿಂದ ತಾಲಿಬಾನಿಗಳಿಗೆ ಬೆಂಬಲ ನೀಡಲು ಪ್ರಾರಂಭಿಸಿದೆ. ಈ ಬೆಂಬಲದೊಂದಿಗೆ ಮತ್ತೆ ಚಿಗುರಿಕೊಂಡ ತಾಲಿಬಾನ್ ನಿಧಾನವಾಗಿ ಗ್ರಾಮೀಣ ಅಫ್ಘಾನಿಸ್ತಾನದಲ್ಲಿ ಮತ್ತೆ ಪ್ರಾಬಲ್ಯಗಳಿಸಿಕೊಳ್ಳಲು ಪ್ರಾರಂಭಿಸಿತು. ಚೀನಾ ಮತ್ತು ಪಾಕಿಸ್ತಾನಗಳ ಮೈತ್ರಿ ಗಟ್ಟಿಗೊಳ್ಳುತ್ತಿದ್ದು ಈ ವಲಯದಲ್ಲಿ ಚೀನಾ ಪ್ರಾಬಲ್ಯವು ಹೆಚ್ಚಾಗುತ್ತಿದೆ. ಪೂರ್ವ ಚೀನಾದಿಂದ ಪಶ್ಚಿಮ ಯೂರೋಪಿನವರೆಗೆ ಚೀನಾ ನಿರ್ಮಿಸುತ್ತಿರುವ ಮಹತ್ವಾಕಾಂಕ್ಷೆಯ ಬೃಹತ್ ರೋಡ್ ಬೆಲ್ಟ್ ಯೋಜನೆಯು ಅಫ್ಘಾನಿಸ್ತಾನದಿಂದ ಹಾದುಹೋಗಲು ಅವಕಾಶ ಸಿಕ್ಕರೆ ಚೀನಾಗೆ ಆರ್ಥಿಕ ಲಾಭ ಹೆಚ್ಚು. ಹಾಗೆಯೇ ಅಫ್ಘಾನಿಸ್ತಾನದಲ್ಲಿರುವ ಒಂದು ಟ್ರಿಲಿಯನ್ ಡಾಲರಿಗೂ (70 ಲಕ್ಷ ಕೋಟಿ ರೂ.) ಹೆಚ್ಚಿನ ಮೌಲ್ಯದ ಚಿನ್ನ, ಕೋಬಲ್ಟ್, ನಿಕ್ಕಲ್, ಲಿಥಿಯಮ್, ಕಬ್ಬಿಣದಂತಹ ಖನಿಜಗಳ ನಿಯಂತ್ರಣವು ಚೀನಾದ ಆರ್ಥಿಕತೆಗೆ ಮತ್ತಷ್ಟು ಪುಷ್ಟಿ ಕೊಡುತ್ತದೆ. ಇವೆಲ್ಲವೂ ಆಗಬೇಕೆಂದರೆ ಅಫ್ಘಾನಿಸ್ತಾನದಲ್ಲಿ ತನ್ನ ಪ್ರತಿಸ್ಪರ್ಧಿ ಅಮೆರಿಕಕ್ಕಿಂತ ತನಗೆ ಪೂರಕವಾಗಿರುವ ತಾಲಿಬಾನಿನ ಸರಕಾರ ಸ್ಥಿರಗೊಳ್ಳುವುದು ಚೀನಾದ ಹಿತಾಸಕ್ತಿಗೆ ಪೂರಕವಾಗಿದೆ. ಹೀಗಾಗಿ ಚೀನಾ ಕಳೆದ ಹಲವಾರು ವರ್ಷಗಳಿಂದ ತಾಲಿಬಾನ್ ಪರವಾಗಿ ಬ್ಯಾಟಿಂಗ್ ಮಾಡುತ್ತಿದೆ. ಭೌಗೋಳಿಕವಾಗಿಯೂ ಅಫ್ಘಾನಿಸ್ತಾನಕ್ಕೆ ಹತ್ತಿರವಿರುವ ಚೀನಾ ಅಮೆರಿಕಕ್ಕಿಂತ ಸುಲಭವಾಗಿ ಸೈನಿಕ ಸ್ಪರ್ಧೆಯೊಡ್ಡಬಹುದು. ಹಾಗೆಯೇ ರಶ್ಯ ಮತ್ತು ಇರಾನ್‌ಗಳಿಗೂ ಈ ಭೂಭಾಗದಲ್ಲಿ ಅಮೆರಿಕದ ಅಸ್ತಿತ್ವ ಹಾಗೂ ನಿಯಂತ್ರಣವನ್ನು ಕಿತ್ತೊಗೆಯಬೇಕೆಂದು ತಾಲಿಬಾನಿಗೆ ಬೆಂಬಲ ನೀಡಲು ಪ್ರಾರಂಭಿಸಿವೆ.

