ಭಾರತದಲ್ಲಿ ಸರ್ವಾಧಿಕಾರಿ ದಿನಗಳು ದೂರವಿಲ್ಲ: ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್

Update: 2021-08-28 17:38 GMT

ಬೆಂಗಳೂರು, ಆ.28: ದೇಶದಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡುತ್ತಿದ್ದರೆ ಭಾರತದಲ್ಲಿ ಸರ್ವಾಧಿಕಾರಿ ದಿನಗಳು ದೂರವಿಲ್ಲವೆಂಬ ಭಯ ಕಾಡುತ್ತಿದೆ ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಆತಂಕ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಕೋಮು ಸೌಹಾರ್ದ ವೇದಿಕೆ ವತಿಯಿಂದ ನಗರದ ಸೇಂಟ್‍ಕ್ಸೇವಿಯರ್ ಹಾಲ್‍ನಲ್ಲಿ ಆಯೋಜಿಸಿದ್ದ ಎ.ಕೆ.ಸುಬ್ಬಯ್ಯರ ರಾಜಕೀಯ, ಕಾನೂನು ಹಾಗೂ ಸಾಮಾಜಿಕ ಹೋರಾಟದ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಇವತ್ತಿನ ಕೋಮುವಾದಿ ಶಕ್ತಿಗಳ ಅಟ್ಟಹಾಸದ ದಿನಗಳಲ್ಲಿ ಎ.ಕೆ.ಸುಬ್ಬಯ್ಯ ನಿರ್ಬೀಢೆ ಚಿಂತನೆಗಳು ನಮಗೆ ಆದರ್ಶವಾಗಬೇಕೆಂದು ತಿಳಿಸಿದ್ದಾರೆ.

ಇವತ್ತಿನ ಹಲವು ರಾಜಕಾರಣಿಗಳು ರಾಜಕೀಯ ಲಾಭಕ್ಕಾಗಿ ತಾವು ನಂಬಿಕೊಂಡು ಬಂದಿದ್ದ ತತ್ವಸಿದ್ಧಾಂತಗಳಿಗೆ ವಿಮುಖವಾಗಿ ಚಲಿಸುತ್ತಾರೆ. ಆದರೆ, ಎ.ಕೆ.ಸುಬ್ಬಯ್ಯ ತಮ್ಮ ನಿರ್ಬೀಢೆ ಚಿಂತನೆಗಳಿಂದ ಹಾಗೂ ಮಾನವೀಯ ಹೋರಾಟದಿಂದ ತಮ್ಮ ರಾಜಕೀಯ ಅಧಿಕಾರವನ್ನು ಕಳೆದುಕೊಂಡರು. ಆ ಬಗ್ಗೆ ಅವರು ಯಾವತ್ತೂ ಬೇಸರ ಮಾಡಿಕೊಂಡವರಲ್ಲವೆಂದು ಅವರು ಹೇಳಿದ್ದಾರೆ.

ರಾಜ್ಯದ ಬಿಜೆಪಿ ಸರಕಾರ ಅಸಹ್ಯಕರವಾದ ರೀತಿಯಲ್ಲಿ ಪಕ್ಷಾಂತರ ರಾಜಕಾರಣವನ್ನು ಮಾಡಿದೆ. ಕೋಟಿಗಟ್ಟಲೆ ಹಣ ಸುರಿದು ಶಾಸಕರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಅಧಿಕಾರ ನಡೆಸಿದರೆ ಜನಪರವಾದ ಆಡಳಿತ ನಡೆಸಲು ಸಾಧ್ಯವೆ. ಈಗಾಗಲೇ ಸಚಿವ ಸ್ಥಾನಕ್ಕಾಗಿ ಅಲ್ಲಿ ನಡೆಯುತ್ತಿರುವ ಗುದ್ದಾಟಗಳನ್ನು ನಾವೆಲ್ಲರೂ ನೋಡುತ್ತಿದ್ದೇವೆಂದು ಅವರು ಟೀಕಿಸಿದ್ದಾರೆ.

ಇವತ್ತು ಮಠಾಧೀಶರು ಜಾತಿರಾಜಕಾರಣ ಮಾಡಲು ಹೊರಟಿದ್ದಾರೆ. ತಮ್ಮ ಜಾತಿ ಸಮುದಾಯದ ವ್ಯಕ್ತಿಯನ್ನೇ ಮುಖ್ಯಮಂತ್ರಿ ಸ್ಥಾನಕ್ಕೆ ನೇಮಕ ಮಾಡಬೇಕೆಂದು ಸಮಾವೇಶವನ್ನು ನಡೆಸುವ ಮಟ್ಟಕ್ಕೆ ಬಂದಿದೆ. ಇಂತಹ ಸಂದರ್ಭದಲ್ಲಿ ಪ್ರಗತಿಪರ ಸಂಘಟನೆಗಳ ಜವಾಬ್ದಾರಿ ಹೆಚ್ಚಿದೆ ಎಂದು ಅವರು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಾಜಿ ಸಭಾಪತಿ ಕೆ.ಆರ್.ರಮೇಶ್‍ಕುಮಾರ್, ವಿಶ್ರಾಂತ ನ್ಯಾ.ನಾಗಮೋಹನ ದಾಸ್, ಮಾನವ ಹಕ್ಕು ಹೋರಾಟಗಾರ ಪ್ರೊ.ಶ್ರೀಧರ್, ಕರ್ನಾಟಕ ಜನಶಕ್ತಿಯ ಗೌರಿ ಸೇರಿ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News