ಉತ್ತರ ಶ್ರೀಲಂಕಾದಲ್ಲೂ ಚೀನಾದ ಚಟುವಟಿಕೆ: ಭಾರತಕ್ಕೆ ಆತಂಕ

Update: 2021-09-01 15:59 GMT

ಹೊಸದಿಲ್ಲಿ,ಸೆ.1: ಮೂಲಸೌಕರ್ಯಗಳ ಯೋಜನೆಗಳ ಸೋಗಿನಲ್ಲಿ ಉತ್ತರ ಶ್ರೀಲಂಕಾದಲ್ಲಿ ತನ್ನ ಹೆಜ್ಜೆಗಳನ್ನು ವಿಸ್ತರಿಸಲು ಹೊಸ ಪ್ರಯತ್ನಗಳನ್ನು ಮಾಡುತ್ತಿರುವ ಚೀನಾದ ನಡೆಗಳನ್ನು ಭಾರತ ಆತಂಕದಿಂದಲೇ ಗಮನಿಸುತ್ತಿದೆ ಎಂದು ಟಿಎನ್ಎನ್ ಸುದ್ದಿಸಂಸ್ಥೆ ವರದಿ ಮಾಡಿದೆ.

ತನ್ನ ಸುಲಿಗೆಕೋರತನದ ಸಾಲ ನೀತಿಗಳ ಮೂಲಕ ಚೀನಾವು ಶ್ರೀಲಂಕಾದೊಳಗೆ ವ್ಯೆಹಾತ್ಮಕವಾಗಿ ನುಸುಳುತ್ತಿದೆ. ಈ ದ್ವೀಪರಾಷ್ಟ್ರದಲ್ಲಿ ಚೀನಾವು ಸಾಧ್ಯವಿದ್ದಷ್ಚು ಮಟ್ಟಿಗೆ ಭಾರತದ ಕರಾವಳಿಯ ಸಮೀಪದಲ್ಲಿಯೇ ತನ್ನ ಉಪಸ್ಥಿತಿಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸುತ್ತಿದೆ ಎಂದು ವರದಿ ಹೇಳಿದೆ.
  
‘‘ಚೀನಾದ ಆರ್ಥಿಕ ಚಟುವಟಿಕೆಗಳ ಪಸರಣೆ ಹಾಗೂ ಶ್ರೀಲಂಕಾದ ಉತ್ತರಪ್ರಾಂತದಲ್ಲಿ ಪ್ರಸ್ತಾವಿತ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಚೀನಾವು ಮುಂದಿನ ಹಂತಗಳಲ್ಲಿ ವ್ಯೆಹಾತ್ಮಕ ಕಾರಣಗಳಿಗಾಗಿ ಬಳಸಿಕೊಳ್ಳಲಿದ್ದು, ಖಂಡಿತವಾಗಿಯೂ ಇದು ಭಾರತಕ್ಕೆ ಕಳವಳಕಾರಿಯಾಗಲಿದೆ’’ ಎಂದು ಭಾರತ ಸರಕಾರದ ಉನ್ನತ ಮೂಲಗಳ ಹೇಳಿಕೆಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
 
ಈ ಮೊದಲು ಚೀನಿ ಯೋಜನೆಗಳು ಬಹುತೇಕವಾಗಿ ದಕ್ಷಿಣ ಶ್ರೀಲಂಕಾಕ್ಕೆ ಸೀಮಿತವಾಗಿದ್ದವು. ಆದರೆ ಗೋಟಬಯಾ ರಾಜಪಕ್ಷ ಸರಕಾರವು ಉತ್ತರ ಶ್ರೀಲಂಕಾದಲ್ಲಿಯೂ ಹಲವಾರು ಚೀನಿ ಉದ್ಯಮಗಳಿಗೆ ಅವಕಾಶ ನೀಡುತ್ತಿದ್ದು, ಸ್ಥಳೀಯ ಜನಾಂಗೀಯ ತಮಿಳರ ಭಾವನೆಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಈ ಬೆಳವಣಿಗೆಗಳನ್ನು ಭಾರತವು ನಿಕಟವಾಗಿ ಗಮನಿಸುತ್ತಿದೆ ಎಂದು ಉನ್ನತ ರಾಜತಾಂತ್ರಿಕರೊಬ್ಬರು ತಿಳಿಸಿದ್ದಾರೆ.
 