ಅಲ್ಲದೆ ಕಳೆದ ಇಪ್ಪತ್ತು ವರ್ಷಗಳಲ್ಲಿ ಅಮೆರಿಕ 3,000 ಸೈನಿಕರನ್ನು ಕಳೆದುಕೊಂಡಿದೆ. ಅಮೆರಿಕದ ತೆರಿಗೆದಾರರ 6.4 ಟ್ರಿಲಿಯನ್ ಡಾಲರ್ ವ್ಯರ್ಥವೆಚ್ಚವನ್ನು ಮಾಡಿದೆ. ಇನ್ನು ಚೀನಾ ಜೊತೆಗೆ ಪರೋಕ್ಷ ಯುದ್ಧದಲ್ಲಿ ತೊಡಗಿಕೊಂಡರೆ ಇನ್ನೂ ಹೆಚ್ಚು ನಷ್ಟವನ್ನು ಅನುಭವಿಸುವ ಸಾಧ್ಯತೆಯೇ ಹೆಚ್ಚೆಂದು ಮನಗಂಡಿದೆ. ಅಲ್ಲದೆ ಸಿರಿಯಾ, ಲಿಬಿಯಾ, ಇರಾಕ್ ಇನ್ನಿತರ ಕಡೆಗಳಲ್ಲಿ ಅಮೆರಿಕದ ಸೈನಿಕ ಮಧ್ಯಪ್ರವೇಶ ಅಲ್ಲಿಯ ಮಿಲಿಟರಿ-ಇಂಡಸ್ಟ್ರಿಯಲ್ ಕಾಂಪ್ಲೆಕ್ಸ್‌ನ ಕಾರ್ಪೊರೇಟ್ ಉದ್ಯಮಿಗಳಿಗೆ ಲಾಭ ದೊರಕಿಸಿದೆಯಾದರೂ ವಿಶ್ವದ ಬೆಂಬಲವನ್ನೂ ಕಳೆದುಕೊಳ್ಳುತ್ತಿದೆ. ನ್ಯಾಟೋ ಸ್ನೇಹಿತರ ನಡುವೆಯೂ ಅಪ್ರಿಯಗೊಳ್ಳುತ್ತಿದೆ. ಈ ಎಲ್ಲಾ ಕಾರಣದಿಂದ ಇಪ್ಪತ್ತು ವರ್ಷಗಳ ನಂತರ ಅಫ್ಘಾನಿಸ್ತಾನದಲ್ಲಿ ಮುಂದುವರಿಯುವುದಕ್ಕಿಂತ ತನ್ನ ಆಸಕ್ತಿಗಳನ್ನು ಖಾತರಿಪಡಿಸಿಕೊಂಡು ಹಿಂದೆಗೆಯುವುದೇ ಲೇಸೆಂಬ ನಿರ್ಧಾರಕ್ಕೆ ಅಮೆರಿಕ ಬಂದಿತು. ಅದರ ಭಾಗವಾಗಿಯೇ ಈ ಹಿಂದಿನ ಟ್ರಂಪ್ ಸರಕಾರ 2018ರಿಂದಲೇ ತಾಲಿಬಾನಿಗಳನ್ನು ಒಳ್ಳೆಯ ತಾಲಿಬಾನಿಗಳು ಮತ್ತು ಕೆಟ್ಟ ತಾಲಿಬಾನಿಗಳೆಂದು ವಿಂಗಡಿಸಿ ತನ್ನ ಪರವಾಗಿರುವ ತಾಲಿಬಾನಿಗಳೊಂದಿಗೆ ಮಾತುಕತೆ ಪ್ರಾರಂಭಿಸಿತು. 