ಕೋವಿಡ್ 3ನೆ ಅಲೆ ಭೀತಿ: ಕಡ್ಡಾಯ ಲಸಿಕೆ ಪಡೆಯಲು ಬಿಬಿಎಂಪಿ ಆದೇಶ

Update: 2021-08-26 16:34 GMT

ಬೆಂಗಳೂರು, ಆ.26: ಸಂಭಾವ್ಯ ಕೋವಿಡ್ ಮೂರನೆ ಅಲೆ ಹಿನ್ನೆಲೆ ನಗರದ ವಾಣಿಜ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ಪ್ರತಿಯೊಬ್ಬರೂ ಕಡ್ಡಾಯ ಕೋವಿಡ್ ಲಸಿಕೆ ಪಡೆಯಬೇಕು ಎಂದು ಬಿಬಿಎಂಪಿ ಅಧಿಕೃತ ಆದೇಶ ಹೊರಡಿಸಿದೆ.

ಕೋವಿಡ್ ಹರಡುವಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ನಗರ ವ್ಯಾಪ್ತಿಯ ವಾಣಿಜ್ಯ ಸಂಸ್ಥೆಗಳು, ಕೈಗಾರಿಕೆಗಳು, ಹೊಟೇಲ್ ಮತ್ತು ಕಚೇರಿಗಳು ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುವುದರ ಜೊತೆಗೆ ತಮ್ಮದೇ ವೆಚ್ಚದಲ್ಲಿ ತಮ್ಮ ಸಿಬ್ಬಂದಿಗೆ ಶೇಕಡಾ 100ರಷ್ಟು ಲಸಿಕೆಯನ್ನು ಕೊಡಿಸಬೇಕು ಎಂದು ಪಾಲಿಕೆ ಹೇಳಿದೆ.

ಇನ್ನು, ಮೊದಲ ಡೋಸ್ ಅನ್ನು ಆ.31ರೊಳಗೆ ಎಲ್ಲ ಸಿಬ್ಬಂದಿಗೂ ನೀಡಬೇಕು ಎಂದು ಪಾಲಿಕೆ ಸೂಚಿಸಿದ್ದು, ಖಾಸಗಿ ಕಂಪೆನಿಗಳು, ಕೈಗಾರಿಕೆಗಳು, ಹೊಟೇಲ್‍ಗಳು ಪಾಲಿಕೆಯ ನಿಯಮ ಪಾಲಿಸಿವೆಯೇ ಎಂದು ತಪಾಸಣೆ ಮಾಡಲು ಬಿಬಿಎಂಪಿ ಮಾರ್ಷಲ್‍ಗಳು ಮತ್ತು ಆರೋಗ್ಯಾಧಿಕಾರಿಗಳು ಮುಂದಿನ ತಿಂಗಳಿನಿಂದ ಕಚೇರಿಯ ಅವಧಿಯಲ್ಲಿ ತೆರಳಿ ತಪಾಸಣೆ ಮಾಡಲಿದ್ದಾರೆ.

ಈ ಸಂದರ್ಭದಲ್ಲಿ ಆದೇಶ ಉಲ್ಲಂಘಿಸಿರುವುದು ಕಂಡುಬಂದರೆ ದಂಡ ವಿಧಿಸುವ ಜತೆಗೆ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News