ಜಾಫ್ನಾ ಪರ್ಯಾಯದ್ವೀಪದ ಕರಾವಳಿಯ ಸಮೀಪದಲ್ಲಿರುವ ಮೂರು ನಡುಗಡ್ಡೆಗಳಲ್ಲಿ 12 ದಶಲಕ್ಷ ಡಾಲರ್ ಮೊತ್ತದ ಹೈಬ್ರಿಡ್ ಗಾಳಿ ಹಾಗೂ ಸೌರ ಇಂಧನ ಯೋಜನೆಯನ್ನು    ಚೀನಾದ ಸಿನೋಸಾರ್-ಇಟೆಕ್ವಿನ್ ಜಂಟಿ ಉದ್ಯಮಸಂಸ್ಥೆಗೆ ನೀಡುವ ಶ್ರೀಲಂಕಾ ಸರಕಾರದ ನಿರ್ಧಾರಕ್ಕೆ ಭಾರತ ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಿತ್ತು. ತಮಿಳುನಾಡು ಕರಾವಳಿಯಿಂದ ಕೇವಲ 50 ಕಿ.ಮೀ. ದೂರದಲ್ಲಿರುವ ಈ ನಡುಗಡ್ಡೆಗಳು ಆಯಕಟ್ಟಿನ ದೃಷ್ಟಿಯಿಂದ ಮಹತ್ವವುಳ್ಳದ್ದಾಗಿರುವುದರಿಂದ ಭಾರತವು ಈ ಯೋಜನೆಗಳ ನಿರ್ಮಾಣಕ್ಕೆ 12 ದಶಲಕ್ಷ ಡಾಲರ್ಗಳ ಅನುದಾನ ನೀಡುವ ಕೊಡುಗೆಯನ್ನು ಶ್ರೀಲಂಕಾಗೆ ನೀಡಿತ್ತು.
   
ಸ್ಥಳೀಯ ರೈತರ ಪ್ರತಿಭಟನೆಯ ಹೊರತಾಗಿಯೂ ಇನ್ನೊಂದು ಚೀನಿ ಜಂಟಿ ಉದ್ಯಮಸಂಸ್ಥೆಗೆ ಉತ್ತರ ಶ್ರೀಲಂಕಾದ ಕರಾವಳಿ ಗ್ರಾಮದಲ್ಲಿ ‘ಕುಕುಂಬರ್’ ಮೀನಿನ ಕೃಷಿಗೆ ಅನುಮೋದನೆ ನೀಡಿದೆ. ಚೀನಾವು ಪ್ರದೇಶದಲ್ಲಿ ತನ್ನ ಅಸ್ತಿತ್ವವನ್ನು ಸ್ಥಾಪಿಸುತ್ತಿರುವುದನ್ನು ಭಾರತ ಗಮನಿಸುತ್ತಿದೆಯೆಂದು ಉನ್ನತ ಮೂಲಗಳು ತಿಳಿಸಿವೆ.
   
ಜಪಾನ್ ಜೊತೆಗೂಡಿ ಕೊಲಂಬೊದ ಬಂದರಿನಲ್ಲಿ ಈಸ್ಟ್ ಕಂಟೈನರ್ ಟರ್ಮಿನಲ್ ಅನ್ನು ಜಂಟಿಯಾಗಿ ಅಭಿವೃದ್ಧಿಪಡಿಸುವ ತ್ರಿಪಕ್ಷೀಯ ಒಪ್ಪಂದದಿಂದ ಹಿಂದೆ ಸರಿದಿರುವುದಕ್ಕಾಗಿ ಶ್ರೀಲಂಕಾದ ಬಗ್ಗೆ ಭಾರತಕ್ಕೆ ಅಸಮಾಧಾನವುಂಚಾಗಿದೆ. ಟ್ರಿಂಕಾಮಲಿಯಲ್ಲಿರುವ ತೈಲ ಟ್ಯಾಂಕ್ಗಳ ಯೋಜನೆಯ ಬಗೆಗೂ ಶ್ರೀಲಂಕಾದೊಂದಿಗೆ ಭಿನ್ನಮತವುಂಟಾಗಿದೆ ಎಂದು ಮೂಲಗಳು ಹೇಳಿವೆ.
  
ಆದರೆ ಚೀನಾವು ಇದನ್ನೇ ಸದವಕಾಶವಾಗಿ ಬಳಸಿಕೊಳ್ಳುತ್ತಿದೆ. ನೂತನ ಕೊಲಂಬೊ ಬಂದರು ನಗರ ಯೋಜನೆಯಡಿ ಹಂಬನ್ಟೋಟಾ ಬಂದರನ್ನು 99 ವರ್ಷಗಳ ಲೀಸ್ಗೆ ಪಡೆದುಕೊಂಡಿದೆ. ಶ್ರೀಲಂಕಾದಲ್ಲಿ ಮಾತ್ರವಲ್ಲದೆ ಸಮಗ್ರ ಹಿಂದೂ ಮಹಾಸಾಗರ ಪ್ರಾಂತದಲ್ಲಿಯೂ ಚೀನಾವು ಸೆಶೆಲ್ಸ್, ಮಾರಿಶಸ್, ಮಾಲ್ದೀವ್ಸ್, ಬಾಂಗ್ಲಾ, ಮ್ಯಾನ್ಮಾರ್ ಹಾಗೂ ಪೂವ ಆಫ್ರಿಕದ ರಾಷ್ಟ್ರಗಳನ್ನು ತನ್ನ ರೆಕ್ಕೆಗಳನ್ನು ವ್ಯವಸ್ಥಿತವಾಗಿ ವಿಸ್ತರಿಸುತ್ತಿದೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News