2019ರ ಫೆಬ್ರವರಿ 29ರಂದು ಟ್ರಂಪ್ ಮತ್ತು ತಾಲಿಬಾನಿಗಳ ನಡುವೆ ಒಪ್ಪಂದವೂ ಆಯಿತು. ಅದರ ಪ್ರಕಾರ ಆಮೆರಿಕ ಅಫ್ಘಾನಿಸ್ತಾನದಿಂದ ಸಂಪೂರ್ಣವಾಗಿ ಹಿಂದೆಗೆಯಬೇಕು. ಬದಲಿಗೆ ಅಫ್ಘಾನಿಸ್ತಾನ ಅಲ್ಲಿ ಅಲ್‌ಖಾಯಿದಾ, ಐಎಸ್‌ಐಎಸ್‌ನಂತಹ ವಿದೇಶಿ ಉಗ್ರಗಾಮಿಗಳಿಗೆ ಅವಕಾಶ ಕೊಡಬಾರದು ಮತ್ತು ಅಮೆರಿಕದ ಹೂಡಿಕೆಗಳಿಗೆ ರಕ್ಷಣೆ ನೀಡಬೇಕು. ಅಷ್ಟೆ. ಇದನ್ನು ಬಿಟ್ಟು ಅಲ್ಲಿ ಮಾನವ ಹಕ್ಕುಗಳನ್ನು, ಮಹಿಳೆಯರ ಹಕ್ಕುಗಳನ್ನು, ಪ್ರಜಾತಾಂತ್ರಿಕ ಬದಲಾವಣೆಗಳನ್ನು ತರಬೇಕೆಂಬ ಯಾವ ಶರತ್ತನ್ನು ಅಮೆರಿಕ ತಾಲಿಬಾನಿಗಳಿಗೆ ವಿಧಿಸಿಲ್ಲ. 2021ರಲ್ಲಿ ಅಧಿಕಾರಕ್ಕೆ ಬಂದ ಡೆಮಾಕ್ರಟ್ ಜೋ ಬೈಡನ್ ಸರಕಾರ ಕೂಡಾ ರಿಪಬ್ಲಿಕ್ ಟ್ರಂಪ್‌ನ ಈ ಸ್ವಾರ್ಥಪರ ಅಫ್ಘಾನ್ ಜನವಿರೋಧಿ ಒಪಂದವನ್ನು ಎತ್ತಿ ಹಿಡಿದು ಆಗಸ್ಟ್ 31ರ ಒಳಗೆ ತಮ್ಮ ಎಲ್ಲಾ ಸೈನ್ಯವನ್ನು ಹಿಂದೆಗೆದುಕೊಳ್ಳುವುದಾಗಿ ಘೋಷಿಸಿತು. ಅದರಂತೆ ಅಗಸ್ಟ್ ಮೊದಲ ವಾರದಿಂದ ಅಮೆರಿಕನ್ ಸೈನ್ಯ ಹಿಂದೆಗೆಯಲು ಪ್ರಾರಂಭಿಸಿತು.

ತಾಲಿಬಾನ್ ಸುಲಭವಾಗಿ ಗೆದ್ದಿದ್ದು ಹೇಗೆ?

