ಅಕ್ಟೋಬರ್ ವೇಳೆಗೆ 12ರಿಂದ 17 ವರ್ಷದ ಮಕ್ಕಳಿಗೆ ಲಸಿಕೆ: ಕೋವಿಡ್ ಸಮಿತಿ ಅಧ್ಯಕ್ಷ

Update: 2021-08-26 14:45 GMT

ಹೊಸದಿಲ್ಲಿ,ಆ.26: 12ರಿಂದ 17ವರ್ಷ ಪ್ರಾಯದ ಮಕ್ಕಳಿಗೆ ಕೊರೋನವೈರಸ್ ಲಸಿಕೆಯನ್ನು ನೀಡುವ ಅಭಿಯಾನವನ್ನು ಅಕ್ಟೋಬರ್ ವೇಳೆಗೆ ಆರಂಭಿಸಲಾಗುವುದು ಎಂದು ರಾಷ್ಟ್ರೀಯ ನಿರೋಧಕತೆ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಎನ್.ಕೆ.ಅರೋರಾ ಅವರು ಗುರುವಾರ ಇಲ್ಲಿ ತಿಳಿಸಿದರು.

 ‌
ಭಾರತದ ಔಷಧಿ ನಿಯಂತ್ರಣ ಕಚೇರಿಯು ಝೈಡಸ್ ಕ್ಯಾಡಿಲ್ಲಾ ಅಭಿವೃದ್ಧಿಗೊಳಿಸಿರುವ ಝೈಕೋವ್-ಡಿ ಲಸಿಕೆಯ ತುರ್ತು ಬಳಕೆಗೆ ಈಗಾಗಲೇ ಅನುಮತಿ ನೀಡಿದ್ದು,ಇದು 12 ವರ್ಷಕ್ಕಿಂತ ಮೇಲಿನ ಮಕ್ಕಳಿಗೆ ದೇಶದ ಮೊದಲ ಲಸಿಕೆಯಾಗಿದೆ.

ಮಕ್ಕಳಿಗೆ ಲಸಿಕೆ ನೀಡುವ ಮುನ್ನ ಸರಕಾರವು ಆದ್ಯತಾ ಪಟ್ಟಿಯೊಂದನ್ನು ಸಿದ್ಧಪಡಿಸಲಿದೆ ಎಂದು ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ ಅರೋರಾ,ಇತರ ಅನಾರೋಗ್ಯಗಳನ್ನು ಹೊಂದಿರುವ ಮಕ್ಕಳಲ್ಲಿ ಕೊರೋನವೈರಸ್ ಸೋಂಕು ತೀವ್ರ ಸ್ವರೂಪದಲ್ಲಿ ಇರುವ ಹೆಚ್ಚಿನ ಸಾಧ್ಯತೆಯಿರುವುದರಿಂದ ಅವರಿಗೆ ಮೊದಲ ಆದ್ಯತೆ ನೀಡಲಾಗುವುದು. ಇತರ ಅನಾರೋಗ್ಯಗಳಿಲ್ಲದ ಮಕ್ಕಳಿಗೆ 2022ರ ಪೂರ್ವಾರ್ಧದಲ್ಲಿ ಲಸಿಕೆಯು ಲಭ್ಯವಾಗಲಿದೆ. 12ರಿಂದ 17 ವರ್ಷ ಪ್ರಾಯದ ಸುಮಾರು 12 ಕೋಟಿ ಮಕ್ಕಳಿದ್ದು,ಈ ಪೈಕಿ ಶೇ.1ರಷ್ಟು ಮಕ್ಕಳು ಇತರ ಅನಾರೋಗ್ಯಗಳನ್ನು ಹೊಂದಿದ್ದಾರೆ. ಇದೇ ವೇಳೆ ಎರಡು ವರ್ಷಕ್ಕಿಂತ ಮೇಲಿನ ಮಕ್ಕಳ ಮೇಲೆ ಕೋವ್ಯಾಕ್ಸಿನ್ ಲಸಿಕೆಯನ್ನು ಪರೀಕ್ಷಿಸಲಾಗುತ್ತಿದೆ ಎಂದು ಹೇಳಿದರು.

ದೇಶದಲ್ಲಿ ಎರಡು ವರ್ಷಕ್ಕಿಂತ ಹೆಚ್ಚಿನ ಪ್ರಾಯದ 44 ಕೋಟಿ ಮಕ್ಕಳಿದ್ದು,ಇದು ವ್ಯಾಕ್ಸಿನ್ ನೀಡಿಕೆಗೆ ಸಂಬಂಧಿಸಿದಂತೆ ದೊಡ್ಡ ಸಂಖ್ಯೆಯೇ ಆಗಿದೆ ಎಂದರು.

ವಿಶ್ವದ ಮೊದಲ ಡಿಎನ್ಎ ವ್ಯಾಕ್ಸಿನ್ ಆಗಿರುವ ಝೈಕೋವ್-ಡಿ ಲಸಿಕೆಯನ್ನು ಮೂರು ಡೋಸ್ಗಳಲ್ಲಿ ನೀಡಲಾಗುತ್ತದೆ. ಲಸಿಕೆಯ ಮೂರನೇ ಹಂತದ ಟ್ರಯಲ್ನ ಮಧ್ಯಂತರ ಫಲಿತಾಂಶಗಳು ಲಕ್ಷಣಸಹಿತ ಪ್ರಕರಣಗಳಲ್ಲಿ ಶೇ.66.6ರಷ್ಟು ಮತ್ತು ಸೌಮ್ಯಸ್ವರೂಪದ ಸೋಂಕು ಪ್ರಕರಣಗಳಲ್ಲಿ ಶೇ.100ರಷ್ಟು ಪರಿಣಾಮಕಾರಿತ್ವವನ್ನು ತೋರಿಸಿವೆ ಎಂದು ಝೈಡಸ್ ಕ್ಯಾಡಿಲಾ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News