ದಿಲ್ಲಿಗೆ ತಾನು ಆಗಮಿಸಿದ್ದ ವಿಮಾನದಲ್ಲೇ ತನ್ನನ್ನು ಇಸ್ತಾಂಬುಲ್‍ಗೆ ಗಡೀಪಾರು ಮಾಡಲಾಗಿದೆ: ಅಫ್ಘಾನ್‌ ಸಂಸದೆಯ ಆರೋಪ

Update: 2021-08-26 06:34 GMT

ಹೊಸದಿಲ್ಲಿ: ತಮ್ಮನ್ನು ರಾಜಧಾನಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಇಸ್ತಾಂಬುಲ್‍ಗೆ ಗಡೀಪಾರು ಮಾಡಲಾಗಿದೆ ಎಂದು ಅಫ್ಘಾನಿಸ್ತಾನ ಸಂಸತ್ತಿನ ಮಹಿಳಾ ಸದಸ್ಯೆಯಾಗಿದ್ದ ರಂಗೀನಾ ಕರ್ಗರ್ ಎಂಬವರು ಆರೋಪಿಸಿದ್ದಾರೆ.

ಅಫ್ಘಾನಿಸ್ತಾನದ ಮೇಲೆ ತಾಲಿಬಾನ್ ಸಂಪೂರ್ಣ  ಹಿಡಿತ ಸಾಧಿಸಿದ ಐದು ದಿನಗಳ ನಂತರ ಅಲ್ಲಿನ ಫರ್ಯಬ್ ಪ್ರಾಂತ್ಯವನ್ನು ಪ್ರತಿನಿಧಿಸುವ ರಂಗೀನಾ ಅವರು ಫ್ಲೈ ದುಬೈ ವಿಮಾನದಲ್ಲಿ ಇಸ್ತಾಂಬುಲ್‍ನಿಂದ ಆಗಸ್ಟ್ 20ರಂದು ಮುಂಜಾನೆ ದಿಲ್ಲಿ ವಿಮಾನ ನಿಲ್ದಾಣ ತಲುಪಿದ್ದರು.

ಆಕೆಯ ಬಳಿ ರಾಜತಾಂತ್ರಿಕ/ಅಧಿಕೃತ ಪಾಸ್‍ಪೋರ್ಟ್ ಇದ್ದು ಭಾರತದೊಂದಿಗಿನ ಉಭಯ ಒಪ್ಪಂದದಂತೆ ವೀಸಾ ಮುಕ್ತ ಪ್ರಯಾಣಕ್ಕೆ ಆಕೆಗೆ ಅವಕಾಶವಿದೆ.  ಇದೇ ಪಾಸ್‍ಪೋರ್ಟ್ ಬಳಸಿ ತಾನು ಈ ಹಿಂದೆ ಹಲವಾರು ಬಾರಿ ಭಾರತಕ್ಕೆ ಭೇಟಿ ನೀಡಿರುವುದಾಗಿ ಹೇಳಿರುವ ಆಕೆ ಈ ಬಾರಿ ಮಾತ್ರ ಹಿರಿಯ ಅಧಿಕಾರಿಗಳ ಜತೆ ಮಾತನಾಡಬೇಕಿದೆ ಎಂದು ಹೇಳಿ ಅಲ್ಲಿನ ಅಧಿಕಾರಿಗಳು ತನ್ನನ್ನು ವಿಮಾನ ನಿಲ್ದಾಣದಲ್ಲಿ ಕಾಯಿಸಿ ಎರಡು ಗಂಟೆ ನಂತರ ಅದೇ ವಿಮಾನದಲ್ಲಿ ದುಬೈ ಮೂಲಕ ಇಸ್ತಾಂಬುಲ್‍ಗೆ ಕಳುಹಿಸಿದ್ದಾರೆ ಎಂದು ಹೇಳಿದ್ದಾರೆ. 

"ಅವರು ನನ್ನನ್ನು ಗಡೀಪಾರು ಮಾಡಿದ್ದಾರೆ. ಅಪರಾಧಿಯಂತೆ ನನ್ನೊಂದಿಗೆ ವರ್ತಿಸಿದ್ದಾರೆ. ದುಬೈಯಲ್ಲಿ ನನಗೆ ನನ್ನ ಪಾಸ್‍ಪೋರ್ಟ್ ವಾಪಸ್ ನೀಡದೆ ಇಸ್ತಾಂಬುಲ್‍ನಲ್ಲಿ ವಾಪಸ್ ನೀಡಲಾಯಿತು" ಎಂದು 36 ವರ್ಷದ ಸಂಸದೆ ಆರೋಪಿಸಿದ್ದಾರೆ.

ರಂಗೀನಾ ಅವರ ಪತಿ ಮತ್ತು ನಾಲ್ಕು ಮಕ್ಕಳು ಇಸ್ತಾಂಬುಲ್‍ನಲ್ಲಿದ್ದಾರೆ. ಆಕೆ ವೊಲೆಸಿ ಜಿರ್ಗಾದಲ್ಲಿ ಚೀಫ್ ಆಫ್ ಸ್ಟಾಫ್ ಆಗಿದ್ದಾರೆ

ಆಕೆಯನ್ನು ಗಡೀಪಾರು ಮಾಡಿದ ಎರಡು ದಿನಗಳ ನಂತರ ಭಾರತವು ಇಬ್ಬರು ಅಫ್ಘಾನಿಸ್ತಾನ ಸಿಖ್ ಸಂಸದರಾದ ನರೀಂದರ್ ಸಿಂಗ್ ಖಲ್ಸಾ ಮತ್ತು ಅನಾರ್ಕಲಿ ಕೌರ್ ಹೊನರ್ಯಾರ್ ಅವರನ್ನು ಸ್ವಾಗತಿಸಿತ್ತು. ಇಬ್ಬರೂ  ಭಾರತವು ಅಫ್ಗಾನಿಸ್ತಾನದಲ್ಲಿನ ಭಾರತೀಯರ ವಾಪಸಾತಿಗೆ ಏರ್ಪಾಟು ಮಾಡಿದ್ದ ವಿಮಾನದಲ್ಲಿ ಆಗಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News