ಈಗಾಗಲೇ ಗಮನಿಸಿರುವಂತೆ ಅಫ್ಘಾನ್ ಪಡೆ 3 ಲಕ್ಷದಷ್ಟಿದ್ದರೂ ಅಮೆರಿಕ ಕೊಟ್ಟ ಶಸ್ತ್ರಾಸ್ತ್ರಗಳಿದ್ದರೂ 60 ಸಾವಿರಷ್ಟಿದ್ದ ತಾಲಿಬಾನಿಗಳನ್ನು ಎದುರಿಸಲಾಗಲಿಲ್ಲ. ಏಕೆಂದರೆ ಅಫ್ಘಾನ್ ಸೇನಾಧಿಕಾರಿಗಳು ಹಲವಾರು ತಿಂಗಳುಗಳಿಂದ ಸೈನಿಕರಿಗೆ ಸಂಬಳವನ್ನೇ ಕೊಟ್ಟಿರಲಿಲ್ಲ. ಬದಲಿಗೆ ಅಮೆರಿಕ ಕೊಟ್ಟ ಹಣವನ್ನೆಲ್ಲಾ ಅಫ್ಘಾನ್‌ಸೇನಾಧಿಕಾರಿಗಳೇ ಉಡಾಯಿಸುತ್ತಿದ್ದರು. ಅಧ್ಯಕ್ಷ ಘನಿ ಸರಕಾರದ ಬಗ್ಗೆಯೂ ಸೈನಿಕರಿಗೆ ಯಾವ ವಿಶ್ವಾಸವೂ ಇರಲಿಲ್ಲ. ಜೊತೆಗೆ ಅಮೆರಿಕ ಹಿಂದೆಗೆಯುವುದು ಖಚಿತವಾಗಿ ವಾಯುಪಡೆಯ ಬೆಂಬಲವೂ ಇಲ್ಲವಾಯಿತು. ಇದರಿಂದ ದೂರದೂರದಲ್ಲಿದ್ದ ಸೈನಿಕ ಶಿಬಿರಗಳಿಗೆ ಮದ್ದುಗುಂಡು ಹಾಗೂ ಆಹಾರಗಳ ಸರಬರಾಜೇ ನಿಂತುಹೋಯಿತು. ಇದರ ನಡುವೆ ಪ್ರಮುಖ ಸೇನಾಧಿಪತಿಗಳೇ ಬರಲಿರುವ ಸೋಲನ್ನು ಮನಗಂಡು ಸೈನ್ಯ ತೊರೆದರು. ಈ ಎಲ್ಲಾ ಕಾರಣಗಳಿಂದ ಬಹುಪಾಲು ಸೈನಿಕರು ಯಾವ ಯುದ್ಧವನ್ನು ಮಾಡದೆ ಶರಣಾದರು. ಕೊನೆಯ ಹೊತ್ತಿನಲ್ಲಿ ಪಾಕಿಸ್ತಾನವು ತಾಲಿಬಾನಿಗಳಿಗೆ ಮಾನವ ಹಾಗೂ ಸೈನಿಕ ಸರಬರಾಜನ್ನು ಹೆಚ್ಚಿಸಿದ್ದೂ ಕೂಡ ತಾಲಿಬಾನಿಗಳ ವಿಜಯವನ್ನು ಸುಲಭ ಮಾಡಿತು. ಹೀಗಾಗಿ ತಾಲಿಬಾನಿಗಳ ರಕ್ತಪಾತ ರಹಿತ ಗೆಲುವಿಗೆ ಅವರ ಶೌರ್ಯವೂ ಕಾರಣವಲ್ಲ ಅಥವಾ ಇದ್ದಕ್ಕಿದ್ದಂತೆ ಅವರಿಗೆ ಜೀವಪರತೆಯೂ ಉಕ್ಕಿಬಂದಿಲ್ಲ. ತಾಲಿಬಾನಿಗಳ ವಿಜಯ ಸಾಮ್ರಾಜ್ಯವಾದಿಗಳ ಜೊತೆ ಮಾಡಿಕೊಂಡ ಒಪ್ಪಂದದ ಫಲಿತಾಂಶ. ಅಷ್ಟೆ.

ಅಮೆರಿಕ ಬಿಟ್ಟುಹೋದ ಬಂದೂಕಿನಲ್ಲಿ ಚೀನಾ ಗುಂಡುಗಳು- ಮುಂದೇನು? 

ಆಗಸ್ಟ್ 15ಕ್ಕೆ ಕಾಬೂಲ್ ಕೈವಶವಾಗುವುದರೊಡನೆ ಅಫ್ಘಾನಿಸ್ತಾನದ ಉತ್ತರ ಭಾಗದಲ್ಲಿರುವ ಪಂಜ್ ಶೀರ್ ಪ್ರಾಂತವೊಂದನ್ನು ಬಿಟ್ಟು ಮಿಕ್ಕೆಲ್ಲಾ ತಾಲಿಬಾನಿನ ವಶವಾಗಿದೆ. ಮೊದಲೆರಡು ದಿನ ವಿಶ್ವದ ಜನರಿಗೆ ಹಿತವಾಗುವ ಮಾತುಗಳನ್ನಾಡಿದ್ದ ತಾಲಿಬಾನಿಗರು ಮತ್ತೊಮ್ಮೆ ತಾವು 1995-2001ರ ನಡುವೆ ಜಾರಿ ಮಾಡಿದ್ದ ಬರ್ಬರ ಆಡಳಿತವನ್ನೇ ಜಾರಿಗೊಳಿಸುವ ಎಲ್ಲಾ ಸೂಚನೆಗಳನ್ನೂ ನೀಡಿದೆ. ಅಫ್ಘಾನಿಸ್ತಾನವನ್ನು 'ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನ'ವನ್ನಾಗಿ ಮರು ನಿರ್ಮಾಣಮಾಡುವುದಾಗಿ ಘೋಷಿಸಿರುವ ತಾಲಿಬಾನಿಗಳು ಸಾಮಾಜಿಕವಾಗಿ ತಾವು ಶರಿಯತ್ ಎಂದು ಹೇಳುವ ಕಾನೂನನ್ನೇ ಜಾರಿಗೊಳಿಸುವುದಾಗಿ ಹೇಳಿದ್ದಾರೆ. ಈಗಾಗಲೇ ಹಲವಾರು ಮಹಿಳಾ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ಪ್ರಧಾನವಾಗಿ ಸುನ್ನಿ ಮುಸ್ಲಿಮರಾಗಿರುವ ತಾಲಿಬಾನಿಗಳು ಮುಸ್ಲಿಮರೇ ಅಲ್ಲವೆಂದು ಭಾವಿಸುವ ಶಿಯಾ ಪಂಥೀಯರಾದ ಹಜಾರ ಮುಸ್ಲಿಮರ ವಸತಿ ಪ್ರದೇಶಗಳಲ್ಲಿ ಮೊನ್ನೆಮೊನ್ನೆ ಕಾರ್ ಬಾಂಬ್ ಸ್ಫೋಟಗೊಳಿಸಿ 60ಕ್ಕೂ ಹೆಚ್ಚು ಹಜಾರ ಹೆಣ್ಣುಮಕ್ಕಳ ಸಾವಿಗೆ ಕಾರಣವಾಗಿದೆ. ಇದೆಲ್ಲವನ್ನು ನೋಡಿಯೂ ನೋಡದಂತೆ ಚೀನಾ, ಪಾಕಿಸ್ತಾನ, ಇರಾನ್‌ಗಳು ತಾಲಿಬಾನಿಗಳ ಜಯವನ್ನು ಕೊಂಡಾಡುತ್ತಿವೆ. ಅಮೆರಿಕದ ಸರಕಾರ ಸಹ ತಾಲಿಬಾನಿಗಳು ಅಲ್ ಖಾಯಿದಾಕ್ಕಿಂತ ಉತ್ತಮರು ಎಂದು ಪ್ರಮಾಣ ಪತ್ರ ನೀಡಿದೆ. ಹೀಗಾಗಿ ಎರಡನೇ ಬಾರಿ ಅಧಿಕಾರಕ್ಕೆ ಬಂದಿರುವ ತಾಲಿಬಾನ್ ಹಿಂದಿಗಿಂತ ಉತ್ತಮವಾಗಿರುತ್ತದೆಂದೂ, ಬದಲಾಗುವುದಿಲ್ಲ ಎಂದೇಕೆ ಭಾವಿಸಬೇಕು ಎನ್ನುವ ತರ್ಕಗಳೆಲ್ಲಾ ಹೆಚ್ಚೆಂದರೆ ರಾಜಕೀಯ ಅನಕ್ಷರತೆ ಅಥವಾ ಕುರುಡು ಆಶಾವಾದವಷ್ಟೆ. ಹೆಚ್ಚೆಂದರೆ ಎರಡನೇ ಬಾರಿ ಅಧಿಕಾರಕ್ಕೆ ಬಂದಿರುವ ತಾಲಿಬಾನ್ ಅಮೆರಿಕ ಬಿಟ್ಟುಹೋದ ಬಂದೂಕಿನಲ್ಲಿ ಚೀನಾದ ಗುಂಡುಗಳನ್ನು ತುಂಬಿ ಅ್ಘನ್ನರನ್ನು ಸಾಯಿಸುತ್ತಿದೆ ಎಂದು ಹೇಳಬಹುದಷ್ಟೆ. ಈ ಎಲ್ಲ ಬೆ�

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News